ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನಲ್ಲಿ ರಾಜನೊಬ್ಬ ತನ್ನ ರಾಣಿಯೊಂದಿಗೆ ರಾಜ್ಯಭಾರ ಮಾಡುತ್ತಿದ್ದ. ಅವನಿಗೊಬ್ಬಳು ಗೊಂಬೆಯಂಥ ಮಗಳಿದ್ದಳು. ಆರೆಂಟು ವರ್ಷದ ಆ ರಾಜಕುಮಾರಿಯ ಹೆಸರು ಭಾನುಮತಿ. ತುಂಬಾ ಧೈರ್ಯವಂತೆಯಾದ ಜಾಣೆ ಹುಡುಗಿ ಆಕೆ. ತನ್ನೆಲ್ಲ ಸ್ನೇಹಿತರ ಜೊತೆಗೆ ಸ್ವಲ್ಪವೂ ದರ್ಪವಿಲ್ಲದೆ, ಪ್ರೀತಿ, ಸ್ನೇಹದಿಂದ ಬೆರೆಯುತ್ತಿದ್ದಳು.
ಒಮ್ಮೆ ರಾಣಿಗೆ ಯಾವುದೋ ವಿಚಿತ್ರ ಕಾಯಿಲೆ ಬಂತು. ರಾಜವೈದ್ಯರು ಎಷ್ಟೇ ಚಿಕಿತ್ಸೆ ಮಾಡಿದರೂ ಕಾಯಿಲೆ ಗುಣವಾಗಲಿಲ್ಲ. ರಾಜ್ಯದಲ್ಲಿ ಯಾರಾದರೂ ಬಂದು ರಾಣಿಯ ಕಾಯಿಲೆ ಗುಣಪಡಿಸಿದರೆ, ಅವರಿಗೆ ಅರ್ಧ ರಾಜ್ಯವನ್ನೇ ಕೊಡುವುದಾಗಿ ರಾಜ ಡಂಗೂರ ಹೊಡೆಸಿದ. ರಾಜ್ಯದೆಲ್ಲೆಡೆಯಿಂದ ಉತ್ಸಾಹಿಗಳು ಬಂದು ತಮ್ಮ ವೈದ್ಯವಿದ್ಯೆಯನ್ನು ಪರೀಕ್ಷಿಸಿದರು. ಆದರೆ ಯಾವ ಔಷಧಕ್ಕೂ ರಾಣಿಯ ಕಾಯಿಲೆ ಬಗ್ಗಲಿಲ್ಲ. ಇದರಿಂದ ರಾಜ ಚಿಂತಾಕ್ರಾಂತನಾದ. ನಮ್ಮ ಪುಟ್ಟ ಹುಡುಗಿ ಭಾನುಮತಿ ತನ್ನ ಅಂತಃಪುರದ ಸಂಗಾತಿ ಗಿಳಿರಾಣಿಯಲ್ಲಿ ತನ್ನ ಬೇಸರ ಹೇಳಿಕೊಂಡಳು. ತನ್ನಮ್ಮನನ್ನು ಗುಣ ಮಾಡುವ ಔಷಧಿ ಎಲ್ಲಿದೆ ತಿಳಿದು ಬಾ ಎಂದು ಗಿಳಿರಾಣಿಯನ್ನು ಕೇಳಿಕೊಂಡಳು.
ರಾಣಿಯ ಕಾಯಿಲೆಗೆ ಮದ್ದು ಹುಡುಕುವುದಕ್ಕೆಂದು ಹೊರಟಿತು ಗಿಳಿರಾಣಿ. ದೂರ ದೂರದವರೆಗೆ ಹಾರಿ ಹೋಗಿ, ಹೊಸ ವಿಷಯಗಳನ್ನೆಲ್ಲಾ ಸಂಗ್ರಹಿಸಿ ಮತ್ತೆ ಭಾನುಮತಿಯ ಅಂತಃಪುರಕ್ಕೆ ಅದು ಮರಳಿತು. “ರಾಜಕುಮಾರಿ, ನಮ್ಮ ರಾಜ್ಯದ ಹೊರಭಾಗದಲ್ಲಿರುವ ದೊಡ್ಡ ಕಾಡಿನ ಮಧ್ಯದಲ್ಲಿ ಸುಂದರ ಸರೋವರವೊಂದು ಇದೆ. ಆ ಸರೋವರದ ದಂಡೆಯ ಮೇಲೆ ಒಂದು ಔಷಧಿಯ ವನವಿದೆ. ಆ ವನದಲ್ಲಿ ನಮ್ಮ ರಾಣಿಯ ಅನಾರೋಗ್ಯ ಗುಣವಾಗಲು ಬೇಕಾದ ಔಷಧಿಯ ಗಿಡವಿದೆ. ನಿನ್ನಷ್ಟೇ ಎತ್ತರವಿರುವ, ಸ್ಫಟಿಕದಂಥ ಹೂವುಗಳನ್ನು ಹೊಂದಿರುವ ಪೊದೆಯಂತೆ ಬೆಳೆಯುವ ಆ ಗಿಡಕ್ಕೆ ಒಳ್ಳೆಯ ಪರಿಮಳವಿದೆ. ಈ ಗಿಡದ ಕಾಯಿಗಳನ್ನು ತಂದು ಕಷಾಯ ಮಾಡಿ ರಾಣಿಗೆ ಕುಡಿಸಿದರೆ ಗುಣವಾಗುತ್ತದೆ ಎಂದು ಹಿಮಾಲಯದಿಂದ ಬಂದ ಜಂಗಮಯ್ಯ ಹೇಳಿದ್ದಾರೆ” ಎಂದಿತು ಗಿಳಿ. ʻಸರಿ ಹಾಗಾದರೆ, ಔಷಧಿ ತರುವುದಕ್ಕೆ ಹೊರಟೆʼ ಎಂದಳು ಭಾನುಮತಿ.
“ಹಾ, ಹಾ! ಸ್ವಲ್ಪ ತಾಳು. ಆ ವನದ ಸುತ್ತಲೂ ಹುಲಿಗಳ ಬೀಡೇ ಇದೆಯಂತೆ. ಆ ಹುಲಿ ಹಿಂಡಿನ ನಾಯಕನಾದ ಹೆಬ್ಬುಲಿಯೊಂದು ವನದ ಕಾವಲಿಗೆ ಇರುತ್ತದೆ. ಅದು ಕೇಳುವ ಪ್ರಶ್ನೆಗೆ ಉತ್ತರ ನೀಡಿದರೆ ಮಾತ್ರ, ವನ ಪ್ರವೇಶಿಸಲು ಜಾಗ ಬಿಡುತ್ತದೆ. ಉತ್ತರ ಕೊಡದಿದ್ದರೆ ಆ ಹುಲಿಗಳೆಲ್ಲಾ ಸೇರಿ ತಿಂದು ಹಾಕುತ್ತವಂತೆ” ಎಚ್ಚರಿಸಿತು ಗಿಳಿರಾಣಿ. ಆದರೆ ಅಂಥ ಯಾವುದಕ್ಕೂ ಹೆದರುವವಳೇ ನಮ್ಮ ಭಾನುಮತಿ? ಬೇಕಾದ ತಯಾರಿ ಮಾಡಿಕೊಂಡು ಹೊರಟೇಬಿಟ್ಟಳು.
ರಾಜ್ಯದ ಹೊರಗಿದ್ದ ದೊಡ್ಡ ಕಾಡಿನ ಸಮೀಪದವರೆಗೆ ಅವಳ ಬೆಂಗಾವಲಿನವರು ಬಂದರು. ಆದರೆ ಕಾಡಿನೊಳಗೆ ಒಬ್ಬಳೇ ಹೋಗುವೆನೆಂದು ಅವರನ್ನೆಲ್ಲಾ ಅಲ್ಲಿಯೇ ಇರಿಸಿ, ರಾಜಕುಮಾರಿ ನಡೆಯತೊಡಗಿದಳು. ನಡೆದೂ ನಡೆದೂ, ಗಿಳಿರಾಣಿ ಹೇಳಿದ್ದ ಸುಂದರ ಸರೋವರದ ತಟಕ್ಕೆ ಬಂದಳು. ಸುಮಾರು ದೂರದಿಂದಲೇ ಎದೆ ನಡುಗಿಸುವಂತೆ ಹುಲಿಗಳ ಘರ್ಜನೆ ಕೇಳಿಸುತ್ತಿತ್ತು. ಆದರೆ ಧೈರ್ಯವಂತೆ ಭಾನುಮತಿ ಇದಕ್ಕೆಲ್ಲಾ ಹೆದರದೆ ಸರೋವರದ ಬಳಿ ಬಂದಳು.
ಗಿಳಿ ಹೇಳಿದಂತೆಯೇ ಬಹಳ ದೊಡ್ಡ ಔಷಧೀಯ ವನವದು. ನಾನಾ ರೀತಿಯ ಮರಗಳು, ಹೆಮ್ಮರಗಳು, ಪೊದೆಗಳು, ಬಳ್ಳಿಗಳು, ಸಣ್ಣ ಸಸ್ಯಾದಿಗಳು- ಹೀಗೆ ಬಗೆಬಗೆಯ ತರುಲತೆಗಳಿದ್ದವು. ಭಯ ಹುಟ್ಟಿಸುವಂಥ ಹೆಬ್ಬುಲಿಯೊಂದು ಸುಮ್ಮನೆ ಮಲಗಿತ್ತು. ನರವಾಸನೆ ಮೂಗಿಗೆ ಬಡಿದಂತೆ ಮೆಲ್ಲಗೆ ಕತ್ತೆತ್ತಿ ನೋಡಿತು. ಭಾನುಮತಿಯೂ ಹುಲಿಯನ್ನೇ ಸುಮ್ಮನೆ ನೋಡುತ್ತಿದ್ದಳು.
“ಹುಡುಗಿ- ಯಾಕೆ ಬಂದೆ? ಸಾಯುವುದಕ್ಕಾ?” ಕೇಳಿತು ಹುಲಿ.
“ನನ್ನಮ್ಮನಿಗೆ ತುಂಬಾ ಕಾಯಿಲೆ. ಅದಕ್ಕಾಗಿ ಔಷಧಿ ತೆಗೆದುಕೊಂಡು ಹೋಗಲು ಬಂದೆ” ಸಣ್ಣದಾಗಿ, ಆದರೆ ದೃಢವಾಗಿ ಹೇಳಿದಳು ಭಾನುಮತಿ.
“ಸರಿ. ಆದರೆ ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು ನೀನು. ಆಗ ಮಾತ್ರ ಒಳಗೆ ಹೋಗಬಹುದು. ಉತ್ತರ ಕೊಡಲು ಆಗದಿದ್ದರೆ, ನಮ್ಮೆಲ್ಲರ ಹೊಟ್ಟೆ ಸೇರುವೆ. ಒಪ್ಪಿಗೆಯಾ?” ಕೇಳಿತು ಹುಲಿ. ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲವಲ್ಲ ಪಾಪದ ರಾಜಕುಮಾರಿಗೆ.
“ಉದ್ದವೂ ಅಲ್ಲದ, ಗಿಡ್ಡವೂ ಅಲ್ಲದ, ಅಗಲವೂ ಅಲ್ಲದ, ಸಣ್ಣದೂ ಅಲ್ಲದ, ಕಪ್ಪೂ ಅಲ್ಲದ, ಬಿಳಿಯೂ ಅಲ್ಲದ, ಸಿಹಿಯೂ ಅಲ್ಲದ, ಕಹಿಯೂ ಅಲ್ಲದ, ಎಲ್ಲೆಡೆ ಇದ್ದರೂ ಎಲ್ಲೂ ಇಲ್ಲದ- ಒಂದು ವಸ್ತುವನ್ನು ಹೇಳು” ಎಂದಿತು ಹುಲಿ.
ರಾಜಕುಮಾರಿ ಸುಮಾರು ಹೊತ್ತು ಆಲೋಚನೆ ಮಾಡಿದಳು. ಅವಳ ಪುಟ್ಟ ತಲೆಗೆ ಹೊಳೆದಿದ್ದು ʻನೀರುʼ ಎಂಬುದಾಗಿ. ʻತಪ್ಪು!ʼ ಎಂದಿತು ಹುಲಿ. “ಎಲ್ಲೆಡೆ ಇದ್ದರೂ ಎಲ್ಲೂ ಇಲ್ಲದ ಅನ್ನುವುದಕ್ಕೆ ನಿನ್ನ ಉತ್ತರ ಹೊಂದುವುದಿಲ್ಲ. ನಿನ್ನ ಕಡೆಯ ಆಸೆ ಇದ್ದರೆ ಹೇಳು” ಎನ್ನುತ್ತಾ ಭಾನುಮತಿಯನ್ನು ತಿನ್ನುವುದಕ್ಕೆ ಸಿದ್ಧವಾಯಿತು ಹುಲಿ.
ಇದನ್ನೂ ಓದಿ: ಮಕ್ಕಳ ಕಥೆ: ಭೂಮಿಯಲ್ಲಿ ಸಿಕ್ಕಿದ ನಿಧಿ ರಕ್ಷಿಸಿಕೊಂಡ ಬಡವ
“ಸಾಯುವುದಕ್ಕೆ ಮುನ್ನ ನಿನ್ನನ್ನೊಮ್ಮೆ ಅಪ್ಪಿಕೊಳ್ಳಬಹುದೇ?” ಕೇಳಿದಳು ರಾಜಕುಮಾರಿ.
“ಅಪ್ಪಿಕೊಳ್ಳುವುದೇ! ಯಾಕಾಗಬಾರದು? ಹುಲಿಯನ್ನು ಕಂಡ ತಕ್ಷಣ ಒಂದೋ ಹೆದರಿ ಓಡುತ್ತಾರೆ ಅಥವಾ ಕೊಂದುಹಾಕುತ್ತಾರೆ. ಈವರೆಗೆ ನನ್ನನ್ನು ಯಾರೂ ಅಪ್ಪಿಕೊಂಡಿದ್ದಿಲ್ಲ” ಎನ್ನುತ್ತಾ ಭಾನುಮತಿಯನ್ನು ಖುಷಿಯಿಂದ ಅಪ್ಪಿಕೊಂಡಿತು ಹೆಬ್ಬುಲಿ. ದೊಡ್ಡ ಹುಲಿಯ ಬಲಿಷ್ಠ ತೋಳುಗಳು ಬಹಳ ಮೃದುವಾಗಿದ್ದವು. ಅದು ತನ್ನನ್ನು ತಿನ್ನುವುದಕ್ಕಿದೆ ಎಂಬುದನ್ನೂ ಮರೆತ ಭಾನುಮತಿ, ಹುಲಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಮುದ್ದಿಸಿದಳು. ಹುಲಿಗಂತೂ ಅದರ ಜೀವಮಾನದಲ್ಲೇ ಯಾರೂ ಇಷ್ಟೊಂದು ಪ್ರೀತಿ ತೋರಿಸಿರಲಿಲ್ಲ.
“ಹುಡುಗಿ, ನನ್ನ ಮನಸ್ಸಿಗೆ ಇಷ್ಟೊಂದು ಸಂತೋಷ ನೀಡಿದ ನಿನ್ನನ್ನು ತಿನ್ನಲಾರೆ! ಸುಮ್ಮನೆ ಪ್ರಶ್ನೆ ಕೇಳುತ್ತಾ ಕಾಲಹರಣ ಮಾಡಿದ ಹಾಗಾಯ್ತು. ಇಲ್ಲಿಗೆ ಬಂದ ತಕ್ಷಣವೇ ನೀ ಹೀಗೆ ನನ್ನನ್ನು ಅಪ್ಪಿಕೊಂಡಿದ್ದರೆ, ಇಷ್ಟೊತ್ತಿಗೆ ಮರಳಿ ಹೋಗಿರುತ್ತಿದ್ದೆ. ಹೋಗು ಒಳಗೆ, ಯಾವ ಔಷಧಿ ಬೇಕೋ ತೆಗೆದುಕೋ” ಎಂದಿತು ಹುಲಿ. ಭಾನುಮತಿಯ ಸಂತೋಷಕ್ಕೆ ಸೀಮೆಯೇ ಇರಲಿಲ್ಲ.
ಔಷಧಿಯನ್ನು ತೆಗೆದುಕೊಂಡು ಅರಮನೆಗೆ ಹಿಂದಿರುಗಿದಳು ರಾಜಕುಮಾರಿ. ಹಿಮಾಲಯದ ಜಂಗಮಯ್ಯ ಹೇಳಿದಂತೆ ಅದರ ಕಾಯಿಗಳನ್ನು ಕಷಾಯ ಮಾಡಿ ರಾಣಿಗೆ ಕುಡಿಸಲಾಯಿತು. ಕೆಲವೇ ದಿನಗಳಲ್ಲಿ ರಾಣಿ ಸಂಪೂರ್ಣ ಗುಣಮುಖಳಾದಳು. ರಾಜ್ಯದ ಜನರೆಲ್ಲಾ ತಮ್ಮ ರಾಜಕುಮಾರಿಯ ಸಾಹಸವನ್ನು ಕೊಂಡಾಡಿದರು.
ಇದನ್ನೂ ಓದಿ: ಮಕ್ಕಳ ಕಥೆ: ಸೂರ್ಯನ ಕಳೆದುಹೋದ ಸೈಕಲ್ ಎಲ್ಲಿ ಹೋಗಿತ್ತು?