Site icon Vistara News

ಮಕ್ಕಳ ಕಥೆ: ಸ್ವೀಡನ್‌ ದೇಶದ ಜನಪದ ಕಥೆ: ಕಿನ್ನರಿಯ ಕುರಿಗಳು: ಭಾಗ 2

fairy sheeps1

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/04/WhatsApp-Audio-2023-04-22-at-205-1.mp3

ಈ ಕಥೆಯ ಮೊದಲ ಭಾಗವನ್ನು ಇಲ್ಲಿ ಓದಿ: ಮಕ್ಕಳ ಕಥೆ: ಸ್ವೀಡನ್‌ ದೇಶದ ಜನಪದ ಕಥೆ: ಕಿನ್ನರಿಯ ಕುರಿಗಳು: ಭಾಗ 1

ಅದೊಂದು ದಿನ ಕುರಿಯನ್ನು ಮೇಯಿಸುವುದಕ್ಕೆಂದು ಎಂದಿನಂತೆ ಹುಲ್ಲುಗಾವಲಿಗೆ ಬದಲಿಗೆ ಕಾಡಂಚಿನ ಜಾಗಕ್ಕೆ ಕರೆದೊಯ್ದಿದ್ದರು ಅಣ್ಣನ ಆಳುಗಳು. ಅದೆಲ್ಲಿತ್ತೋ ದೊಡ್ಡ ಕರಡಿಯೊಂದು ಧುತ್ತನೆ ಇವರ ಮೇಲೆ ಎರಗಿತು. ಹೆದರಿದ ಆಳುಗಳು ಅಲ್ಲಿಂದ ಪರಾರಿಯಾದರು. ಕುರಿ ಅಲ್ಲಿಂದ ತಪ್ಪಿಸಿಕೊಂಡಿತು. ಆಳುಗಳಿಂದ ಈ ವಿಷಯ ತಿಳಿದ ಅಣ್ಣ ಗೋಳಾಡಿದ. ತಡಮಾಡದೆ ನೇರವಾಗಿ ಬೆಟ್ಟದ ತಪ್ಪಲಲ್ಲಿದ್ದ ಕಿನ್ನರಿಯ ಅರಮನೆಗೆ ಹೋದ. ʻನೀ ಬರುವೆಯೆಂದು ಗೊತ್ತಿತ್ತು. ಆದರೆ ನಿನ್ನ ಕುರಿಯನ್ನು ಹುಡುಕಿಕೊಂಡರೆ ಮಾತ್ರವೇ ನಿನಗದು ದೊರೆಯುತ್ತದೆʼ ಎಂದಳು ಕಿನ್ನರಿ.

ಹೇಗಿದ್ದರೂ ಕಿವಿಗಳಿಗೆ ಬಣ್ಣದ ಗುರುತು ಮಾಡಿದ್ದು ಇದೆಯಲ್ಲ ಎಂಬ ಧೈರ್ಯದ ಮೇಲೆ ಹೋದರೆ- ಮಂದೆಯಲ್ಲಿದ್ದ ಎಲ್ಲಾ ಕುರಿಗಳೂ ಒಂದೇ ರೀತಿ ಕಾಣುತ್ತಿದ್ದವು. ಯಾವ ಕುರಿಯ ಕಿವಿಗೂ ಯಾವುದೇ ಬಣ್ಣದ ಗುರುತೂ ಇರಲಿಲ್ಲ. ʻಅರೆ! ಏನಾಯಿತು?ʼ ಎಂದು ಯೋಚಿಸಿದರೆ, ಕಳೆದ ಹಲವಾರು ತಿಂಗಳುಗಳಿಂದ ತಾನು ತನ್ನ ಕುರಿಯನ್ನು ಗಮನಿಸಿಯೇ ಇರಲಿಲ್ಲ. ಅದರ ಕಿವಿಯಲ್ಲಿದ್ದ ಬಣ್ಣ ವರ್ಷಗಟ್ಟಲೆ ಹಿಂದೆ ಹಾಕಿದ್ದು, ಈಗ ಇತ್ತೋ ಇಲ್ಲವೋ ಎಂಬುದೂ ನೆನಪಿರಲಿಲ್ಲ ಎಂಬುದು ಅಣ್ಣನ ಗಮನಕ್ಕೆ ಬಂತು. ʻನನ್ನಲ್ಲಿಗೆ ಮರಳಿ ಬಂದ ಕುರಿಗಳನ್ನು ಇಲ್ಲಿನ ಜಾದೂ ತೊರೆಯಲ್ಲಿ ಸ್ನಾನ ಮಾಡಿಸಲಾಗುತ್ತದೆ. ಅವುಗಳ ಮೇಲೆ ಹಳೆಯ ಯಾವ ಗುರುತುಗಳೂ ಉಳಿಯುವುದಿಲ್ಲʼ ಎಂದು ಕಿನ್ನರಿ ನಗುತ್ತಾ ಹೇಳಿದಳು.  ಇನ್ನು ತನ್ನ ಕುರಿಯನ್ನು ಗುರುತಿಸಲು ಸಾಧ್ಯವಿಲ್ಲ ಎಂಬುದು ಅವನಿಗೆ ಅರಿವಾಯಿತು. ಗೋಳಾಡುತ್ತಲೇ ಮನೆಗೆ ಮರಳಿದ.

ಕೆಲವು ದಿನಗಳ ನಂತರ ಜೋರು ಮಳೆ ಆರಂಭವಾಯಿತು. ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ, ತಮ್ಮನ ಕುರಿಯನ್ನು ಕಟ್ಟಿದ್ದ ಹಟ್ಟಿಯ ಛಾವಣಿ ಕಿತ್ತು ಹಾರಿಹೋಯಿತು. ಮಳೆಗೆ ತೊಯ್ದ ಗೋಡೆ, ಕುಸಿದು ಬಿತ್ತು. ತಮ್ಮನ ಕುರಿ ಅಲ್ಲಿಂದ ತಪ್ಪಿಸಿಕೊಂಡಿತು. ಬೆಳಗ್ಗೆ ಏಳುತ್ತಿದ್ದಂತೆ ಕುರಿಯ ಹಟ್ಟಿಯತ್ತ ಧಾವಿಸಿ ತಮ್ಮನಿಗೆ ಅಲ್ಲಿ ಕುರಿ ಇಲ್ಲದ್ದು ಕಂಡು ದುಃಖವಾಯಿತು. ಅದನ್ನು ಹುಡುಕುತ್ತ ಕಿನ್ನರಿಯ ಅರಮನೆಯತ್ತ ಹೊರಟ. ʻಅಯ್ಯೋ, ಸುಲಭವಲ್ಲ ಕಿನ್ನರಿಯ ಮಂದೆಯಲ್ಲಿರುವ ಕುರಿಯನ್ನು ಹುಡುಕುವುದು. ನಿನ್ನ ಕುರಿಯೂ ಕೈ ತಪ್ಪಿದಂತೆಯೇʼ ಎಂದ ಅಣ್ಣ. ಕುರಿ ಮಾಯವಾದ ಮೇಲೆ ಅವನೀಗ ಮೊದಲಿನಂತೆಯೇ ಹೊಲದ ಕಡೆ ಗಮನ ಕೊಡುತ್ತಿದ್ದ.

ಕಿನ್ನರಿಯ ಅರಮನೆಗೆ ಬಂದ ತಮ್ಮ. ʻಬಾ, ಬಾ. ನಿನ್ನ ನಿರೀಕ್ಷೆಯಲ್ಲಿಯೇ ಇದ್ದೆ. ಕುರಿಯನ್ನು ಹುಡುಕಿಕೊಂಡು ಬಂದವನಲ್ಲವೇ?ʼ ಎಂದ ಕಿನ್ನರಿ ಆತನನ್ನು ಕುರಿಗಳ ಮಂದೆಯತ್ತ ಕರೆದೊಯ್ದಳು. ನೋಡಿದರೆ ಎಲ್ಲ ಕುರಿಗಳೂ ತದ್ರೂಪು! ರೂಪಿನಲ್ಲಿ ಗುರುತು ಹಿಡಿಯುವುದು ಅಸಾಧ್ಯ ಎಂಬುದು ಅವನಿಗೂ ಅರಿವಾಯಿತು. ಆದರೂ, ತಾನು ಕರೆದಾಕ್ಷಣ ತನ್ನ ಕುರಿ ಬರುತ್ತದೆ ಎಂಬ ಭರವಸೆಯಿತ್ತು ತಮ್ಮನಿಗೆ. ತನ್ನ ಎಂದಿನ ವರಸೆಯಲ್ಲೇ ಕರೆದ, ಕರೆದ, ಕರೆದೇ ಕರೆದ. ಊಹುಂ! ಯಾವ ಕುರಿಯೂ ಬರಲಿಲ್ಲ. ʻನನ್ನಲ್ಲಿಗೆ ಮರಳಿ ಬಂದ ಕುರಿಗಳನ್ನು ಇಲ್ಲಿರುವ ಜಾದೂ ತೊರೆಯಲ್ಲಿ ಸ್ನಾನ ಮಾಡಿಸಲಾಗುತ್ತದೆ. ಅವುಗಳಿಗೆ ಹಳೆಯ ನೆನಪುಗಳು ಉಳಿಯುವುದಿಲ್ಲʼ ಎಂದು ನಕ್ಕಳು ಕಿನ್ನರಿ. ʻಛೇ! ಇದು ಅನ್ಯಾಯʼ ಎನಿಸಿತು ತಮ್ಮನಿಗೆ. ಕಾರಣ, ತನ್ನೊಂದಿಗೆ ಎಷ್ಟೊಂದು ಖುಷಿಯಾಗಿತ್ತಲ್ಲ ಕುರಿ. ಈಗ ಆ ಸಂತೋಷವೆಲ್ಲಾ ಅದರ ಪಾಲಿಗೆ ಮತ್ತು ತನ್ನ ಪಾಲಿಗೂ ಇಲ್ಲವಾಗುತ್ತದೆ ಎನಿಸಿತು. ಕುರಿ ಹಟ್ಟಿಯ ನೆಲದ ಮೇಲೆ ಕುಳಿತ ತಮ್ಮ, ತನ್ನ ಸುಸ್ವರದಲ್ಲಿ ಹಾಡಲಾರಂಭಿಸಿದ. ಕೆಲವೇ ಕ್ಷಣಗಳಲ್ಲಿ ಕುರಿಯೊಂದು ಬಂದು ಆತನ ಬೆನ್ನಿಗಂಟಿಕೊಂಡು ಕುಳಿತುಕೊಂಡಿತು. ಇದ್ಯಾವ ಕುರಿ ಅನ್ನೋದನ್ನ ಇನ್ನೂ ಹೇಳಬೇಕೆ!

ʻಇಲ್ಲಿಗೆ ಬಂದ ಯಾವ ಕುರಿಗಳೂ ಈವರೆಗೆ ಮರಳಿ ಹೋಗಿದ್ದಿಲ್ಲ. ಆದರೆ ಕುರಿಯ ಮೇಲಿದ್ದ ನಿನ್ನ ಪ್ರೀತಿಗೆ ಮೆಚ್ಚಿದ್ದೇನೆ. ನಿನ್ನ ಕುರಿಯನ್ನು ನೀನು ಕರೆದೊಯ್ಯಬಹುದುʼ ಎಂದಳು ಕಿನ್ನರಿ. ತಮ್ಮ ತನ್ನ ಎಂದಿನ ಸ್ವರದಲ್ಲಿ ಕರೆಯುತ್ತಿದ್ದಂತೆ ಆ ಕುರಿ ಆತನ ಹಿಂದೆ ನಡೆಯಲಾರಂಭಿಸಿತು. ಕುರಿಯನ್ನು ತಮ್ಮ ಮರಳಿ ತಂದ. ಅವನ ಮಕ್ಕಳು- ಮೊಮ್ಮಕ್ಕಳ ಕಾಲಕ್ಕೆ ಆಗುವಷ್ಟು ಸಂಪತ್ತು ಅವನಲ್ಲಿ ಕೂಡಿದರೂ, ಕೆಲಸ ಮಾಡುವುದನ್ನು ಆತ ಬಿಡಲಿಲ್ಲ. ಮಾತ್ರವಲ್ಲ, ಸುತ್ತಲಿನ ಎಲ್ಲರಿಗೂ ಬೇಕಾದವನಾಗಿ ಖುಷಿಯಿಂದ ಕುರಿಯೊಂದಿಗೆ ಬದುಕಿದ.

ಇದನ್ನೂ ಓದಿ: ಮಕ್ಕಳ ಕಥೆ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೇನಾಗುತ್ತದೆ?

Exit mobile version