Site icon Vistara News

ಮಕ್ಕಳ ಕಥೆ | ಕಳೆದುಹೋದ ಒಂಟೆಯನ್ನು ತೆನಾಲಿರಾಮ ಹುಡುಕಿದ್ದು ಹೇಗೆ?

children story

ತೆನಾಲಿ ರಾಮ ಕಾಡಿನ ದಾರಿಯೊಂದರಲ್ಲಿ ಹೋಗುತ್ತಿದ್ದಾಗ ಒಬ್ಬ ವರ್ತಕ ಅವನಿಗೆ ಎದುರಾದ. ಚಿಂತೆಯಲ್ಲಿದ್ದಂತೆ ಕಾಣುತ್ತಿದ್ದ ಆತ, ಆತುರದಲ್ಲಿ ಏನನ್ನೋ ಹುಡುಕುವವನಂತಿದ್ದ. ಎದುರಿಗೆ ಸಿಕ್ಕ ತೆನಾಲಿ ರಾಮನನ್ನು ನಿಲ್ಲಿಸಿದ ಆತ, ʻಸ್ವಾಮಿ… ನನ್ನ ಒಂಟೆಯನ್ನು ನೋಡಿದಿರೇ?ʼ ಎಂದು ಕೇಳಿದ. ಒಂದು ಕ್ಷಣ ಆಲೋಚಿಸಿದ ರಾಮ, ʻನಿಮ್ಮ ಒಂಟೆಯ ಒಂದು ಕಾಲು ಪೆಟ್ಟಾಗಿದೆಯೇ?ʼ ಎಂದು ಕೇಳಿದ. ಇದರಿಂದ ಸಂತೋಷಗೊಂಡ ವರ್ತಕ, ʻಹೌದೌದು! ಸದ್ಯ, ನನ್ನ ಒಂಟೆಯನ್ನು ನೀವಾದರೂ ನೋಡಿದಿರಲ್ಲ. ಎಲ್ಲಿ ನೋಡಿದಿರಿ?ʼ ಎಂದು ಪ್ರಶ್ನಿಸಿದ.

ʻನಾನು ನಿಮ್ಮ ಒಂಟೆಯನ್ನು ನೋಡಿಲ್ಲ, ಅದರ ಹೆಜ್ಜೆಯನ್ನಷ್ಟೇ ನೋಡಿದ್ದೇನೆ. ಇಲ್ನೋಡಿ, ಮೂರು ಕಾಲುಗಳ ಪ್ರಾಣಿಯೊಂದರ ಗೊರಸುಗಳ ಗುರುತು ಇಲ್ಲಿದೆ. ನಾಲ್ಕನೇ ಕಾಲನ್ನು ಎಳೆದುಕೊಂಡು ಹೋದ ಗುರುತಿದೆ. ಅಂದರೆ, ಒಂದು ಕಾಲಿಗೆ ಪೆಟ್ಟಾಗಿದೆ ಎಂಬುದು ಸ್ಪಷ್ಟʼ ಎಂದು ವಿವರಿಸಿದ ತೆನಾಲಿ ರಾಮ.

ʻಹೌದು ಒಂದು ಕಾಲಿಗೆ ಪೆಟ್ಟಾಗಿತ್ತು. ಆ ಒಂಟೆ ಎಲ್ಲಿ ಹೋಯಿತು ಎಂದು ಹುಡುಕುತ್ತಿದ್ದೇನೆʼ ಎಂದ ವರ್ತಕನಿಗೆ, ʻಅದರ ಒಂದು ಕಣ್ಣು ಮಾತ್ರ ಸರಿಯಾಗಿತ್ತೇ?ʼ ಎಂದು ಕೇಳಿದ ರಾಮ. ʻಹ..ಹೌದುʼ ಹೇಳಿದ ವರ್ತಕ ಒಂಟೆಯನ್ನೇ ಕಂಡಷ್ಟು ಸಂತೋಷದಿಂದ. ಹಾಗೆಯೇ ಮುಂದುವರಿಸಿದ ರಾಮ, ʻಆ ಒಂಟೆಯ ಒಂದು ಬದಿಗೆ ಸಕ್ಕರೆಯನ್ನೂ ಇನ್ನೊಂದು ಬದಿಗೆ ಗೋದಿಯನ್ನೂ ಹೇರಲಾಗಿತ್ತೇ?ʼ ಎಂದು ಪ್ರಶ್ನಿಸಿದ. ʻಹೌದೇಹೌದು. ಹಾಗಾದರೆ ನನ್ನ ಒಂಟೆಯನ್ನು ನೀವು ನೋಡಿದ್ದು ಸತ್ಯ. ಇಲ್ಲದಿದ್ದರೆ ಇಷ್ಟೊಂದು ನಿಖರವಾಗಿ ಹೇಳಲು ಸಾಧ್ಯವೇ ಇರಲಿಲ್ಲʼ ಎಂಬ ವರ್ತಕ ಅನುಮಾನದಿಂದ.

ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು

ʻನಿಮ್ಮ ಒಂಟೆಯನ್ನು ನಿಜಕ್ಕೂ ನೋಡಿಲ್ಲ. ಆದರೆ ಕೆಲವು ಗುರುತುಗಳನ್ನು ಗಮನಿಸಿದ್ದೇನೆ. ದಾರಿಯ ಎರಡೂ ಕಡೆಗಳಲ್ಲಿ ಗಿಡ-ಗಂಟಿಗಳು ಕಾಣಿಸುತ್ತಿವೆಯೇ? ಸ್ವಲ್ಪ ಗಮನಿಸಿ ನೋಡಿದರೆ, ಇಂದು ಪಕ್ಕದ ಗಿಡಗಳನ್ನು ಮಾತ್ರವೇ ಯಾವುದೋ ಪ್ರಾಣಿ ತಿಂದಿರುವಂತೆ ಕಾಣಿಸುತ್ತಿದೆ… ಎಂಬಲ್ಲಿಗೆ ಅದಕ್ಕೆ ಒಂದು ಕಣ್ಣು ಮಾತ್ರವೇ ಇದೆಯೆಂದು ತಿಳಿದುಕೊಳ್ಳಬಹುದು. ಹಾಗೆಯೇ ನೆಲವನ್ನು ನೋಡಿ, ಒಂದು ಬದಿಯಲ್ಲಿ ಬಿದ್ದ ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುತ್ತಿವೆ. ಇನ್ನೊಂದು ಬದಿಯಲ್ಲಿ ಉದ್ದಕ್ಕೂ ಗೋದಿ ಕಾಳುಗಳೂ ಕಾಣುತ್ತಿವೆ. ಹಾಗಾಗಿಯೇ ಈ ಊಹೆಯನ್ನು ಮಾಡಿದೆʼ ಎಂದು ಹೇಳಿದ ಜಾಣ ತೆನಾಲಿ.

ʻನೀವು ಹೇಳಿದ್ದೆಲ್ಲವೂ ನನಗೆ ಅರ್ಥವಾಗಿದೆ. ಆದರೆ ಒಂಟೆ ಮಾತ್ರ ಕಾಣುತ್ತಿಲ್ಲವಲ್ಲʼ ಎಂದು ಬೇಸರಿಸಿದ ವರ್ತಕ. ʻನೋಡಿ, ಕಾಲು ಕುಂಟಾಗಿದ್ದು, ಭಾರವನ್ನೂ ಹೊತ್ತಿರುವ ಪಾಪದ ಪ್ರಾಣಿ. ಇಲ್ಲಿಂದ ಹೆಚ್ಚು ದೂರ ಹೋಗಿರಲಿಕ್ಕಿಲ್ಲ. ಈ ಸಕ್ಕರೆ ಅಥವಾ ಗೋದಿಯ ಗುರುತು ಹಿಡಿದು ಹೋಗಿ, ಹತ್ತಿರದಲ್ಲೇ ಸಿಕ್ಕೀತುʼ ಎಂದು ರಾಮ.

ಗೋದಿಯ ಗುರುತನ್ನೇ ಅನುಸರಿಸಿ ಹೋದ ವರ್ತಕನಿಗೆ ಸ್ವಲ್ಪವೇ ದೂರದಲ್ಲಿ ಒಂಟೆ ಸಿಕ್ಕಿತು. ಮಾತ್ರವಲ್ಲ, ಕುಂಟುತ್ತಿರುವ ಒಂಟೆಯ ಮೇಲೆ ಭಾರ ಹೊರಿಸಿದ್ದಕ್ಕೆ ನಾಚಿಕೆಪಟ್ಟುಕೊಂಡ ಆತ, ಅದನ್ನು ತನ್ನ ಬೇರೆಯ ಪ್ರಾಣಿಗಳ ಮೇಲೆ ಹಂಚಿದ.

ಇದನ್ನೂ ಓದಿ: ಮಕ್ಕಳ ಕಥೆ | ಹರಿಶರ್ಮ ಮತ್ತು ಪರಾರಿಯಾದ ಕುದುರೆ

Exit mobile version