ಕಿಡ್ಸ್ ಕಾರ್ನರ್
ಮಕ್ಕಳ ಕಥೆ | ಕಳೆದುಹೋದ ಒಂಟೆಯನ್ನು ತೆನಾಲಿರಾಮ ಹುಡುಕಿದ್ದು ಹೇಗೆ?
ತಪ್ಪಿಸಿಕೊಂಡ ಒಂಟೆಯ ಮಾಲೀಕನಿಗೇ ಅದರ ಗುರುತುಗಳು ಕಣ್ಣೆದುರಿಗೆ ಇದ್ದರೂ ಅದನ್ನು ಹುಡುಕಲು ಆಗಲಿಲ್ಲ. ತೆನಾಲಿ ರಾಮನ ಜಾಣ್ಮೆಗೆ ಅದು ಕಂಡದ್ದು ಹೇಗೆ? ಓದಿ ಈ ಮಕ್ಕಳ ಕಥೆ.
ತೆನಾಲಿ ರಾಮ ಕಾಡಿನ ದಾರಿಯೊಂದರಲ್ಲಿ ಹೋಗುತ್ತಿದ್ದಾಗ ಒಬ್ಬ ವರ್ತಕ ಅವನಿಗೆ ಎದುರಾದ. ಚಿಂತೆಯಲ್ಲಿದ್ದಂತೆ ಕಾಣುತ್ತಿದ್ದ ಆತ, ಆತುರದಲ್ಲಿ ಏನನ್ನೋ ಹುಡುಕುವವನಂತಿದ್ದ. ಎದುರಿಗೆ ಸಿಕ್ಕ ತೆನಾಲಿ ರಾಮನನ್ನು ನಿಲ್ಲಿಸಿದ ಆತ, ʻಸ್ವಾಮಿ… ನನ್ನ ಒಂಟೆಯನ್ನು ನೋಡಿದಿರೇ?ʼ ಎಂದು ಕೇಳಿದ. ಒಂದು ಕ್ಷಣ ಆಲೋಚಿಸಿದ ರಾಮ, ʻನಿಮ್ಮ ಒಂಟೆಯ ಒಂದು ಕಾಲು ಪೆಟ್ಟಾಗಿದೆಯೇ?ʼ ಎಂದು ಕೇಳಿದ. ಇದರಿಂದ ಸಂತೋಷಗೊಂಡ ವರ್ತಕ, ʻಹೌದೌದು! ಸದ್ಯ, ನನ್ನ ಒಂಟೆಯನ್ನು ನೀವಾದರೂ ನೋಡಿದಿರಲ್ಲ. ಎಲ್ಲಿ ನೋಡಿದಿರಿ?ʼ ಎಂದು ಪ್ರಶ್ನಿಸಿದ.
ʻನಾನು ನಿಮ್ಮ ಒಂಟೆಯನ್ನು ನೋಡಿಲ್ಲ, ಅದರ ಹೆಜ್ಜೆಯನ್ನಷ್ಟೇ ನೋಡಿದ್ದೇನೆ. ಇಲ್ನೋಡಿ, ಮೂರು ಕಾಲುಗಳ ಪ್ರಾಣಿಯೊಂದರ ಗೊರಸುಗಳ ಗುರುತು ಇಲ್ಲಿದೆ. ನಾಲ್ಕನೇ ಕಾಲನ್ನು ಎಳೆದುಕೊಂಡು ಹೋದ ಗುರುತಿದೆ. ಅಂದರೆ, ಒಂದು ಕಾಲಿಗೆ ಪೆಟ್ಟಾಗಿದೆ ಎಂಬುದು ಸ್ಪಷ್ಟʼ ಎಂದು ವಿವರಿಸಿದ ತೆನಾಲಿ ರಾಮ.
ʻಹೌದು ಒಂದು ಕಾಲಿಗೆ ಪೆಟ್ಟಾಗಿತ್ತು. ಆ ಒಂಟೆ ಎಲ್ಲಿ ಹೋಯಿತು ಎಂದು ಹುಡುಕುತ್ತಿದ್ದೇನೆʼ ಎಂದ ವರ್ತಕನಿಗೆ, ʻಅದರ ಒಂದು ಕಣ್ಣು ಮಾತ್ರ ಸರಿಯಾಗಿತ್ತೇ?ʼ ಎಂದು ಕೇಳಿದ ರಾಮ. ʻಹ..ಹೌದುʼ ಹೇಳಿದ ವರ್ತಕ ಒಂಟೆಯನ್ನೇ ಕಂಡಷ್ಟು ಸಂತೋಷದಿಂದ. ಹಾಗೆಯೇ ಮುಂದುವರಿಸಿದ ರಾಮ, ʻಆ ಒಂಟೆಯ ಒಂದು ಬದಿಗೆ ಸಕ್ಕರೆಯನ್ನೂ ಇನ್ನೊಂದು ಬದಿಗೆ ಗೋದಿಯನ್ನೂ ಹೇರಲಾಗಿತ್ತೇ?ʼ ಎಂದು ಪ್ರಶ್ನಿಸಿದ. ʻಹೌದೇಹೌದು. ಹಾಗಾದರೆ ನನ್ನ ಒಂಟೆಯನ್ನು ನೀವು ನೋಡಿದ್ದು ಸತ್ಯ. ಇಲ್ಲದಿದ್ದರೆ ಇಷ್ಟೊಂದು ನಿಖರವಾಗಿ ಹೇಳಲು ಸಾಧ್ಯವೇ ಇರಲಿಲ್ಲʼ ಎಂಬ ವರ್ತಕ ಅನುಮಾನದಿಂದ.
ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು
ʻನಿಮ್ಮ ಒಂಟೆಯನ್ನು ನಿಜಕ್ಕೂ ನೋಡಿಲ್ಲ. ಆದರೆ ಕೆಲವು ಗುರುತುಗಳನ್ನು ಗಮನಿಸಿದ್ದೇನೆ. ದಾರಿಯ ಎರಡೂ ಕಡೆಗಳಲ್ಲಿ ಗಿಡ-ಗಂಟಿಗಳು ಕಾಣಿಸುತ್ತಿವೆಯೇ? ಸ್ವಲ್ಪ ಗಮನಿಸಿ ನೋಡಿದರೆ, ಇಂದು ಪಕ್ಕದ ಗಿಡಗಳನ್ನು ಮಾತ್ರವೇ ಯಾವುದೋ ಪ್ರಾಣಿ ತಿಂದಿರುವಂತೆ ಕಾಣಿಸುತ್ತಿದೆ… ಎಂಬಲ್ಲಿಗೆ ಅದಕ್ಕೆ ಒಂದು ಕಣ್ಣು ಮಾತ್ರವೇ ಇದೆಯೆಂದು ತಿಳಿದುಕೊಳ್ಳಬಹುದು. ಹಾಗೆಯೇ ನೆಲವನ್ನು ನೋಡಿ, ಒಂದು ಬದಿಯಲ್ಲಿ ಬಿದ್ದ ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುತ್ತಿವೆ. ಇನ್ನೊಂದು ಬದಿಯಲ್ಲಿ ಉದ್ದಕ್ಕೂ ಗೋದಿ ಕಾಳುಗಳೂ ಕಾಣುತ್ತಿವೆ. ಹಾಗಾಗಿಯೇ ಈ ಊಹೆಯನ್ನು ಮಾಡಿದೆʼ ಎಂದು ಹೇಳಿದ ಜಾಣ ತೆನಾಲಿ.
ʻನೀವು ಹೇಳಿದ್ದೆಲ್ಲವೂ ನನಗೆ ಅರ್ಥವಾಗಿದೆ. ಆದರೆ ಒಂಟೆ ಮಾತ್ರ ಕಾಣುತ್ತಿಲ್ಲವಲ್ಲʼ ಎಂದು ಬೇಸರಿಸಿದ ವರ್ತಕ. ʻನೋಡಿ, ಕಾಲು ಕುಂಟಾಗಿದ್ದು, ಭಾರವನ್ನೂ ಹೊತ್ತಿರುವ ಪಾಪದ ಪ್ರಾಣಿ. ಇಲ್ಲಿಂದ ಹೆಚ್ಚು ದೂರ ಹೋಗಿರಲಿಕ್ಕಿಲ್ಲ. ಈ ಸಕ್ಕರೆ ಅಥವಾ ಗೋದಿಯ ಗುರುತು ಹಿಡಿದು ಹೋಗಿ, ಹತ್ತಿರದಲ್ಲೇ ಸಿಕ್ಕೀತುʼ ಎಂದು ರಾಮ.
ಗೋದಿಯ ಗುರುತನ್ನೇ ಅನುಸರಿಸಿ ಹೋದ ವರ್ತಕನಿಗೆ ಸ್ವಲ್ಪವೇ ದೂರದಲ್ಲಿ ಒಂಟೆ ಸಿಕ್ಕಿತು. ಮಾತ್ರವಲ್ಲ, ಕುಂಟುತ್ತಿರುವ ಒಂಟೆಯ ಮೇಲೆ ಭಾರ ಹೊರಿಸಿದ್ದಕ್ಕೆ ನಾಚಿಕೆಪಟ್ಟುಕೊಂಡ ಆತ, ಅದನ್ನು ತನ್ನ ಬೇರೆಯ ಪ್ರಾಣಿಗಳ ಮೇಲೆ ಹಂಚಿದ.
ಇದನ್ನೂ ಓದಿ: ಮಕ್ಕಳ ಕಥೆ | ಹರಿಶರ್ಮ ಮತ್ತು ಪರಾರಿಯಾದ ಕುದುರೆ
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!
ಕುದುರೆ ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ. ಯಾಕೆ ಗೊತ್ತೇ? ಕಥೆ ಓದಿ.
ಚೀನಾ ದೇಶದಲ್ಲಿ ಕುದುರೆಗಳ ವ್ಯಾಪಾರಿಯೊಬ್ಬನಿದ್ದ. ಅರಬ್ ದೇಶಗಳಿಂದ ಕುದುರೆಗಳನ್ನು ತಂದು ಆತ ಚೀನಾದಲ್ಲಿ ಮಾರುತ್ತಿದ್ದ. ಒಂದಕ್ಕಿಂತ ಒಂದು ಉತ್ತಮವಾದ ಕುದುರೆಗಳನ್ನು ಆತ ಸಾಕಿಕೊಂಡಿದ್ದ. ಒಳ್ಳೆಯ ದರ ಸಿಕ್ಕುತ್ತಿದ್ದಂತೆ ಅವುಗಳನ್ನು ಮಾರುತ್ತಿದ್ದ. ಆತನಿಗೆ ಒಬ್ಬನೇ ಮಗ. ಆ ಮಗನಿಗೂ ಕುದುರೆಗಳ ತಳಿಗಳನ್ನು ಗುರುತಿಸುವುದು, ಅವುಗಳನ್ನು ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ.
ಒಂದು ದಿನ ಆತನ ಮಗ ಕುದುರೆ ಲಾಯದ ಬಾಗಿಲನ್ನು ಮುಚ್ಚುವುದಕ್ಕೆ ಮರೆತ. ರಾತ್ರಿಯಾಯಿತು, ಎಲ್ಲರೂ ಮಲಗಿಬಿಟ್ಟರು. ಬೆಳಗ್ಗೆದ್ದು ನೋಡುವಷ್ಟರಲ್ಲಿ ಉತ್ತಮ ತಳಿಯ ಗಂಡು ಕುದುರೆಯೊಂದು ಲಾಯದಿಂದ ತಪ್ಪಿಸಿಕೊಂಡಿತ್ತು. ವ್ಯಾಪಾರಿಯ ದುಬಾರಿ ಬೆಲೆಯ ಗಂಡು ಕುದುರೆ ಕಾಣೆಯಾಗಿದೆ ಎಂಬುದನ್ನು ತಿಳಿದ ಊರಿನ ಜನ ಬಂದು, ಹಿರಿಯ ವ್ಯಾಪಾರಿಗೆ ಸಮಾಧಾನ ಹೇಳಿದರು. ಆದರೆ ಯಾವುದೇ ಚಿಂತೆಯಿಲ್ಲದವರಂತೆ ನಿರ್ಲಿಪ್ತನಾಗಿದ್ದ ಆತ, ʻಅಯ್ಯೋ ಬಿಡಿ, ಆಗುವುದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳಿ ತಣ್ಣಗೆ ಕೂತಿದ್ದ. ಊರಿನ ಜನರಿಗೆಲ್ಲಾ ಅಚ್ಚರಿಯಾಯಿತು. ಇಷ್ಟೊಂದು ನಷ್ಟವಾಗಿದ್ದಕ್ಕೆ ಬೇಸರದಿಂದ ಆತನಿಗೆ ಹಾಗಾಗಿದೆ ಎಂದು ಭಾವಿಸಿ ಸುಮ್ಮನಾದರು.
ಕೆಲವು ದಿನಗಳ ನಂತರ ಆತನ ಲಾಯದಿಂದ ಓಡಿಹೋಗಿದ್ದ ಕುದುರೆ ಮರಳಿ ಬಂತು. ಆ ಕುದುರೆಯ ಜೊತೆಯಲ್ಲಿ ಕಾಡು ತಳಿಯ ಹೆಣ್ಣು ಕುದುರೆಯೊಂದು ಲಾಯಕ್ಕೆ ಬಂದಿತ್ತು. ಈತನ ಕಾಣೆಯಾದ ದುಬಾರಿ ಕುದುರೆಯ ಜೊತೆಗೆ ಇನ್ನೊಂದು ಕುದುರೆಯೂ ಆತನಿಗೆ ಅನಾಯಾಸವಾಗಿ ಲಭ್ಯವಾಗಿತ್ತು. ಹಾಗಾಗಿ ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುತ್ತಾ ನಷ್ಟದಲ್ಲೂ ಭರವಸೆ ಕಳೆದುಕೊಳ್ಳದೆ ಇದ್ದ ವ್ಯಾಪಾರಿಯ ಮನಸ್ಸು ಏನೆಂಬುದು ಆತನ ಮಗನಿಗೆ ಅರ್ಥವಾಗಿತ್ತು. ಆದರೂ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೇ ಹೇಳುತ್ತಾನಲ್ಲ ತಂದೆ ಎಂದು ವಿಚಿತ್ರವೆನಿಸಿತು.
ಇನ್ನೊಂದು ದಿನ, ತಾನೇ ಸಾಕಿದ್ದ ಕುದುರೆಯೊಂದರ ಮೇಲೆ ವ್ಯಾಪಾರಿಯ ಮಗ ಸವಾರಿ ಮಾಡುತ್ತಿದ್ದ. ಸವಾರ ಹೇಳಿದ ಮಾತನ್ನು ಕೇಳುವಂತೆ ಆ ಕುದುರೆಯನ್ನು ಚನ್ನಾಗಿ ಪಳಗಿಸಲಾಗಿತ್ತು. ಆದರೆ ಹುಲ್ಲುಗಾವಲಿನಲ್ಲಿ ಓಡುತ್ತಿದ್ದ ಕುದರೆ ಇದ್ದಕ್ಕಿದ್ದಂತೆ ಮುಗ್ಗರಿಸಿತು. ಇದರಿಂದ ಕುದುರೆಯ ಮೇಲಿದ್ದ ವರ್ತಕನ ಮಗ ಕೆಳಗೆ ಉರುಳಿ ಬಿದ್ದ. ಆತ ಒಂದು ಕಾಲು ಮುರಿದುಹೋಯಿತು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮುರಿದ ಕಾಲು ಮೊದಲಿನಂತಾಗುವುದು ಅನುಮಾನ, ಆದರೂ ವರ್ಷಗಟ್ಟಲೆ ಸಮಯ ಬೇಕು ಎಂದರು. ಏನೇನೋ ಗಿಡಮೂಲಿಕೆಯ ಔಷಧಿಗಳನ್ನು ಆತನ ಕಾಲಿಗೆ ಕಟ್ಟಿದರು.
ಈ ವಿಷಯ ಊರಿಗೆಲ್ಲಾ ತಿಳಿಯಿತು. ಊರ ಜನರೆಲ್ಲಾ ಇವರ ಮನೆಗೆ ಬಂದು ಸಮಾಧಾನ ಮಾಡತೊಡಗಿದರು. ವರ್ತಕನ ೨೫ ವರ್ಷದ ಮಗ, ಪಾಪ, ಇನ್ನು ವರ್ಷಗಟ್ಟಲೆ ಕುಂಟಬೇಕಲ್ಲ. ಆದರೂ ಪೂರಾ ಮೊದಲಿನಂತಾಗುವುದು ಅನುಮಾನ ಎಂದಿದ್ದಾರಲ್ಲ ವೈದ್ಯರು ಎಂದು ಜನರೆಲ್ಲಾ ಬೇಸರಗೊಂಡು ಆ ಕುದುರೆಯನ್ನು ಶಪಿಸಿದರು. ಆದರೆ ಇದಕ್ಕೂ ನಿರ್ಲಿಪ್ತನಾಗಿದ್ದ ವರ್ತಕ. ʻಚನ್ನಾಗಿ ಪಳಗಿದ ಕುದುರೆ ಮುಗ್ಗರಿಸಿದರೆ ಏನು ಮಾಡುವುದು? ಅದೇನು ಬೇಕೆಂದು ಮಾಡಲಿಲ್ಲವಲ್ಲ, ಪಾಪದ ಪ್ರಾಣಿ. ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡರಾಯಿತುʼ ಎಂದು ವರ್ತಕ. ಮಗನಿಗೆ ಕಾಲು ಮುರಿದ ದುಃಖದಲ್ಲಿ ಆ ವ್ಯಾಪಾರಿಯ ತಲೆ ಕಟ್ಟಿದೆ ಎಂದುಕೊಂಡರು ಜನ.
ಇದನ್ನೂ ಓದಿ : ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?
ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಯುದ್ಧ ಘೋಷಣೆಯಾಯಿತು. ಪ್ರತಿ ಮನೆಯಿಂದಲೂ ಯುವಕರು ಸೇನೆಗೆ ಬರಲೇಬೇಕು ಎಂದು ರಾಜನ ಆಜ್ಞೆಯಾಯಿತು. ಊರೂರಿಗೆ ಸೈನಿಕರು ಬಂದರು. ಮನೆಮನೆಗೆ ಭೇಟಿ ನೀಡಿ, ಯುವಕರನ್ನು ಕರೆದೊಯ್ದರು. ವರ್ತಕನ ಮನೆಗೆ ಬಂದರೆ, ಮನೆಯಲ್ಲಿರುವ ಇಬ್ಬರು ಗಂಡಸರ ಪೈಕಿ ಒಬ್ಬ ಮುದುಕ, ಇನ್ನೊಬ್ಬನಿಗೆ ಕಾಲು ಮುರಿದಿದೆ. ಸೈನಿಕರು ತಮ್ಮಷ್ಟಕ್ಕೆ ಮಾತಾಡಿಕೊಂಡು ಹೊರಟುಹೋದರು. ಹಲವಾರು ದಿನಗಳವರೆಗೆ ನಡೆದ ಯುದ್ಧದಲ್ಲಿ ಬಹಳಷ್ಟು ಮಂದಿ ಜೀವ ಕಳೆದುಕೊಂಡರು. ಸಾವಿರಾರು ಮಂದಿ ಕೈ-ಕಾಲು ಕಳೆದುಕೊಂಡರು. ತನಗೆ ಕಾಲು ಮುರಿದಾಗಲೂ ಅಪ್ಪ ಬೇಸರ ಮಾಡದೆ ಇದ್ದಿದ್ದು ಮಗನಿಗೆ ನೆನಪಾಯಿತು. ಕಷ್ಟಗಳ ನಡುವೆ ಭರವಸೆ ಕಳೆದುಕೊಳ್ಳದೆ ಇರಬೇಕೆಂಬ ತಂದೆಯ ಮಾತು ಮಗನಿಗೆ ಅರ್ಥವಾಯಿತು.
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?
ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ಮುಂದೇನಾಯಿತು? ಕಥೆ ಓದಿ.
ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.
ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.
ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.
ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.
ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.
ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.
ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?
ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?
ಇನ್ನೊಂದು ವಾರ ನಾವೆಲ್ಲಾ ಕೆಲಸಕ್ಕೆ ರಜೆ ತೆಗೆದುಕೊಳ್ಳಲಿದ್ದೇವೆ” ಎಂಬ ಕೆಂಪಿಕೋಳಿಯ ಮಾತಿಗೆ ಉಳಿದ ಕೋಳಿಗಳೆಲ್ಲಾ ಖುಷಿಯಿಂದ ರೆಕ್ಕೆ ಬಡಿದವು. ಮುಂದೇನಾಯಿತು? ಕಥೆ ಓದಿ.
ಅಂದು ಬೆಳಗ್ಗೆಯೇ ರಾಜು ರೈತನ ತೋಟದ ಕೋಳಿಗಳೆಲ್ಲಾ ಸಭೆ ಸೇರಿದ್ದವು. ಆ ಕೋಳಿಗಳ ಮುಖಂಡನ ಸ್ಥಾನದಲ್ಲಿ ನಿಂತು, ತನ್ನ ದೊಡ್ಡ ರೆಕ್ಕೆಗಳನ್ನು ಅಗಲಿಸುತ್ತಾ ಏರುಶ್ರುತಿಯಲ್ಲಿ ಮಾತಾಡುತ್ತಿತ್ತು ಕೆಂಪಿಕೋಳಿ. “ನನ್ನ ಪ್ರೀತಿಯ ಕುಕ್ಕುಟ ಬಾಂಧವರೇ! ಈ ವಾರ ನಾವೆಲ್ಲರೂ ಸಿಕ್ಕಾಪಟ್ಟೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಕೆಲವರು ಮಾಡಿದ ಕೆಲಸ ಹೆಚ್ಚಾಗಿ, ಬಸವಳಿದು ಬೆಂಡಾಗಿ, ರೆಕ್ಕೆ-ಪುಕ್ಕಗಳೆಲ್ಲಾ ಉದುರಿ ಹೋಗುವಷ್ಟಾಗಿದ್ದಾರೆ. ಹಾಗಾಗಿ ಇನ್ನೊಂದು ವಾರ ನಾವೆಲ್ಲಾ ಕೆಲಸಕ್ಕೆ ರಜೆ ತೆಗೆದುಕೊಳ್ಳಲಿದ್ದೇವೆ” ಎಂಬ ಕೆಂಪಿಕೋಳಿಯ ಮಾತಿಗೆ ಉಳಿದ ಕೋಳಿಗಳೆಲ್ಲಾ ಖುಷಿಯಿಂದ ರೆಕ್ಕೆ ಬಡಿದವು.
ಅಲ್ಲಿಯೇ ಮೇಯುತ್ತಿದ್ದ ಹಸುಗಳಿಗೆ ಕೋಳಿಗಳ ವ್ಯವಹಾರ ಕಂಡು ಅಚ್ಚರಿಯಾಯಿತು. ಇದ್ದಕ್ಕಿದ್ದಂತೆ ತಿಂಡಿ ಬುಟ್ಟಿಗಳನ್ನೆಲ್ಲ ತುಂಬಿಸಿಕೊಂಡು, ಮಕ್ಕಳು ಮರಿಗಳನ್ನೆಲ್ಲಾ ದಬ್ಬಿಕೊಂಡು ಈ ಕೋಳಿಗಳು ಹಳ್ಳದತ್ತ ಯಾಕಾಗಿ ಹೋಗುತ್ತಿವೆ ಎಂಬ ಕುತೂಹಲ ತಡೆಯಲಾಗದ ಹಸುಗಳು, ಕೋಳಿಗಳನ್ನು ಅಡ್ಡಗಟ್ಟಿದವು. “ಎಲ್ಲೋ ಹೊರಟಂಗಿದೆ ಎಲ್ಲರೂ” ಎಂಬ ಹಸುಗಳ ಮಾತಿಗೆ, “ಹೂಂ, ನಾವೆಲ್ಲಾ ಇನ್ನೊಂದು ವಾರ ರಜ ತಗೊಂಡಿದ್ದೀವಿ. ಅದ್ಕೆ ಹಳ್ಳದ ದಂಡೆಗೆ ಪಿಕ್‌ನಿಕ್ ಹೋಗ್ತಿದ್ದೀವಿ” ಎಂದವು ಕೋಳಿಗಳು. “ನಿಮಗ್ಯಾಕೆ ರಜ? ಯಾರ್ಕೊಟ್ಟೋರು?” ಕೇಳಿದವು ಹಸುಗಳು.
“ಈಗ ಮಳೆಗಾಲ ಅಲ್ವಾ… ಬೆಳಗ್ಗೆ ಯಾರೂ ಎಷ್ಟೊತ್ತಾದ್ರೂ ಏಳೋದೇ ಇಲ್ಲ. ಎಲ್ಲರನ್ನೂ ಎಬ್ಬಿಸೋಕೆ ಅಂತೆ ಬೆಳಗ್ಗೆ ಅರಚೀಅರಚಿ ಇಡಬೇಕು. ಅದೂ ಅಲ್ದೆ ಈ ತಿಂಗಳು ಯದ್ವಾತದ್ವಾ ಮೊಟ್ಟೆ ಇಟ್ಟಿದೀವಿ. ಎಷ್ಟೊತ್ತು ಕೂತ್ಕೋಬೇಕು ಗೊತ್ತಾ ಕಾವು ಕೊಡೋದಕ್ಕೆ. ಆಮೇಲೆ ಈ ಮರಿಗಳನ್ನು ಬೇರೆ ನೋಡ್ಕೋಬೇಕು… ಉಸ್ಸಪ್ಪಾ! ಅದ್ಕೆ ಈ ವಾರ ಪೂರ್ತಿ ರಜೆ ಹಾಕಿದ್ದೀವಿ” ಅಂದವು ಕೋಳಿಗಳು. ಹಸುಗಳಿಗೆ ಹೌದು ಅನಿಸಿತು.
ಅಷ್ಟರಲ್ಲಿ ಹಸುಗಳ ಗುಂಪಿನಲ್ಲಿದ್ದ ಬೆಳ್ಳಿ ಹಸು ತಕರಾರು ತೆಗೆಯಿತು. “ಏನು ಅವರು ಮಾತ್ರ ಕೆಲಸ ಮಾಡೋದಾ? ನಾವ್ಯಾರೂ ಮಾಡಲ್ವಾ? ಹೊತ್ತು ಹೊತ್ತಿಗೆ ಒಂದೊಂದ್ ಬಕೀಟು ಹಾಲು ಕೊಡೋದಕ್ಕೆ ಅಂತ ರಾಶಿಗಟ್ಟಲೆ ತಿನ್ನಬೇಡ್ವಾ? ಅದಕ್ಕೇಂತ ದಿನವಿಡೀ ಸುತ್ತೀಸುತ್ತಿ ಮೇಯಬೇಕು. ರಾಜು ರೈತನಿಗೆ ರಾಶಿಗಟ್ಟಲೆ ಗೊಬ್ಬರ ಕೊಡಬೇಕು. ಇಷ್ಟೆಲ್ಲಾ ಕೆಲಸ ಮಾಡಿಲ್ವಾ ನಾವೂನು… ನಾವೂ ರಜೆ ತಗೊಳ್ಳೋಣ” ಎಂಬ ಬೆಳ್ಳಿ ಹಸುವಿನ ಮಾತುಗಳು ಎಲ್ಲ ಹಸುಗಳಿಗೂ ನಿಜ ಎನಿಸಿದವು. ಅವೆಲ್ಲವೂ ಹೊಳೆ ದಡಕ್ಕೆ ಹೋಗಿ ಬಿದ್ದುಕೊಂಡು ಮೆಲುಕು ಹಾಕುವ ತೀರ್ಮಾನ ಮಾಡಿದವು.
ಈ ವಿಷಯ ಬೆಕ್ಕುಗಳಿಗೆ ಗೊತ್ತಾಯಿತು. “ಏನು… ಇವರೊಂದೇ ಕೆಲಸ ಮಾಡೋದಾ ಈ ತೋಟದಲ್ಲಿ ನಾವಂತೂ ಈ ವಾರ ಹಿಡಿದು ತಿಂದ ಇಲಿಗಳ ಲೆಕ್ಕ ಇಟ್ಟವರೇ ಇಲ್ಲ. ನಾವಷ್ಟು ಕೆಲಸ ಮಾಡದಿದ್ರೆ ಈ ಹಸುಗಳಿಗೆ ಎಲ್ಲಿರ್ತಿತ್ತು ಬೂಸಾ? ನಮಗೂ ಸ್ವಲ್ಪ ರೆಸ್ಟ್ ಬೇಕಪ್ಪಾ” ಎನ್ನುವ ತೀರ್ಮಾನಕ್ಕೆ ಬಂದವು. ಬೆಕ್ಕುಗಳ ತೀರ್ಮಾನ ನಾಯಿಗಳಿಗೆ ತಿಳಿಯದೇ ಇದ್ದೀತೆ? “ನಾವು ಸಹ ಈ ತೋಟ, ಮನೆಗಳನ್ನೆಲ್ಲಾ ಹಗಲು-ರಾತ್ರಿ ಕಾಯ್ತಿದ್ದೀವಿ. ಎಷ್ಟು ಕಾದಿದ್ದೀವಿ ಅಂದರೆ ನಮ್ಮ ಕರೀನಾಯಿಯ ಬಣ್ಣನೂ, ಪಾಪ… ಕೆಂಪಾಗೋಗಿದೆ ಕಾದು ಕಾದು. ನಮಗೂ ರಜೆ ಬೇಕಲ್ಲ” ಎಂದು ಮನೆ ಕಾಯುವ ಕೆಲಸಕ್ಕೆ ರಜೆ ಹಾಕಲು ನಾಯಿಗಳು ನಿರ್ಧರಿಸಿದವು.
ಹೀಗೆ ಕೋಳಿ, ಹಸು, ಬೆಕ್ಕು, ನಾಯಿಗಳೆಲ್ಲಾ ರಜೆಯ ಮೇಲೆ ಹೋಗಿರುವುದನ್ನು ಕಂಡ ತೋಟದ ಮರಗಳಿಗೆ ಕೋಪಬಂತು. “ಏಯ್ ಎದ್ದೇಳ್ರೋ ಸೋಮಾರಿಗಳಾ! ಏನ್ ಹಾಗೆ ಎಲ್ಲರೂ ಬಿದ್ದುಕೊಂಡಿದ್ದೀರಿ” ಎಂದು ಮರಗಳು ಅಬ್ಬರಿಸಿದವು. ಎಲ್ಲ ಪ್ರಾಣಿಗಳಿಗೂ ಅಚ್ಚರಿಯಾಯಿತು. ಯಾವತ್ತೂ ಸುಮ್ಮನಿರುವ ಮರಗಳು ಇಂದೇಕೆ ಗದ್ದಲ ಮಾಡುತ್ತಿವೆ ಎಂಬುದು ಅವುಗಳಿಗೆ ಅರ್ಥವಾಗಲಿಲ್ಲ. “ಯಾಕೆ ಇಷ್ಟೊಂದು ಗಲಾಟೆ ಮಾಡ್ತಿದ್ದೀರಿ?” ಮರಗಳನ್ನು ಕೇಳಿದವು ಪ್ರಾಣಿಗಳು.
ಇದನ್ನೂ ಓದಿ : ಮಕ್ಕಳ ಕಥೆ: ಮಾವಿನ ಹಣ್ಣು ಹುಡುಕುತ್ತಾ ಬಂದ ಅರಸನಿಗೆ ಕಂಡಿದ್ದೇನು?
“ಇನ್ನೇನು ಮತ್ತೆ! ಏನೋ ಮಹಾ ಕಡಿದು ಗುಡ್ಡ ಹಾಕಿದ್ದೀರಿ ಅನ್ನುವ ಹಾಗೆ ಎಲ್ಲರೂ ರಜೆ ತಗೊಂಡು ಕೂತಿದ್ದೀರಲ್ಲಾ. ಎದೇಳಿ ಮೇಲೆ, ಎಲ್ಲರೂ ಹೋಗಿ ನಿಮ್‌ನಿಮ್ಮ ಕೆಲಸಕ್ಕೆ” ಎಂದು ಮರಗಳು ಗುರುಗುಟ್ಟಿದವು. ಆದ್ರೆ ರಜಾ-ಮಜಾ ಅನ್ನುವ ನಿರ್ಧಾರ ಮಾಡಿದ್ದ ಪ್ರಾಣಿಗಳು ಕೂತಲ್ಲಿಂದ ಏಳಲಿಲ್ಲ. ಈ ಮರಗಳು ಬೈದರೆ ಬೈಯಲಿ ಎಂದು ತಮ್ಮಷ್ಟಕ್ಕೆ ತೂಕಡಿಸಿದವು ಪ್ರಾಣಿಗಳು.
“ವರ್ಷಕ್ಕೆ ಎಷ್ಟೊಂದು ಹೂವು-ಮಿಡಿ-ಕಾಯಿ-ಹಣ್ಣುಗಳನ್ನು ಬಿಡುತ್ತೇವೆ ನಾವು ಎಂಬ ಕಲ್ಪನೆ ಲೋಕದಲ್ಲಿ ಯಾರಿಗೂ ಇಲ್ಲ. ನಮ್ಮ ಸೊಪ್ಪು-ಎಲೆಗಳು ಲೋಕದಲ್ಲಿ ಎಲ್ಲರಿಗೂ ಬೇಕು. ನಾವು ಬೀಸುವ ಗಾಳಿ ಇಲ್ಲದಿದ್ದರೆ ನೀವೆಲ್ಲ ಎಲ್ಲಿ ಉಳಿಯುತ್ತೀರಿ? ನಾವು ಉತ್ಪತ್ತಿ ಮಾಡುವ ಪ್ರಾಣವಾಯುವಿಗೆ ಲೆಕ್ಕ ಇದೆಯೇ? ನಿಮ್ಮಗಳ ಹಾಗೆ ನಾವೂ ರಜೆ ತೆಗೆದುಕೊಂಡರೆ ಹೇಗೆ?” ಎಂದು ಮರಗಳು ಕೇಳುತ್ತಿದ್ದಂತೆ ಪ್ರಾಣಿಗಳಿಗೆಲ್ಲಾ ಚುರುಕು ಮುಟ್ಟಿತು. ಹೌದಲ್ಲಾ! ಆಮ್ಲಜನಕ ಉತ್ಪಾದನೆ ಮಾಡುವುದನ್ನೇ ಬಿಟ್ಟು, ಈ ಮರಗಳೂ ರಜೆ ತೆಗೆದುಕೊಂಡರೆ ಲೋಕದ ಗತಿಯೇನು ಎಂದು ಕಂಗಾಲಾದ ಪ್ರಾಣಿಗಳು ಧಡಕ್ಕನೆದ್ದು, ತಂತಮ್ಮ ಕೆಲಸಗಳಿಗೆ ತಕ್ಷಣವೇ ಮರಳಿದವು.
ಕಿಡ್ಸ್ ಕಾರ್ನರ್
Positive Parenting Tips: ನಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ಹೇಗೆ? ಇಲ್ಲಿವೆ ಉಪಯುಕ್ತ ಸಲಹೆ
ತಮ್ಮ ಮಕ್ಕಳ ಭವಿಷ್ಯ (Positive Parenting Tips) ಉಜ್ವಲವಾಗಿರಬೇಕು ಎನ್ನುವುದು ಎಲ್ಲ ಪೋಷಕರ ಆಸೆ. ಆದರೆ ಬಾಲ್ಯದಲ್ಲೇ ಮಕ್ಕಳನ್ನು ನಾವು ಹೇಗೆ ಪೋಷಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಆ ಕುರಿತ ಮಾಹಿತಿ ಇಲ್ಲಿದೆ.
ಪೋಷಕರಾಗುವುದು (Positive Parenting Tips) ಸುಲಭದ ಕೆಲಸವಲ್ಲ. ಅದು ದೊಡ್ಡದೊಂದು ಜವಾಬ್ದಾರಿಯನ್ನು ಜೀವನ ಪೂರ್ತಿಗೆ ವಹಿಸಿಕೊಂಡಂತೆ. ಈ ಸವಾಲಿನ ಕೆಲಸಕ್ಕೆ ನೀವು ಮಾನಸಿಕವಾಗಿಯೂ ಸಿದ್ಧರಾಗಿರಬೇಕಾಗುತ್ತದೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕೆಲಸವಾಗಿರುವ ಪೋಷಕರ ಕೆಲಸಕ್ಕೆ ಕೆಲವು ಉತ್ತಮ ಸಲಹೆಗಳು ಇಲ್ಲಿವೆ.
ಸ್ವಾಭಿಮಾನ
ಮಕ್ಕಳು ಪೋಷಕರನ್ನೇ ಅನುಸರಿಸುತ್ತಾರೆ. ನೀವು ಆಡುವ ಪ್ರತಿ ಮಾತನ್ನು ಅವರು ಕಲಿಯಲು ಆರಂಭಿಸುತ್ತಾರೆ. ನಿಮ್ಮ ಮಕ್ಕಳು ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿದಾಗಲೂ ಅದನ್ನು ಶ್ಲಾಘಿಸಿ. ಏಕೆಂದರೆ ಈ ರೀತಿಯ ಪ್ರೋತ್ಸಾಹದಿಂದ ಮಕ್ಕಳು ತಮ್ಮ ಬಗ್ಗೆ ತಾವು ಹೆಮ್ಮೆ ಪಡುವುದಷ್ಟೇ ಅಲ್ಲದೆ ಸ್ವತಂತ್ರರಾಗುತ್ತ ಹೋಗುತ್ತಾರೆ. ಸ್ವಾಭಿಮಾನಿಗಳಾಗಲಾರಂಭಿಸುತ್ತಾರೆ. ಇತರರಿಗೆ ಹೋಲಿಸಿ ಹೊಗಳದೇ ಹೋದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.
ನಕಾರಾತ್ಮಕತೆ ಬೇಡ
ಮಕ್ಕಳಿಗೆ ನಕಾರಾತ್ಮಕವಾಗಿ ಬೈಯುವುದಕ್ಕೆ ಹೋಗಬೇಡಿ. ಕೆಲವು ಪೋಷಕರು ಮಕ್ಕಳನ್ನು ಹೊಗಳುವುದಕ್ಕಿಂತ ಅವರನ್ನು ಟೀಕಿಸುವಂತಹ ಕೆಲಸವನ್ನೇ ಮಾಡುತ್ತಾರೆ. ಅದರ ಬದಲು ಅವರಿಗೆ ಪ್ರೀತಿ ತೋರಿಸಿ, ಅಪ್ಪುಗೆ, ಚುಂಬನ ನೀಡಿ. ಹೀಗೆ ಮಾಡುವುದರಿಂದ ಅವರು ಇನ್ನಷ್ಟು ಧನಾತ್ಮಕವಾಗಿ ಚಿಂತಿಸಿ ಅದರಂತೆ ನಡೆದುಕೊಳ್ಳಲಾರಂಭಿಸುತ್ತಾರೆ.
ಅಶಿಸ್ತು ಬೇಡ
ಮಕ್ಕಳನ್ನು ಎಷ್ಟೇ ಪ್ರೀತಿಯಿಂದ ಬೆಳೆಸಿದರೂ ಅವರಿಗೆ ಶಿಸ್ತು ಕಲಿಸುವುದು ಅತಿಮುಖ್ಯ. ಅದಕ್ಕಾಗಿ ನೀವು ಕೆಲವು ನಿಯಮಗಳನ್ನು ಮಾಡಿಕೊಳ್ಳಿ. ಯಾವ ಸಮಯದಲ್ಲಿ ಟಿವಿ ನೋಡಬೇಕು, ಯಾವ ಸಮಯದಲ್ಲಿ ಆಟವಾಡಬೇಕು, ಯಾವಾಗ ಊಟ ಮಾಡಬೇಕು ಎನ್ನುವುದರ ಬಗ್ಗೆ ಶಿಸ್ತಿರಲಿ. ಅವರು ನಿಮ್ಮ ಮಾತನ್ನು ಕೇಳುವಂತೆ ಸ್ಪಷ್ಟವಾಗಿ ಅವರಿಗೆ ನಿರ್ದೇಶನ ನೀಡಿ.
ಮಕ್ಕಳೊಂದಿಗೆ ಸಮಯ
ಈಗ ಕೆಲಸದ ಒತ್ತಡದಲ್ಲಿರುವ ಪೋಷಕರು ಮಕ್ಕಳಿಗಾಗಿ ಸಮಯವನ್ನು ಕೊಡುವುದನ್ನೇ ಮರೆತುಬಿಡುತ್ತಾರೆ. ಹಾಗಾಗಿ ಮಕ್ಕಳು ಟಿವಿ, ವಿಡಿಯೊ ಗೇಮ್, ಫೋನ್‌ಗಳಲ್ಲಿ ಸಮಯ ವ್ಯರ್ಥ ಮಾಡಲಾರಂಭಿಸಿಬಿಡುತ್ತಾರೆ. ಆ ರೀತಿ ಮಾಡಲು ಬಿಡದೆ ಮಕ್ಕಳೊಂದಿಗೆ ನೀವು ಸಮಯ ಕಳೆಯಿರಿ. ಮನೆ ಕೆಲಸದಲ್ಲಿ ಸಹಾಯ ಮಾಡುವುದಕ್ಕೆ ಅವರಿಗೆ ಹೇಳಿಕೊಡಿ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ. ಆ ದಿನದಲ್ಲಿ ಅವರಿಗೆ ಏನಾದರೂ ಸಮಸ್ಯೆ ಆಯಿತೇ ಎಂದು ಕೇಳಿ ಅದನ್ನು ಸರಿಪಡಿಸುವತ್ತ ಗಮನ ಕೊಡಿ. ಹಾಗೆಯೇ ಅವರ ಸಂತೋಷದ ವಿಚಾರವನ್ನೂ ನೀವು ಕೇಳಿ.
ನಿಮ್ಮ ನಡವಳಿಕೆ
ಮಕ್ಕಳಿಗೆ ಪೋಷಕರೇ ದೊಡ್ಡ ಉದಾಹರಣೆ. ನೀವು ಏನು ಮಾಡುತ್ತೀರೋ ಅವರೂ ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಯಾವುದೇ ವರ್ತನೆಗೆ ಮೊದಲು ಅದು ನಿಮ್ಮ ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ಆಲೋಚಿಸಿ. ನಿಮ್ಮ ಮಕ್ಕಳಿಗೆ ಸೂಕ್ತ ಎನ್ನುವಂತಹ ನಡವಳಿಕೆಯನ್ನು ಮಾತ್ರವೇ ಅವರೆದುರು ಮಾಡಿ.
ಸಂವಹನ ಮುಖ್ಯ
ಎಷ್ಟೋ ಮನೆಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಮಾತುಕತೆಯೇ ನಡೆಯುವುದಿಲ್ಲ. ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವುದೇ ಇಲ್ಲ. ಆದರೆ ನೀವು ಹಾಗೆ ಮಾಡಬೇಡಿ. ಮಕ್ಕಳೊಂದಿಗೆ ಅವರ ಜೀವನದ ಬಗ್ಗೆ ಮಾತನಾಡಿ. ಅವರಿಗೆ ಸೂಕ್ತ ಮಾರ್ಗದರ್ಶನ ಕೊಡಿ. ಹಾಗೆಯೇ ನಿಮ್ಮ ಬದುಕಿನ ಕೆಲವು ಅನುಭವಗಳನ್ನೂ ಅವರೊಂದಿಗೆ ಹಂಚಿಕೊಳ್ಳಿ.
ಅತಿಯಾದ ನಿರೀಕ್ಷೆ ಬೇಡ
ತಂದೆ, ತಾಯಿ ಎಂದ ಮೇಲೆ ಮಕ್ಕಳ ಮೇಲೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅವಾಸ್ತವಿಕವಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಅವರನ್ನು ಪ್ರೇರೇಪಿಸುವುದು ತಪ್ಪಲ್ಲ. ಆದರೆ ಒತ್ತಾಯಿಸುವುದು ತಪ್ಪಾಗುತ್ತದೆ. ಶಿಕ್ಷಣದಲ್ಲಿ ಅವರು ಮುಂದಿಲ್ಲದಿದ್ದರೆ ಬೇರೆ ಕ್ಷೇತ್ರದಲ್ಲಿ ಒಂದು ಕೈ ಮೇಲಿರಬಹುದು. ಹಾಗಾಗಿ ಅವರಿಗೆ ಒತ್ತಡ ಹೇರದೆ, ಅವರ ಇಷ್ಟ ಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
ಕಾಳಜಿ ಹೆಚ್ಚಾಗಲೂ ಬಾರದು, ಇರದೆಯೂ ಇರಬಾರದು
ಕೆಲವು ಪೋಷಕರು ಮಕ್ಕಳ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಅವರಿಗೆ ಏನಾದರೂ ಆಗಬಹುದು ಎನ್ನುವ ಭಯದಿಂದ ಮಕ್ಕಳನ್ನು ಸಾಮಾಜಿಕವಾಗಿ ವ್ಯವಹರಿಸುವುದಕ್ಕೇ ಬಿಡುವುದಿಲ್ಲ. ಇನ್ನು ಕೆಲವರು ಮಕ್ಕಳು ಏನು ಮಾಡಿದರೂ ಅದರ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಈ ಎರಡೂ ವರ್ತನೆ ತಪ್ಪಾಗುತ್ತದೆ. ಮಕ್ಕಳ ಬಗ್ಗೆ ಕಾಳಜಿ ಇರಲಿ ಅದರ ಜತೆಯಲ್ಲಿ ಅವರಿಗೆ ಅಗತ್ಯವಾದ ಸ್ವಾತಂತ್ರ್ಯವನ್ನೂ ಕೊಡಿ.
ಅವರಿಗೂ ಇರಲಿ ಸ್ಥಾನಮಾನ
ನಿಮ್ಮ ಮಕ್ಕಳಿಗೆ ನಿಮ್ಮ ಅವಶ್ಯಕತೆ ಇರುವಂತೆಯೇ ನಿಮಗೂ ಕೂಡ ಅವರ ಅವಶ್ಯಕತೆ ಇರುತ್ತದೆ. ಅವರು ನಿಮ್ಮ ಕುಟುಂಬ ಹಾಗೂ ಬೆಂಬಲ. ನೀವು ಮಕ್ಕಳಿಗೂ ಕೂಡ ಸೂಕ್ತವಾದ ಸ್ಥಾನಮಾನವನ್ನು ಕೊಡಬೇಕಾಗುತ್ತದೆ. ನಿಮಗೆ ಅವರ ಅಗತ್ಯ ಇದೆ ಎನ್ನುವುದು ಅವರ ಅರಿವಿಗೆ ಬಂದರೆ ಅವರು ಇನ್ನಷ್ಟು ವಯಸ್ಕತೆಯನ್ನು ಪಡೆದುಕೊಳ್ಳುತ್ತಾರೆ.
ಬಂಧ ಬಲವಾಗಲಿ
ಹುಟ್ಟುತ್ತ ಮಕ್ಕಳಾದವರು ಬೆಳೆಯುತ್ತ ಸ್ನೇಹಿತರಾಗಬೇಕು. ಮಕ್ಕಳು ಒಂದು ಹಂತಕ್ಕೆ ಬೆಳೆದ ನಂತರ ಅವರನ್ನು ಸ್ನೇಹಿತರಂತೆಯೇ ಕಾಣಬೇಕು. ಹಾಗೆಂದ ಮಾತ್ರಕ್ಕೆ ಅತಿಯಾದ ಸ್ನೇಹ ಮಾಡಿಕೊಂಡು ಬಿಡಬೇಡಿ. ಯಾವಾಗ ಎಲ್ಲಿ ಗೆರೆ ಎಳೆಯಬೇಕು ಎನ್ನುವುದು ನಿಮಗೆ ಗೊತ್ತಿರಬೇಕು. ಮಕ್ಕಳೊಂದಿಗೆ ಬಾಂಧವ್ಯವನ್ನು ಬಲವಾಗಿಸಿಕೊಳ್ಳಿ. ಯಾವ ಸಮಯದಲ್ಲೂ ಅವರು ನಿಮ್ಮನ್ನು ಬಿಟ್ಟುಕೊಡದಂತಹ ಬಂಧವನ್ನು ಬೆಳೆಸಿಕೊಳ್ಳಿ.
ಇದನ್ನೂ ಓದಿ: Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್!
-
ದೇಶ14 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ14 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ15 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ21 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್