ಈ ಕಥೆಯನ್ನು ಇಲ್ಲಿ ಕೇಳಿ:
ರಾಮಣ್ಣ ಮತ್ತು ರಂಗಣ್ಣ ನೆರೆಹೊರೆಯವರು. ಇಬ್ಬರದ್ದೂ ಬೇರೆ ಬೇರೆ ರೀತಿಯ ವ್ಯಾಪಾರ, ಜೊತೆಗೆ ಸುಖೀ ಸಂಸಾರ. ಆದರೆ ಎಲ್ಲವೂ ಹಿಂದು-ಮುಂದಾಗುವುದಕ್ಕೆ ಎಷ್ಟು ಸಮಯ ಬೇಕು? ಚನ್ನಾಗಿಯೇ ನಡೆಯುತ್ತಿದ್ದ ವ್ಯಾಪಾರದಲ್ಲಿ ರಾಮಣ್ಣನಿಗೆ ನಷ್ಟ ಆರಂಭವಾಯಿತು. ಸಾಲ ಹೆಚ್ಚಾಯಿತು. ತನ್ನ ಆಸ್ತಿ ಮನೆಯನ್ನೆಲ್ಲಾ ಮಾರಿ ಸಾಲವನ್ನೆಲ್ಲಾ ತೀರಿಸಿದ. ಹೆಂಡತಿಯನ್ನು ಮಕ್ಕಳೊಂದಿಗೆ ತವರಿಗೆ ಕಳುಹಿಸಿ ತಾನೂ ಯಾವುದೋ ಊರಿಗೆ ಹೊರಟ. ಹಾಗೆ ಹೊರಡುವಾಗ ತನ್ನಲ್ಲಿದ್ದ ಹಳೆದ ಕಾಲದ ಕಲಾತ್ಮಕವಾದ ಕಬ್ಬಿಣದ ಸಂದೂಕವನ್ನು ನೆರೆಯ ರಂಗಣ್ಣನಲ್ಲಿ ಇರಿಸಿದ್ದ. ಮರಳಿ ಬಂದ ಕಾಲಕ್ಕೆ ತೆಗೆದುಕೊಳ್ಳುತ್ತೇನೆ. ಅಲ್ಲಿಯವರೆಗೆ ನಿನ್ನಲ್ಲೇ ಇರಲಿ ಎಂದು ಸ್ನೇಹಿತನಿಗೆ ವಿದಾಯ ಹೇಳಿದ್ದ.
ಹೊಸ ಊರಿನಲ್ಲಿ ರಾಮಣ್ಣನಿಗೆ ವ್ಯಾಪಾರ ಮತ್ತೆ ಕೈಹಿಡೀತು. ಸಣ್ಣದಾಗಿ ಆರಂಭಿಸಿದ ವಹಿವಾಟು ದೊಡ್ಡದಾಗಿ ಬೆಳೆಯಿತು. ಕಷ್ಟಗಳೆಲ್ಲಾ ಕಳೆದು ಮತ್ತೆ ಶ್ರೀಮಂತನಾದ. ತನ್ನ ಊರಿಗೆ ಮರಳಿ ಬಂದ ರಾಮಣ್ಣ, ದೊಡ್ಡ ಮನೆಯೊಂದನ್ನು ಖರೀದಿಸಿದ. ತನ್ನ ವಹಿವಾಟನ್ನು ಈ ಊರಿನಲ್ಲೂ ಬೆಳೆಸಿದ. ತವರಿಗೆ ಹೋಗಿದ್ದ ಹೆಂಡತಿ ಮತ್ತು ಮಕ್ಕಳು ಮರಳಿ ಬಂದರು, ಮನೆ ತುಂಬಿತು. ಊರಲ್ಲೆಲ್ಲಾ ಈಗ ರಾಮಣ್ಣನದೇ ಸುದ್ದಿ. ಕೈಯಲ್ಲಿ ಕಾಸಿಲ್ಲದೆ ಊರು ಬಿಟ್ಟು ಹೋಗಿದ್ದ ರಾಮಣ್ಣ, ನಿಷ್ಠೆಯಿಂದ ದುಡಿದು ಉದ್ಧಾರವಾದ ಕಥೆಯೇ ಈಗ ಎಲ್ಲರ ಬಾಯಲ್ಲೂ ಬರುತ್ತಿತ್ತು.
ಈ ವಿಷಯವನ್ನು ರಂಗಣ್ಣನೂ ಕೇಳಿದ್ದ. ಒಂದಲ್ಲಾ ಒಂದು ದಿನ ತನಗೆ ರಾಮಣ್ಣ ಎದುರಾಗುತ್ತಾನೆ ಎಂಬುದೂ ಗೊತ್ತಿತ್ತು. ಹಾಗಾಗಿ ತಾನಾಗಿಯೇ ಹಳೆಯ ಗೆಳೆಯನ ಭೇಟಿಗೆ ಹೋಗಲಿಲ್ಲ. ಕೆಲವು ತಿಂಗಳುಗಳ ನಂತರ ರಾಮಣ್ಣನೇ ತನ್ನ ಗೆಳೆಯ ರಂಗಣ್ಣನ ಮನೆಗೆ ಬಂದ. ಇಬ್ಬರೂ ಬಹಳ ಹೊತ್ತು ಆತ್ಮೀಯವಾಗಿ ಮಾತನಾಡಿದರು. ಕಷ್ಟ-ಸುಖಗಳನ್ನೆಲ್ಲಾ ಹೇಳಿಕೊಂಡರು. ಕಡೆಗೆ ರಂಗಣ್ಣನಿಂದ ಬೀಳ್ಕೊಂಡು ಹೊರಡುವಾಗ, ತನ್ನ ಕಬ್ಬಿಣದ ಸಂದೂಕ ಮರಳಿ ದೊರೆಯಬಹುದೇ ಎಂದು ಕೇಳಿದ ರಾಮಣ್ಣ. ʻಏನ್ ಹೇಳಲಿ ರಾಮಣ್ಣ. ಅದನ್ನು ತುಂಬಾ ಜೋಪಾನವಾಗಿ ನನ್ನ ಉಗ್ರಾಣದಲ್ಲೇ ಇಟ್ಟಿದ್ದೆ. ಆದರೆ ಹಾಳಾದ ಇಲಿಗಳು ಇಡೀ ಸಂದೂಕವನ್ನೇ ತಿಂದು ಮುಗಿಸಿವೆ. ನನ್ನ ಕೈಲಿ ಏನೂ ಮಾಡಕ್ಕಾಗಲಿಲ್ಲ. ದಯವಿಟ್ಟು ಬೇಸರ ಮಾಡಬೇಡʼ ಎಂದು ರಂಗಣ್ಣ. ʻಓಹೋ! ವಿಷಯ ಹೀಗೋ?ʼ ಎಂದುಕೊಂಡ ರಾಮಣ್ಣ. ಈಗಾಗಲೇ ಜೀವನದಲ್ಲಿ ಬಹಳಷ್ಟು ಪೆಟ್ಟು ತಿಂದಿದ್ದ ರಾಮಣ್ಣನಿಗೆ ರಂಗಣ್ಣನ ಮೋಸ ಅರ್ಥವಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ʻಇರಲಿ ಬಿಡು ರಂಗಣ್ಣ. ಎಲ್ಲಾ ನಂನಮ್ಮ ಅದೃಷ್ಟ. ನಿಮ್ಮನೆಗೆ ಒಂದಿಷ್ಟು ಉಡುಗೊರೆ ಕೊಡಬೇಕಿತ್ತು. ನನಗೆ ಹೊತ್ತು ತರೋದಕ್ಕೆ ಆಗಲಿಲ್ಲ. ನಿನ್ನ ಮಗನನ್ನು ನನ್ನ ಜೊತೆಗೆ ಕಳಿಸಿದ್ರೆ, ಅವನ ಕೈಯಲ್ಲೇ ಕೊಟ್ಟು ಕಳಿಸ್ತೀನಿʼ ಎಂದು ರಾಮಣ್ಣ. ಒಂದು ಕ್ಷಣವೂ ತಡಮಾಡದ ರಂಗಣ್ಣ ತನ್ನ ಮಗನನ್ನು ರಾಮಣ್ಣನ ಜೊತೆಗೆ ಕಳಿಸಿದ.
ಇದನ್ನೂ ಓದಿ | ಮಕ್ಕಳ ಕಥೆ | ಕಿಟ್ಟಿಯ ಹೊಟ್ಟೆಯಿಂದ ಬಂದ ಗಿಳಿ
ಮನೆಗೆ ತಲುಪಿದ ರಾಮಣ್ಣ ತನ್ನ ಜೊತೆಗೆ ಬಂದಿದ್ದ ರಂಗಣ್ಣನ ಮಗನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ, ಅವನಿಗೆ ಬೇಕಾದ ನೀರು ಆಹಾರಗಳನ್ನು ನೀಡಿದ. ಕತ್ತಲಾದರೂ ಮರಳದ ಮಗನನ್ನು ಹುಡುಕಿಕೊಂಡು ಸ್ನೇಹಿತನ ಮನೆಗೆ ಬಂದ ರಂಗಣ್ಣ. ʻಏನ್ ಹೇಳಲಿ ಗೆಳೆಯಾ, ನನ್ನ ಜೊತೆಗೆ ನಡೆದುಕೊಂಡು ಬರುತ್ತಿದ್ದ ನಿನ್ನ ಮಗನನ್ನು ದೊಡ್ಡ ಹದ್ದೊಂದು ಎತ್ತಿಕೊಂಡು ಹೋಯಿತು. ನನ್ನ ಕೈಯಲ್ಲಿ ಅವನನ್ನು ಬಿಡಿಸಿಕೊಳ್ಳಲು ಆಗಲೇ ಇಲ್ಲ. ದಯವಿಟ್ಟು ಬೇಸರಿಸಬೇಡʼ ಎಂದ ರಾಮಣ್ಣ. ಕುಪಿತನಾದ ರಂಗಣ್ಣ ಬಾಯಿಗೆ ಬಂದಂತೆ ಕೂಗಾಡುತ್ತಾ, ರಾಮಣ್ಣನ ಮೇಲೆ ರಾಜನಲ್ಲಿ ದೂರಿತ್ತ. ಇಬ್ಬರನ್ನೂ ವಿಚಾರಣೆಗೆಂದು ಕರೆಸಿದ ರಾಜ.
ತನ್ನೊಂದಿಗೆ ಬರುತ್ತಿದ್ದ ಹುಡುಗನನ್ನು ಹದ್ದು ಎತ್ತಿಕೊಂಡು ಹೋಯಿತೆಂದೇ ರಾಮಣ್ಣ ಹೇಳಿದರೆ, ʻ೧೫ ವರ್ಷದ ಹುಡುಗನನ್ನು ಎತ್ತಿಕೊಂಡು ಹೋಗುವಂಥ ಹದ್ದು ಯಾವುದದು?ʼ ಎಂದು ರಂಗಣ್ಣ ಗರಂ ಆದ. ರಾಜನಿಗೂ ರಾಮಣ್ಣ ಸುಳ್ಳು ಹೇಳುತ್ತಿದ್ದಾನೆ ಎನಿಸಿದ್ದರಿಂದ, ಆತನ ಮಗನನ್ನು ಕೂಡಲೇ ಹಿಂದಿರುಗಿಸುವಂತೆ ಆದೇಶಿಸಿದ. ʻಮಹಾಸ್ವಾಮಿಗಳು ಮನ್ನಿಸಬೇಕು. ಆದರೆ ಕಬ್ಬಿಣದ ಸಂದೂಕವನ್ನು ಇಲಿಗಳು ತಿನ್ನುತ್ತವೆ ಎಂದಾದರೆ, ೧೫ ವರ್ಷದ ಹುಡುಗನನ್ನು ಹದ್ದು ಎತ್ತಿಕೊಂಡು ಹೋಗುವುದಿಲ್ಲವೇ?ʼ ಎಂದು ರಾಮಣ್ಣ ಕೇಳಿದ. ರಂಗಣ್ಣನ ಮುಖ ಕಪ್ಪಿಟ್ಟಿತು. ತನ್ನ ಮೋಸಕ್ಕೆ ಪ್ರತಿಯಾಗಿ ರಾಮಣ್ಣ ಹೀಗೆ ಮಾಡಿದ್ದಾನೆ ಎಂಬುದು ಅರಿವಾಯಿತು. ಆದರೆ ಇಲಿಗಳು ಸಂದೂಕ ತಿಂದ ವಿಷಯ ತಿಳಿಯದ ರಾಜ ಈ ಬಗ್ಗೆ ವಿವರ ಕೇಳಿದ. ವಿಷಯವನ್ನು ತಾನೇ ಹೇಳಿದ ರಂಗಣ್ಣ, ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ. ರಾಮಣ್ಣನಿಗೆ ಅವನ ಸಂದೂಕ ಮರಳಿ ಕೊಟ್ಟು, ತನ್ನ ಮಗನನ್ನು ಮನೆಗೆ ಕರೆದುಕೊಂಡು ಹೋದ.
ಇದನ್ನೂ ಓದಿ | ಮಕ್ಕಳ ಕಥೆ | ಗೆಳೆತನದ ಸುಖ