ಈ ಕಥೆಯನ್ನು ಇಲ್ಲಿ ಕೇಳಿ:
ಜಪಾನ್ ದೇಶದ ಜನಪದ ಕಥೆಯಿದು. ಅಲ್ಲಿನ ಸಾಗರದಂಚಿನ ಊರಿನಲ್ಲಿ ಯೂಕಿ ಎನ್ನುವ 15 ವರ್ಷದ ಹುಡುಗನಿದ್ದ. ಶಾಲೆ ಕಲಿಯುವುದರಲ್ಲಿ ಎಷ್ಟು ಆಸಕ್ತಿನೋ ಅಷ್ಟೇ ಆಸಕ್ತಿ ಕೃಷಿ ಮಾಡೋದರಲ್ಲೂ ಆತನಿಗೆ ಇತ್ತು. ಆತ ತನ್ನ ಅಜ್ಜನಿಂದ ಏನೇನೋ ಜೀವನಾನುಭವದ ವಿಷಯಗಳನ್ನು ಕಲಿತಿದ್ದ. ಭೂಮಿಯ ಬಗ್ಗೆ, ಆಕಾಶದ ಬಗ್ಗೆ, ಸಮುದ್ರದ ಬಗ್ಗೆ, ಗಾಳಿಯ ಬಗ್ಗೆ- ಹೀಗೆ ಯಾವ ಶಾಲೆಯ ಪಾಠದಲ್ಲೂ ದೊರೆಯದ ವಿಷಯಗಳು ಯೂಕಿಗೆ ಆತನ ಅಜ್ಜನಿಂದ ತಿಳಿದಿದ್ದವು.
ಕೆಲವು ದಿನಗಳ ಹಿಂದೆ ಆತನ ಅಜ್ಜ ತೀರಿಕೊಂಡಿದ್ದ. ಆಗಾಗ ಕಾಡುತ್ತಿದ್ದ ಅಜ್ಜನ ನೆನಪಿನಿಂದ ಬೇಸರವಾಗಿ ಒಮ್ಮೆ ಊರಂಚಿನಲ್ಲಿದ್ದ ಗುಡ್ಡವನ್ನೇರಿ ಕೆಳಗಿದ್ದ ಊರು, ಅದರಾಚೆಗಿದ್ದ ಸಾಗರವನ್ನೆಲ್ಲಾ ದಿಟ್ಟಿಸುತ್ತಾ ಕುಳಿತಿದ್ದ ಯೂಕಿ. ಅಂದು ಊರಿನಲ್ಲಿ ಸುಗ್ಗಿ ಹಬ್ಬ. ಕೊಯ್ದ ಫಸಲಿನ ರಾಶಿಯನ್ನೆಲ್ಲಾ ಇರಿಸಿಕೊಂಡು ಅಂದು ರಾತ್ರಿಯಿಡೀ ಹಬ್ಬ ಮಾಡುವವರಿದ್ದರು ಗ್ರಾಮಸ್ಥರು. ಆಗಿನ್ನೂ ಮಧ್ಯಾಹ್ನ ದಾಟಿ, ಒಂದೆರಡು ತಾಸು ಕಳೆದಿತ್ತು. ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದಂತಾಯ್ತು. ಆದರೆ ಜಪಾನಿನ ಆ ಪ್ರದೇಶದಲ್ಲಿ ಭೂಕಂಪ ಹೊಸ ವಿಷಯವೇನಾಗಿರಲಿಲ್ಲ. ಹಾಗಾಗಿ ಜನ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಭೂಕಂಪದ ಸ್ವರೂಪ ಎಂದಿನಂತೆ ಇರುವ ಬದಲು ಬೇರೆಯೇ ಇದೆ ಅನಿಸಿತು ಯೂಕಿಗೆ. ಸಮುದ್ರ ಚೂರುಚೂರೇ ಹಿಂದೆ ಸರಿಯುತ್ತಿದೆ ಎಂಬಂತೆ ಕಾಣುತ್ತಿತ್ತು ಆತನ ಕಣ್ಣಿಗೆ. ಹಬ್ಬದ ತಯಾರಿಯಲ್ಲಿದ್ದ ಒಂದಿಷ್ಟು ಹುಡುಗರು, ಸಮುದ್ರ ಹಿಂದೆ ಹೋಗಿದ್ದರಿಂದ ಹೊಸದಾಗಿ ಹೊರಬಂದ ಮರಳ ದಂಡೆಯತ್ತ ಓಡತೊಡಗಿದ್ದರು. ಫಕ್ಕನೆ ತನ್ನಜ್ಜನ ಮಾತುಗಳು ನೆನಪಾಗಿ, ಇದೀಗ ಸುನಾಮಿ (Tsunami) ಬರಬಹುದು ಎನಿಸಿತು ಹುಡುಗನಿಗೆ. ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕರೆಯುವುದು ಹೇಗೆ ಎಂದು ಯೋಚಿಸುತ್ತಲೇ ಯೂಕಿ ಗುಡ್ಡದಿಂದ ಕೆಳಗೆ ಓಡತೊಡಗಿದ.
ರಾತ್ರಿಯ ವಿಶೇಷ ಅಡುಗೆಗಾಗಿ ಗುಡ್ಡದ ಕೆಳಗೆ ದೊಡ್ಡ ದೊಡ್ಡ ಒಲೆಗಳನ್ನು ಹೂಡಿ, ಬೃಹತ್ ಕಡಾಯಿಗಳಲ್ಲಿ ಏನನ್ನೋ ಬೇಯಿಸಲಾಗುತ್ತಿತ್ತು. ಆ ಒಲೆಗಳಲ್ಲಿ ಉರಿಯುತ್ತಿದ್ದ ದೊಡ್ಡ ಸೌದೆಗಳನ್ನು ತೆಗೆದು `ಬೆಂಕೀ… ಬೆಂಕೀ’ ಎಂದು ಕೂಗಾಡುತ್ತಾ ಅಲ್ಲಿದ್ದ ಹುಲ್ಲಿನ ಮೆದೆಗಳಿಗೆ ಯೂಕಿ ಬೆಂಕಿ ಹಚ್ಚಿದ. ಮಧ್ಯಾಹ್ನದ ಬಿಸಿಲಿನಲ್ಲಿ ಕಾದಿದ್ದ ಮೆದೆಗಳಿಗೆ ತಕ್ಷಣ ಬೆಂಕಿ ಹಿಡಿಯಿತು. ಊರಿನ ಜನರೆಲ್ಲಾ ಕೋಪದಿಂದ ಯೂಕಿಯನ್ನು ಬೆನ್ನಟ್ಟಿ ಬಂದರು. ತಕ್ಷಣವೇ ಗುಡ್ಡದ ತುದಿಗೆ ಓಡತೊಡಗಿದ ಯೂಕಿ. ಅವರೆಲ್ಲರೂ ಆತನನ್ನು ಗುಡ್ಡದೆಡೆಗೇ ಅಟ್ಟಿಸಿಕೊಂಡು ಬಂದರು.
ಇದನ್ನೂ ಓದಿ: ಮಕ್ಕಳ ಕಥೆ: ಚಿನ್ನದ ನಾಣ್ಯದ ಕಳ್ಳನಿಗೆ ಕತ್ತೆ ಬಾಲದ ಪರೀಕ್ಷೆ!
ಅಷ್ಟರಲ್ಲಾಗ್ಲೇ ಸಾಕಷ್ಟು ಹಿಂದೆ ಸರಿದಿದ್ದ ಸಮುದ್ರದಲ್ಲಿ ಸಣ್ಣಗೆ ಸಂಚಲನ ಪ್ರಾರಂಭವಾಗಿತ್ತು. ಗುಡ್ಡವನ್ನು ಅರ್ಧ ಹತ್ತುವುದರೊಳಗೇ ರಾಕ್ಷಸ ರೂಪವನ್ನು ತಾಳಿದ ಸಮುದ್ರ, ಈ ಊರಿನೆಡೆಗೆ ನುಗ್ಗಿ ಬಂತು. ಯೂಕಿಯ ಮೇಲಿನ ಕೋಪದಲ್ಲಿ, ಆತನನ್ನು ಅಟ್ಟಿಸಿಕೊಂಡು ಮೈಯಲ್ಲಿ ದೆವ್ವ ಬಂದಂತೆ ಗುಡ್ಡ ಹತ್ತುತ್ತಿದ್ದ ಜನ ಒಮ್ಮೆಲೆ ಸ್ತಬ್ಧರಾದರು. ಈವರೆಗೆ ಕಂಡರಿಯದಂಥ ಪರ್ವತಾಕಾರದ ತೆರೆಗಳು- ಒಂದಾದ ಮೇಲೊಂದು ಐದು ಬಾರಿ ಊರಿನತ್ತ ನುಗ್ಗಿ ಬಂದವು. ಆದರೆ ಊರಿನ ಬಹಳಷ್ಟು ಮಂದಿ ಗುಡ್ಡವನ್ನೇರಿದ್ದರು. ಯಾರು ಕೆಳಗೇ ಉಳಿದಿದ್ದರೋ, ಅವರು ಉಳಿಯಲಿಲ್ಲ.
ಪ್ರಳಯವನ್ನು ಕಂಡಂತೆ ಜನರೆಲ್ಲ ಗರಬಡಿದು ಹೋಗಿದ್ದರು. ಎಷ್ಟೋ ನಿಮಿಷಗಳ ನಂತರ ಎಲ್ಲವೂ ತಣ್ಣಗಾದ ಮೇಲೆ ಜನಕ್ಕೆಲ್ಲಾ ಉಸಿರು ಬಂದಂತಾಗಿತ್ತು. ತಮ್ಮನ್ನು ಗುಡ್ಡದೆಡೆಗೆ ಯೂಕಿ ಓಡಿಸಿಕೊಂಡು ಹೋಗಿದ್ದೇಕೆ ಎಂಬುದು ನಿಧಾನಕ್ಕೆ ಎಲ್ಲರಿಗೂ ಅರಿವಾಗತೊಡಗಿತ್ತು. ಬೆಂಕಿಯ ಮೂಲಕ ಈ ಹುಡುಗ ತಮ್ಮ ಗಮನ ಸೆಳೆಯದಿದ್ದರೆ ಊರಿನಲ್ಲಿ ಯಾರೊಬ್ಬರೂ ಉಳಿಯುತ್ತಿರಲಿಲ್ಲ ಎಂಬುದಂತೂ ಖಾತ್ರಿಯಾಗಿತ್ತು. “ಸುಗ್ಗಿಯ ಹಬ್ಬ ಮಾಡುವುದಕ್ಕೆ ಊರಿನಲ್ಲಿ ಇನ್ನೇನೂ ಉಳಿದಿಲ್ಲ. ಸುನಾಮಿ ಎಲ್ಲವನ್ನೂ ನಾಶ ಮಾಡಿದೆ. ಆದರೆ ಯೂಕಿಯ ಸಮಯಪ್ರಜ್ಞೆಯಿಂದಾಗಿ ಇಷ್ಟೊಂದು ಜನರ ಜೀವ ಉಳಿದಿದೆ. ಹಾಗಾಗಿ ನಮ್ಮೆಲ್ಲರ ಬದುಕು ಉಳಿದಿದ್ದಕ್ಕೆ ಮತ್ತೆ ಹಬ್ಬ ಮಾಡೋಣ” ಎಂದ ಹೇಳಿದ ಊರಿನ ಮುಖಂಡ. ಎಲ್ಲರೂ ಕೃತಜ್ಞತೆಯಿಂದ ಯೂಕಿಯನ್ನು ಅಪ್ಪಿಕೊಂಡರು.
ಇದನ್ನೂ ಓದಿ: ಮಕ್ಕಳ ಕಥೆ: ತೇಜಸ್ವಿಯ ಗಿಡ ಏನಾಯಿತು?