Site icon Vistara News

ಮಕ್ಕಳ ಕಥೆ: ಸೂರ್ಯನ ಕಳೆದುಹೋದ ಸೈಕಲ್‌ ಎಲ್ಲಿ ಹೋಗಿತ್ತು?

bicycle thief

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/02/bicycle-thief.mp3

ಸೂರ್ಯ ಆಗಷ್ಟೇ ಹೈಸ್ಕೂಲಿಗೆ ಹೋಗಲು ಪ್ರಾರಂಭಿಸಿದ್ದ. ಅವನಿಗೊಂದು ಸೈಕಲ್‌ ತೆಗೆದುಕೊಳ್ಳಬೇಕು, ಅದರಲ್ಲೇ ಶಾಲೆಗೆ ಹೋಗಬೇಕು ಎಂಬ ಆಸೆಯಿತ್ತು. ಆದರೆ ಅವನಿಗೆ ಸೈಕಲ್‌ ಕೊಡಿಸುವ ಅನುಕೂಲ ಮನೆಯಲ್ಲಿ ಇರಲಿಲ್ಲ. ಆತನ ತಂದೆ ಆ ಸಣ್ಣ ಊರಿನಲ್ಲಿ ದರ್ಜಿಯಾಗಿದ್ದರು. ತಂದೆಯ ಕೆಲಸದಲ್ಲಿ ತಾಯಿಯೂ ಸಹಾಯ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೇನೂ ಕೊರತೆ ಇರಲಿಲ್ಲ. ಆದರೆ ಸೈಕಲ್‌ ಕೊಡಿಸಲು ಕಷ್ಟವಾಗಿತ್ತು.

ಮೊದಲಿನಿಂದಲೂ ಕಷ್ಟಪಟ್ಟು ಕೆಲಸ ಮಾಡುವುದು ಸೂರ್ಯನ ಇಷ್ಟದ ವಿಷಯ. ಸೂರ್ಯನಿಗೆ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ತಾರಾ ಎಂಬ ತಂಗಿಯೂ ಇದ್ದಳು.  ಹಿಂದೊಮ್ಮೆ ಅವಳಿಗೆ ಕೆಲವು ಪುಸ್ತಕ ಖರೀದಿಸಲು ಹಣದ ಸಮಸ್ಯೆಯಾದಾಗ, ತನಗಿಂತ ಒಂದೆರಡು ವರ್ಷ ಚಿಕ್ಕ ಮಕ್ಕಳಿಗೆ ಪಾಠ ಹೇಳಿ, ಹಣ ಹೊಂದಿಸಿಕೊಟ್ಟಿದ್ದ ಸೂರ್ಯ. ಈಗಲೂ ಆತ ಹಿಂಜರಿಯದೆ ಬೆಳಗಿನ ಹೊತ್ತು ಮನೆಮನೆಗೆ ಹಾಲು ಮತ್ತು ಪೇಪರ್‌ ಹಾಕುವ ಕೆಲಸಕ್ಕೆ ಸೇರಿಕೊಂಡ. ಬೆಳಗ್ಗೆ ಬೇಗನೆ ಎದ್ದು, ಬೆಳಕಾಗುವುದರೊಳಗೆ ಹಾಲು-ಪೇಪರ್‌ ಹಾಕುವ ಕೆಲಸ ಪ್ರಾರಂಭಿಸುತ್ತಿದ್ದ. ಬೆಳಗಿನ ಏಳೂವರೆ ಎಂದರೆ ಮನೆಗೆ ಬಂದು, ಸ್ನಾನ ಮಾಡಿ, ತಿಂಡಿ ತಿಂದು ಶಾಲೆಗೆ ಹೊರಡುತ್ತಿದ್ದ. ಅವನ ಕಷ್ಟ ಸಹಿಸುವ ಗುಣದ ಬಗ್ಗೆ ಊರೇ ಹೊಗಳುತ್ತಿತ್ತು. ಅವನ ತಂದೆ-ತಾಯಿಗೆ ಹೆಮ್ಮೆಯಿತ್ತು.

ಕೆಲವು ತಿಂಗಳು ಕೆಲಸ ಮಾಡಿದ ನಂತರ, ಒಂದು ಹಳೆಯ ಸೈಕಲ್‌ ತೆಗೆದುಕೊಳ್ಳುವಷ್ಟು ಹಣ ಅವನಲ್ಲಿ ಕೂಡಿತು. ಆ ಊರಿನ ಚರ್ಚಿನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರ ಹಳೆಯ ಸೈಕಲ್‌ ಒಳ್ಳೆಯ ಸ್ಥಿತಿಯಲ್ಲೇ ಇತ್ತು. ಅದನ್ನೀಗ ಸೂರ್ಯ ಖರೀದಿಸಿದ. ಅದಕ್ಕೆ ಆಯ್ಲಿಂಗ್‌ ಮಾಡಿಸಿ, ಸೀಟಿಗೊಂದು ಹೊಸ ಕವರ್‌ ಹೊಲಿದು ಕೊಟ್ಟರು ಆತನ ತಂದೆ. ಅದರ ಮೇಲೆ ಕುಳಿತು ಶಾಲೆಗೆ ಹೋಗುವಾಗ ಸೂರ್ಯನ ಮುಖದ ಪ್ರಭೆ ನೋಡುವಂತಿತ್ತು. ಆ ಸಣ್ಣ ಊರಿನಲ್ಲಿ ಎಲ್ಲರಿಗೂ ಸೂರ್ಯ ಪರಿಚಿತನೇ ಆಗಿದ್ದ. ಸೈಕಲ್‌ನಲ್ಲಿ ತಂಗಿಯನ್ನೂ ಕೂರಿಸಿಕೊಂಡು ಶಾಲೆಯತ್ತ ಹೊರಟಿದ್ದ ಸೂರ್ಯನಿಗೆ ಎಲ್ಲರೂ ಕೈ ಬೀಸುವವರೇ, ಎಲ್ಲರೂ ಚಪ್ಪಾಳೆ ತಟ್ಟುವವರೇ. ಗೆಲುವಿಗಾಗಿ ಕಷ್ಟ ಪಡುವ ಆತನ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತಿತ್ತು.

ಸೈಕಲ್‌ ತೆಗೆದುಕೊಂಡು ವಾರದ ಮೇಲಾಗಿತ್ತು. ಅದನ್ನು ಇಗರ್ಜಿಯ ಪಾದ್ರಿಗಳಿಗೆ ತೋರಿಸಬೇಕು ಎಂಬುದು ಸೂರ್ಯನ ಬಯಕೆಯಾಗಿತ್ತು. ಅಂದು ಶನಿವಾರ, ಶಾಲೆಯಿಂದ ಮಧ್ಯಾಹ್ನವೇ ಮರಳಿ ಬಂದಿದ್ದ ಸೂರ್ಯ, ಸಂಜೆಯ ಹೊತ್ತಿಗೆ ಸೈಕಲ್‌ ಹತ್ತಿ ಚರ್ಚಿನ ಪಾದ್ರಿಗಳನ್ನು ಭೇಟಿ ಮಾಡುವುದಕ್ಕೆ ಹೋದ. ಸೈಕಲ್ಲನ್ನು ಇಗರ್ಜಿಯ ಗೇಟಿನ ಪಕ್ಕದಲ್ಲಿಟ್ಟು ಒಳಗೆ ಹೋದವನು, ಪಾದ್ರಿಗಳನ್ನು ಭೇಟಿ ಮಾಡಿ, ಅವರೊಂದಿಗೆ ಹೊರಗೆ ಬರುವಷ್ಟರಲ್ಲಿ ಸೈಕಲ್‌ ಮಾಯ! ಅರೆ, ಇಲ್ಲೇ ಇಟ್ಟಿದ್ದೆನಲ್ಲ! ಎಲ್ಲಿ ಹೋಯಿತು? ಎಂದು ಸುತ್ತೆಲ್ಲಾ ಹುಡುಕಾಡಿದ. ಚರ್ಚಿನಲ್ಲಿದ್ದ ಒಂದಿಬ್ಬರೂ ಈ ಹುಡುಕಾಟಕ್ಕೆ ಸೇರಿಕೊಂಡರು.

ಕತ್ತಲಾಗುವವರೆಗೂ ಊರೆಲ್ಲಾ ಹುಡುಕಿದ ಸೂರ್ಯ. ಎಲ್ಲಿ ಹುಡುಕಿದರೂ, ಯಾರನ್ನು ಕೇಳಿದರೂ ಪ್ರಯೋಜನವಾಗಲಿಲ್ಲ. ರಾತ್ರಿ ಊಟವನ್ನೂ ಮಾಡದೆ, ಅಳುತ್ತಾ ಮಲಗಿದ ಬಾಲಕನನ್ನು ಕಂಡು ತಂದೆ-ತಾಯಿಗೆ ಸಂಕಟವಾಯಿತು. ಅವನ ದುಃಖ ಕಂಡು ತಾರೆಯೂ ಉಣ್ಣದೆ ಅಳುತ್ತಾ ಮಲಗಿದಳು. ಮಾರನೇ ದಿನ ಭಾನುವಾರ. ಮಕ್ಕಳೊಂದಿಗೆ ಆಡಲು ಹೋಗದೆ ಸೈಕಲ್‌ ಹುಡುಕುವ ಪ್ರಯತ್ನ ಮಾಡಿದರು ಸೂರ್ಯ ಮತ್ತು ತಾರೆ. ಊಹುಂ! ದಿನದ ಶ್ರಮವೆಲ್ಲಾ ವ್ಯರ್ಥವೇ ಆಯಿತು. ಆದರೆ ಸೂರ್ಯನ ಮನದಲ್ಲಿ ಒಂದು ವಿಶ್ವಾಸವಿತ್ತು. ತನ್ನ ಸೈಕಲ್ಲನ್ನು ಯಾರೇ ತೆಗೆದುಕೊಂಡು ಹೋಗಿದ್ದರೂ, ಅದನ್ನವರು ಹಿಂದಿರುಗಿಸುತ್ತಾರೆ. ಇಗರ್ಜಿಯ ಬಳಿಯಲ್ಲೇ ಇಟ್ಟು ಹೋಗುತ್ತಾರೆ ಎಂದು. ಸೂರ್ಯನ ಸೈಕಲ್‌ ಕಳೆದ ವಿಷಯ ಊರಿಗೆಲ್ಲಾ ತಿಳಿದು, ಎಲ್ಲರೂ ಬೇಸರಿಸಿಕೊಂಡರು.

ದಿನಾ ಶಾಲೆಯಿಂದ ಮನೆಗೆ ಬರುವಾಗ, ಅಂದರೆ ಸಂಜೆಯ ಹೊತ್ತಿಗೆ ಚರ್ಚಿನ ದಾರಿಯಲ್ಲೇ ಬರುತ್ತಿದ್ದ ಸೂರ್ಯ, ಕೆಲವು ಕಾಲ ಅಲ್ಲಿಯೇ ನಿಲ್ಲುತ್ತಿದ್ದ- ಯಾರಾದರೂ ಸೈಕಲ್‌ ಮರಳಿ ತಂದರೆ ಎಂಬ ನಿರೀಕ್ಷೆಯಲ್ಲಿ! ಬಿಸಿಲಿರಲಿ, ಮಳೆಯಿರಲಿ- ಏನೇ ಆದರೂ ಸಂಜೆ ಚರ್ಚಿನ ಬಳಿ ಸ್ವಲ್ಪ ಹೊತ್ತು ಕಾಯುವುದನ್ನು ಮಾತ್ರ ಆತ ತಪ್ಪಿಸುತ್ತಿರಲಿಲ್ಲ. ಕೆಲವರು ನಕ್ಕರು, ಹಲವರು ಕನಿಕರಿಸಿದರು, ಇನ್ನೂ ಕೆಲವರು ಬುದ್ಧಿವಾದ ಹೇಳಿದರು. ಯಾರೇನಂದರೂ ತನ್ನ ಕೆಲಸವನ್ನು ಮಾತ್ರ ಸೂರ್ಯ ಬಿಡಲಿಲ್ಲ. ಈತನ ವಿಶ್ವಾಸವನ್ನು ಕಂಡು ಚರ್ಚಿನ ಪಾದ್ರಿಗಳ ಮನಸ್ಸೂ ಮರುಗಿತು. ಹಾಗೆ ಮರಳಿ ತರುವುದೇ ಆಗಿದ್ದರೆ, ಅವರೇಕೆ ಕದ್ದೊಯ್ಯುತ್ತಿದ್ದರು ಎನಿಸಿತು ಪಾದ್ರಿಗಳಿಗೆ.

ಇದನ್ನೂ ಓದಿ: ಮಕ್ಕಳ ಕಥೆ: ಮರಿ ಹಾಕಿದ ಕಡಾಯಿ, ಸತ್ತುಹೋದ ಡಬರಿ!

ದಿನಾ ಸಂಜೆ ಚರ್ಚಿನ ಬಳಿ ಸೂರ್ಯ ಕಾಯುವುದು ಊರೆಲ್ಲಾ ಸುದ್ದಿಯಾಯಿತು. ಆ ಊರಿನ ದಿನಪತ್ರಿಕೆಯೊಂದು ಈ ಸುದ್ದಿಯನ್ನೂ ವರದಿ ಮಾಡಿದ್ದರಿಂದ, ಅಕ್ಕಪಕ್ಕದ ಊರುಗಳಿಗೂ ವಿಷಯ ತಲುಪಿತು. ಆ ದಿನ ಸಂಜೆ ಎಂದಿನಂತೆ ಶಾಲೆಯ ಬ್ಯಾಗು ಹೊತ್ತುಕೊಂಡು ಚರ್ಚಿನ ಬಳಿ ಬರುತ್ತಿದ್ದ ಸೂರ್ಯ. ದೂರದಿಂದ ನೋಡಿದಾಗ ಗೇಟಿನ ಪಕ್ಕದಲ್ಲಿ ಯಾವುದೋ ಸೈಕಲ್ಲು ನಿಂತಂತೆ ಕಾಣಿಸಿತು. ಅದರತ್ತ ಓಡುತ್ತಲೇ ಹೋದ ಸೂರ್ಯ, ಹತ್ತಿರ ಬಂದು ನೋಡಿದರೆ- ಹೌದು! ಅದು ಅವನದ್ದೇ ಸೈಕಲ್ಲು! ಖುಷಿಯಿಂದ ಕುಣಿದಾಡುವಂತಾಯಿತು ಸೂರ್ಯನಿಗೆ. ಅಷ್ಟರಲ್ಲಿ, ʻಸಾರಿ!ʼ ಎನ್ನುವ ಧ್ವನಿ ಕೇಳಿ ಹಿಂದಿರುಗಿದ.

ಸುಮಾರು ಇವನಷ್ಟೇ ದೊಡ್ಡ ಹುಡುಗನೊಬ್ಬ ನಿಂತಿದ್ದ ಅಲ್ಲಿ. “ನನ್ನ ಹೆಸರು ಶಶಿ. ನಿನ್ನ ಸೈಕಲ್‌ ಈವರೆಗೆ ನನ್ನ ಬಳಿಯೇ ಇತ್ತು. ಆ ದಿನ ಸಂಜೆ ಮನೆಯಲ್ಲಿ ಅಣ್ಣನ ಜೊತೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಬಂದೆ. ಮತ್ತೆ ಮನೆಗೆ ಹೋಗಲು ಮನಸ್ಸಾಗದೆ, ಇಲ್ಲಿಂದ ೨೦ ಮೈಲಿ ದೂರದಲ್ಲಿದ್ದ ಅಜ್ಜಿಯ ಮನೆಗೆ ಹೋಗಬೇಕೆನ್ನಿಸಿತು. ಬಸ್ಸಿಗೆ ಹೋಗಲು ದುಡ್ಡಿರಲಿಲ್ಲ, ನಡೆದು ಹೋಗಲು ದೂರವಾಗುತ್ತಿತ್ತು. ಎದುರಿಗಿದ್ದ ಸೈಕಲ್‌ ತೆಗೆದುಕೊಂಡು ಹೋದೆ. ಇಷ್ಟೂ ದಿನ ಅಜ್ಜಿಯ ಮನೆಯಲ್ಲೇ ಇದ್ದೆ. ನಿನ್ನೆ ಬೆಳಗ್ಗೆ ಅಜ್ಜ ಪೇಪರ್‌ ಓದುತ್ತಿದ್ದಾಗ, ನಿನ್ನ ಕಥೆಯನ್ನು ಜೋರಾಗಿ ಓದಿದರು. ನನ್ನ ಕೆಲಸದ ಬಗ್ಗೆ ನನಗೇ ಬೇಸರವಾಗಿ ಅಳು ಬಂತು. ಸೈಕಲ್‌ಗಾಗಿ ನೀನಿಷ್ಟು ಕಾಯುತ್ತಿರುವಾಗ, ನನಗಾಗಿ ನನ್ನಪ್ಪ-ಅಮ್ಮ ಇನ್ನೆಷ್ಟು ಕಾಯುತ್ತಿರಬಹುದು ಎನಿಸಿತು. ಅಜ್ಜಿ-ಅಜ್ಜನಿಂದ ಬೀಳ್ಕೊಂಡು ಇವತ್ತು ಮನೆಗೆ ಬಂದೆ. ಇದೋ ನಿನ್ನ ಸೈಕಲ್.‌ ನನ್ನನ್ನು ಕ್ಷಮಿಸಿಬಿಡು” ಎಂದು ಹನಿಗಣ್ಣಾಗಿ ಹೇಳಿದ ಆ ಹುಡುಗ.

ಏನು ಹೇಳುವುದಕ್ಕೂ ತಿಳಿಯಲಿಲ್ಲ ಸೂರ್ಯನಿಗೆ. ಶಶಿಯನ್ನು ಅಪ್ಪಿಕೊಂಡು, ʻಹೋಗಲಿ ಬಿಡುʼ ಎಂದ. ʻನಿನಗಿವತ್ತು ನಿನ್ನ ಸೈಕಲ್‌ ಸಿಕ್ಕಿದೆ, ನನಗೊಬ್ಬ ಗೆಳೆಯ ಸಿಕ್ಕಿದ್ದಾನೆʼ ಎಂದು ಕಣ್ಣೊರೆಸಿಕೊಂಡ ಶಶಿ.

ಇದನ್ನೂ ಓದಿ: ಮಕ್ಕಳ ಕಥೆ: ಕುರಿ ಮತ್ತು ಮೇಕೆಯ ಜಗತ್‌ ಪರ್ಯಟನೆ

Exit mobile version