ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನಲ್ಲಿ ಇಬ್ಬರು ಸ್ನೇಹಿತೆಯರಿದ್ದರು. ಒಬ್ಬಳು ಆಶಾ, ಇನ್ನೊಬ್ಬಳು ಮಮತಾ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುವವರೇ ಅಲ್ಲ. ಒಂದೇ ಊರು, ಒಂದೇ ಶಾಲೆ, ಒಂದೇ ತರಗತಿ, ಒಂದೇ ಬೆಂಚು. ಇನ್ನೇನು ಬೇಕು ದಿನವಿಡೀ ಒಟ್ಟಿಗೆ ಇರುವುದಕ್ಕೆ?
ಇವರಿಬ್ಬರಿಗೂ ಪ್ರಿಯವಾದ ಹವ್ಯಾಸವೊಂದಿತ್ತು. ದಿನಾ ಬೆಳಗ್ಗೆ ಇಬ್ಬರೂ ತಮ್ಮೂರಿನ ಅಂಚಿನಲ್ಲಿದ್ದ ಗುಡ್ಡಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಆ ಗುಡ್ಡದ ಮೇಲೆ ಹಳೆಯದೊಂದು ದೇವಸ್ಥಾನವಿತ್ತು. ಅಲ್ಲಿನ ದೇವರಿಗೆ ಇವರಿಬ್ಬರೂ ಹೂವು ತೆಗೆದುಕೊಂಡು ಹೋಗುತ್ತಿದ್ದರು. ಆ ದೇವಾಲಯದ ಅರ್ಚಕರು ವೃದ್ಧರಾಗಿದ್ದರು. ಆದರೆ ಇವರಿಬ್ಬರೂ ದಿನಾ ಬೆಳಗ್ಗೆ ತರುವ ಹೂವಿಗಾಗಿ ಕಾಯುತ್ತಿದ್ದರು. ಅದನ್ನು ದೇವರ ಮೂರ್ತಿಗೆ ಹಾಕಿ, ನಾನಾ ರೀತಿಯಲ್ಲಿ ಅಲಂಕರಿಸುತ್ತಿದ್ದರು. ಮಾತ್ರವಲ್ಲ, ಬಂದ ಭಕ್ತರಿಗೆಲ್ಲಾ ಈ ಮಕ್ಕಳು ತರುವ ಹೂವು ಎಂದು ತಪ್ಪದೇ ಹೇಳುತ್ತಿದ್ದರು, ಹೆಮ್ಮೆಯಿಂದ.
ಈ ಹುಡುಗಿಯರದ್ದೇನು ಸಾಮಾನ್ಯ ಸಡಗರವೇ ಹೂವು ತೆಗೆದುಕೊಂಡು ಹೋಗುವುದಕ್ಕೆ? ಗುಡ್ಡದ ಕೆಳಗಿನಿಂದ ಮೇಲಿನವರೆಗೆ ಹತ್ತುವ ದಾರಿಯ ಇಕ್ಕೆಲಗಳಲ್ಲಿ ಬಣ್ಣಬಣ್ಣದ ಹೂವಿನ ಗಿಡಗಳಿದ್ದವು. ಇದನ್ನೆಲ್ಲಾ ಯಾರು ಬೆಳೆಸಿದ್ದರೆಂದು ಕೇಳುವ ಹಾಗಿಲ್ಲ, ಅವೆಲ್ಲಾ ಕಾಡು ಹೂವಿನ ಗಿಡಗಳು. ತಮ್ಮಷ್ಟಕ್ಕೆ ತಾವೇ ಬೆಳೆದುಕೊಂಡವು. ಹಾಗೆಂದು ಬಣ್ಣ, ಆಕಾರ, ಸುವಾಸನೆಯಲ್ಲಿ ಯಾವ ತೋಟದ ಹೂವಿಗಿಂತಲೂ ಈ ಬೆಟ್ಟದ ಹೂವುಗಳು ಹೆಚ್ಚೇ ಇದ್ದವು ಬಿಟ್ಟರೆ ಕಡಿಮೆ ಇರಲಿಲ್ಲ. ಇದಕ್ಕಾಗಿ ಹುಡುಗಿಯರಿಬ್ಬರೂ ಮನೆಯಿಂದ ಅವರ ಕೈಯಲ್ಲಿ ಹಿಡಿಯಲು ಅನುಕೂಲವಾದ ಗಾತ್ರದ ಹೂವಿನ ಬುಟ್ಟಿಯನ್ನು ತರುತ್ತಿದ್ದರು.
ಮೊದಲು ಒಬ್ಬರಿಗೊಬ್ಬರು ಛೇಡಿಸುತ್ತಾ, ಪೊದರುಗಳಲ್ಲಿ ಅಡಗಿಕೊಳ್ಳಬೇಕು. ಈ ಆಟ ಮುಗಿದ ಮೇಲೆ, ಹೂವು ಕೊಯ್ಯವಾಗ ಸುಮ್ಮನೆ ಕೊಯ್ಯುವುದಲ್ಲ, ಚಿಟ್ಟೆ ಹಿಡಿಯಲು ಓಡುತ್ತಾ, ಅಳಿಲಿನ ಬೆನ್ನಿಗೆ ಕುಪ್ಪಳಿಸುತ್ತಾ ಹೂವಿನ ಬುಟ್ಟಿ ತುಂಬಿಸಬೇಕು. ಈ ಆಟದ ನಡುವೆ ಅಪ್ಪಿತಪ್ಪಿ ಹೂವಿನ ಜೊತೆಗೆ ಮೊಗ್ಗು ಕೊಯ್ದರೆ, ಒಬ್ಬರಿಗೊಬ್ಬರು ಬೈಯಬೇಕು, ಇದೇ ನೆವದಲ್ಲಿ ಜುಟ್ಟೆಳೆಯಬೇಕು. ಇವರ ಇಂಥದ್ದೆಲ್ಲಾ ಆಟ ನೋಡಿ, ಬೆಟ್ಟದ ದಾರಿಯ ಹೂವುಗಳೆಲ್ಲಾ ಬೆಳಗಿನ ಎಳೆ ಬಿಸಿಲಿನಲ್ಲಿ ತಲೆ ತೂಗಬೇಕು. ಇವೆಲ್ಲವುಗಳ ನಡುವೆ ಹೂ ಕೊಯ್ಯುತ್ತಾ ಗುಡ್ಡದ ತುದಿಯ ದೇವಸ್ಥಾನವನ್ನು ಈ ಹುಡುಗಿಯರು ತಲುಪುತ್ತಿದ್ದರು. ಬೆಳಗ್ಗೆ ಎದ್ದ ಮುಖದಲ್ಲಿ ಇಷ್ಟೊಂದು ಮೋಜು ಮಾಡುವುದು ಯಾರಿಗೆ ಬೇಡ? ಹಾಗಾಗಿ, ದೇವರ ತಲೆ ಮೇಲೆ ಕೆಂಪು, ಹಳದಿ, ನೀಲಿ, ಗುಲಾಬಿ, ನೇರಳೆಯಂಥ ಬಣ್ಣಬಣ್ಣದ ಹೂವುಗಳು ಯಾವತ್ತಿಗೂ ತಪ್ಪುತ್ತಿರಲಿಲ್ಲ.
ದೇವಸ್ಥಾನದ ವೃದ್ಧ ಅರ್ಚಕರಿಗೆ ದೃಷ್ಟಿ ಸ್ವಲ್ಪ ಮಂಜಾಗಿತ್ತು. ಆದರೆ ಉಳಿದಂತೆ ಗ್ರಹಣ ಶಕ್ತಿ ಚುರುಕಾಗಿತ್ತು. ಹಾಗಾಗಿ ಅವರು ತಂದ ಹೂವುಗಳನ್ನು ಕೈಯಲ್ಲಿ ಹಿಡಿಯುತ್ತಿದ್ದಂತೆ ಅದು ಯಾವ ಹೂವು, ಅದು ಭಗವಂತನಿಗೆ ಹೇಗೆ ಪ್ರಿಯ ಎಂಬುದನ್ನೆಲ್ಲಾ ಹೇಳುತ್ತಿದ್ದರು. ಪರಿಮಳ ಮತ್ತು ಆಕಾರದಲ್ಲೇ ಆ ಹೂವಿನ ವಿವರಗಳು ಅವರಿಗೆ ಅಂದಾಜಾಗುತ್ತಿದ್ದವು. ಒಂದು ದಿನ ಅವರು ಇಂಥ ವಿವರಗಳನ್ನೆಲ್ಲಾ ಹೇಳುವಾಗ, ʻದೇವರಿಗೆ ತಾವರೆ ಹೂ ಅಂದ್ರೆ ಇಷ್ಟವಂತೆ, ಹೌದೇನಜ್ಜಾ?ʼ ಕೇಳಿದಳು ಆಶಾ. ʻಹೌದು ಕೂಸೆ. ತಾವರೆ ಹೂ ಅಂದ್ರೆ ಸುಮಗಳ ರಾಣಿ. ಅದನ್ನು ತಂದು ದೇವರ ಪಾದಕ್ಕಿಟ್ಟರೆ, ಅವನಿಗೆ ಸಂತೋಷವಾಗದೆ ಇರತ್ಯೇ? ನಮ್ಮ ಭಕ್ತಿಗೆ ಮೆಚ್ಚಿದ ಭಗವಂತ, ನಮ್ಮನ್ನ ಇನ್ನೂ ಒಳ್ಳೆಯವರನ್ನಾಗಿ ಮಾಡ್ತಾನೆʼ ಎಂದರು ಅರ್ಚಕರು. ಒಳ್ಳೆಯವರಾಗುವುದು ಯಾರಿಗೆ ಬೇಡ? ಅದರಲ್ಲೂ ಅಜ್ಜ ಹೇಳಿದಂತೆ ʻಇನ್ನೂ ಒಳ್ಳೆಯವರಾಗುವುದು?ʼ ಇನ್ನೂ ಒಳ್ಳೆಯದೆ! ಎಂದು ಆಲೋಚಿಸಿದರು ಮಕ್ಕಳು. ಯಾವುದಕ್ಕೂ ತಾವರೆ ಹೂ ತರಬೇಕಲ್ಲ.
ಇದನ್ನೂ ಓದಿ | Motivational story | ಇದು ಒಂದೇ ವಠಾರದಲ್ಲಿದ್ದ ಇಬ್ಬರು ಅಮ್ಮಂದಿರು, ಅವರ ಇಬ್ಬರು ಮಕ್ಕಳ ಕಥೆ
ʻತಾವರೆ ಹೂ ಎಲ್ಲಿದೆ ಅಂತ ಗೊತ್ತೇನೆ ನಿಂಗೆ?ʼ ಕೇಳಿದಳು ಮಮತಾ. ಆಶಾಳಿಗೆ ಗೊತ್ತಿದ್ದರೂ ಹೇಳುವುದಕ್ಕೆ ಹಿಂಜರಿದಳು. ಬೆಟ್ಟದ ತಪ್ಪಲಿನಲ್ಲಿರುವ ಕೊಳದಲ್ಲಿ ತಾವರೆ ಹೂ ಅರಳಿದ್ದನ್ನು ಆಕೆ ಕಂಡಿದ್ದಳು. ಆದರೆ ಆ ಜಾಗ ಮಮತಾಳ ಅಪ್ಪನದ್ದು. ಹೇಳಿದರೆ ತನಗೆ ಕೊಯ್ಯುವುದಕ್ಕೆ ಮಮತಾ ಬಿಡುತ್ತಾಳೋ ಇಲ್ಲವೋ. ಆ ಹೂ ಕೊಯ್ದು ದೇವರಿಗೆ ಇಡಲಾಗದಿದ್ದರೆ ತಾನು ʻಇನ್ನೂ ಒಳ್ಳೆಯವಳಾಗುವುದುʼ ಹೇಗೆ? ಎಂಬುದು ಆಶಾಳ ಯೋಚನೆ. ಆದರೂ ಆಕೆ ಮತ್ತೆ ಮತ್ತೆ ಕೇಳಿದ್ದರಿಂದ ತಾವರೆ ಹೂವಿದ್ದ ಜಾಗವನ್ನು ಆಶಾ ಹೇಳಬೇಕಾಯಿತು. ಇದೀಗ ಮಮತಾಳ ಮನದಲ್ಲಿ ದುಂಬಿ ʻಗುಂಯ್ʼ ಗುಡುವುದಕ್ಕೆ ಶುರುವಾಯಿತು. ತಮ್ಮ ಜಾಗದಲ್ಲಿ ಬೆಳೆದ ತಾವರೆ ಹೂವನ್ನು ಅವಳಿಗೆ ಕೊಯ್ಯಲು ಬಿಡುವದೇ? ಅವಳದನ್ನು ದೇವರಿಗಿಟ್ಟರೆ ತಾನು ʻಇನ್ನೂ ಒಳ್ಳೆಯವಳಾಗುವುದುʼ ಹೇಗೆ?
ಮಾರನೆಯ ದಿನ ಬೆಳಗಾಯ್ತು. ಇಬ್ಬರಿಗೂ ರಾತ್ರಿ ನಿದ್ದೆಯಲ್ಲಿ ಏನೇನೋ ಕನಸುಗಳು. ತಾವರೆ ಹೂ ಕೊಯ್ದಂತೆ, ಅದನ್ನು ತನ್ನ ಗೆಳತಿ ಕಿತ್ತುಕೊಂಡು ಹೋದಂತೆ, ತಾನು ಅವಳಿಗಿಂತ ಮೊದಲು ಬೆಟ್ಟ ಹತ್ತಿದಂತೆ, ತನ್ನನ್ನು ಅಥವಾ ಅವಳನ್ನೋ… ಯಾರನ್ನು ʻಇನ್ನೂ ಒಳ್ಳೆಯವರಾಗಿʼ ಮಾಡಬೇಕೆಂದು ದೇವರಿಗೇ ಗೊಂದಲವಾದಂತೆ… ಹೀಗೆ ತಲೆಬುಡವಿಲ್ಲದ ಕನಸುಗಳು. ಇಬ್ಬರೂ ಒಬ್ಬರಿಗೊಬ್ಬರು ಕಾಯದೆ ಬೆಟ್ಟದ ತಪ್ಪಲಿನ ಕೊಳದತ್ತ ಓಡಿದರು. ಗೊತ್ತಲ್ಲ ಯಾಕೇಂತ! ಮೊದಲಿಗೆ ಕೊಳದ ಬಳಿ ಬಂದ ಆಶಾ, ಆಗಷ್ಟೇ ಬಿರಿದಿದ್ದ ತಾವರೆಯ ಅಂದಕ್ಕೆ ಮನಸೋತಳು. ಇನ್ನೇನು ಕೈ ಹಾಕಬೇಕು ಎನ್ನುವಷ್ಟರಲ್ಲಿ, ʻಎಷ್ಟಂದರೂ ಅವಳಪ್ಪನ ಜಾಗ. ಈ ಹೂವು ಅವಳಿಗೇ ಸೇರಬೇಕುʼ ಎನಿಸಿತು ಆಶಾಳಿಗೆ. ಅಷ್ಟರಲ್ಲಿ ಮಮತಾ ಬರುತ್ತಿರುವುದು ಕಂಡು ಮರೆಯಲ್ಲಿ ನಿಂತಳು. ಕೊಳದ ಬಳಿ ಬಂದ ಮಮತಾ, ನಿರುಮ್ಮಳವಾಗಿ ಹೂ ಕೊಯ್ದುಕೊಂಡು ಗುಡ್ಡ ಹತ್ತತೊಡಗಿದಳು. ಆಶಾ ಸಹ ಅವಳ ಹಿಂದೆಯೇ ಗುಡ್ಡ ಹತ್ತಿದಳು.
ಇದನ್ನೂ ಓದಿ | ಮಕ್ಕಳ ಕಥೆ | ದುರಾಸೆಯ ವರ್ತಕ ಮತ್ತು ಜಾಣ ರೈತ
ನೇರ ಅರ್ಚಕರ ಬಳಿ ಹೋದ ಮಮತಾ, ʻಅಜ್ಜಾ, ತಗೊಳ್ಳಿ ತಾವರೆ ಹೂ. ಇದನ್ನು ಆಶಾಳ ಹೆಸರಲ್ಲಿ ದೇವರಿಗೇರಿಸಿʼ ಅಂದಳು. ʻಯಾಕೆ ಕೂಸೆ? ತಂದಿದ್ದು ನೀನಲ್ಲವೇ?ʼ ಕೇಳಿದರು ಅರ್ಚಕರು. ʻತಂದಿದ್ದು ನಾನಾದರೂ, ಅದರ ಬಗ್ಗೆ ಹೇಳಿದ್ದು ಅವಳು. ಈ ಹೂವು ಅವಳ ಹೆಸರಲ್ಲೇ ಇರಲಿʼ ಎಂದಳು ಮಮತಾ. ಅಷ್ಟರಲ್ಲಿ ಬಂದ ಆಶಾ, ʻಇಲ್ಲಜ್ಜ. ಈ ಹೂವು ಬೆಳೆದಿದ್ದು ಮಮತಾಳ ಜಾಗದಲ್ಲಿ. ಕಿತ್ತು ತಂದಿದ್ದೂ ಅವಳೇ. ಅವಳ ಹೆಸರಲ್ಲೇ ದೇವರಿಗೇರಿಸಿʼ ಎಂದು ಕೇಳಿದಳು ಆಶಾ. ಇವರ ಮಾತುಗಳನ್ನು ಕೇಳಿ ಅರ್ಚಕರಿಗೆ ನಗುಬಂತು. ʻಮಕ್ಕಳೇ, ಈ ಸೃಷ್ಟಿಯಲ್ಲಿ ನಂದ್ಯಾವುದು, ನಿಮ್ಮದ್ಯಾವುದು? ಎಲ್ಲವೂ ಅವನದ್ದೇ. ಹಾಗಾಗಿ ನಿಮ್ಮಿಬ್ಬರ ಹೆಸರೂ ಹೇಳಿ ದೇವರಿಗೇರಿಸುತ್ತೇನೆ. ದೇವರು ನಿಮ್ಮಿಬ್ಬರಿಗೂ ಒಳ್ಳೆಯದು ಮಾಡ್ಲಿʼ ಎನ್ನುತ್ತಾ ದೇವರ ಮುಡಿಗೇರಿಸಿದರು. ಗೆಳತಿಯರಿಬ್ಬರೂ ಖುಷಿಯಿಂದ ಕುಣಿಯುತ್ತಾ ಮನೆಯತ್ತ ಓಡಿದರು.