Site icon Vistara News

ಮಕ್ಕಳ ಕಥೆ: ಕನ್ನಡಿಯಲ್ಲಿರುವುದು ಯಾರು?

children story

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/02/kannadiya-bimba.mp3

ಒಂದಾನೊಂದು ಕಾಲದ ಕಥೆ ಇದು. ಹರಿ ಮತ್ತು ಚಂಪಾ ಕಾಡಂಚಿನ ಸಣ್ಣ ಊರೊಂದರಲ್ಲಿ ವಾಸಿಸುತ್ತಿದ್ದರು. ದಿನಾ ಕಾಡೊಳಗೆ ಹೋಗಿ, ಬಿದಿರು ಸಂಗ್ರಹಿಸಿ, ಚಂದದ ಬುಟ್ಟಿಗಳನ್ನು ಹೆಣೆದು ಸಂತೆಯಲ್ಲಿ ಮಾರುವುದು ಅವರ ಕೆಲಸವಾಗಿತ್ತು. ಚಂಪಾ ಹೆಣೆಯುತ್ತಿದ್ದ ಬುಟ್ಟಿಗಳು ಸುಂದರವಾಗಿದ್ದು, ಸಂತೆಯಲ್ಲಿ ಒಳ್ಳೆಯ ಬೇಡಿಕೆ ಇರುತ್ತಿತ್ತು. ಆಗಿನ ಕಾಲದಲ್ಲಿ ಬುಟ್ಟಿಗಳನ್ನು ಖರೀದಿಸುವ ಎಲ್ಲರೂ ಹಣವನ್ನೇ ಕೊಡುತ್ತಿದ್ದರು ಅನ್ನುವ ಹಾಗಿರಲಿಲ್ಲ. ಕೆಲವೊಮ್ಮೆ ವಸ್ತುಗಳನ್ನೂ ವಿನಿಮಯ ಮಾಡುತ್ತಿದ್ದರು. ಅಕ್ಕಿ, ಬೇಳೆ, ವಸ್ತ್ರಗಳು ಮುಂತಾದವನ್ನು ಖರೀದಿಸಬೇಕಾದರೆ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು.

ಒಮ್ಮೆ ದೂರದ ಪೇಟೆಯೊಂದರಲ್ಲಿ ಹರಿ ನಾನಾ ರೀತಿಯ ಬುಟ್ಟಿಗಳನ್ನು ಮಾರುತ್ತಿದ್ದ. ಚಳಿಗಾಲ ಸಮೀಪಿಸುತ್ತಿದ್ದರಿಂದ ಉಣ್ಣೆಯ ಕಂಬಳಿಗಳನ್ನು ಅವನಿಗೆ ಖರೀದಿಸಬೇಕಿತ್ತು. ಕಂಬಳಿಗಳೇನೋ ದೊರೆತವು. ಅದಾದ ಮೇಲೆ ಇನ್ನೂ ಒಂದು ಅಪೂರ್ವ ವಸ್ತು ಆತನಿಗೆ ದೊರೆಯಿತು. ಈವರೆಗೆ ಅವನೆಂದೂ ನೋಡಿಲ್ಲದಿದ್ದ ʻಕನ್ನಡಿʼ ಎಂಬ ವಸ್ತು ಅವನಿಗೆ ದೊರೆಯಿತು. ಅದನ್ನೇನು ಮಾಡಬೇಕು ಎಂಬುದು ಅವನಿಗೆ ಗೊತ್ತಿರಲಿಲ್ಲ. ಚೀಲದೊಳಗಿಂದ ಅದನ್ನು ಹೊರಗೆ ತೆಗೆದು ನೋಡಿದ. ಅದರಲ್ಲಿ ಒಂದು ಮುಖ ಕಂಡಿತು. ಅದು ತನ್ನದೇ ಮುಖ, ತಾನು ನೋಡುವುದಕ್ಕೆ ಹೀಗಿದ್ದೇನೆ ಎಂಬುದು ಗೊತ್ತಿಲ್ಲದ ಆತನಿಗೆ, ಅದು ತನ್ನ ತಂದೆಯ ಮುಖದ ಹಾಗೆ ಕಂಡಿತು. ʻಅರೆ! ಎಂಥಾ ಅಪೂರ್ವವಾದ ವಸ್ತುವನ್ನು ಆತ ನನಗೆ ಕೊಟ್ಟು ಹೋದ. ಆರೆಂಟು ವರ್ಷಗಳ ಹಿಂದೆ ತೀರಿಕೊಂಡಿದ್ದ ಅಪ್ಪನ ಚಿತ್ರವಿದು. ಅದೂ ಅಪ್ಪ ತರುಣನಾಗಿದ್ದ ಕಾಲದ್ದು!ʼ ಎಂದು ಹಿಗ್ಗಿದ ಹರಿ.

ಅದನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋಗಿ, ತನ್ನ ಕಪಾಟಿನಲ್ಲಿ ಇಟ್ಟುಕೊಂಡ. ದಿನಾ ಬೆಳಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಕನ್ನಡಿಯಲ್ಲಿದ್ದ ಅಪ್ಪನ ಚಿತ್ರವನ್ನು ನೋಡುವ ಅಭ್ಯಾಸ ಮಾಡಿಕೊಂಡ. ಕೆಲವು ದಿನಗಳಲ್ಲಿ ಈತನ ವರ್ತನೆಯ ಬಗ್ಗೆ ಚಂಪಾಳಿಗೆ ಕುತೂಹಲ ಹುಟ್ಟಿತು. ಕಪಾಟಿನಲ್ಲಿ ಅದೇನನ್ನು ಈತ ನೋಡುತ್ತಾನೆ ಎಂಬುದನ್ನು ಪತ್ತೆ ಮಾಡಬೇಕೆಂದು ನಿರ್ಧರಿಸಿದ ಆಕೆ, ಹರಿ ಸಂತೆ ಹೋದ ಹೊತ್ತಿನಲ್ಲಿ ಕಪಾಟು ತೆಗೆದಳು. ಈವರೆಗೆ ತಾನು ಕಾಣದ ಚೀಲವೊಂದು ಅಲ್ಲಿತ್ತು. ಅದರೊಳಗಿರುವುದನ್ನು ಹೊರತೆಗೆದು ನೋಡಿದಳು. ʻಅರೆ! ಇದು ನಮ್ಮಮ್ಮನ ಚಿತ್ರ. ದಿನಾ ಈತ ನಮ್ಮಮ್ಮನ ಚಿತ್ರವನ್ನೇಕೆ ನೋಡುತ್ತಾನೆ?ʼ ಎಂದು ತಲೆ ಕೆರೆದುಕೊಂಡಳು ಚಂಪಾ. ಅವಳಿಗೂ ಕನ್ನಡಿ ಅತ್ಯಂತ ಪ್ರಿಯವಾಗಿಹೋಯಿತು. ದಿನಾ ಬೆಳಗ್ಗೆ-ರಾತ್ರಿ ಚಂಪಾ ಸಹ ತನ್ನಮ್ಮನನ್ನು ಕನ್ನಡಿಯನ್ನು ನೋಡುವ ಅಭ್ಯಾಸ ಮಾಡಿಕೊಂಡಳು.

ಚಂಪಾಳ ವರ್ತನೆಯನ್ನು ಗಮನಿಸಿದ ಹರಿಗೆ ತುಂಬಾ ಸಂತೋಷವಾಯಿತು. ತನ್ನ ಮಾವನ ಮೇಲೆ ಚಂಪಾಳಿಗೆ ಎಷ್ಟೊಂದು ಭಯ-ಭಕ್ತಿ ಎಂದುಕೊಂಡು, ಅಂದು ಸಂತೆಯಿಂದ ಬರುವಾಗ ಅವಳಿಗಾಗಿ ಹೊಸ ಸೀರೆಯೊಂದನ್ನು ತಂದ. ತನ್ನ ತಾಯಿಯ ಮೇಲೆ ಹರಿಗಿರುವ ವಿಶ್ವಾಸವನ್ನು ನೆನೆದುಕೊಂಡು ಅವನಿಷ್ಟದ ಪಾಯಸ ಮಾಡಿದ್ದಳು ಚಂಪಾ. ಇಬ್ಬರಿಗೂ ಇನ್ನೊಬ್ಬರ ವರ್ತನೆ ಸಂತೋಷದ ಜೊತೆಗೆ ಅಚ್ಚರಿಯನ್ನೂ ಉಂಟುಮಾಡಿತು.

ʻಸೀರೆ ತುಂಬಾ ಚನ್ನಾಗಿದೆ. ಯಾವಾಗಲೂ ಯುಗಾದಿ ಹಬ್ಬಕ್ಕೆ ಸೀರೆ ತರುವವರು ಈ ಬಾರಿ ಈಗಲೇ ತಂದಿದ್ದೀರಾ!ʼ ಎಂದಳು ಚಂಪಾ.

ಇದನ್ನೂ ಓದಿ: ಮಕ್ಕಳ ಕಥೆ | ಏಳು ಬೀಳು ಕಂಡ ವರ್ತಕ

ʻನೀನೂ ಅಷ್ಟೆ. ಅಪರೂಪಕ್ಕೆ ನನ್ನಿಷ್ಟದ ಪಾಯಸ ಮಾಡಿದ್ದೀಯ!ʼ ಎಂದ ಹರಿ.

ʻಹೂ ಮತ್ತೆ! ನಮ್ಮಮ್ಮನ ಮೇಲೆ ನಿಮಗಿರೋ ಪ್ರೀತಿ ಕಂಡು ತುಂಬಾ ಸಂತೋಷವಾಯಿತು. ಅದಕ್ಕೆ ಮಾಡಿದೆʼ ಎಂದಳು ಚಂಪಾ. ʻನಿಮ್ಮಮ್ಮ!! ನಿಮ್ಮಮ್ಮನ್ನ ನೋಡಿ ತುಂಬಾ ದಿನ ಆಯ್ತಲ್ಲ. ಈಗೆಲ್ಲಿ ಬಂದರು ಅವರು?ʼ ಸೋಜಿಗದಿಂದ ಕೇಳಿದ ಹರಿ.

ʻದಿನಾ ಬೆಳಗ್ಗೆ-ಸಂಜೆ ನಮ್ಮಮ್ಮನ ಚಿತ್ರವನ್ನು ಕಪಾಟಿನಿಂದ ತೆಗೆದು ನೋಡ್ತಾ ಇರ್ತೀರಲ್ಲ, ಅದು ನನಗೂ ಗೊತ್ತುʼ ಎಂದಳು ಚಂಪಾ. ʻಅಯ್ಯೋ ಪೆದ್ದೆ! ಅದು ನಿಮ್ಮಮ್ಮನ ಚಿತ್ರ ಅಲ್ಲ, ನಮ್ಮಪ್ಪನ ಚಿತ್ರ! ದಿನಾ ನೋಡ್ತೀಯಲ್ಲ ನೀನು ಸಹ, ಆದ್ರೂ ಗೊತ್ತಾಗಲಿಲ್ವ ಚಿತ್ರದಲ್ಲಿರೋರು ಯಾರು ಅಂತʼ ಎಂದು ನಗತೊಡಗಿದ ಹರಿ.

ʻಹಿಂಗೆಲ್ಲಾ ಮಾತಾಡಿದ್ರೆ ಚನ್ನಾಗಿರಲ್ಲ. ನೀವೇ ಸ್ವಲ್ಪ ಕಣ್ ಬಿಟ್ ನೋಡಿ, ಅದು ಯಾರ ಚಿತ್ರ ಅಂತʼ ಎಂದು ಕೋಪಿಸಿಕೊಂಡಳು ಚಂಪಾ. ʻಇದೊಳ್ಳೆ ಕಥೆ! ಚಿತ್ರದಲ್ಲಿರೋ ಮುಖದ ಮೇಲೆ ಗಡ್ಡ-ಮೀಸೆ ಕಂಡಿಲ್ವಾ? ನಿಮ್ಮಮ್ಮಂಗೇನು ಗಡ್ಡ-ಮೀಸೆ ಇದೆಯಾ?ʼ ಛೇಡಿಸಿದ ಹರಿ.

ಈಗಂತೂ ಚಂಪಾಳಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ನೇರ ಹರಿಯ ಕಪಾಟಿಗೆ ಕೈಹಾಕಿದ ಆಕೆ, ಆ ಚೀಲವನ್ನು ಹಿಡಿದುಕೊಂಡೇ ಬಂದಳು. ʻನೋಡಿ!ʼ ಎಂದು ಹರಿಯ ಮುಖಕ್ಕೆ ಕನ್ನಡಿ ಹಿಡಿದಳು. ಅದರಲ್ಲಿ ಅವನ ಬಿಂಬವೇ, ಅಂದರೆ ಅವನ ತಂದೆಯಂಥ ಮುಖವೇ ಕಾಣುತ್ತಿತ್ತು. ʻನೀನೇ ನೋಡು!ʼ ಎನ್ನುತ್ತಾ ಕನ್ನಡಿಯನ್ನು ಆಕೆಯ ಮುಖಕ್ಕೆ ಹಿಡಿದ ಹರಿ. ಅಲ್ಲಿ ಅವಳಿಗೆ ತನ್ನಮ್ಮನ ಮುಖ ಕಾಣುತ್ತಿತ್ತು.

ಇದನ್ನೂ ಓದಿ: ಮಕ್ಕಳ ಕಥೆ | ಇದು ಬುದ್ಧ ಹೇಳಿದ್ದು; ನಾವು ಕೊಟ್ಟಿದ್ದು ಯಾರಿಗೆ ಸಲ್ಲುತ್ತದೆ?

ಇಬ್ಬರಿಗೂ ತಾವು ಕಂಡ ಮುಖವೇ ಸತ್ಯ ಎನ್ನಿಸಿ, ಕೂಗಾಡಲು ಆರಂಭಿಸಿದರು. ʻಅದರಲ್ಲಿರುವುದು ನಮ್ಮಪ್ಪʼ ಎಂದು ಹರಿ ಕಿರುಚಿದರೆ, ʻಅಲ್ಲ, ನಮ್ಮಮ್ಮ!ʼ ಎಂದು ಚಂಪಾ ಅರಚಿದಳು. ಇಬ್ಬರಿಗೂ ಹೊಟ್ಟೆ ಹಸಿದಿದ್ದರೂ, ರುಚಿಯಾದ ಪಾಯಸ ಕಾಯುತ್ತಿದ್ದರೂ, ಊಟ ಮಾಡುವ ಬದಲು ಕಚ್ಚಾಡಲು ಪ್ರಾರಂಭಿಸಿದರು. ಕಡೆಗೆ ಇಬ್ಬರೂ ಒಟ್ಟಿಗೆ ಅದನ್ನು ನೋಡುವುದು ಎಂಬ ನಿರ್ಧಾರಕ್ಕೆ ಬಂದು, ಕನ್ನಡಿಯೊಳಗೆ ಒಟ್ಟಾಗಿ ಇಣುಕಿದರು. ಅದರಲ್ಲಿ ಹರಿಯ ಅಪ್ಪ, ಚಂಪಾಳ ಅಮ್ಮ- ಇಬ್ಬರೂ ಇದ್ದರು! ತಕ್ಷಣವೇ ಇಬ್ಬರಿಗೂ ಇದು ತಮ್ಮದೇ ಬಿಂಬಗಳು ಎಂದು ಅರಿವಾಯಿತು. ಅಂದರೆ ಇಷ್ಟೂ ದಿನಗಳು ತಾವು ನೋಡಿದ್ದು, ಅಮ್ಮ-ಅಪ್ಪ ಯಾರನ್ನೂ ಅಲ್ಲ, ತಮ್ಮನ್ನೇ ತಾವು ನೋಡಿಕೊಂಡಿದ್ದು ಎಂಬುದು ತಿಳಿಯುತ್ತಿದ್ದಂತೆ ಬಿದ್ದೂಬಿದ್ದು ನಗತೊಡಗಿದರು. ತಮ್ಮ ಪೆದ್ದುತನವನ್ನು ತಾವೇ ಛೇಡಿಸಿಕೊಳ್ಳುತ್ತಾ ಸಿಹಿಯೂಟ ಮಾಡಿದರು.

ಇದನ್ನೂ ಓದಿ: ಮಕ್ಕಳ ಕಥೆ: ಬೀರಬಲ್ಲನ ಕಥೆ: ನಿಜವಾದ ರಾಜ ಯಾರು?

Exit mobile version