Site icon Vistara News

ಮಕ್ಕಳ ಕಥೆ | ಬಾವಿಯ ನೀರು ಯಾರದ್ದು?

children story

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/12/BaaviyaNeeruYaraddu.mp3

ಸುಬ್ಬು ಮತ್ತು ಗೋಪಿ ಅಕ್ಕಪಕ್ಕದ ಮನೆಯವರು. ಒಳ್ಳೆಯ ಸ್ನೇಹಿತರಂತೆಯೇ ಇದ್ದರು. ಗೋಪಿ ಸ್ವಲ್ಪ ಭೋಳೆಶಂಕರ, ಎಲ್ಲರನ್ನೂ ಸುಲಭವಾಗಿ ನಂಬುತ್ತಿದ್ದ. ಆದರೆ ಸುಬ್ಬು ಸ್ವಲ್ಪ ಕುಟಿಲಮತಿ, ಯಾರನ್ನೂ ಹಾಗೆಲ್ಲಾ ನಂಬುವವನಲ್ಲ. ಆದರೆ ಇದರಿಂದ ಅವರ ನಡುವಿನ ಸ್ನೇಹಕ್ಕೇನೂ ತೊಂದರೆ ಆಗಿರಲಿಲ್ಲ. ಇಬ್ಬರಿಗೂ ಅಜ್ಜನ ಕಾಲದ ಒಂದಿಷ್ಟು ಜಮೀನಿತ್ತು. ಕೃಷಿ ಮಾಡಿಕೊಂಡು, ಮಡದಿ ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದರು.

ಸುಬ್ಬುವಿನ ಮಗಳಿಗೆ ಮದುವೆ ನಿಶ್ಚಯವಾಯಿತು. ಮದುವೆ ಖರ್ಚಿಗೆಂದು ಕೂಡಿಟ್ಟ ಹಣವೇನೂ ಇರಲಿಲ್ಲ ಅವನಲ್ಲಿ. ಕೃಷಿಯ ಸಂಪಾದನೆಯೆಲ್ಲಾ ಅಲ್ಲಿಂದಲ್ಲಿಗೇ ಆಗುತ್ತಿತ್ತು. ಹಾಗಾಗಿ ಗೋಪಿಯ ಜಮೀನಿನ ಪಕ್ಕದಲ್ಲಿನ ಒಂದು ತುಂಡು ಭೂಮಿಯನ್ನು ಮಾರಾಟ ಮಾಡೋಣ ಎಂದು ಸುಬ್ಬು ಯೋಚಿಸಿದ. ಜಮೀನು ಖರೀದಿಗೆ ಕೆಲವರೆಲ್ಲಾ ಬಂದರು, ನೋಡಿದರು, ಮಾತಾಡಿದರು. ಆದರೆ ಎಲ್ಲರಿಗೂ ಆ ತುಂಡು ಭೂಮಿಯ ಬೆಲೆ ಹೆಚ್ಚೆನಿಸಿದ್ದರಿಂದ ಜಮೀನು ಮಾರಾಟವಾಗಲಿಲ್ಲ. ಈ ವಿಷಯ ಗೋಪಿಗೂ ತಿಳಿಯಿತು.

ಹೇಗಿದ್ದರೂ ತನ್ನ ಜಮೀನಿಗೆ ತಾಗಿಕೊಂಡೇ ಇರುವ ತುಂಡು ಭೂಮಿ. ಇದನ್ನು ತಾನೇ ಏಕೆ ಖರೀದಿಸಬಾರದು ಎನಿಸಿತು ಗೋಪಿಗೆ. ನೇರವಾಗಿ ಸುಬ್ಬುವಿನ ಬಳಿಗೆ ಹೋಗಿ ನಿನ್ನ ಜಮೀನು ಖರೀದಿಗೆ ತನಗೆ ಆಸಕ್ತಿಯಿದೆ ಎಂದು ತಿಳಿಸಿದ. ಆದರೆ ಸುಬ್ಬುವಿಗಿದು ಬೇಕಿರಲಿಲ್ಲ! ಅವನಿಗೂ ಗೊತ್ತಿದೆ ಗೋಪಿಯಿಂದ ಹೆಚ್ಚಿನ ಹಣ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬುದು. ಆದರೇನು ಮಾಡುವುದು ಹೊರಗಿನಿಂದ ಬರುವ ಜನರೂ ತನ್ನ ನಿರೀಕ್ಷೆಯಷ್ಟು ಬೆಲೆಯನ್ನು ಕೊಡಲು ಒಪ್ಪುತ್ತಿಲ್ಲವಲ್ಲ ಎಂದು ಯೋಚಿಸಿದ ಸುಬ್ಬು. “ನೋಡಯ್ಯ ಗೋಪಿ, ಎಂಥಾ ಕೆಲಸ ಆಗೋಯ್ತು! ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆದಂಗೆ, ಪಕ್ಕದಲ್ಲೇ ನೀನಿದ್ರೂ ನಾನು ಎಲ್ಲೆಲ್ಲೋ ಗಿರಾಕಿ ಹುಡುಕ್ತಾ ಇದ್ದೆ” ಎಂದು ಸಂತೋಷದ ಮಾತನ್ನಾಡಿದ. ಇಬ್ಬರ ನಡುವೆ ವ್ಯವಹಾರದ ಮಾತೆಲ್ಲ ಮುಗಿದು, ಹಣ ಸುಬ್ಬುವಿನ ಕೈ ತಲುಪಿದರೆ ಜಮೀನು ಗೋಪಿಯ ಅಧೀನಕ್ಕೆ ಬಂತು.

ಸುಬ್ಬುವಿನ ಮಗಳ ಮದುವೆಯ ಸಂಭ್ರಮವೆಲ್ಲಾ ಮುಗಿಯಿತು. ಎಲ್ಲರೂ ತಂತಮ್ಮ ಕೆಲಸಕ್ಕೆ ಮರಳಿದರು. ಹೊಸದಾಗಿ ಸುಬ್ಬುವಿನಿಂದ ಗೋಪಿ ಖರೀದಿಸಿದ ಜಮೀನಿನಲ್ಲಿ ಒಂದು ಬಾವಿಯಿತ್ತು. ತುಂಬಾ ಕಾಲದಿಂದ ಬಳಸದೆ, ಕಸ ತುಂಬಿಕೊಂಡಿದ್ದ ಬಾವಿ ಹಾಳು ಬಿದ್ದಂತಿತ್ತು. ಆ ಬಾವಿಯನ್ನೆಲ್ಲಾ ಸ್ವಚ್ಛ ಮಾಡಿ, ಸ್ವಲ್ಪ ಆಳ-ಅಗಲ ಹೆಚ್ಚಿಸಿದ ಗೋಪಿ. ಇದರಿಂದ ಹಾಳು ಬಿದ್ದಿದ್ದ ಬಾವಿಯಲ್ಲಿ ಒಳ್ಳೆಯ ನೀರು ಬಂತು. ವಿಷಯ ತಿಳಿದ ಸುಬ್ಬುವಿನ ಮನಸ್ಸಿನಲ್ಲಿ ಮತ್ಸರ ಹುಟ್ಟಿತು. ಮಾರನೇ ದಿನವೇ ಆ ಬಾವಿಗೊಂದು ಕಬ್ಬಿಣದ ಜಾಲರಿ ಮಾಡಿಸಿ, ಮುಚ್ಚಿದ. ಅದಕ್ಕೊಂದು ಬೀಗ ಜಡಿದಿಟ್ಟ.

ಇದನ್ನೂ ಓದಿ | ಮಕ್ಕಳ ಕಥೆ | ಮುಲಾನ್ ಎಂಬ ವೀರ‌ ತರುಣಿ

ಬಾವಿಯಿಂದ ನೀರು ತೆಗೆಯುವುದಕ್ಕೆಂದು ಬಂದ ಗೋಪಿಗೆ ಇದನ್ನು ಕಂಡು ಆಘಾತವಾಯಿತು. ನೇರವಾಗಿ ಸುಬ್ಬುವಿನ ಮನೆಗೆ ಬಂದ. “ಇದೆಂಥಾ ಕೆಲಸ ಮಾಡಿದೆ ಸುಬ್ಬು? ದುಡ್ಡು ಕೊಟ್ಟು ಖರೀದಿ ಮಾಡಿದ ಜಮೀನು ಅದು. ಅದರಲ್ಲಿ ನೀನು ಹಾಳು ಬಿಟ್ಟಿದ್ದ ಬಾವಿಯನ್ನು ನಾನು ಸರಿ ಮಾಡಿಸಿಕೊಂಡಿದ್ದಲ್ಲವೇ? ಅದಕ್ಕೆ ಯಾಕಾಗಿ ಬೀಗ ಹಾಕಿದೆ ನೀನು?” ಎಂದು ಕೇಳಿದ ಗೋಪಿ. “ನೋಡಯ್ಯ, ದುಡ್ಡು ಕೊಟ್ಟು ಖರೀದಿ ಮಾಡಿದ್ದು ಅನ್ನೋದು ನಿಜ, ಬಾವಿ ಸರಿ ಮಾಡಿಸಿಕೊಂಡಿದ್ದು ನೀನು ಅನ್ನೋದೂ ಸರಿಯೇ. ಆದರೆ ಜಮೀನು ಮತ್ತು ಬಾವಿಯನ್ನು ಮಾತ್ರ ಮಾರಿದ್ದು ನಾನು. ಬಾವಿಯಲ್ಲಿದ್ದ ನೀರನ್ನಲ್ಲವಲ್ಲ! ನೋಡು ನಮ್ಮ ಕಾಗದಪತ್ರ ತೆಗೆದು. ಎಲ್ಲಾದರೂ ಬಾವಿಯ ನೀರನ್ನು ಮಾರಿರುವ ಬಗ್ಗೆ ಪ್ರಸ್ತಾಪ ಇದೆಯಾ? ಇದ್ದರೆ ಹೇಳು” ಎಂದ ಸುಬ್ಬು.

ಚಿತ್ರ: ವೀಣಾ ಗೌಡ

ನಿಜ! ಬಾವಿಯ ನೀರನ್ನು ಮಾರಾಟ ಮಾಡಿರುವ ಪ್ರಸ್ತಾಪ ಎಲ್ಲೂ ಇರಲಿಲ್ಲ. ಇಷ್ಟಕ್ಕೂ ಮೊದಲಿಗೆ ಆ ಬಾವಿಯಲ್ಲಿ ನೀರೇ ಇರಲಿಲ್ಲವಲ್ಲ. ಈಗೇನು ಮಾಡಬೇಕು ಎಂಬುದು ತಿಳಿಯದ ಸುಬ್ಬು ರಾಜನಲ್ಲಿ ದೂರಿತ್ತು. ಆ ರಾಜನಿಗೊಬ್ಬ ಜಾಣ ಮಂತ್ರಿಯಿದ್ದ. ಸುಬ್ಬು, ಗೋಪಿ- ಇಬ್ಬರನ್ನೂ ಆತ ಒಂದೇ ಸಮಯಕ್ಕೆ ತನ್ನೆದುರು ವಿಚಾರಣೆಗಾಗಿ ಕರೆಸಿಕೊಂಡ. ಇಬ್ಬರೂ ತಂತಮ್ಮ ವಾದವನ್ನು ಮಂಡಿಸಿದರು. ಇಬ್ಬರ ವಾದವನ್ನೂ ಆಲಿಸಿದ ಮಂತ್ರಿ ತನ್ನ ತೀರ್ಪು ನೀಡಿದ.

“ಜಮೀನು ಮಾರಾಟ ಮಾಡುವಾಗ ಬಾವಿಯ ನೀರನ್ನು ಸುಬ್ಬು ಮಾರಾಟ ಮಾಡಿರಲಿಲ್ಲ ಎನ್ನುವುದು ನಿಜ. ಹಾಗಾಗಿ ಈಗ ನೀರಿನ ಮೇಲೆ ಗೋಪಿಗೆ ಹಕ್ಕಿಲ್ಲ. ಆದರೆ ಬಾವಿ ಗೋಪಿಯದ್ದು. ಹಾಗಾಗಿ ಅಲ್ಲಿನ ನೀರನ್ನು ಒಂದೋ ಅಲ್ಲಿಂದ ಸುಬ್ಬು ತೆಗೆದಿರಿಸಿಕೊಳ್ಳಬೇಕು ಅಥವಾ ತನ್ನ ನೀರಿಟ್ಟುಕೊಂಡಿದ್ದಕ್ಕೆ ಪ್ರತಿ ತಿಂಗಳು ಬಾವಿ ಬಾಡಿಗೆಯನ್ನು ಗೋಪಿಗೆ ನೀಡಬೇಕು!”

ಮಂತ್ರಿಯ ಈ ತೀರ್ಪು ಕೇಳಿ ಸುಬ್ಬುವಿನ ಮುಖ ಚಿಕ್ಕದಾಯಿತು. ತನ್ನ ತಂತ್ರಕ್ಕೆ ಮಂತ್ರಿ ಹೆಣೆದಿರುವ ಪ್ರತಿತಂತ್ರಕ್ಕೆ ಈಗ ಏನೂ ಹೇಳುವಂತಿರಲಿಲ್ಲ. ಹೆಚ್ಚಿನ ಮಾತನಾಡದೆ, ಬಾವಿಯನ್ನು ನೀರಿನ ಸಮೇತ ಗೋಪಿಗೆ ಬಿಟ್ಟುಕೊಟ್ಟ ಸುಬ್ಬು.

ಇದನ್ನೂ ಓದಿ | ಮಕ್ಕಳ ಕಥೆ | ಪಾಯಸ ತಿಂದ ಅಜೇಯ

Exit mobile version