Site icon Vistara News

ಮಕ್ಕಳ ಕಥೆ | ಖಿಚಡಿ ತಿನ್ನಲು ಬಂದ ಕರಡಿ

children story

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/09/khichadi.mp3

ಒಂದಾನೊಂದು ಕಾಲದಲ್ಲಿ  ಯಾವುದೋ ಒಂದೂರಿನಲ್ಲಿ ಅಜ್ಜನೊಬ್ಬ ಅಜ್ಜಿಯೊಂದಿಗೆ ವಾಸವಾಗಿದ್ದ. ಅವರಿಬ್ಬರೂ ಶ್ರೀಮಂತರೇನೂ ಅಲ್ಲದೆ ಇದ್ದಿದ್ದರಿಂದ ಬೆಚ್ಚಗಿನ ಪುಟ್ಟ ಮನೆಯಲ್ಲಿ ಬದುಕಿದ್ದವರು. ಅವರ ಮನೆಯ ಪಕ್ಕದಲ್ಲೇ ದೊಡ್ಡದೊಂದು ಹಣ್ಣಿನ ತೋಟವಿತ್ತು. ಆ ತೋಟದಲ್ಲಿ ನಾನಾ ರೀತಿಯ ರಸಭರಿತ, ರುಚಿಕರ ಹಣ್ಣಿನ ಮರಗಳಿದ್ದವು. ಆ ಕೆಲವು ಮರಗಳ ಕೊಂಬೆಗಳು ಇವರ ಪುಟ್ಟ ಅಂಗಳಕ್ಕೂ ಚಾಚಿಕೊಂಡಿತ್ತು. ಹಾಗಾಗಿ ಜೋರು ಗಾಳಿ ಬಂದಾಗ, ಕೆಲವು ಸಿಹಿಯಾದ ಹಣ್ಣುಗಳು ಇವರ ಮನೆಯಂಗಳಕ್ಕೂ ಬೀಳುತ್ತಿದ್ದವು. ಹೆಚ್ಚಿನ ದಿನ ಇವರ ಗಂಜಿ ಅಥವಾ ರೊಟ್ಟಿಯೂಟವನ್ನು ಕಳೆಗಟ್ಟಿಸ್ತಾ ಇದ್ದಿದ್ದು ಇವೇ ಹಣ್ಣುಗಳು. ಹಾಗಾಗಿ ಪ್ರತಿ ದಿನವೂ ಗಾಳಿ ಬೀಳಿಸುವ ಹಣ್ಣಿಗಾಗಿ ಇವರು ಕಾಯ್ತಾ ಇರ್ತಿದ್ರು.

ಒಂದು ದಿನ ರುಚಿಯಾದ ಖಿಚಡಿ ತಿನ್ನಬೇಕೂಂತ ಅಜ್ಜನಿಗೆ ಆಸೆಯಾಯ್ತು. ಖಚಡಿ ಮಾಡುವಂತೆ ಅಜ್ಜಿಯನ್ನು ಕೇಳಿದ. ಅಜ್ಜಿಗೂ ʻಯಾಕಾಗಬಾರದು?ʼ ಎನಿಸಿತು. ಆದರೂ ಎಷ್ಟೊಂದು ಸೌದೆ ಖಾಲಿಯಾಗತ್ತಲ್ಲ ಎನ್ನುವ ಚಿಂತೆ ಆಕೆಗೆ. ಒಲೆ ಹೊತ್ತಿಸಿ, ಹಳೆಯ ಕಾಲದ ತಾಮ್ರದ ಕಡಾಯಿಯನ್ನು ಅದರ ಮೇಲಿಟ್ಟು, ಮಸಾಲೆಗಳನ್ನು ಚನ್ನಾಗಿ ಹುರಿದು, ಅಕ್ಕಿ-ಬೇಳೆಗಳನ್ನು ಹಾಕಿ ಖಿಚಡಿ ಮಾಡೋದಕ್ಕೆ ಶುರು ಮಾಡಿದಳು. ಎಂಥಾ ಪರಿಮಳ ಅಂತೀರಿ? ಅವರ ಪುಟ್ಟ ಮನೆಯನ್ನೂ ದಾಟಿ ಹೊರಗೆಲ್ಲಾ ಖಿಚಡಿಯ ಘಮ ಹರಡಿತು. ಅಜ್ಜನಿಗಂತೂ ಬಾಯಲ್ಲಿ ನೀರು ಬರೋದಕ್ಕೆ ಶುರುವಾಯ್ತು. ಆದರೆ ಅಜ್ಜಿ ಸ್ವಲ್ಪ ಘಾಟಿ! ʻಇನ್ನೊಂದು ಸ್ವಲ್ಪ ಹೊತ್ತಲ್ಲಿ ಖಚಡಿ ತಯಾರಾಗತ್ತೆ. ಅಷ್ಟರಲ್ಲಿ ಕಾಡಿಗೆ ಹೋಗಿ ಒಂದು ದೊಡ್ಡ ಹೊರೆ ಸೌದೆ ತಂದುಬಿಡಿ. ಸೌದೆ ತರದಿದ್ರೆ ಇವತ್ತು ಖಿಚಡಿ ಇಲ್ಲ. ಹೋಗಿ… ಬೇಗʼ ಎಂದುಬಿಟ್ಟಳು. ಅಜ್ಜನಿಗೆ ಸಿಟ್ಟೇಬಂತು. ಆದರೆ ಮಾಡುವುದೇನು? ಖಚಡಿ ತಿನ್ನಲೇಬೇಕಿವತ್ತು ಎಂದುಕಂಡ ಆತ, ಕೊಡಲಿ ಮತ್ತು ಹಗ್ಗ ಹಿಡಿದುಕೊಂಡು ಸೌದೆ ತರುವುದಕ್ಕಾಗಿ ಕಾಡಿಗೆ ಹೋದ.

ಸೌದೆಗಳನ್ನು ಆರಿಸಿದ ಅಜ್ಜ ಹೊರೆ ಕಟ್ಟುತ್ತಿದ್ದ ಹೊತ್ತಿಗೆ ಅಲ್ಲಿಗೊಂದು ಕರಡಿ ಬಂತು. ಹೊರಲಾರದೆ ಆ ಸೌದೆ ಹೊರೆಯನ್ನು ಹೊತ್ತು ಹೋಗುತ್ತಿದ್ದ ಅಜ್ಜನನ್ನು ಅಡ್ಡಗಟ್ಟಿದ ಕರಡಿ, ಇಷ್ಟೊಂದು ಕಟ್ಟಿಗೆಯೇಕೆ ಬೇಕು ಎಂದು ಕೇಳಿತು. ʻಮನೆಲ್ಲಿ ನನ್ನ ಹೆಂಡತಿ ಖಿಚಡಿ ಮಾಡಿದ್ದಾಳೆ. ದೊಡ್ಡ ಹೊರೆ ಸೌದೆ ತಂದ್ರೆ ಮಾತ್ರ ಕೊಡೋದು ಅಂತ ಹೇಳಿದ್ದಾಳೆ. ಎಲ್ಲಿ, ದಾರಿ ಬಿಡುʼ ಎನ್ನುತ್ತಾ ಅವಸರಿಸಿದ ಅಜ್ಜ. ಕರಡಿಗೂ ಹಸಿವಾಗಿತ್ತು. ಖಿಚಡಿಯ ವಿಷಯ ಕೇಳಿ ಅದರ ಹೊಟ್ಟೆಯೂ ತಾಳ ಕುಟ್ಟತೊಡಗಿತು. ʻಸೌದೆ ತಂದವರಿಗೆಲ್ಲಾ ಅಜ್ಜಿ ಖಿಚಡಿ ಕೊಡುತ್ತಾಳೆ ಎಂದಾದರೆ, ನಿನಗಿಂತ ದೊಡ್ಡ ಹೊರೆಯನ್ನು ನಾ ತರುತ್ತೇನೆʼ ಎಂದ ಕರಡಿ ಕಟ್ಟಿಗೆ ರಾಶಿ ಹಾಕಲು ಆರಂಭಿಸಿತು. ಅಜ್ಜ ಮನೆಯತ್ತ ಓಡಿದ. ಅಜ್ಜ ಹೇಳಿದ ಕಥೆ ಕೇಳಿದ ಅಜ್ಜಿಗೀಗ ದಿಗಿಲಾಯಿತು.

ʻಅಯ್ಯೋ ದೇವರೇ! ಕಟ್ಟಿಗೆ ತಂದವರಿಗೆಲ್ಲಾ ಖಿಚಡಿ ಕೊಡುತ್ತೇನೆ ಎಂದು ನಾನೆಲ್ಲಿ ಹೇಳಿದ್ದೆ? ಅದೂ ಅಲ್ಲದೆ ಈ ಕರಡಿ ಹೊಟ್ಟೆ ತುಂಬಿಸಲು ಸಾಧ್ಯವೇ? ಈಗೇನು ಮಾಡಲಿ?ʼ ಎಂದು ಯೋಚಿಸಿದ ಅಜ್ಜಿ, ತನಗೆ ಮತ್ತು ಅಜ್ಜನಿಗೆ ಬಾಳೆಲೆ ಹಾಕಿ ಖಿಚಡಿ ಬಡಿಸಿದಳು. ರುಚಿಯಾಗಿದ್ದ ಆ ಖಿಚಡಿಯನ್ನು ಇಬ್ಬರೂ ಹೊಟ್ಟೆ ಉಂಡರು. ನೋಡುತ್ತಾರೆ ತಾಮ್ರದ ಕಡಾಯಿ ಖಾಲಿ! ಇಬ್ಬರೂ ಲಘುಬಗೆಯಿಂದ ಮನೆಯ ಮಾಡು ಹತ್ತಿ ಕುಳಿತುಕೊಂಡರು. ಕೆಲವೇ ಹೊತ್ತಿನಲ್ಲಿ ಅಲ್ಲಿಗೆ ಕರಡಿ ಬಂತು.

ಇದನ್ನೂ ಓದಿ | ಮಕ್ಕಳ ಕಥೆ | ಮರದಡಿ ಬಚ್ಚಿಟ್ಟ ಹಣ ಕೈತಪ್ಪಿ ಹೋಯ್ತು, ಮರಳಿ ಸಿಕ್ಕಿದ್ದು ಹೇಗೆ?

ಅದರ ಕೈಯಲ್ಲಿ ಬೃಹತ್‌ ಹೊರೆ ಸೌದೆಯಿತ್ತು. ಅದನ್ನು ಅಂಗಳದಲ್ಲಿ ಇರಿಸಿದ ಕರಡಿಗೆ ಒಳಗಿನಿಂದ ಬಂದ ಖಚಡಿ ಪರಿಮಳಕ್ಕೆ ಬಾಯಲ್ಲಿ ನೀರು ಬಂತು. ನೇರ ಅಡುಗೆ ಮನೆಗೆ ಹೋದರೆ…ಅಲ್ಲೇನಿದೆ? ಕಡಾಯಿ ಪೂರ್ತಿ ಖಾಲಿ! ಮೊದಲೇ ಹಸಿವಿನಿಂದ ಬಳಲಿದ್ದ ಕರಡಿಗೆ ಈಗಂತೂ ಸಿಕ್ಕಾಪಟ್ಟೆ ಸಿಟ್ಟುಬಂತು. ಕೇಳುವುದಕ್ಕೆ ಆ ಮನೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಖಚಡಿ ಪರಿಮಳ ಸೂಸುತ್ತಿದ್ದ ಕಡಾಯಿಯನ್ನು ಕೈಯಲ್ಲಿ ಹಿಡಿದು ಹೊರಟಿತು. ಅಂಗಳಕ್ಕೆ ಬರುವಷ್ಟರಲ್ಲಿ ಪಕ್ಕದಲ್ಲಿದ್ದ ಹಣ್ಣಿನ ತೋಟ ಕರಡಿಯ ಕಣ್ಣಿಗೆ ಬಿತ್ತು. ಹಿಂದೆಮುಂದೆ ಯೋಚಿಸದೆ, ಮರ ಏರಿ ಹೊಟ್ಟೆ ತುಂಬುವಷ್ಟು ಹಣ್ಣುಗಳನ್ನು ತಿಂದಿತು. ಈ ಹೊತ್ತಿಗೇನೋ ವ್ಯವಸ್ಥೆಯಾಯಿತು. ಆದರೆ ಮತ್ತೆ ಹಸಿವಾದರೆ ಬೇಕಲ್ಲ ಎಂದು ಮರದ ಬುಡದಲ್ಲಿದ್ದ ಕಡಾಯಿಗೆ ಹಣ್ಣುಗಳನ್ನು ಕೊಯ್ದು ಹಾಕತೊಡಗಿತು.

ಮನೆಯ ಮಾಡಿನ ಮೇಲೆ ಕುಳಿತಿದ್ದ ಅಜ್ಜ-ಅಜ್ಜಿ ಇದೆಲ್ಲವನ್ನೂ ನೋಡುತ್ತಿದ್ದರು. ಛಾವಣಿಯ ಮೇಲೆ ಬೀಸುತ್ತಿದ್ದ ಗಾಳಿಯಿಂದಾಗಿ ಇಬ್ಬರಿಗೂ ಚಳಿಯಾಗತೊಡಗಿತ್ತು. ಈ ಕರಡಿಯೊಂದು ಇಲ್ಲಿಂದ ಹೋದರೆ ನಾವು ಬೆಚ್ಚಗೆ ಮನೆಯೊಳಗಿರಬಹುದು ಎಂದು ಕಾಯುತ್ತಿದ್ದರು. ಆದರೆ ಹೊಟ್ಟೆ ಭಾರವಾಗಿದ್ದ ಕರಡಿ ಮರದ ಮೇಲೆಯೇ ತೂಕಡಿಸಲು ಆರಂಭಿಸಿತ್ತು. ಅಷ್ಟರಲ್ಲಿ ಗಾಳಿ ಮತ್ತೂ ಜೋರಾಯಿತು. ಆ ಚಳಿಗೆ ಇಬ್ಬರೂ ಒಟ್ಟಿಗೆ ಜೋರಾಗಿ, ʻಅಕ್ಷೀ…ʼ ಎಂದು ಸೀನಿದರು. ಅಜ್ಜ-ಅಜ್ಜಿ ಸೀನಿದ ರಭಸಕ್ಕೆ, ತೂಕಡಿಸುತ್ತಿದ್ದ ಕರಡಿಗೆ ಯಾವುದೋ ದೊಡ್ಡ ಪ್ರಾಣಿ ಬಂದಂತೆ ಭಾಸವಾಯಿತು. ಹೆಚ್ಚು ಯೋಚಿಸದೆ, ಮರದಿಂದ ಹಾರಿದ ಕರಡಿ ಪರಾರಿಯಾಯಿತು. ಕರಡಿ ತಂದಿದ್ದ ಸೌದೆ ಇನ್ನೂ ಬಹಳ ದಿನಗಳಿಗೆ ಸಾಕಾಗುವಷ್ಟಿತ್ತು. ಮಾತ್ರವಲ್ಲ, ಕಡಾಯಿ ತುಂಬಾ ಸಿಹಿಯಾದ, ರಸಭರಿತ ಹಣ್ಣುಗಳೂ ಅಜ್ಜ-ಅಜ್ಜಿಗೆ ದೊರೆತವು. ಮನದಲ್ಲೇ ಇಬ್ಬರೂ ಕರಡಿಗೆ ʻಥ್ಯಾಂಕ್ಸ್ʼ ಹೇಳಿ ಬೆಚ್ಚಗೆ ಮನೆ ಸೇರಿದರು.

ಇದನ್ನೂ ಓದಿ | ಮಕ್ಕಳ ಕಥೆ | ಬಡ ಸುಗುಣಿಯ ಮನೆಗೆ ಸಿರಿವಂತಿಕೆ ಬಂದದ್ದು ಹೇಗೆ?

Exit mobile version