ಈ ಕಥೆಯನ್ನು ಇಲ್ಲಿ ಆಲಿಸಿ:
ಜಪಾನ್ ದೇಶದ ಪರ್ವತ ಪ್ರದೇಶಗಳ ತಪ್ಪಲಲ್ಲಿ ಒಂದಾನೊಂದು ಊರು. ಆ ಊರಿನ ಹೊರಭಾಗದಲ್ಲಿ ಒಂದು ಡೋಜೊ ಇತ್ತು. ಡೋಜೊ ಅಂದರೆ ಕರಾಟೆ, ಕುಂಗ್‌ಫು ಮುಂತಾದ ಸಮರ ಕಲೆಗಳನ್ನು ಕಲಿಯುವಂಥ ಸ್ಥಳ. ನಮ್ಮ ಲೆಕ್ಕದಲ್ಲಿ ಯುದ್ಧವಿದ್ಯೆಗಳ ಗುರುಕುಲ ಅಂತ ಇಟ್ಟುಕೊಳ್ಳೋಣ. ಅದನ್ನು ನಡು ಪ್ರಾಯದ ಗುರುವೊಬ್ಬ ನಡೆಸುತ್ತಿದ್ದ. ಸದೃಢ ದೇಹದ ಶೂರನಾಗಿದ್ದ ಆತನನ್ನು ಸಮರ ಕಲೆಯಲ್ಲಿ ಮೀರಿಸುವವರಿಲ್ಲ ಎಂದು ಸುತ್ತಲಿನ ಹತ್ತೂರುಗಳಲ್ಲಿ ಪ್ರಸಿದ್ಧನಾಗಿದ್ದ. ಅವನ ಬಳಿ ವಿದ್ಯೆ ಕಲಿಯುವುದಕ್ಕೆ ಬಹಳಷ್ಟು ಮಕ್ಕಳು ಬಂದು, ಹಲವಾರು ವರ್ಷಗಳ ಕಾಲ ಅಲ್ಲಿಯೇ ಇರುತ್ತಿದ್ದರು.
ಒಂದು ರಾತ್ರಿ ಜೋರಾಗಿ ಹಿಮ ಸುರಿಯುತ್ತಿತ್ತು. ಡೋಜೋದ ಹೆಬ್ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಒಬ್ಬಾತ ಹೆಬ್ಬಾಗಿಲ ಕಿಟಕಿಯಿಂದ ಇಣುಕಿ ನೋಡಿದರೆ, ವಯಸ್ಸಾದ ವ್ಯಕ್ತಿಯೊಬ್ಬ ಚಳಿಯಲ್ಲಿ ನಡುಗುತ್ತಾ ನಿಂತಿದ್ದ. ʻಏನು ಬೇಕು?ʼ ಕೇಳಿದ ವಿದ್ಯಾರ್ಥಿ. ʻಬೆಳಗಿನಿಂದ ನಡೆಯುತ್ತಿದ್ದೇನೆ. ಸುರಿಯುತ್ತಿರುವ ಹಿಮದಿಂದ ಮುಂದೆ ನಡೆಯಲಾಗುತ್ತಿಲ್ಲ. ಇಂದು ರಾತ್ರಿ ಆಶ್ರಯ ಬೇಕುʼ ನಡುಗುತ್ತಾ ಹೇಳಿದ ಆ ವ್ಯಕ್ತಿ. ʻಆದರೆ ಆಗಂತುಕರಿಗೆ ನಮ್ಮಲ್ಲಿ ಪ್ರವೇಶವಿಲ್ಲ. ಕೇವಲ ವಿದ್ಯಾರ್ಥಿಗಳು ಮಾತ್ರವೇ ಇಲ್ಲಿರಬಹುದುʼ ಹೇಳಿದ ವಿದ್ಯಾರ್ಥಿ. ʻನನಗದು ತಿಳಿದಿದೆ. ಆದರೆ ಒಂದು ಹೆಜ್ಜೆಯನ್ನೂ ಎತ್ತಿಡಲಾರದಷ್ಟು ಆಯಾಸಗೊಂಡಿದ್ದೇನೆʼ ಎಂದು ಅಸಹಾಯಕನಾಗಿ ಹೇಳಿದ ಆತ. ʻಊಹುಂ. ನಮ್ಮ ಗುರು ಒಪ್ಪುವುದಿಲ್ಲ. ಒಂದೊಮ್ಮೆ ಹಸಿವಾಗಿದ್ದರೆ ಆಹಾರ ತಂದುಕೊಡುತ್ತೇನೆ. ಬಿಸಿ ನೀರನ್ನೂ ಕೊಡುತ್ತೇನೆ. ಆದರೆ ಆಶ್ರಯ ನೀಡಲಾಗದುʼ ಎಂದ ವಿದ್ಯಾರ್ಥಿ. ʻಹಾಗಾದರೆ ನಿಮ್ಮ ಗುರುವನ್ನೊಮ್ಮೆ ಕೇಳಿ ನೋಡು. ಅವನ ಮನಸ್ಸು ನನ್ನ ಸಲುವಾಗಿ ಬದಲಾಗಬಾರದೆಂದು ಇಲ್ಲವಲ್ಲʼ ಎಂದು ಅಪರಿಚಿತ. ವಿದ್ಯಾರ್ಥಿ ನಗುತ್ತಾ ಒಳಗೆ ಹೋದ. ಗುರುವಿನ ಪ್ರತಿಕ್ರಿಯೆ ಏನು ಎಂಬುದು ಆತನಿಗೆ ತಿಳಿದಿತ್ತು.
ವಯಸ್ಸಾದ ಅಪರಿಚಿತ ವ್ಯಕ್ತಿಯ ಅವಸ್ಥೆಯ ಬಗ್ಗೆ ಗುರುವಿಗೆ ಕನಿಕರ ಬಂದರೂ, ಯೋಧರಿಗೆ ಅದೆಲ್ಲಾ ಸರಿಯಲ್ಲ ಎಂಬಂತೆ ಸುಮ್ಮನಿದ್ದ ಗುರು. ಆದರೆ, ʻಕೊರೆಯುವ ಚಳಿಯಲ್ಲಿ ಆತನಿಗೆ ಏನಾದರೂ ಆದರೆ?ʼ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದಂತೆ ಗುರುವಿನ ಮನಸ್ಸು ಕದಲಿತು. ʻಆತನನ್ನು ಒಳಗೆ ಕರೆʼ ಎಂದು ಆದೇಶ ನೀಡಿದ. ವಿದ್ಯಾರ್ಥಿಗಳು ಅವನನ್ನು ಒಳಗೆ ಕರೆತಂದರು. ʻಧನ್ಯವಾದಗಳು ನಿಮಗೆ. ನೀವಿಷ್ಟು ಉಪಕರಿಸದಿದ್ದರೆ ಹೊರಗಿನ ಚಳಿಯಲ್ಲಿ ಸತ್ತೇ ಹೋಗುತ್ತಿದ್ದೆ. ನನ್ನ ಹೆಸರು ಫುಕುವೋಕಾ. ಇಲ್ಲಿಂದ ಹತ್ತು ಮೈಲಿ ದೂರದ ಮುಂದಿನ ಊರಿಗೆ ಹೋಗಬೇಕು ನಾನು. ಅಷ್ಟರಲ್ಲಿ ಹಿಮ ಸರಿಯಲಾರಂಭಿಸಿತುʼ ಎಂದು ತನ್ನ ಪರಿಚಯ ಹೇಳಿಕೊಂಡ ಆತ. ʻನಿಮ್ಮ ಪರಿಚಯವಾದದ್ದು ಸಂತೋಷ. ಆದರೆ ವಿದ್ಯಾರ್ಥಿಗಳಿಗೆ ಮಾತ್ರವೇ ಇಲ್ಲಿ ಅವಕಾಶ ಇರುವುದರಿಂದ, ನಿಮಗಿಲ್ಲಿ ಹಾಗೆಯೇ ಆಶ್ರಯ ಕೊಡುವಂತಿಲ್ಲ ನಾನು. ನನ್ನೊಂದಿಗೆ ಯುದ್ಧದಲ್ಲಿ ಗೆದ್ದರೆ, ನೀವಿಲ್ಲಿ ರಾತ್ರಿ ತಂಗಬಹುದುʼ ಎಂದ ಗುರು.
ಇಡೀ ಡೋಜೋದಲ್ಲಿ ನಿಶ್ಶಬ್ದ! ಈ ಗುರುವನ್ನು ಆ ಮುದುಕ ಗೆಲ್ಲಬಹುದೇ? ಇದೆಂಥಾ ವಿಚಿತ್ರ ಶರತ್ತು! ʻಪಾಪ! ಮುದುಕ ಇವತ್ತು ಚಳಿಯಲ್ಲಿ ಸಾಯಬೇಕುʼ ಎಂದು ಕೆಲವು ವಿದ್ಯಾರ್ಥಿಗಳು ಕನಿಕರಿಸಿದರೆ, ʻಯೋಧನಾಗಬೇಕೆಂದರೆ ಇಷ್ಟೊಂದು ನಿರ್ದಯಿ ಆಗಬೇಕೆ?ʼ ಎಂದು ಕೆಲವರು ಗೊಂದಲದಲ್ಲಿ ಬಿದ್ದರು. ಅಂತೂ, ಗುರು ಮತ್ತು ಫುಕುವೋಕಾ ನಡುವೆ ಯುದ್ಧ ಆರಂಭ ಆಗುವ ಮುನ್ನವೇ ಫಲಿತಾಂಶವನ್ನು ಎಲ್ಲರೂ ತಿಳಿದಿದ್ದರು. ಆಯಾಸಗೊಂಡಿದ್ದ ಫುಕುವೋಕಾನಿಗೆ ನೀರು, ಆಹಾರ ನೀಡುವಂತೆ ಆದೇಶಿಸಿದ ಗುರು, ಕೆಲ ಸಮಯದ ನಂತರ ಅಭ್ಯಾಸ ಕಣದಲ್ಲಿ ಭೇಟಿಯಾಗುವುದಾಗಿ ಹೇಳಿ ನಡೆದ.
ಇದನ್ನೂ ಓದಿ: ಮಕ್ಕಳ ಕಥೆ: ಗುಡ್ಡದ ಮೇಲಿದ್ದ ಘಂಟಾಕರ್ಣಿ ಭೂತ
ಒಂದು ತಾಸಿನ ನಂತರ ಎಲ್ಲರೂ ಅಭ್ಯಾಸ ಕಣದಲ್ಲಿ ಸೇರಿದರು. ಅಲ್ಲಿ ಪೇರಿಸಿಡಲಾಗಿದ್ದ ಕತ್ತಿಯಲ್ಲಿ ಯಾವುದನ್ನೂ ತೆಗೆದುಕೊಳ್ಳಬಹುದು ಎಂದು ಫುಕುವೋಕಾನಿಗೆ ವಿದ್ಯಾರ್ಥಿಗಳು ತಿಳಿಸಿದರು. ಕೈಗೆ ಸಿಕ್ಕಿದ ಕತ್ತಿಯೊಂದನ್ನು ಎತ್ತಿಕೊಂಡು ನಿರ್ಲಿಪ್ತನಾಗಿ ಕಣಕ್ಕಿಳಿದು, ಗುರುವಿನ ಎದುರು ಬಾಗಿ ನಿಂತ ಆತ. ಇನ್ನೇನು ಯುದ್ಧ ಆರಂಭವಾಗಬೇಕು ಎನ್ನುವಷ್ಟರಲ್ಲಿ ಫಕ್ಕನೆ ಕೇಳಿದ ಫುಕುವೋಕಾ, ʻಕದನಾರಂಭಕ್ಕೆ ಮೊದಲು ನಿಮಗೊಂದು ಸಣ್ಣ ವಿಷಯ ಹೇಳಬೇಕು. ಅವಕಾಶವಿದೆಯೇ?ʼ
ಹೇಳು ಎನ್ನುವಂತೆ ಸನ್ನೆ ಮಾಡಿದ ಗುರು. “ಬಹಳ ಹಿಂದಿನ ಮಾತಿದು. ನಾನು ಚಿಕ್ಕವನಾಗಿದ್ದಾಗ ಹೀಗೆಯೇ ಡೋಜೋ ಒಂದರ ವಿದ್ಯಾರ್ಥಿಯಾಗಿದ್ದೆ. ಅಲ್ಲಿ ಒಂದು ರಾತ್ರಿ ಸಿಕ್ಕಾಪಟ್ಟೆ ಮಳೆ ಬಂತು. ಇದರಿಂದಾಗಿ ಸಮೀಪದ ಸರೋವರ ಉಕ್ಕಿ ಹರಿದು, ಅದರಲ್ಲಿದ್ದ ಮೀನೊಂದು ನೀರಲ್ಲಿ ತೇಲಿಕೊಂಡು ಡೋಜೊ ಒಳಗೆ ಬಂತು. ಜೀವಂತವಿದ್ದ ಅದನ್ನು ಹಿಡಿದು, ಆಗ ಮಕ್ಕಳಾಗಿದ್ದ ನಾವು ನೀರಿನ ಪಾತ್ರೆಗೆ ಹಾಕಿಟ್ಟೆವು. ತನ್ನ ಜೀವ ಕಾಪಾಡಿದ ನಮ್ಮ ಬಗ್ಗೆ ಸಂತೋಷಗೊಂಡ ಆ ಮೀನು, ಬಾಯೊಡೆದು ಮಾತನಾಡಿ ನಮಗೆ ಧನ್ಯವಾದ ಹೇಳಿತು. ನಮಗೊಂದು ಮಾಯದ ಕಾಣಿಕೆಯನ್ನೂ ಕೊಟ್ಟಿತು. ಆ ಕಾಣಿಕೆ ಏನೆಂದು ಗೊತ್ತೇ?” ಕೇಳಿದ ಫುಕುವೋಕಾ.
ʻಮಾಯದ ಕಾಣಿಕೆಯೇ! ಏನದು?ʼ ಕೇಳಿದ ಗುರು. ʻನೀವು ನನ್ನ ಜೊತೆಗಿನ ಸಮರದಲ್ಲಿ ಸೋತಿರಿ ಗುರುವೇ!ʼ ನಗುತ್ತಾ ಹೇಳಿದ ಫುಕುವೋಕಾ. ಮಕ್ಕಳೆಲ್ಲರೂ ಅವಾಕ್ಕಾದರು. ʻಏನು ನಿಮ್ಮ ಮಾತಿನ ಅರ್ಥ!ʼ ತೀಕ್ಷ್ಮವಾಗಿ ಕೇಳಿದ ಗುರು. “ಸಮರ ಕಲೆಯ ಪ್ರಾಥಮಿಕ ಪಾಠವೇನು? ಯಾವುದೇ ಕ್ಷಣದಲ್ಲಿ ಯುದ್ಧಭೂಮಿಯಲ್ಲಿ ನಮ್ಮ ಲಕ್ಷ್ಯ ಚಂಚಲವಾಗುವಂತಿಲ್ಲ. ನಾನು ಕಥೆ ಪ್ರಾರಂಭಿಸುತ್ತಿದ್ದಂತೆಯೇ ಅದರಲ್ಲಿ ನೀವು ಸಂಪೂರ್ಣ ಲೀನವಾದಿರಿ. ಯುದ್ಧ ಭೂಮಿಯಲ್ಲಿ ನಿಂತ ನಿಮ್ಮ ಗಮನ ಶತ್ರುವಿನ ಮೇಲಲ್ಲದೆ, ಆ ಕಥೆಯ ಕಡೆಗೆ ಹೋಯಿತುʼ ಎಂದು ಫುಕುವೋಕಾ ವಿನಮ್ರನಾಗಿ. ಸಮರ್ಥನೆಗೆ ಗುರುವಿನ ಬಳಿ ಏನೂ ಉಳಿದಿರಲಿಲ್ಲ. ʻಒಪ್ಪಿದೆ ನನ್ನ ತಪ್ಪನ್ನು. ನೀವಿಂದು ರಾತ್ರಿ ನಮ್ಮ ಅತಿಥಿʼ ಎಂದು ನಗುತ್ತಾ ಹೇಳಿದ ಗುರು.
ಇದನ್ನೂ ಓದಿ: ಮಕ್ಕಳ ಕಥೆ: ಕನ್ನಡಿಯಲ್ಲಿರುವುದು ಯಾರು?