ಇದೊಂದು ಹಳೆಯ ಜನಪದ ಕಥೆ. ಈಶಾನ್ಯ ರಾಜ್ಯಗಳಲ್ಲಿ ಒಂದೂರಿನಲ್ಲಿ ಮುಲಾನ್ ಅನ್ನುವ ಹುಡುಗಿಯೊಬ್ಬಳು ತನ್ನ ಪುಟ್ಟ ತಮ್ಮ ಮತ್ತು ತಂದೆಯೊಂದಿಗೆ ವಾಸವಾಗಿದ್ದಳು. ಅವಳ ತಂದೆ ಮರದ ಕೆಲಸ ಮಾಡುವ ಬಡಗಿಯಾಗಿದ್ದ. ಅವರೇನೂ ಶ್ರೀಮಂತರಾಗಿರಲಿಲ್ಲ, ಆದರೆ ಜೀವನಕ್ಕೆ ತೊಂದರೆ ಇರಲಿಲ್ಲ. ಇರೋದ್ರಲ್ಲೇ ಎಲ್ಲರೂ ನೆಮ್ಮದಿಯಾಗಿದ್ದರು.
ಇದೇ ಸಮಯದಲ್ಲಿ ಆ ರಾಜ್ಯದ ಮೇಲೆ ಶತ್ರುಗಳ ಸೈನ್ಯ ಯುದ್ಧ ಮಾಡೋದಕ್ಕೆ ಅಂತ ದಂಡೆತ್ತಿ ಬಂತು. ಸೇನೆಯಲ್ಲಿ ಇರುವ ಯೋಧರು ಸಾಕಾಗದೆ, ಇನ್ನಷ್ಟು ಜನರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಕಾರಣದಿಂದ, ರಾಜ್ಯದಲ್ಲೆಲ್ಲಾ ರಾಜ ಡಂಗೂರ ಹೊಡೆಸಿದ. “ಕೇಳ್ರಪ್ಪೋ ಕೇಳಿ, ಕೂತವ್ರು ನಿಂತವ್ರು ಎದ್ದವ್ರು ಬಿದ್ದವ್ರು ಮುದುಕ್ರು ಮಕ್ಳು ಯುವಕ್ರು ಹೈಕ್ಳು… ಎಲ್ಲಾರೂ ಕೇಳಿ! ನಮ್ಮ ರಾಜ್ಯದ ಮೇಲೆ ದಾಳಿ ಮಾಡಿರೋ ಶತ್ರುಗಳನ್ನು ಓಡ್ಸಾಕಂತ ಸೇನೆಗೆ ಜನ ಬೇಕು. ಹಂಗಾಗಿ ಎಲ್ಲಾ ಮನೆಯಿಂದ್ಲೂ ಒಬ್ಬರಾದ್ರೂ ದಂಡಿಗೆ ಸೇರಲೇಬೇಕು ಅಂತ ಮಾರಾಜ್ರ ಅಪ್ಪಣೆಯಾಗಿದೆ… ಕೇಳ್ರಪ್ಪೋ ಕೇಳಿ” ಅಂತ ಏಲ್ಲಾ ಕಡೆ ಡಂಗೂರ ಹೊಡೆಸಲಾಯಿತು.
ಮನೆಯ ಹಿತ್ತಲಿನಲ್ಲಿ ಕೆಲಸ ಮಾಡ್ತಾ ಇದ್ದ ಮುಲಾನ್ ಇದನ್ನ ಕೇಳಿಸಿಕೊಂಡಳು. ಓಡೋಡ್ತಾ ತನ್ನ ತಂದೆಯ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದಳು. ಮರದ ಮೂರ್ತಿಯೊಂದನ್ನು ಕೆತ್ತುತ್ತಾ ಇದ್ದಂಥ ಅವಳ ತಂದೆ, ಈ ವಿಷಯ ಕೇಳಿ ಒಂದು ಕ್ಷಣ ಮೌನವಾದ. ಕಾರಣ ಅವನೇನೂ ಚಿಕ್ಕ ವಯಸ್ಸಿನವನಾಗಿರಲಿಲ್ಲ. ಹಿಂದೆ, ಅವನು ತರುಣನಾಗಿದ್ದಾಗ ಒಮ್ಮೆ ಸೈನ್ಯಕ್ಕೆ ಹೋಗಿ, ಅಲ್ಪಸ್ಪಲ್ಪ ಗಾಯಗಳೊಂದಿಗೆ ಮರಳಿ ಬಂದಿದ್ದ. ಆದರೆ ಈಗವನ ಶಕ್ತಿ ಕುಂದಿದ್ದರಿಂದ, ಈ ಬಾರಿ ದಂಡಿಗೆ ಹೋದರೆ ಮತ್ತೆ ಮರಳಿ ಬರೋದಿಲ್ಲ ತಾನು ಅಂತ ಅವನಿಗೆ ಖಾತ್ರಿಯಾಗಿತ್ತು. ಆದರೆ ವಿಧಿಯಿಲ್ಲ, ರಾಜನ ಆಜ್ಞೆಯಾಗಿದೆಯಲ್ಲ. ಕುಳಿತ ಜಾಗದಿಂದ ಮೆಲ್ಲನೆ ಎದ್ದು, ತನಗೆ ಬೇಕಾದ ಸಿದ್ಧತೆಗಳನ್ನು ಮಾಡೋದಕ್ಕೆ ಆತ ಶುರು ಮಾಡಿದ. ಆದರೆ ಮುಲಾನ್ ಬಿಡಲಿಲ್ಲ.
“ಈ ವಯಸ್ಸಿನಲ್ಲಿ ನೀನೇಕೆ ಸೇನೆಗೆ ಹೋಗಬೇಕು? ನೀನೇಕೆ ಯುದ್ಧ ಮಾಡಬೇಕು? ಯಾವುದೇ ಕಾರಣಕ್ಕೂ ನಿನ್ನನ್ನು ಹೋಗಲು ಬಿಡುವುದಿಲ್ಲ” ಎಂದು ಮುಲಾನ್ ಪಟ್ಟುಹಿಡಿದಳು. “ಹಾಗಂದರೆ ಹೇಗೆ ಮಗಳೇ? ರಾಜನ ಆಜ್ಞೆಯನ್ನು ಮೀರಿದವರಿಗೆ ವಿಧಿಸೋದು ಅಂಥಿಂಥಾ ದಂಡವಲ್ಲ, ತಲೆದಂಡ! ಹೀಗೆ ಅನ್ಯಾಯವಾಗಿ ಸಾಯೋದಕ್ಕಿಂತ, ಸೇನೆಯಲ್ಲಿ ಯುದ್ಧ ಮಾಡಿ ಸಾಯುವುದೇ ಮೇಲಲ್ಲವೇ? ನಿನ್ನ ಚಿಕ್ಕ ತಮ್ಮನನ್ನು ಈಗ ನೀನೇ ಜೋಪಾನ ಮಾಡಬೇಕು” ಅಂತ ಮಗಳಿಗೆ ತಿಳಿ ಹೇಳಿದ ತಂದೆ. ಆದರೆ ಅಂಥ ಯಾವ ಮಾತನ್ನೂ ಕೇಳುವವಳಾಗಿರಲಿಲ್ಲ ಮುಲಾನ್. ನೇರ ತನ್ನ ಕೋಣೆಗೆ ಹೋದವಳು, ಭುಜದ ಮೇಲೆ ನೇರವಾಗಿ ಇಳಿಬಿದ್ದಿದ್ದ ತನ್ನ ಉ..ದ್ದನೆಯ ಕೂದಲುಗಳನ್ನು ಕತ್ತರಿಸಿ ಚಿಕ್ಕದಾಗಿಸಿಕೊಂಡಳು. ತನ್ನ ವೇಷವನ್ನೂ ಬದಲಿಸಿಕೊಂಡು ಕೋಣೆಯಿಂದ ಹೊರಗೆ ಬಂದರೆ, ಥೇಟ್ ತರುಣನ ಹಾಗೆಯೇ ಕಾಣುತ್ತಿದ್ದಳು.
ಮುಲಾನ್ ಮನದಲ್ಲಿ ಏನಿದೆ ಅಂತ ತಕ್ಷಣವೇ ತಂದೆಗೆ ತಿಳಿದುಹೋಯ್ತು. “ಮೂರ್ಖ ಹುಡುಗಿ! ಏನು ಮಾಡುವುದಕ್ಕೆ ಹೊರಟಿದ್ದೀಯ? ನಮ್ಮ ರಾಜ್ಯದ ಸೇನೆಯಲ್ಲಿ ಹುಡುಗಿಯರನ್ನು ಸೇರಿಸಿಕೊಳ್ಳುವುದಿಲ್ಲ ಅನ್ನುವ ಜ್ಞಾನವೂ ಇಲ್ಲವೇ ನಿನಗೆ?” ಎಂದ ಕೋಪದಿಂದ. “ಚಿಂತಿಸಬೇಡಪ್ಪಾ. ನಾನು ಹುಡುಗಿ ಅನ್ನುವುದು ಯಾರಿಗೆಂದರೆ ಯಾರಿಗೂ ಗೊತ್ತಾಗುವುದಿಲ್ಲ. ನಾನು ಚಿಕ್ಕವಳಿದ್ದಾಗಿಂದಲೇ ನೀನು ಯುದ್ಧವಿದ್ಯೆಗಳನ್ನೆಲ್ಲಾ ನನಗೆ ಕಲಿಸಿದ್ದು ಸುಮ್ಮನೆ ಬಂತೇ? ಯುದ್ಧ ಮುಗಿಯುತ್ತಿದ್ದಂತೆಯೇ ಬಂದು ಬಿಡುತೇನೆ. ಅಲ್ಲಿಯವರೆಗೆ ತಮ್ಮನ ಹೊಣೆ ನಿನ್ನದು” ಎನ್ನುತ್ತಾ ಹೆಚ್ಚು ಮಾತಿಗೆ ನಿಲ್ಲದೆ, ಅವರ ಕುಟುಂಬ ಸಾಕಿಕೊಂಡಿದ್ದ ಕುದುರೆಯನ್ನು ಹತ್ತಿ ಹೊರಟೇಹೋದಳು. ಆಗಿನ ಕಾಲದಲ್ಲಿ ಓಡಾಡುವುದಕ್ಕೆಂದು ಜನ ನಂಬಿಕೊಂಡಿದ್ದು ಕುದುರೆಯನ್ನೇ ಆಗಿತ್ತು.
ಸೇನೆಗೆ ಹೋದ ಮುಲಾನ್‌ನ ವೇಷ ಹೇಗಿತ್ತೆಂದರೆ ಯಾರಿಗೂ ಆಕೆ ಹುಡುಗಿ ಇರಬಹುದು ಎಂಬ ಅನುಮಾನ ಬರಲೇ ಇಲ್ಲ. ಜೊತೆಗೆ ಯುದ್ಧ ವಿದ್ಯೆಗಳನ್ನೆಲ್ಲಾ ಆಕೆ ಈಗಾಗಲೇ ಕಲಿತಿದ್ದರಿಂದ ಉಳಿದ ಸೈನಿಕರಿಗೆ ಅವಳ ನಿಜ ತಿಳಿಯಲಿಲ್ಲ. ಯಾರೊಂದಿಗೂ ಹೆಚ್ಚು ಮಾತನಾಡದೆ ಆಕೆ, ತನ್ನಷ್ಟಕ್ಕೆ ತಾನಿರುತ್ತಿದ್ದರಿಂದ ಉಳಿದವರೂ ಆಕೆಯನ್ನು ಅಷ್ಟಾಗಿ ಮಾತಾಡಿಸುತ್ತಿರಲಿಲ್ಲ. ಹೀಗೆಯೆ ಕೆಲವು ತಿಂಗಳುಗಳು ಕಳೆದವು. ಯುದ್ಧ ನಿಲ್ಲುವ ಸೂಚನೆ ಕಾಣಲಿಲ್ಲ. ಒಂದು ಬಾರಿ ತುಕಡಿಯೊಂದನ್ನು ಮುನ್ನಡೆಸುವ ಅವಕಾಶ ಮುಲಾನ್ ಪಾಲಿಗೆ ಬಂತು. ಆ ತುಕಡಿಯ ನಾಯಕ ಹಿಂದಿನ ದಿನವಷ್ಟೇ ತೀವ್ರವಾಗಿ ಗಾಯಗೊಂಡಿದ್ದ. ಮುಲಾನ್ ತೋರಿಸಿದ ಯುದ್ಧಕೌಶಲ್ಯ ಮತ್ತು ಶಿಸ್ತುಬದ್ಧ ಯೋಜನೆ ಎಷ್ಟು ಚನ್ನಾಗಿತ್ತೆಂದರೆ, ಅಂದಿನ ಗೆಲುವು ಮುಲಾನ್‌ನ ತುಕಡಿಯದ್ದಾಗಿತ್ತು. ಹೀಗೆ ಸಾಮಾನ್ಯ ಸೈನಿಕರಂತೆ ಸೇರಿಕೊಂಡಿದ್ದ ಮುಲಾನ್, ತನ್ನ ಶೌರ್ಯ ಮತ್ತು ಸಾಹಸದಿಂದ ಮುನ್ನಡೆಯುತ್ತಾ ಹೋದಳು. ಆದರೆ ಯಾರಿಗೂ ಅನುಮಾನ ಬರದಂತೆ ಎಚ್ಚರ ವಹಿಸುತ್ತಿದ್ದಳು.
ಒಮ್ಮೆ ಇವರ ಸೇನೆ ಬೀಡುಬಿಟ್ಟಿದ್ದ ಊರಿನಲ್ಲಿ ಎಲ್ಲರಿಗೂ ಚಳಿ-ಜ್ವರ ಬಂತು. ಒಬ್ಬರಿಂದೊಬ್ಬರಿಗೆ ಜ್ವರ ಹಬ್ಬುತ್ತಾ ಹೋಗಿ ಮುಲಾನ್‌ಗೂ ಬಂತು. ಪಾಪ, ಹೋರಾಡಿ ದಣಿದಿದ್ದ ಅವಳ ದೇಹ ಜ್ವರದಿಂದ ತತ್ತರಿಸಿಹೋಯಿತು. ಯೋಧರಿಗೆಲ್ಲಾ ಚಿಕಿತ್ಸೆ ಕೊಡುವುದಕ್ಕಾಗಿ ವೈದ್ಯರು ಬಂದರು. ಮುಲಾನಳ ತಪಾಸಣೆ ಮಾಡಿದ ವೈದ್ಯರಿಗೆ, ಈ ತುಕಡಿಯ ಮುಖ್ಯಸ್ಥರು ಒಬ್ಬ ಮಹಿಳೆ ಎನ್ನುವುದು ತಿಳಿದುಹೋಯಿತು. ಆಘಾತಗೊಂಡ ವೈದ್ಯರು, ಸೇನಾ ಶಿಬಿರದಲ್ಲೆಲ್ಲಾ ಕೇಳುವಂತೆ ಈ ವಿಷಯವನ್ನು ಪ್ರಕಟಿಸಿದರು. ಉಳಿದ ಸೈನಿಕರಿಗೂ ಅಚ್ಚರಿ, ಆಘಾತ! ಅರೆ! ಇಷ್ಟು ದಿನಗಳಿಂದ ನಮ್ಮ ಜೊತೆ ಹೋರಾಡುತ್ತಿರುವ ಈ ಯೋಧ ಮಹಿಳೆ ಆಗೋದಕ್ಕೆ ಸಾಧ್ಯವೇ? ಅಂತ ಅವರಿಗೆ ನಂಬುವುದಕ್ಕೂ ಕಷ್ಟವಾಯಿತು.
“ಮಹಿಳೆಯೊಬ್ಬಳು ನಮ್ಮ ಸೇನೆಯನ್ನು ಮುನ್ನಡೆಸುವುದು ಬೇಡ” ಎಂಬ ಮಾತಿಗೆ “ಹೌದು, ಬೇಡ ಆಕೆ” ಎಂದು ಒಂದಿಷ್ಟು ಯೋಧರು ತಕರಾರು ತೆಗೆದರು. “ಮೊದಲು ಆಕೆಯನ್ನು ಇಲ್ಲಿಂದ ಕಳಿಸಿಬಿಡಿ. ಹೋಗದಿದ್ದರೆ ಅರಮನೆಗೆ ಸುದ್ದಿ ತಿಳಿಸಿ” ಎಂದು ಇನ್ನೊದಷ್ಟು ಮಂದಿ ಗಲಾಟೆ ಮಾಡಿದರು. “ಇಷ್ಟು ದಿನ ನಮಗಿಂತ ಸಮರ್ಥವಾಗಿ ಹೋರಾಡಿರುವ ಯೋಧ ಮಹಿಳೆ ಆದರೇನೀಗ? ಅವರೇ ನಮ್ಮ ನಾಯಕಿ” ಎಂದು ಇನ್ನು ಕೆಲವರು ದನಿಯೆತ್ತಿದರು. ಅಂತೂ ಅಲ್ಲೊಂದು ದೊಂಬಿಯೇ ಸೃಷ್ಟಿಯಾಯಿತು. ಅಷ್ಟರಲ್ಲೇ ಆ ಊರಿನ ಉತ್ತರ ದಿಕ್ಕಿನಲ್ಲಿ ದಾಳಿ ಮಾಡುವುದಕ್ಕೆ ಶತ್ರು ಸೇನೆ ಸಿದ್ಧವಾಗಿದೆ ಎಂಬ ಮಾಹಿತಿಯನ್ನು ಬೇಹುಚರನೊಬ್ಬ ತಂದ.
ಜ್ವರದಿಂದ ನರಳುತ್ತಿದ್ದ ಮುಲಾನ್ ತಕ್ಷಣವೇ ಎದ್ದು, ಯುದ್ಧಕ್ಕೆ ಸಿದ್ಧಳಾದಳು. ತನ್ನೊಂದಿಗೆ ಬಂದ ಯೋಧರಿಗೆ ಯಾರಾರು ಎಲ್ಲೆಲ್ಲಿ ಏನೇನು ಮಾಡಬೇಕು ಎಂಬ ಸೂಚನೆ ನೀಡಿ, ಕುದುರೆ ಏರಿದಳು. ಅವಳನ್ನು ವಿರೋಧಿಸುತ್ತಾ ನಿಂತವರಿಗೂ, ಆಕೆ ಯುದ್ಧಕ್ಕಿಳಿದರೆ ಎಷ್ಟು ಸಮರ್ಥಳು ಎಂಬುದು ತಿಳಿದಿತ್ತು. ಹಾಗಾಗಿ ಹೆಚ್ಚು ಮಾತನಾಡದೆ ತಮ್ಮ ನಾಯಕಿಯನ್ನು ಹಿಂಬಾಲಿಸಿದರು. ಅಂದು ನಡೆದು ಘೋರ ಸಮರದಲ್ಲಿ ಶತ್ರುಸೇನೆ ಸಂಪೂರ್ಣ ನೆಲಕಚ್ಚಿತು. ಆ ರಾಜ್ಯದ ಮೇಲಿದ್ದ ಯುದ್ಧದ ಭೀತಿ ತೊಲಗಿತು. ಸೇನೆಯನ್ನು ರಾಜ ಮರಳಿ ಕರೆಸಿಕೊಂಡ. ಅಷ್ಟರಲ್ಲಾಗಲೇ ಈ ಗೆದ್ದುಕೊಟ್ಟಿದ್ದು ಸೇನಾನಾಯಕಿ ಎಂಬ ಸುದ್ದಿ ರಾಜನಿಗೂ ಬಂದಿತ್ತು. ಆಕೆಯನ್ನು ಅರಮನೆಗೆ ಕರೆಸಿ, ಕೊಂಡಾಡಿ, ಕೈತುಂಬಾ ಉಡುಗೊರೆಗಳನ್ನು ಕೊಟ್ಟ. ಇನ್ನೇನಾದರೂ ಬೇಕಿದರೆ ಸಂಕೋಚವಿಲ್ಲದೆ ಕೇಳು ಎಂದು ಮುಲಾನ್‌ಗೆ ರಾಜ ಸೂಚಿಸಿದ. ಆದರೆ ಅಷ್ಟರಲ್ಲಾಗಲೇ ಯುದ್ಧ ಪ್ರಾರಂಭವಾಗಿ ಹಲವಾರು ತಿಂಗಳುಗಳಾಗಿದ್ದವು. ಹಾಗಾಗಿ ತನಗೆ ಸೇನೆಯ ಕೆಲಸದಿಂದ ಮುಕ್ತಿ ಕೊಟ್ಟು, ಮನೆಗೆ ಹೋಗಲು ಬಿಡಿ ಎಂದು ಮುಲಾನ್ ಕೇಳಿಕೊಂಡಳು. ಸೇನಾನಾಯಕಿಗೆ ನೀಡುವ ಗೌರವದಂತೆ, ಆಕೆಗೆ ದೊಡ್ಡದೊಂದು ಉತ್ತಮ ತಳಿಯ ಕುದುರೆ ಮತ್ತು ಬೆಳ್ಳಿಯ ಖಡ್ಗವೊಂದನ್ನು ರಾಜ ಉಡುಗೊರೆಯಾಗಿ ನೀಡಿದ.
ಆಕೆ ಮರಳಿ ಊರಿಗೆ ಬರುತ್ತಿದ್ದಂತೆ ಊರಲ್ಲೆಲ್ಲಾ ಆಕೆಯನ್ನು ಮೆರವಣಿಗೆ ಮಾಡಲಾಯಿತು. ಅಂದಿನಿಂದ ಆ ರಾಜ್ಯದ ಸೇನೆಯಲ್ಲಿ ಮಹಿಳೆಯರು ಯೋಧರಾದರೆ ತಪ್ಪಿಲ್ಲ ಎಂದು ಘೋಷಿಸಲಾಯಿತು.
ಇದನ್ನೂ | ಮಕ್ಕಳ ಕಥೆ | ಪಾಯಸ ತಿಂದ ಅಜೇಯ