ಒಂದಾನೊಂದು ಊರಿನಲ್ಲಿ ಸೋಮಣ್ಣ ಮತ್ತು ಶಾಂತಕ್ಕ ತಮ್ಮ ಮೂವರು ಗಂಡುಮಕ್ಕಳೊಂದಿಗೆ ವಾಸವಾಗಿದ್ದರು. ಮಕ್ಕಳು ಬೆಳೆದು ದೊಡ್ಡವರಾಗಿ ವಿದ್ಯೆ ಕಲಿತರು. ಪ್ರಾಪ್ತ ವಯಸ್ಸಿನಲ್ಲಿ ಅವರಿಗೆ ಮದುವೆಯನ್ನೂ ಮಾಡಲಾಯಿತು. ಮನೆಗೆ ಬಂದ ಮೂವರು ಸೊಸೆಯರು ಒಳ್ಳೆಯ ಮತ್ತು ಜಾಣ ಹುಡುಗಿಯರಾಗಿದ್ದರು.
ಸೋಮಣ್ಣ ಮತ್ತು ಶಾಂತಕ್ಕ ಒಂದು ದಿನ ಮನೆಯಂಗಳದಲ್ಲಿ ಮಾತಾಡುತ್ತಾ ಕುಳಿತಿದ್ದರು. ಮಾತಿನ ನಡುವೆ, ಸೊಸೆಯರ ವಿಷಯವೂ ಬಂತು. ʻನಮ್ಮ ಮೂವರು ಸೊಸೆಯರೂ ಒಳ್ಳೆಯವರೇ. ಆದರೆ ಯಾರು ಹೆಚ್ಚು ಜಾಣೆ ಅನ್ನೋ ಕುತೂಹಲ ನನಗಿದೆʼ ಎಂದು ಶಾಂತಕ್ಕ ಹೇಳಿದಳು. ʻಅದೇನು ದೊಡ್ಡ ವಿಷಯವಲ್ಲ. ಸುಲಭವಾಗಿ ಪತ್ತೆ ಮಾಡಬಹುದು ಕಣೆʼ ಎಂದ ಸೋಮಣ್ಣ, ಮೂವರು ಸೊಸೆಯರನ್ನು ಕರೆಸಿದ.
ʻನೋಡಿ ಮಕ್ಕಳೇ, ನಿಮಗೊಂದು ಸಣ್ಣ ಸವಾಲು ಕೊಡುತ್ತಿದ್ದೇನೆ. ನಿಮ್ಮ ಇಡೀ ಕೋಣೆಯನ್ನು ಯಾವುದಾದರೂ ಒಂದು ವಸ್ತುವಿನಿಂದ ತುಂಬಬೇಕು. ಕೋಣೆಯ ಸಂದು-ಮೂಲೆಗಳನ್ನೂ ಬಿಡಲಿಕ್ಕಿಲ್ಲ. ಇದಕ್ಕಾಗಿ ನಿಮಗೆ ಎಷ್ಟು ಸಮಯ ಬೇಕು?ʼ ಎಂದು ಕೇಳಿದ ಸೋಮಣ್ಣ.
ಒಬ್ಬರನ್ನೊಬ್ಬರು ನೋಡಿಕೊಂಡ ಹುಡುಗಿಯರು, ʻಕೆಲವು ನಿಮಿಷಗಳು ಸಾಕು ಮಾವಯ್ಯʼ ಎಂದು ಹೇಳಿದರು. ʻಸರಿ ಹಾಗಿದ್ದರೆ. ಇನ್ನರ್ಧ ಗಂಟೆಯಲ್ಲಿ ನಿಮ್ಮ ಕೋಣೆಗಳಿಗೆ ಬರುತ್ತೇವೆʼ ಎಂದಳು ಶಾಂತಕ್ಕ. ಇವರೇನು ಮಾಡಬಹುದು ಎಂಬ ಕುತೂಹಲ ಇಬ್ಬರಿಗೂ ಇತ್ತು. ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ತಮ್ಮ ಮೊದಲ ಸೊಸೆಯ ಕೋಣೆಯ ಬಾಗಿಲು ತಟ್ಟಿದರು.
ಬಾಗಿಲು ತೆರೆದಾಗ ಒಳಗೆ ನೋಡಿದ ಶಾಂತಕ್ಕನಿಗೆ ಅಚ್ಚರಿಯಾಯಿತು. ʻಇದೇನಿದು, ಈ ಕೋಣೆ ಖಾಲಿಯೇ ಇದೆಯಲ್ಲ!ʼ ಎಂಬ ಮಡದಿಯ ಮಾತಿಗೆ, ʻಇಡೀ ಕೋಣೆಯಲ್ಲಿ ಅಗರಬತ್ತಿಯ ಪರಿಮಳ ತುಂಬಿದೆ. ನೋಡುʼ ಎಂದ ಸೋಮಣ್ಣ. ಹೌದಲ್ಲವೇ ಎನಿಸಿತು ಶಾಂತಕ್ಕನಿಗೆ. ಇಬ್ಬರೂ ನಗುತ್ತಾ ಎರಡನೇ ಸೊಸೆಯ ಕೋಣೆಗೆ ಹೋದರು. ಬಾಗಿಲು ತೆಗೆಯುತ್ತಿದ್ದಂತೆ ಕೋಣೆಯೆಲ್ಲಾ ಬೆಳಗುವಂತೆ ಬೆಳ್ಳನೆಯ ದೀಪ ಉರಿಯುತ್ತಿತ್ತು. ʻಆಹಾ! ಇದಲ್ಲವೇ ಜಾಣತನʼ ಎಂದುಕೊಂಡರು ಸೋಮಣ್ಣ-ಶಾಂತಕ್ಕ. ನಂತರ ಕಿರಿಯ ಸೊಸೆಯ ಕೋಣೆಗೆ ತೆರಳಿದರು. ಅಲ್ಲಿ ಆಕೆ ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಇಬ್ಬರೂ ನೆಮ್ಮದಿಯಿಂದ ಸ್ವಲ್ಪಹೊತ್ತು ಅಲ್ಲೇ ಕುಳಿತರು. ʻನೋಡು ಶಾಂತ, ಇಡೀ ಕೋಣೆಯೆಲ್ಲಾ ಗೀತೆಯ ನಾದವೇ ತುಂಬಿದೆʼ ಎಂದ ಸೋಮಣ್ಣ.
ಇಬ್ಬರೂ ತಮ್ಮ ಗಂಡುಮಕ್ಕಳನ್ನೆಲ್ಲಾ ಕರೆದರು. ʻಮಕ್ಕಳೇ, ನಿಮ್ಮೆಲ್ಲರ ಮಡದಿಯರು ಜಾಣ ಹುಡುಗಿಯರು. ಯಾವುದೇ ಅನುವು-ಆಪತ್ತಿನಲ್ಲಿ ಅವರ ಸಲಹೆಯನ್ನು ಕೇಳಲು ಮರೆಯಬೇಡಿ. ಇದರಿಂದ ನೀವೆಲ್ಲ ಸುಖವಾಗಿ ಬಾಳುತ್ತೀರಿʼ ಎಂಬ ಕಿವಿಮಾತು ಹೇಳಿದರು.
ಇದನ್ನೂ ಓದಿ | ಮಕ್ಕಳ ಕಥೆ | ಬಾವಿಯ ನೀರು ಯಾರದ್ದು?