ಈ ಕಥೆಯನ್ನು ಇಲ್ಲಿ ಕೇಳಿ:
ಒಮ್ಮೆ ಪಟ್ಟಣದ ಇಲಿಯೊಂದು ತನ್ನತ್ತೆ ಮಗನಾದ ಹಳ್ಳಿಯ ಇಲಿಯ (city mouse and village mouse) ಮನೆಗೆ ಬಂತು. ಠಾಕುಠೀಕಾಗಿ ಹುರಿ ಮೀಸೆ ಹೊತ್ತು, ಬಹಳ ದಿನಗಳ ನಂತರ ಬಂದ ತನ್ನ ಇಲಿಭಾವನನ್ನು, ದೊಡ್ಡಾಲದ ಮರದಡಿಗಿನ ತನ್ನ ಬಿಲಕ್ಕೆ ಹಳ್ಳಿ ಇಲಿ ಪ್ರೀತಿಯಿಂದ ಸ್ವಾಗತಿಸಿತು. ಎರಡೂ ಇಲಿಗಳು ಹೊಲದಲ್ಲೆಲ್ಲಾ ಬೇಕಾದಂತೆ ವಾಕಿಂಗ್ ಮಾಡಿದವು. ಎಳೆಬಿಸಲು, ತಾಜಾ ಗಾಳಿಯಲ್ಲಿ ವಿಹಾರ ಮಾಡಿದವು. ಬಾಯಿ ತುಂಬಾ ಹರಟೆ ಹೊಡೆದವು. ಪಟ್ಟಣದಲ್ಲಿ ಏನೇನೆಲ್ಲಾ ಇದೆ, ಎಷ್ಟು ಅದ್ಭುತವಾಗಿದೆ ಎಂಬುದನ್ನೆಲ್ಲಾ ನಾಗರಿಕ ಇಲಿ ರಂಗುರಂಗಾಗಿ ವರ್ಣಿಸಿತು.
ಇಬ್ಬರಿಗೂ ಹಸಿವಾಯಿತು. ಊಟಕ್ಕೆಂದು ಹಾಲು ತುಂಬಿದ ಭತ್ತದ ಕದಿರು, ರಾಗಿಯ ತೆನೆ ಮತ್ತು ಎಳೆಯ ಸೌತೇಕಾಯಿಗಳ ಔತಣ ನೀಡಿತು ಹಳ್ಳಿ ಇಲಿ. ಇದೆಂಥಾ ಸಪ್ಪೆ ಊಟ ಎನ್ನುವಂತೆ ಮುಖ ಮಾಡಿದ ಪಟ್ಟಣದ ಇಲಿ, ಒಣ ಮುಖದಿಂದ ಒಂದಿಷ್ಟು ತಿಂದಿತು. ಕುಡಿಯುವುದಕ್ಕೆ ತಂಪಾದ ಹಳ್ಳದ ನೀರೂ ಅದಕ್ಕೆ ರುಚಿಸಲಿಲ್ಲ. ರಾತ್ರಿ ಮಲಗುವುದಕ್ಕಿದ್ದ ಹುಲ್ಲಿನ ಹಾಸಿಗೆಯೂ ಪಟ್ಟಣದ ಇಲಿಗೆ ಸರಿಯಾಗಲಿಲ್ಲ. ಚುಚ್ಚುವ ಹುಲ್ಲುಗಳಿಂದ ತಪ್ಪಿಸಿಕೊಳ್ಳಲು ಕ್ಷಣಕ್ಕೊಮ್ಮೆ ಮಗ್ಗುಲು ಬದಲಾಯಿಸುತ್ತಾ, ತಲೆ ಕೆಳಗೆ-ಕಾಲು ಮೇಲೆ ಹಾಕುತ್ತಾ ನಿದ್ದೆಯಿಲ್ಲದೆ ರಾತ್ರಿಡೀ ಒದ್ದಾಡಿತು. ಬೆಳಗಾಗುತ್ತಿದ್ದಂತೆ ತನ್ನ ನಗರಕ್ಕೆ ಮರಳಿ ಹೊರಟಿತು. ʻಪಟ್ಟಣವೆಂದರೇನು ಎಂಬುದನ್ನು ನೀನು ಯಾವತ್ತಾದರೂ ನೋಡಲೇಬೇಕು. ಯಾವತ್ತೋ ಏಕೆ? ಇವತ್ತೇ ಬಾ ನನ್ನೊಂದಿಗೆʼ ಎಂದು ಆತ್ಮೀಯವಾಗಿ ತನ್ನತ್ತೆ ಮಗನನ್ನು ಆಮಂತ್ರಿಸಿತು. ಹಳ್ಳಿ ಇಲಿಗೂ ಪಟ್ಟಣದ ಬಗ್ಗೆ ಕುತೂಹಲ ಇದ್ದಿದ್ದರಿಂದ ಸಣ್ಣದೊಂದು ಸಂಚಿ ತುಂಬಿ ಹೊರಟೇ ಬಿಟ್ಟಿತು.
ಮುಕ್ಕಾಲು ದಾರಿ ಕಳೆಯುತ್ತಿದ್ದಂತೆ ಒಮ್ಮೆಲೆ ಕೆಮ್ಮತೊಡಗಿತು ಹಳ್ಳಿ ಇಲಿ. ʻಅದೋ… ಊರು ದೂರದಲ್ಲಿ ಕಾಣುತ್ತಿದೆ. ಇನ್ನೊಂದು ಸ್ವಲ್ಪ ದೂರ ನಡೆದುಬಿಡುʼ ಎಂದು ಪುಸಲಾಯಿಸಿತು ಪೇಟೆಯ ಇಲಿ. ಊರೊಳಗೆ ಹೋಗುತ್ತಿದ್ದಂತೆ ಕಾಣುತ್ತಿದ್ದ ದೊಡ್ಡ ಕಟ್ಟಡಗಳು, ರಾಕ್ಷಸಾಕಾರದ ವಾಹನಗಳನ್ನು ನೋಡಿ ಹಳ್ಳಿ ಇಲಿಯ ಎದೆ ಬಡಿತವೇ ನಿಂತಂತಾಯ್ತು. ಆದರೂ ತನ್ನ ನಡುಕವನ್ನು ಕೊಂಚ ಸುಧಾರಿಸಿಕೊಂಡು, ತನ್ನ ಭಾವಿಲಿಯ ಕೈ ಹಿಡಿದುಕೊಂಡೇ ಮುಂದುವರಿಯಿತು. ಎರಡೂ ಇಲಿಗಳು ಪೇಟೆ ಇಲಿಯ ಮನೆಯನ್ನು ತಲುಪಿದವು.
ಅದೊಂದು ಬಹುದೊಡ್ಡ ಮನೆ. ಆ ಮನೆಯ ಅಡುಗೆ ಮನೆಯ ಪಕ್ಕದ ಉಗ್ರಾಣದಲ್ಲಿ ಪೇಟೆ ಇಲಿಯ ಬಿಲ. ಬಿಲದೊಳಗೆ ಹೋದ ಎರಡೂ ಸ್ವಲ್ಪ ಸುಧಾರಿಸಿಕೊಂಡವು. ಇಬ್ಬರಿಗೂ ಹಸಿವಾಗಿತ್ತು. ಮೆಲ್ಲಗೆ ಅಡುಗೆ ಮನೆಯತ್ತ ಹಣುಕಿ ನೋಡಿ, ಬಾ ಎಂಬಂತೆ ಸನ್ನೆ ಮಾಡಿತು ಪಟ್ಟಣದಿಲಿ. ಆ ಮನೆಯ ಎಲ್ಲರೂ ಊಟ ಮಾಡಿ ಹೋಗಿದ್ದರೂ, ಊಟದ ವಸ್ತುಗಳೆಲ್ಲಾ ಮೇಜಿನ ಮೇಲೆಯೇ ಇದ್ದಿದ್ದರಿಂದ, ಎರಡೂ ಇಲಿಗಳಿಗೆ ಭರಪೂರ ಮೇಜವಾನಿ ಆಗಿತ್ತು. ತಿನ್ನುವುದಕ್ಕೆ ಅನ್ನ, ತರಕಾರಿ, ಚಕ್ಕುಲಿ, ಉಂಡೆ, ಕುಡಿಯುವುದಕ್ಕೆ ಪಾಯಸ… ಅಬಬ, ಏನುಂಟು ಏನಿಲ್ಲ!
ಇದನ್ನೂ ಓದಿ: ಮಕ್ಕಳ ಕಥೆ: ಒವೆನ್‌ನ ಬ್ಲಾಂಕೆಟ್
ಎರಡೂ ಇಲಿಗಳು ಹೊಟ್ಟೆಬಿರಿ ಉಂಡವು. ಹಳ್ಳಿ ಇಲಿಯಂತೂ ಜೀವನದಲ್ಲಿ ಒಮ್ಮೆಯೂ ಇಂಥದ್ದೆಲ್ಲಾ ಕಂಡಿರದಿದ್ದರಿಂದ, ಓಡಾಡಲೂ ಆಗದಷ್ಟು ಉಂಡಿತ್ತು. ʻಮಿಯಾಂವ್ʼ ಎನ್ನುತ್ತಾ ಬೆಕ್ಕೊಂದು ಅಷ್ಟೊತ್ತಿಗೆ ಬರಬೇಕೆ! ಪೇಟೆಯಿಲಿ ಛಂಗನೆ ಹಾರಿ ತನ್ನ ಬಿಲ ಸೇರಿತು. ಆದರೆ ಹಳ್ಳಿ ಇಲಿಗೆ ಎಲ್ಲಿ ಹೋಗಬೇಕು, ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಗೊಂದಲದಿಂದ ಅಡುಗೆಮನೆಯೆಲ್ಲಾ ಚೆಲ್ಲಾಡಿ, ಅಂತೂ ಬಿಲ ಸೇರಿತು. ಮೊದಲೇ ಮೂಗುಮಟ್ಟ ತಿಂದು ಉಸಿರಾಡಲೂ ಆಗದಂತಿದ್ದ ಹಳ್ಳಿ ಇಲಿಗೆ, ಬೆಕ್ಕಿನ ದಾಳಿಯೂ ಸೇರಿ ಅರ್ಧ ಜೀವವೇ ಹೋದಂತಾಗಿತ್ತು. ʻಹೆದರಬೇಡ, ಇದೆಲ್ಲಾ ಇಲ್ಲಿ ಮಾಮೂಲಿ. ಹೊಟ್ಟೆ ತುಂಬಿತಲ್ಲಾ, ಇನ್ನು ನಿದ್ದೆ ಮಾಡುʼ ಎನ್ನುತ್ತಾ ಮೆತ್ತನೆಯ ಹಾಸಿಗೆಯೊಂದನ್ನು ನೀಡಿತು ಪಟ್ಟಣದಿಲಿ.
ಚುಚ್ಚುವ ಹುಲ್ಲಿನ ಹಾಸಿಗೆಯೇ ಅಭ್ಯಾಸವಾಗಿದ್ದ ಹಳ್ಳಿ ಇಲಿಗೆ ಮೆತ್ತನೆಯ ಹಾಸಿಗೆಯಲ್ಲಿ ಉಸಿರುಗಟ್ಟತೊಡಗಿತು. ದಿಂಬಿಗೆ ತಲೆಕೊಟ್ಟರೆ ಅಲ್ಲೇ ಹುಗಿದುಹೋದಂತಾಗಿ ಗಾಬರಿಯಾಯ್ತು. ಜೊತೆಗೆ ಆಗಾಗ ಕಾಡುವ ಬೆಕ್ಕಿನ ದುಃಸ್ವಪ್ನ. ಇತ್ತ ಪಟ್ಟಣದಿಲಿ ಚೆನ್ನಾಗಿ ಗೊರಕೆ ಹೊಡೆಯುತ್ತಿತ್ತು. ಅಂತೂ ಹಾಸಿಗೆಯಲ್ಲಿ ಒದ್ದಾಡುತ್ತಲೇ ಬೆಳಗು ಮಾಡಿತು ಹಳ್ಳಿಇಲಿ. ಬೆಳಗಾಗುತ್ತಲೇ ಹೊರಟು ನಿಂತ ತನ್ನತ್ತೆ ಮಗನನ್ನು ʻಯಾಕೆ ಹೊರಟೆ?ʼ ಎಂದು ಕೇಳಿತು ಪೇಟೆ ಇಲಿ. ʻಗೆಳೆಯಾ, ಹಳ್ಳಿಯಲ್ಲಿ ರುಚಿಕಟ್ಟಾದ ಊಟವಿಲ್ಲ, ಮೆತ್ತನೆಯ ಹಾಸಿಗೆಯಿಲ್ಲ, ನಿಜ. ಆದರೆ ಸ್ವಚ್ಛಂದ ವಾತಾವರಣವಿದೆ, ಬೆಕ್ಕಿಗೆ ಹೆದರದೆಯೇ ಬದುಕುವ ಸ್ವಾತಂತ್ರ್ಯವಿದೆ. ಸಪ್ಪೆ ಊಟವಾದರೂ ಸರಿ, ನನಗೆ ನಮ್ಮೂರೇ ಒಳ್ಳೆಯದು. ಎಂದಾದರೂ ಬಾ ನಮ್ಮಲ್ಲಿಗೆʼ ಎಂದು ಆಹ್ವಾನಿಸಿ ಸಂಚಿಯನ್ನು ಹೆಗಲಿಗೇರಿಸಿತು.
ಇದನ್ನೂ ಓದಿ: ಮಕ್ಕಳ ಕಥೆ: ರೈತನ ಪ್ರಾಮಾಣಿಕತೆ