Site icon Vistara News

ಮಕ್ಕಳ ಕಥೆ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೇನಾಗುತ್ತದೆ?

anger kid

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/04/AngerStory-1.mp3

ಅಮೇಯ ಹತ್ತು ಹನ್ನೆರಡು ವರ್ಷದ ಪೋರ. ಆಟ, ಓಟ, ಊಟ, ಪಾಠ, ಕೋಪ, ತಾಪ- ಹೀಗೆ ಎಲ್ಲರದಲ್ಲೂ ಮುಂದೆ. ಎಚ್ಚರ ಇದ್ದಷ್ಟೂ ಹೊತ್ತು ಏನಾದರೊಂದು ಮಾಡುತ್ತಲೇ ಇರುತ್ತಾನೆ. ಸರಿಯಾಗಿ ಮಾಡುವ ಕೆಲಸ ಯಾವುದೂ ಕಾಣದಿದ್ದರೆ, ಕೊನೆಗೆ ಹಾಳು ಮಾಡುವುದಾದರೂ ಸರಿ. ಅಂತೂ ಏನಾದರೊಂದು ಕೆಲಸ ಬೇಕೇಬೇಕು ಅವನಿಗೆ.

ಅದೊಂದು ಸಂಜೆ ತನ್ನ ಗೆಳೆಯರೊಂದಿಗೆ ರಸ್ತೆಯಲ್ಲಿ ಕ್ರಿಕೆಟ್‌ ಆಡುತ್ತಿದ್ದ ಅಮೇಯ. ಬಾಲು ಎಲ್ಲೆಲ್ಲಿ ತಾಗಿದರೆ, ಎಷ್ಟೆಷ್ಟು ರನ್ನು, ಯಾವ್ಯಾವುದೆಲ್ಲಾ ಔಟು ಎಂದು ಅವರ ತಂಡದ ನಿಯಮಗಳನ್ನು ಮೊದಲೇ ಎಲ್ಲರೂ ಮಾತಾಡಿಕೊಂಡಿದ್ದರು. ಒಂದು ಟೀಮಿನ ಬ್ಯಾಟಿಂಗ್‌ ಮುಗಿದು, ಎದುರಾಳಿ ಟೀಮಿನ ಚೇಸಿಂಗ್‌ ಶುರುವಾಗಿತ್ತು. ಬ್ಯಾಟಿಂಗ್‌ ಮಾಡುತ್ತಿದ್ದವ ನಮ್ಮ ಅಮೇಯ. ಇದಕ್ಕಿದ್ದಂತೆ ಅದೆಲ್ಲಿಂದ ಅಷ್ಟೊಂದು ಉತ್ಸಾಹ ಬಂತೋ, ಗೆಳೆಯ ರಿಂಕು ಎಸೆದ ಬಾಲನ್ನು ಎತ್ತಿ ಬಾರಿಸಿಬಿಟ್ಟ. ಆ ಹಾಳಾದ ಬಾಲು ನೇರವಾಗಿ ಮಧು ಅಕ್ಕನ ಮನೆಯ ಕಿಟಕಿಯ ಗಾಜೊಂದನ್ನು ಪುಡಿ ಮಾಡಿಬಿಟ್ಟಿತು. ಮಧು ಅಕ್ಕನ ಪಿತ್ತ ನೆತ್ತಿಗೇರಲು ಇಷ್ಟ ಸಾಕಾಗದೆ?

ʻಏಯ್! ‌ಯಾರದು ಬಾಲು ಹೊಡೆದಿದ್ದು?ʼ ಗರ್ಜಿಸಿದಳು ಮಧು ಅಕ್ಕ. ಮೊದಲಿಗೆ ಯಾರೂ ಮಾತಾಡಲಿಲ್ಲ. ಆಕೆ ಮತ್ತೆ ಮತ್ತೆ ಕೇಳುವಷ್ಟರಲ್ಲಿ ಎಲ್ಲರೂ ಸಹಜವಾಗಿ ಅಮೇಯನತ್ತ ನೋಡಿದರು. ಮಧು ಅಕ್ಕನ ಕೋಪ ಅಮೇಯನತ್ತ ತಿರುಗಿತು. ʻಯಾಕೆ ಹೊಡೆದೆ ಕಿಟಕಿಗೆ?ʼ ಕೇಳಿದಳು ಅಕ್ಕ.

ʻನಾ ಹೊಡೆದಿದ್ದಲ್ಲಪ್ಪ, ನನ್ನ ಬ್ಯಾಟು ಹೊಡೆದಿದ್ದು, ಬಾಲು ಒಡೆದಿದ್ದುʼ ಎಂದು ಕೀಟಲೆ ಮಾಡಿದ ಅಮೇಯ. ಒಡೆದು ಹಾಳಾದ ಕಿಟಕಿಯ ಗಾಜನ್ನು ಸರಿ ಮಾಡಿಸಬೇಕಲ್ಲ ಎಂಬ ತಲೆ ಬಿಸಿಯಲ್ಲಿದ್ದ ಮಧು ಅಕ್ಕನಿಗೆ ಅಮೇಯನ ಅಧಿಕಪ್ರಸಂಗದಿಂದ ಇನ್ನಷ್ಟು ಸಿಟ್ಟು ಬಂತು. ʻಹೌದಾ! ತಪ್ಪೆಲ್ಲ ಬ್ಯಾಟು, ಬಾಲಿನದ್ದು ತಾನೇ? ಅದಕ್ಕೇ ಶಿಕ್ಷೆ ಕೊಡೋಣʼ ಎಂದವಳೇ ಅಮೇಯನ ಕೈಯಲ್ಲಿದ್ದ ಬ್ಯಾಟು, ಬಾಲುಗಳನ್ನು ಕಿತ್ತಿಟ್ಟುಕೊಂಡಳು. ʻಸಿಟ್ಟು ಬಂದರೆ ಹಿಟ್ಟು ಮುಕ್ಕು!ʼ ಮತ್ತೆ ಛೇಡಿಸಿದ ಅಮೇಯ. ʻಹೆಚ್ಚು ಮಾತಾಡಿದರೆ ಬ್ಯಾಟು, ಬಾಲನ್ನು ಈ ಗಾಜಿನ ಹಾಗೆಯೇ ಪುಡಿ ಮಾಡಿಬಿಡ್ತೀನಿʼ ಎಂದು ಗದರಿಸಿದ ಅಕ್ಕ, ಬ್ಯಾಟು ಬಾಲಿನೊಂದಿಗೆ ಹೊರಟುಹೋದಳು.

ಮುಗೀತಲ್ಲಾ! ಈಗ ಬ್ಯಾಟೂ ಇಲ್ಲ, ಬಾಲೂ ಇಲ್ಲ. ಆಡುವುದೇನು? ಮಾಡುವುದೇನು? ಮಧು ಅಕ್ಕನ ಮನೆಯ ಗಾಜು ಒಡೆದಿದ್ದು ಉದ್ದೇಶಪೂರ್ವಕ ಆಗಿರಲಿಲ್ಲ, ನಿಜ. ಆದರೆ ಅವರ ಆಟದ ನಿಯಮದ ಪ್ರಕಾರ ಹಾಗೆಲ್ಲ ಎತ್ತಿ ಬ್ಯಾಟು ಬೀಸುವಂತಿರಲಿಲ್ಲ. ಆಡುತ್ತಿದ್ದುದು ರಸ್ತೆಯ ಮೇಲೆ. ಸುತ್ತೆಲ್ಲಾ ಮನೆಗಳಿವೆ ಎಂಬ ಕಾರಣಕ್ಕೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಅವರು ಮಾಡಿಕೊಂಡಿದ್ದರು. ಅದನ್ನು ಪಾಲಿಸುತ್ತಲೂ ಇದ್ದರು. ಅಮೇಯ ಆ ನಿಯಮಗಳನ್ನು ಮುರಿದಿದ್ದೇ ಸಮಸ್ಯೆಯ ಮೂಲ ಎಂಬಂತಾಗಿತ್ತು. ಅಷ್ಟು ಸಾಲದೆಂಬಂತೆ ಮಧು ಅಕ್ಕನೊಂದಿಗೆ ಉದ್ಧಟತನದಿಂದ ಮಾತನ್ನೂ ಆಡಿದನಲ್ಲ. ಕ್ಷಮೆ ಕೇಳಿದ್ದಿದ್ದರೆ ಪ್ರಕರಣವೇ ಮುಗಿಯುತ್ತಿತ್ತು. ಅವಳು ಸದಾ ಒಳ್ಳೆಯ ಅಕ್ಕನೇ ಆಗಿದ್ದವಳು. ಈ ಬಾರಿ ಅಮೇಯನ ಅಧಿಕ ಪ್ರಸಂಗದಿಂದಾಗಿ ಆಕೆಯ ಕೋಪ ಹೆಚ್ಚಿತು ಎನಿಸಿತು ಗೆಳೆಯರಿಗೆ.

ಎಲ್ಲಾ ಮಕ್ಕಳ ಕೋಪವೂ ಸಹಜವಾಗಿ ಅಮೇಯನ ಮೇಲೆ ತಿರುಗಿತು. ʻಎಲ್ಲಾ ನಿನ್ನಿಂದಲೇ ಆಗಿದ್ದು, ನೀ ಯಾಕೆ ಹಂಗೆ ಮಾಡಿದೆ? ನೀ ಯಾಕೆ ಹಂಗೆಲ್ಲಾ ಮಾತಾಡಿದೆ? ಸಾರಿ ಕೇಳಿದ್ರೆ ಆಗ್ತಿರಲಿಲ್ವಾ?ʼ ಎಂದೆಲ್ಲ ಅಲ್ಲಿಯೇ ಜಗಳ ಪ್ರಾರಂಭವಾಯಿತು. ಶುರುವಿಗೆ ಮಾತಿನಲ್ಲಿದ್ದ ಜಗಳ ಆಮೇಲೆ ಕೈ-ಕಾಲಿಗೆ ಇಳಿಯಿತು. ಇಲ್ಲಿಯೂ ಎಲ್ಲರೊಂದಿಗೆ ಜಗಳವಾಡಿ ಮೈ-ಕೈಯೆಲ್ಲಾ ಪರಚಿಕೊಂಡು ಮನೆಗೆ ಹಿಂದಿರುಗಿದ. ಅಪ್ಪ-ಅಮ್ಮನಿಗೆ ಗಾಬರಿಯಾಯ್ತು. ಗಾಯಗಳಿಗೆಲ್ಲಾ ಅಮ್ಮ ಔಷಧಿ ಹಚ್ಚಿದರು. ಆದರೆ ಇತ್ತೀಚೆಗೆ ಸಿಕ್ಕಾಪಟ್ಟೆ ಹೆಚ್ಚುತ್ತಿರುವ ಅಮೇಯನ ಸಿಟ್ಟಿನ ವರ್ತನೆಯ ಬಗ್ಗೆ ಇಬ್ಬರಿಗೂ ಚಿಂತೆ ಹೆಚ್ಚಾಯ್ತು. ಹೋದಲ್ಲೆಲ್ಲಾ ಕೋಪ-ತಾಪಗಳ ಪ್ರದರ್ಶನವನ್ನೇ ಮಾಡಿ, ಸಮಸ್ಯೆ ತಂದುಕೊಳ್ಳುತ್ತಿದ್ದ ಇವನಿಗೆ ಬುದ್ಧಿ ಹೇಳುವುದು ಹೇಗೆ ಎಂದು ಯೋಚಿಸಿದರ ಅಪ್ಪ-ಅಮ್ಮ, ಉಪಾಯ ಮಾಡಿದರು.

ಇದನ್ನೂ ಓದಿ: ಮಕ್ಕಳ ಕಥೆ: ಉಪಾಯ ಚತುರರಾದ ನಾಲ್ವರು ಗೆಳೆಯರು

ದೊಡ್ಡದೊಂದು ಮರದ ಹಲಗೆ, ಒಂದು ಚೀಲದ ತುಂಬಾ ಮೊಳೆ, ಚಿಕ್ಕದೊಂದು ಸುತ್ತಿಗೆ- ಇವಿಷ್ಟನ್ನು ಅಮೇಯನ ಮುಂದಿರಿಸಿದ ಅಪ್ಪ-ಅಮ್ಮ, ಕೋಪ ಬಂದಾಗೆಲ್ಲಾ ಒಂದೊಂದು ಮೊಳೆಯನ್ನು ಆ ಮರದ ಹಲಗೆಗೆ ಹೊಡೆಯುವಂತೆ ಹೇಳಿದರು. ಇದೇನೋ ಹೊಸ ಕೆಲಸ ಎಂದು ಉತ್ಸಾಹದಿಂದ ಒಪ್ಪಿಕೊಂಡ ಅಮೇಯ. ಮೊದಲಿಗೆ ದಿನಕ್ಕೆ ಎಂಟು-ಹತ್ತು ಮೊಳೆಗಳು ಹಲಗೆಗೆ ಬೀಳುತ್ತಿದ್ದವು. ಒಂದು ತಿಂಗಳ ನಂತರ, ಈ ಸಂಖ್ಯೆ ಐದು-ಆರಕ್ಕಿಳಿಯಿತು. ಇನ್ನೊಂದು ತಿಂಗಳ ನಂತರ, ಈ ಸಂಖ್ಯೆ ಮೂರು-ನಾಲ್ಕಕ್ಕಿಳಿಯಿತು. ಮೂರು ತಿಂಗಳ ನಂತರ, ಈ ಸಂಖ್ಯೆ ಒಂದೆರಡಕ್ಕೆ ಇಳಿಯಿತು. ಅಷ್ಟರಲ್ಲಿ ಮೊಳೆಗಳೂ ಖರ್ಚಾಗಿದ್ದವು. ಇನ್ನೀಗ ಸಿಟ್ಟು ಬಂದರೆ ಒಂದೊಂದೇ ಮೊಳೆಗಳನ್ನು ತೆಗೆದು ಮರಳಿ ಚೀಲಕ್ಕೆ ಹಾಕುವಂತೆ ಅಪ್ಪ-ಅಮ್ಮ ಸೂಚಿಸಿದರು ಅಮೇಯನಿಗೆ. ಸಿಟ್ಟಿನ ಭರದಲ್ಲಿ ಮೊಳೆಯನ್ನೇನೋ ಸರಾಗವಾಗಿ ಜಪ್ಪಿ ಹೊಡೆದುಬಿಟ್ಟಿದ್ದ ಹುಡುಗ. ಆದರೀಗ ಅದನ್ನು ತೆಗೆಯಲು ಮಾತ್ರ ಒದ್ದಾಡುವಂತಾಗಿತ್ತು. ಆರೆಂಟು ತಿಂಗಳುಗಳ ನಂತರ ಮೊಳೆಯೆಲ್ಲಾ ಹಲಗೆಯಿಂದ ಹೊರಗೆ ಬಂದಿದ್ದವು.

ಹಲಗೆಯ ಎದುರಿಗೆ ಅಪ್ಪ-ಅಮ್ಮ ಅಮೇಯನನ್ನು ಕೂರಿಸಿಕೊಂಡಿದ್ದರು. ʻಏನು ಕಾಣುತ್ತಿದೆ ಎದುರಿಗೆ?ʼ ಕೇಳಿದರು ತಂದೆ. ʻಖಾಲಿ ಹಲಗೆʼ ಹೇಳಿದ ಅಮೇಯ. ʻನಾವು ಕೊಟ್ಟ ಹಲಗೆಯೇ ಅಲ್ಲವೇ ಇದು?ʼ ಪ್ರಶ್ನಿಸಿದರು ತಾಯಿ. ʻಹೌದೌದು, ಅದೇ!ʼ ಉತ್ತರಿಸಿದ ಮಗ. ʻಹೊಸದಾದ, ಸ್ವಚ್ಛವಾದ ಹಲಗೆಯನ್ನಲ್ಲವೇ ನಾವು ಕೊಟ್ಟಿದ್ದು. ಇದೇನು ಹೀಗಿದೆ?ʼ ಮತ್ತೆ ಕೇಳಿದರು ತಂದೆ. ಹಲಗೆಯನ್ನೊಮ್ಮೆ ಸರಿಯಾಗಿ ನೋಡಿದ ಅಮೇಯ. ಇಡೀ ಹಲಗೆ ಮೊಳೆ ಹೊಡೆದ-ತೆಗೆದ ಕುಳಿಗಳಿಂದ ತುಂಬಿ ಹೋಗಿತ್ತು, ಅಸಹ್ಯವಾಗಿ ಕಾಣುತ್ತಿತ್ತು. ಬೇರಿನ್ನಾವ ಉಪಯೋಗಕ್ಕೂ ಬರುವಂತೆ ಕಾಣುತ್ತಿರಲಿಲ್ಲ. ಗಂಭೀರವಾಗಿ ಹಲಗೆಯನ್ನೇ ನಿರೀಕ್ಷಿಸುತ್ತಿದ್ದ ಮಗನ ಹೆಗಲ ಮೇಲೆ ಕೈ ಹಾಕಿದ ತಂದೆ ಹೇಳಿದರು- ʻನೋಡು ಮಗೂ, ಇವೆಲ್ಲಾ ಗುರುತುಗಳು ನೀನು ಕೋಪದಲ್ಲಿದ್ದಾಗ ಮಾಡಿದ್ದು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಆಗುವಂಥ ಪೆಟ್ಟುಗಳು ಹೋಗುವುದು ಕಷ್ಟ. ಕೆಲವೊಮ್ಮೆ ಹೋಗುವುದೇ ಇಲ್ಲ. ಹಾಳಾದ ಈ ಹಲಗೆ ಸರಿ ಮಾಡಲೂ ಬರದಂತೆ ಆಗಿದೆಯಲ್ಲ. ಈಗೇನು ಮಾಡುವುದು?ʼ

ಅಪ್ಪನ ಮಾತಿನಿಂದ ಅಮೇಯನಿಗೆ ನಿಜಕ್ಕೂ ಬೇಸರವಾಗಿತ್ತು. ʻಹೌದಲ್ಲಾ! ಸಿಟ್ಟಿನಲ್ಲಿ ಆಡಿದ ಮಾತು, ಮಾಡಿದ ಕೆಲಸ ತೊಂದರೆಯನ್ನೇ ಮಾಡುತ್ತದೆ. ಅಂದಿನಿಂದ ಇಂದಿನವರೆಗೂ ಮಧು ಅಕ್ಕ ನನ್ನೊಡನೆ ಮಾತಾಡಿಯೇ ಇಲ್ಲ. ಅವಳ ಬೇಸರವನ್ನು ಕಳೆಯಲು ಮೊದಲು ಸಾರಿ ಕೇಳಬೇಕುʼ ಎಂದು ನಿರ್ಧರಿಸಿದ್ದ ಅಮೇಯ. ಅಂದೇ ಸಂಜೆ ಅಮೇಯ ಮತ್ತು ಟೀಂ ಪುನಃ ಕ್ರಿಕೆಟ್‌ ಆಡುತ್ತಿದ್ದರು, ಅದೇ ರಸ್ತೆಯ ಮೇಲೆ. ಮಧು ಅಕ್ಕನೇ ಅವರ ಅಂಪೈರ್‌!

ಇದನ್ನೂ ಓದಿ: ಮಕ್ಕಳ ಕಥೆ: ಸೌಂದರ್ಯ ಎಂದರೇನು?

Exit mobile version