ಒಂದಾನೊಂದೂರಿನ ರಾಜನಿಗೆ ಗೊಂಬೆಯಂಥ ಮಗಳೊಬ್ಬಳಿದ್ದಳು. ಅವಳು ಬುದ್ಧಿವಂತೆ ಮತ್ತು ಧೈರ್ಯವಂತೆಯೂ ಆಗಿದ್ದಳು. ಹಾಗಾಗಿ ಅವಳಿಗೆ ತಕ್ಕ ವರನನ್ನು ಹುಡುಕಲೆಂದು ರಾಜ ತನ್ನ ಶಕ್ತಿ ಮೀರಿ ಪ್ರಯತ್ನಿಸಿದರೂ ಆಗಿರಲಿಲ್ಲ. ಇದಕ್ಕೊಂದು ಕಾರಣವೂ ಇತ್ತು. ಯಾರೇ ತನ್ನನ್ನು ವಿವಾಹ ಆಗುವುದಕ್ಕೆ ಬಂದರೂ ಆಕೆ ಒಂದು ಪ್ರಶ್ನೆ ಕೇಳುತ್ತಿದ್ದಳು. ಅದಕ್ಕೆ ಸರಿಯುತ್ತರ ನೀಡಬೇಕಿತ್ತು. ಅದರಲ್ಲಿ ಗೆದ್ದರೆ, ಆಕೆ ಸಾಕಿಕೊಂಡಿದ್ದ ಬೃಹದಾಕಾರದ ಕರಡಿಯ ಜೊತೆಗೆ ಒಂದು ರಾತ್ರಿ ಇರಬೇಕಿತ್ತು. ಆ ಕರಡಿಯೋ… ಮನುಷ್ಯರನ್ನು ಕಂಡರೆ ಬಿಡುತ್ತಲೇ ಇರಲಿಲ್ಲ. ಹಾಗಾಗಿ ರಾಜಕುಮಾರಿಯ ಮದುವೆ ಮುಂದಕ್ಕೆ ಹೋಗುತ್ತಲೇ ಇತ್ತು.
ಪಕ್ಕದ ಊರಿನಿಂದ ಜಾಣ ದರ್ಜಿಯೊಬ್ಬ ಆ ಊರಿಗೆ ಬಂದಿದ್ದ. ಯಾವುದೋ ಮದುವೆಮನೆಗೆ ಒಳ್ಳೆಯ ಬಟ್ಟೆಗಳನ್ನು ಹೊಲಿದು ಕೊಡಬೇಕಿತ್ತು. ಬಂದ ಕೆಲಸ ಮುಗಿದ ನಂತರ ಅಲ್ಲಿನ ಜನರೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದ ದರ್ಜಿ. ಆಗ ಆ ಊರಿನ ರಾಜಕುಮಾರಿಯ ಮದುವೆಯ ವಿಷಯವೂ ಬಂತು. ಎಷ್ಟು ಹುಡುಕಿದರೂ ಆಕೆಗೆ ವರನೇ ದೊರೆಯುತ್ತಿಲ್ಲ ಎಂದು ಊರಿನವರು ಬೇಸರಿಸಿಕೊಂಡಿದ್ದರು. ತಾನೇಕೆ ಒಂದು ಕೈ ನೋಡಬಾರದು ಎಂದು ಯೋಚಿಸಿದ ದರ್ಜಿ. ಆತನ ಯೋಚನೆಯನ್ನು ಕೇಳಿ ಸುತ್ತಲಿನ ಜನಕ್ಕೆ ನಗು ತಡೆಯಲಾಗಲಿಲ್ಲ. ʻಎಂಥೆಂಥವರೇ ಕೈಸೋತು ಹೋಗಿದ್ದಾರೆ. ಇನ್ನು ನೀನ್ಯಾವ ಲೆಕ್ಕನಯ್ಯʼ ಎಂದು ಆಡಿಕೊಂಡು. ಯಾರೇನೆಂದರೂ ಮಾರನೇದಿನ ಅರಮನೆಗೆ ಹೋಗುವುದು ಎಂದು ದರ್ಜಿ ನಿರ್ಧರಿಸಿದ್ದ.
ಅರಮನೆಗೆ ಬಂದ ಸಾದಾ ಉಡುಗೆಯ ದರ್ಜಿಯನ್ನು ಕಂಡು ರಾಜಕುಮಾರಿ ಬೇಸರದಿಂದ ಮುಖ ತಿರುಗಿಸಿದಳು. ಆದರೆ ಆಕೆಯ ಪ್ರಶ್ನೆಗೆ ಉತ್ತರಿಸಲು ಯಾರು ಬೇಕಾದರೂ ಪ್ರಯತ್ನಿಸಬಹುದು ಎಂದು ರಾಜನೇ ಹೇಳಿದ್ದರಿಂದ ಆಕೆ ಸುಮ್ಮನಿರಬೇಕಾಯಿತು. ಆತನೊಂದಿಗೆ ಇನ್ನೂ ಇಬ್ಬರು ಯುವಕರು ಅಲ್ಲಿದ್ದರು. ಮೂವರಿಗೂ ತನ್ನ ಎರಡೂ ಕೈ ಮುಷ್ಟಿಯನ್ನು ತೋರಿಸಿದ ಅರಸುಗುವರಿ, ʻಈ ಮುಷ್ಟಿಗಳಲ್ಲಿ ಎರಡು ಕೂದಲುಗಳಿವೆ. ಆ ಕೂದಲುಗಳ ಬಣ್ಣವೇನು ಎಂಬುದನ್ನು ಹೇಳಬಲ್ಲಿರಾ?ʼ ಎಂದು ಕೇಳಿದಳು. ಎರಡೂ ಕೂದಲುಗಳು ಒಂದೇ ಬಣ್ಣದಲ್ಲಿವೆಯೇ, ಬೇರೆ ಬಣ್ಣಗಳಲ್ಲಿವೆಯೇ ಎಂಬುದೇ ಆ ಯುವಕರಿಗೆ ತಿಳಿಯಲಿಲ್ಲ. ಕೂದಲು ಎನ್ನುತ್ತಿದ್ದಂತೆ ಹೆಚ್ಚು ಯೋಚಿಸದ ಮೊದಲ ಯುವಕ, ʻಕಪ್ಪು ಕೂದಲುʼ ಎಂದ. ʻತಪ್ಪುʼ ಎಂದಳು ರಾಜಕುಮಾರಿ. ʻಬಿಳಿ ಮತ್ತು ಕೆಂಚು ಕೂದಲುʼ ಎಂದು ಎರಡನೇ ಯುವಕ. ʻಊಹುಂ! ಇದೂ ಸರಿಯಲ್ಲʼ ಎಂದಳು ರಾಜನ ಮಗಳು. ಆವರೆಗೂ ದರ್ಜಿ ಸೂಕ್ಷ್ಮವಾಗಿ ರಾಜಕುಮಾರಿಯ ಕೂದಲನ್ನೇ ಗಮನಿಸುತ್ತಿದ್ದ. ಆಕೆ ತಲೆಯ ಮೇಲೆ ಧರಿಸಿದ್ದ ಪರದೆಯಂಥ ಬಟ್ಟೆಯಿಂದ ಕೂದಲ ಬಣ್ಣ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಕಿವಿಯ ಬಳಿ ಇಣುಕುತ್ತಿದ್ದ ಎಳೆಗಳಿಂದ ಅವಳ ಕೂದಲ ಬಣ್ಣವನ್ನು ದರ್ಜಿ ಪತ್ತೆ ಮಾಡಿದ್ದ. ʻಬಂಗಾರ ಬಣ್ಣದ ಕೂದಲುʼ ಎಂದ ಆತ. ಉತ್ತರ ಸರಿಯಿದ್ದಿದ್ದರಿಂದ ರಾಜಕುಮಾರಿ ಮೌನವಾಗಿ ತಲೆಯಾಡಿಸಿದಳು. ಬಂದ ದೊರೆ ಮಕ್ಕಳನ್ನೆಲ್ಲಾ ಬಿಟ್ಟು ಈಗ ದರ್ಜಿಯನ್ನು ವರಿಸಬೇಕೆ ಎಂಬುದು ಅವಳ ಚಿಂತೆಯಾಗಿತ್ತು. ಆದರೆ ಅಂದಿನ ರಾತ್ರಿಯನ್ನು ದೊಡ್ಡ ಕರಡಿಯ ಬೋನಿನಲ್ಲಿ ಕಳೆಯಬೇಕಲ್ಲವೇ, ಹೇಗಿದ್ದರೂ ಕರಡಿಯಂತೂ ಇವನನ್ನು ಉಳಿಸುವುದಿಲ್ಲ ಎಂದು ನೆಮ್ಮದಿ ತಳೆದಳು.
ಆ ದಿನ ರಾತ್ರಿಯಾಯಿತು, ದರ್ಜಿಯನ್ನು ಕರೆತಂದು ಕರಡಿಯ ಬೋನಿನೊಳಗೆ ಬಿಡಲಾಯಿತು. ತನ್ನಷ್ಟಕ್ಕೆ ಮಲಗಿದ್ದ ಕರಡಿ ಇವನನ್ನು ನೋಡಿ, ಎದ್ದು ಕುಳಿತು ಆಕಳಿಸಿತು. ಇವನು ಬೋನಿನ ಬಾಗಿಲ ಬಳಿಯೇ ಕಾಲು ಚಾಚಿ ಕುಳಿತ. ತನ್ನ ಕಿಸೆಯಲ್ಲಿದ್ದ ಯಾವುದೋ ಬೀಜವನ್ನು ತೆಗೆದು, ಅದರ ಚಿಪ್ಪನ್ನು ಹಲ್ಲುಗಳಲ್ಲಿ ʻಕಟಂʼ ಎಂದು ಕತ್ತರಿಸಿ ಮೆಲ್ಲತೊಡಗಿದ. ಆ ಬೀಜದ ಪರಿಮಳಕ್ಕೆ ಕರಡಿ ತನಗೂ ಬೇಕೆಂಬಂತೆ ಕೈಯೊಡ್ಡಿತು. ಇನ್ನೊಂದು ಕಿಸೆಯಿಂದ ಒಂದೆರಡು ಗೋಲಿಗಳನ್ನು ತೆಗೆದು ಅದರ ಕೈ ಮೇಲಿಟ್ಟ. ಅದನ್ನು ಬಾಯಿಗೆಸೆದುಕೊಂಡ ಕರಡಿಗೆ ಎಷ್ಟೇ ಪ್ರಯತ್ನಿಸಿದರೂ ಅದನ್ನು ಒಡೆದು ʻಕಟಂʼ ಮಾಡುವುದಕ್ಕೆ ಆಗಲೇ ಇಲ್ಲ. ಈತ ಮತ್ತೆ ತನ್ನ ಕಿಸೆಯಲ್ಲಿದ್ದ ಬೀಜಗಳನ್ನು ಬಾಯಿಗೆ ಹಾಕಿ, ಅದರ ಚಿಪ್ಪನ್ನು ಕಟಂ ಮಾಡಿ ತಿನ್ನತೊಡಗಿದ. ಕರಡಿಗೆ ಗಾಬರಿಯಾಯಿತು. ತನ್ನಿಂದ ಒಡೆಯುವುದಕ್ಕಾಗದ ಬೀಜಗಳನ್ನು ಈತ ಇಷ್ಟೊಂದು ಸಲೀಸಾಗಿ ಒಡೆಯುತ್ತಿದ್ದಾನಲ್ಲ, ಇವನ ಶಕ್ತಿ ಎಷ್ಟಿರಬಹುದು ಎನಿಸಿತು. ಹಾಗಾಗಿ ಆತನ ತಂಟೆಗೇ ಹೋಗದೆ ಸುಮ್ಮನೆ ಕುಳಿತಿತು ಕರಡಿ.
ಇದನ್ನೂ ಓದಿ : ಮಕ್ಕಳ ಕಥೆ: ಸನ್ಯಾಸಿ ಮತ್ತು ಇಲಿ
ಆತ ತನ್ನ ಕೋಟಿನ ಕಿಸೆಯಿಂದ ಕೊಳಲೊಂದನ್ನು ತೆಗೆದು ನುಡಿಸತೊಡಗಿದ. ಬೇಸರದಲ್ಲಿ ಕುಳಿತಿದ್ದ ಕರಡಿಗೆ ಈ ಸಂಗೀತ ಕೇಳಿ ಖುಷಿಯಾಗತೊಡಗಿತು. ಮೆಲ್ಲಗೆ ಆತನ ಬಳಿ ಬಂತು. ಕೊಳಲನ್ನು ತನ್ನ ಕೈಗೆತ್ತಿಕೊಂಡು ಊದಲು ನೋಡಿತು. ಎಷ್ಟು ಪ್ರಯತ್ನಿಸಿದರೂ ಅದಕ್ಕೆ ಶಬ್ದವನ್ನೇ ಹೊರಡಿಸಲಾಗಲಿಲ್ಲ. ಹಾಗಾಗಿ ಈತ ತುಂಬಾ ವಿಶೇಷ ವ್ಯಕ್ತಿ ಅನಿಸಿತು ಪಾಪದ ಪ್ರಾಣಿಗೆ. ಆತ ಮತ್ತೆ ಮತ್ತೆ ಕೊಳಲೂದತೊಡಗಿದ ಕರಡಿ ತಲೆದೂಗಿತು. ಎದ್ದು ಕುಣಿಯಿತು. ಕುಣಿದೂ ಕುಣಿದೂ ಸುಸ್ತಾಗಿ ನಡುರಾತ್ರಿಯ ಹೊತ್ತಿಗೆ ನಿದ್ದೆ ಹೋಯ್ತು. ಎಷ್ಟೋ ದಿನಗಳಿಂದ ಅದಕ್ಕೆ ಯಾವುದೇ ಮನರಂಜನೆ ಇಲ್ಲದೆ ಬೇಸರವಾಗಿತ್ತು. ಆ ರಾತ್ರಿಯ ಕೊಳಲಿನ ನಾದದಿಂದ ಕರಡಿಗೆ ತುಂಬಾ ಸಂತೋಷವಾಗಿತ್ತು.
ಬೆಳಗಾಯಿತು. ಹೇಗಿದ್ದರೂ ಕರಡಿ ಈ ದರ್ಜಿಯನ್ನು ಬಿಡುವುದಿಲ್ಲ ಎಂದು ನೆಮ್ಮದಿಯಿಂದ ಮಲಗಿದ್ದ ರಾಜಕುಮಾರಿಗೆ ಅಚ್ಚರಿ ಕಾದಿತ್ತು. ಕೂದಲೂ ಕೊಂಕದಂತೆ ಸುರಕ್ಷಿತವಾಗಿದ್ದ ಆತ, ರಾಜಕುಮಾರಿಯ ಎದುರಿಗಿದ್ದ. ಕರಡಿ ತನ್ನನ್ನೇನೂ ಮಾಡಲಿಲ್ಲ ಎಂಬ ದರ್ಜಿಯ ಮಾತನ್ನು ನಂಬದ ರಾಜನ ಮಗಳು, ಆತನನ್ನು ತನ್ನೆದುರಿಗೇ ಕರಡಿಯ ಬೋನಿಗೆ ಹಾಕುವಂತೆ ಹೇಳಿದಳು. ತನ್ನ ಬೋನಿನೊಳಗೆ ಬಂದ ಈತನನ್ನು ಕರಡಿ ಪ್ರೀತಿಯಿಂದ ನೆಕ್ಕಿತು. ಇದನ್ನು ಕಂಡ ರಾಜಕುಮಾರಿಗೆ ಇನ್ನಷ್ಟು ಅಚ್ಚರಿಯಾಯಿತು.
ನಿನ್ನ ಮಾತಿಗೆ ನೀನೇ ತಪ್ಪುವಂತಿಲ್ಲ ಎಂದು ರಾಜ ಎಚ್ಚರಿಸಿದ. ಮಾತ್ರವಲ್ಲ, ದರ್ಜಿಯ ಜಾಣತನ ರಾಜನಿಗೆ ಮೆಚ್ಚುಗೆಯಾಗಿತ್ತು. ಆತ ತನ್ನ ಮಗಳನ್ನು ದರ್ಜಿಯೊಂದಿಗೆ ಮದುವೆ ಮಾಡಿಸಿದ.