ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರು. ಅಲ್ಲಿಬ್ಬರು ಅಣ್ಣತಮ್ಮಂದಿರು. ಅವರ ತಂದೆಯಿಂದ ಬಂದಂತಹ ಹೆಚ್ಚಿನ ಆಸ್ತಿಯನ್ನು ಅಣ್ಣನೇ ಇರಿಸಿಕೊಂಡಿದ್ದ. ದೊಡ್ಡ ಮನೆ, ಫಲವತ್ತಾದ ಹೊಲವೆಲ್ಲಾ ಅಣ್ಣನಲ್ಲಿ ಇದ್ದರೆ, ತಮ್ಮನ ಪಾಲಿಗೆ ಸಿಕ್ಕಿದ್ದು, ಸಣ್ಣ ಮನೆ ಮತ್ತು ಏನೂ ಬೆಳೆಯದ ಕಲ್ಲುಕಲ್ಲಾದ ಒಂದಿಷ್ಟು ಭೂಮಿ. ಆ ಭೂಮಿ ಅಜ್ಜ-ಮುತ್ತಜ್ಜನ ಕಾಲದಿಂದಲೇ ಇವರ ಬಳಿ ಇದ್ದರೂ, ಎಂದಿಗೂ ಉಪಯೋಗಕ್ಕೆ ಬಂದಿರಲಿಲ್ಲ. ಊರಾಚೆಗಿದ್ದ ಆ ಪಾಳು ಭೂಮಿಯತ್ತ ಯಾರು ಹೋಗುತ್ತಲೂ ಇರಲಿಲ್ಲ. ಆದರೆ ತಮ್ಮನ ಹಣೆಬರಹಕ್ಕೆ ಆತ ಅದನ್ನೀಗ ರೂಢಿಸಿಕೊಳ್ಳಬೇಕಿತ್ತು.
ಈ ಭೂಮಿಯಲ್ಲಿ ಏನು ಮಾಡಬಹುದು ಎಂದು ಲೆಕ್ಕ ಹಾಕುತ್ತಾ ಕುಳಿತಿದ್ದ ತಮ್ಮನಿಗೆ, ಮೊದಲು ಬಾವಿ ತೋಡುವ ಮನಸ್ಸಾಯಿತು. ಕೊಂಚ ನೀರಾದರೂ ಬಂದರೆ ಏನಾದರೂ ಬೆಳೆ ತೆಗೆಯಬಹುದು ಎಂದು ಭಾವಿಸಿ, ಅಗೆಯಲಾರಂಭಿಸಿದ. ಇದ್ದಕ್ಕಿದ್ದಂತೆ ಯಾರೋ ಮಾತಾಡಿದಂತಾಯಿತು. ಸುತ್ತ ನೋಡಿದರೆ… ಯಾರೂ ಇಲ್ಲ! ತನ್ನದೇ ಭ್ರಮೆಯಿರಬೇಕು, ಹಾಗಿಲ್ಲದಿದ್ದರೆ ಈ ಹಾಳು ಭೂಮಿಯತ್ತ ಯಾರು ಬರುತ್ತಾರೆ ಎಂದು ಭಾವಿಸಿ ಕೆಲಸ ಮುಂದುವರೆಸಿದ. ʻನಿನಗೇನು ಕಿವಿ ಕೇಳುವುದಿಲ್ಲವೇ? ಸ್ವಲ್ಪ ತಾಳು ಹೇಳಿದೆನಲ್ಲ!ʼ ಎಂಬ ಧ್ವನಿ ಕೇಳಿತು ಮತ್ತೆ. ಎಲಾ! ಇದೆಂಥ ಚೋದ್ಯ ಎನ್ನುತ್ತಾ ನೋಡಿದ ತಮ್ಮ, ʻಯಾರದು? ಯಾರು ಮಾತಾಡಿದ್ದು?ʼ ಎಂದು ಸ್ವಲ್ಪ ಜೋರಾಗಿಯೇ ಕೇಳಿದ.
ʻನಾವು, ಭೂ ದೇವತೆಗಳು. ನೂರಾರು ವರ್ಷಗಳಿಂದ ಈ ಭೂಮಿಯಲ್ಲಿ ನೆಮ್ಮದಿಯಿಂದ ಇದ್ದೇವೆ. ಈಗ ನೀನೆಲ್ಲಿಂದ ಬಂದೆ ಪುಣ್ಯಾತ್ಮ ನಮ್ಮ ನೆಮ್ಮದಿ ಹಾಳು ಮಾಡುವುದಕ್ಕೆ?ʼ ಎಂದಿತು ಆ ಧ್ವನಿ. ʻಅಯ್ಯೋ ದೇವ್ರೇ! ನಿಮ್ಮ ನೆಮ್ಮದಿ ಹಾಳು ಮಾಡಲು ಬಂದಿದ್ದಲ್ಲ ನಾನು. ನನಗಿರುವ ಈ ಭೂಮಿಯಲ್ಲೇ ನಾ ಕೃಷಿ ಮಾಡಬೇಕು. ಅದಕ್ಕೇ ಬಾವಿ ತೆಗೆಯಲೆಂದು ಬಂದೆʼ ಪ್ರಾಮಾಣಿಕವಾಗಿ ಹೇಳಿದ ತಮ್ಮ. ʻನೀನಿಲ್ಲಿ ಹೆಚ್ಚು ಹೊತ್ತು ಇದ್ದಷ್ಟೂ ನಮಗೆ ಕಿರಿಕಿರಿ ಆಗುತ್ತದೆ. ಹಾಗಾಗಿ ನಿನಗೇನಾಗಬೇಕು ಎಂಬುದನ್ನು ನಮಗೆ ಹೇಳು ಅಥವಾ ನೀನೇ ಮಾಡಿ ತೋರಿಸು, ನೇರ ಮನೆಗೆ ಹೋಗು. ಮಾರನೇ ದಿನ ನೀ ಬರುವಷ್ಟರಲ್ಲಿ ನಿನ್ನ ಆ ಕೆಲಸವನ್ನು ನಾವೇ ಮಾಡಿರುತ್ತೇವೆ. ಆದರೆ ನೀನು ಇಡೀ ದಿನ ಇಲ್ಲೇ ಗೂಟ ಬಡಿದುಕೊಂಡಿರಬೇಡ. ನಮ್ಮ ನೆಮ್ಮದಿಗೆ ಭಂಗವಾಗುತ್ತದೆʼ ಎಂದು ರಗಳೆ ತೆಗೆದವು ಭೂ ದೇವತೆಗಳು.
ಇದೊಳ್ಳೆ ಗ್ರಹಚಾರ ವಕ್ಕರಿಸಿತಲ್ಲಾ. ಇರುವ ಭೂಮಿಯಲ್ಲಿ ಸರಿಯಾಗಿ ಸಾಗುವಳಿ ಮಾಡುವುದಕ್ಕೂ ಇವರದ್ದು ಕಿರಿಕಿರಿ ಎಂದುಕೊಂಡ ತಮ್ಮ, ಬಾವಿ ತೋಡುವುದನ್ನು ತೋರಿಸಿ ಕೊಟ್ಟು ಮನೆಗೆ ನಡೆದ. ಮಾರನೇ ದಿನ ಬರುವಷ್ಟರಲ್ಲಿ, ಆ ಕಲ್ಲು ಭೂಮಿಯಲ್ಲೂ ಬಾವಿ ತೆಗೆದು ತಂಪಾದ ನೀರು ತುಂಬಿಕೊಂಡಿತ್ತು. ತಮ್ಮನಿಗೆ ಈಗ ಬೇಸರವೆಲ್ಲಾ ಮಾಯವಾಗಿ ಖುಷಿ ಆವರಿಸಿತು. ಕಲ್ಲುಗಳನ್ನೆಲ್ಲಾ ಒತ್ತರಿಸಿಟ್ಟು, ಭೂಮಿ ಹದ ಮಾಡುವ ಬಗ್ಗೆ ತಿಳಿಸಿ ಮನೆಗೆ ಮರಳಿದ. ಇನ್ನೆರಡು ದಿನ ಬಿಟ್ಟು ಅಲ್ಲಿಗೆ ಹೋದಾಗ, ಕಲ್ಲು ಭೂಮಿಯೆಲ್ಲಾ ಬಳಕೆಗೆ ಆಗುವಂಥ ಹೊಲವಾಗಿ ಮಾರ್ಪಾಡುಗೊಂಡಿತ್ತು. ಮನದಲ್ಲೇ ಅವರಿಗೆ ಧನ್ಯವಾದ ಅರ್ಪಿಸಿದ ತಮ್ಮ, ತನಗೇನೇನು ಕೆಲಸ ಆಗಬೇಕು ಎಂಬುದನ್ನು ಅವರಿಗೆ ಮಾಡಿ ತೋರಿಸಿ ಮನೆಗೆ ತೆರಳುತ್ತಿದ್ದ. ಆ ಸಮಯದಲ್ಲಿ ತನ್ನ ಮನೆಯ ಸುತ್ತಲೇ ತರಕಾರಿ ತೋಟ ಮಾಡತೊಡಗಿದ.
ಇತ್ತ ಹೊಲದ ಕೆಲಸ ತನ್ನಷ್ಟಕ್ಕೆ ಸಾಂಗವಾಗಿ ನೆರವೇರುತ್ತಿತ್ತು. ಊರಾಚೆ ಇರುವ ಭೂಮಿ ಆದ್ದರಿಂದ ಯಾರೂ ಅತ್ತ ಹೋಗುತ್ತಲೂ ಇರಲಿಲ್ಲ. ಹಾಗಾಗಿ ತಮ್ಮನ ಹೊಲದಲ್ಲಿ ಏನು ನಡೆಯುತ್ತಿದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಭೂ ದೇವತೆಗಳ ಸ್ನೇಹ-ಪ್ರೀತಿಯನ್ನು ತಮ್ಮ ಗಳಿಸಿಕೊಂಡಿದ್ದರಿಂದ ಆತನಿಗೆ ಬೇಕಾದ ಎಲ್ಲಾ ನೆರವನ್ನೂ ಅವು ನೀಡುತ್ತಿದ್ದವು. ಕಾಲಕಾಲಕ್ಕೆ ಆತನ ಹೊಲದಲ್ಲಿ ಚೆನ್ನಾಗಿ ಬೆಳೆ ಬರತೊಡಗಿತು. ಕೈ ತುಂಬಾ ಹಣವೂ ಬಂತು. ಆತ ಮನೆಯ ಸುತ್ತ ಒಂದಿಷ್ಟು ಹಸುಗಳನ್ನೂ ಕಟ್ಟಿಕೊಂಡ. ಹೊಲದಲ್ಲಿ ಒಂದೆಡೆ ರಾಶಿಯಾಗಿ ಪೇರಿಸಿಕೊಂಡು ಬಿದ್ದಿದ್ದ ಕಲ್ಲನ್ನೇ ಒಡೆಸಿ, ಭದ್ರವಾದ ಕಲ್ಲಿನ ಮನೆ ಕಟ್ಟಿಸಿದ. ಆತನ ಬಡತನವೆಲ್ಲಾ ಕಳೆದು ಬದುಕು ಸುಧಾರಿಸಿತು.
ಇಷ್ಟಾದ ಮೇಲೆ ಅಣ್ಣನಿಗೆ ಎಚ್ಚರವಾಯಿತು. ʻಅರೆ! ಪಾಳು ಭೂಮಿಯಲ್ಲಿ ಆತ ಇಷ್ಟೊಂದು ಬೆಳೆ ತೆಗೆದಿದ್ದಾದರೂ ಹೇಗೆ? ಕಲ್ಲಿನ ಮನೆಯನ್ನು ಕಟ್ಟುವುದೆಂದರೆ ಹುಡುಗಾಟವಲ್ಲವಲ್ಲ. ಅದೆಲ್ಲಾ ಹೇಗೆ ಸಾಧ್ಯವಾಯಿತು ಆತನಿಗೆ?ʼ ಎಂಬ ಯೋಚನೆಯಿಂದ ತಮ್ಮನ ಹೊಲದತ್ತ ನಡೆದ. ಪಾಳು ಭೂಮಿಯೆಲ್ಲಾ ಹಸಿರಿನಿಂದ ನಳನಳಿಸುತ್ತಿತ್ತು. ಮಂಗ-ಮುಸಿಯ ಅಥವಾ ವನ್ಯಜೀವಿಗಳ ಕಾಟವಿರಲಿಲ್ಲ. ಅಲ್ಲಿನ ಬೆಳೆ ಕಾಯುವುದಕ್ಕೆ ಯಾರೂ ಇಲ್ಲದಿದ್ದರೂ ಹೊಲ ಸುರಕ್ಷಿತವಾಗಿದ್ದಿದ್ದು ಕಂಡು ಅಣ್ಣನಿಗೆ ಇನ್ನೂ ಅಚ್ಚರಿಯಾಯಿತು. ಇದರಲ್ಲೇನೋ ರಹಸ್ಯವಿದೆ ಎಂದು ಬಗೆದು, ಮಾರನೇದಿನ ಉಪಾಯದಿಂದ ತಮ್ಮನೊಂದಿಗೆ ಮಾತಿಗಿಳಿದ.
ಮೊದಲಿಗೆ ತಮ್ಮ ಹೆಚ್ಚೇನೂ ಹೇಳದಿದ್ದರೂ, ಕಡೆಗೆ ಅಣ್ಣನ ಒತ್ತಾಯದ ಮೇರೆಗೆ, ತನ್ನ ಭೂಮಿಯಲ್ಲಿ ವಾಸಿಸುತ್ತಿರುವ ಭೂ ದೇವತೆಗಳು ತನಗೆ ಸಹಾಯ ಮಾಡುತ್ತಿವೆ ಎಂದು ತಿಳಿಸಿದ. ಈಗ ಅಣ್ಣನ ಕಿವಿ ನೆಟ್ಟಗಾಯಿತು. ತಮ್ಮ ತಂದೆಯಿಂದ ಬಂದ ಭೂಮಿಯಲ್ಲಿ ವಾಸಿಸುವ ದೇವತೆಗಳು ತನಗೂ ನೆರವಾಗಬೇಕು ಎಂದು ಅಣ್ಣ ಪಟ್ಟುಹಿಡಿದ. ಈತನ ವಾದ ತಮ್ಮನಿಗೆ ವಿಚಿತ್ರ ಎನಿಸಿದರೂ, ದೇವತೆಗಳಲ್ಲಿ ತಾನು ವಿನಂತಿಸುವುದಾಗಿ ಹೇಳಿದ. ಹೊಲಕ್ಕೆ ಹೋದಾಗ ಅದನ್ನೇ ದೇವತೆಗಳಿಗೆ ತಿಳಿಸಿದ.
ಇದನ್ನೂ ಓದಿ: ಮಕ್ಕಳ ಕಥೆ: ಮನೆಗೆಲಸ ನೋಡಿಕೊಳ್ಳಲು ಮುಂದಾದ ಪತಿಯ ಗತಿ ಏನಾಯ್ತು?
ಆದರವು ಒಪ್ಪಲಿಲ್ಲ. ನೂರಾರು ವರ್ಷಗಳಿಂದ ತಾವು ಬದುಕಿದ್ದ ಈ ಭೂಮಿಯನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಭೂ ದೇವತೆಗಳು ಹೇಳಿದವು. ಅಲ್ಲಿ ನೆಲೆಸದಿದ್ದರೆ ಬೇಡ, ಎಂದಾದರು ಒಂದು ದಿನ ಆತನಿಗೆ ಸಹಾಯ ಮಾಡಿ ಎಂದು ವಿನಂತಿಸಿದ ತಮ್ಮ. ಆತನ ಮನವಿಗೆ ಓಗೊಟ್ಟು ಒಪ್ಪಿಕೊಂಡವು ದೇವತೆಗಳು. ತಮ್ಮ ಸಂತೋಷದಿಂದ ಓಡುತ್ತಾ ಅಣ್ಣನಲ್ಲಿಗೆ ಹೋಗಿ ವಿಷಯ ತಿಳಿಸಿದ. ಅಣ್ಣನಿಗೆ ಸಿಟ್ಟೇ ಬಂತು. ʻಓಹೋಹೋ! ನನ್ನ ಹೊಲಕ್ಕೆ ಬಂದು ನೆಲೆಸದಷ್ಟು ಸೊಕ್ಕಾ ಆ ದೇವತೆಗಳಿಗೆ! ಒಂದೇ ಒಂದು ದಿನ ಬಂದು ನೆರವಾಗುತ್ತವಂತೆ… ಭಿಕ್ಷೆ ನೀಡುವವರ ಹಾಗೆʼ ಎಂದೆಲ್ಲಾ ಅಣ್ಣ ಕೂಗಾಡಿದ. ತಮ್ಮ ಬೇಸರದಿಂದ ಮೌನವಾಗಿ ಮನೆಗೆ ಹಿಂದಿರುಗಿದ.
ಮಾರನೇ ದಿನ ಅಣ್ಣನ ಹೊಲಕ್ಕೆ ಬಂದವು ದೇವತೆಗಳು. ಏನು ಕೆಲಸವಾಗಬೇಕು ಎಂದು ಅಣ್ಣನನ್ನು ಕೇಳಿದವು. ದೇವತೆಗಳ ಬಗ್ಗೆ ಸಿಟ್ಟಿನಲ್ಲಿದ್ದ ಅಣ್ಣ ಏನೂ ಮಾತನಾಡದೆ, ಕೈಯಲ್ಲಿದ್ದ ಕತ್ತಿಯಿಂದ ಬಾಳೆಯ ಗಿಡವೊಂದನ್ನು ಕಡಿದು ಬಿಸಾಡಿ, ನಿಮ್ಮ ಉಪಕಾರ ಬೇಕಿಲ್ಲ ಎಂಬಂತೆ ಉರಿಮೋರೆ ಮಾಡಿಕೊಂಡು ಮನೆಗೆ ಬಂದ. ಕೆಲಸವನ್ನು ಒಂದೋ ಬಾಯಲ್ಲಿ ವಿವರಿಸಬೇಕು ಅಥವಾ ಮಾಡಿ ತೋರಿಸಬೇಕು ಎಂಬುದನ್ನೇ ಅನುಸರಿಸಿಕೊಂಡು ಬಂದಿದ್ದವಲ್ಲ ದೇವತೆಗಳು… ಮಾರನೇ ದಿನ ಆತ ಹೊಲಕ್ಕೆ ಬರುವಷ್ಟರಲ್ಲಿ ಅಲ್ಲಿನ ಎಲ್ಲವೂ ನೆಲಸಮವಾಗಿತ್ತು. ಇರುವ ಬೆಳೆಯೂ ಅಣ್ಣನ ಕೈತಪ್ಪಿತ್ತು. ದೇವತೆಗಳು ಮತ್ತೆ ಆತನ ಹೊಲದೆಡೆಗೆ ಮುಖ ಹಾಕಲಿಲ್ಲ.
ಇದನ್ನೂ ಓದಿ: ಮಕ್ಕಳ ಕಥೆ: ಮಧುಕರ ಮತ್ತು ಅಜ್ಜ