ಪೋಷಕರಾಗುವುದು (Positive Parenting Tips) ಸುಲಭದ ಕೆಲಸವಲ್ಲ. ಅದು ದೊಡ್ಡದೊಂದು ಜವಾಬ್ದಾರಿಯನ್ನು ಜೀವನ ಪೂರ್ತಿಗೆ ವಹಿಸಿಕೊಂಡಂತೆ. ಈ ಸವಾಲಿನ ಕೆಲಸಕ್ಕೆ ನೀವು ಮಾನಸಿಕವಾಗಿಯೂ ಸಿದ್ಧರಾಗಿರಬೇಕಾಗುತ್ತದೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕೆಲಸವಾಗಿರುವ ಪೋಷಕರ ಕೆಲಸಕ್ಕೆ ಕೆಲವು ಉತ್ತಮ ಸಲಹೆಗಳು ಇಲ್ಲಿವೆ.
ಸ್ವಾಭಿಮಾನ
ಮಕ್ಕಳು ಪೋಷಕರನ್ನೇ ಅನುಸರಿಸುತ್ತಾರೆ. ನೀವು ಆಡುವ ಪ್ರತಿ ಮಾತನ್ನು ಅವರು ಕಲಿಯಲು ಆರಂಭಿಸುತ್ತಾರೆ. ನಿಮ್ಮ ಮಕ್ಕಳು ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿದಾಗಲೂ ಅದನ್ನು ಶ್ಲಾಘಿಸಿ. ಏಕೆಂದರೆ ಈ ರೀತಿಯ ಪ್ರೋತ್ಸಾಹದಿಂದ ಮಕ್ಕಳು ತಮ್ಮ ಬಗ್ಗೆ ತಾವು ಹೆಮ್ಮೆ ಪಡುವುದಷ್ಟೇ ಅಲ್ಲದೆ ಸ್ವತಂತ್ರರಾಗುತ್ತ ಹೋಗುತ್ತಾರೆ. ಸ್ವಾಭಿಮಾನಿಗಳಾಗಲಾರಂಭಿಸುತ್ತಾರೆ. ಇತರರಿಗೆ ಹೋಲಿಸಿ ಹೊಗಳದೇ ಹೋದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.
ನಕಾರಾತ್ಮಕತೆ ಬೇಡ
ಮಕ್ಕಳಿಗೆ ನಕಾರಾತ್ಮಕವಾಗಿ ಬೈಯುವುದಕ್ಕೆ ಹೋಗಬೇಡಿ. ಕೆಲವು ಪೋಷಕರು ಮಕ್ಕಳನ್ನು ಹೊಗಳುವುದಕ್ಕಿಂತ ಅವರನ್ನು ಟೀಕಿಸುವಂತಹ ಕೆಲಸವನ್ನೇ ಮಾಡುತ್ತಾರೆ. ಅದರ ಬದಲು ಅವರಿಗೆ ಪ್ರೀತಿ ತೋರಿಸಿ, ಅಪ್ಪುಗೆ, ಚುಂಬನ ನೀಡಿ. ಹೀಗೆ ಮಾಡುವುದರಿಂದ ಅವರು ಇನ್ನಷ್ಟು ಧನಾತ್ಮಕವಾಗಿ ಚಿಂತಿಸಿ ಅದರಂತೆ ನಡೆದುಕೊಳ್ಳಲಾರಂಭಿಸುತ್ತಾರೆ.
ಅಶಿಸ್ತು ಬೇಡ
ಮಕ್ಕಳನ್ನು ಎಷ್ಟೇ ಪ್ರೀತಿಯಿಂದ ಬೆಳೆಸಿದರೂ ಅವರಿಗೆ ಶಿಸ್ತು ಕಲಿಸುವುದು ಅತಿಮುಖ್ಯ. ಅದಕ್ಕಾಗಿ ನೀವು ಕೆಲವು ನಿಯಮಗಳನ್ನು ಮಾಡಿಕೊಳ್ಳಿ. ಯಾವ ಸಮಯದಲ್ಲಿ ಟಿವಿ ನೋಡಬೇಕು, ಯಾವ ಸಮಯದಲ್ಲಿ ಆಟವಾಡಬೇಕು, ಯಾವಾಗ ಊಟ ಮಾಡಬೇಕು ಎನ್ನುವುದರ ಬಗ್ಗೆ ಶಿಸ್ತಿರಲಿ. ಅವರು ನಿಮ್ಮ ಮಾತನ್ನು ಕೇಳುವಂತೆ ಸ್ಪಷ್ಟವಾಗಿ ಅವರಿಗೆ ನಿರ್ದೇಶನ ನೀಡಿ.
ಮಕ್ಕಳೊಂದಿಗೆ ಸಮಯ
ಈಗ ಕೆಲಸದ ಒತ್ತಡದಲ್ಲಿರುವ ಪೋಷಕರು ಮಕ್ಕಳಿಗಾಗಿ ಸಮಯವನ್ನು ಕೊಡುವುದನ್ನೇ ಮರೆತುಬಿಡುತ್ತಾರೆ. ಹಾಗಾಗಿ ಮಕ್ಕಳು ಟಿವಿ, ವಿಡಿಯೊ ಗೇಮ್, ಫೋನ್‌ಗಳಲ್ಲಿ ಸಮಯ ವ್ಯರ್ಥ ಮಾಡಲಾರಂಭಿಸಿಬಿಡುತ್ತಾರೆ. ಆ ರೀತಿ ಮಾಡಲು ಬಿಡದೆ ಮಕ್ಕಳೊಂದಿಗೆ ನೀವು ಸಮಯ ಕಳೆಯಿರಿ. ಮನೆ ಕೆಲಸದಲ್ಲಿ ಸಹಾಯ ಮಾಡುವುದಕ್ಕೆ ಅವರಿಗೆ ಹೇಳಿಕೊಡಿ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ. ಆ ದಿನದಲ್ಲಿ ಅವರಿಗೆ ಏನಾದರೂ ಸಮಸ್ಯೆ ಆಯಿತೇ ಎಂದು ಕೇಳಿ ಅದನ್ನು ಸರಿಪಡಿಸುವತ್ತ ಗಮನ ಕೊಡಿ. ಹಾಗೆಯೇ ಅವರ ಸಂತೋಷದ ವಿಚಾರವನ್ನೂ ನೀವು ಕೇಳಿ.
ನಿಮ್ಮ ನಡವಳಿಕೆ
ಮಕ್ಕಳಿಗೆ ಪೋಷಕರೇ ದೊಡ್ಡ ಉದಾಹರಣೆ. ನೀವು ಏನು ಮಾಡುತ್ತೀರೋ ಅವರೂ ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಯಾವುದೇ ವರ್ತನೆಗೆ ಮೊದಲು ಅದು ನಿಮ್ಮ ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ಆಲೋಚಿಸಿ. ನಿಮ್ಮ ಮಕ್ಕಳಿಗೆ ಸೂಕ್ತ ಎನ್ನುವಂತಹ ನಡವಳಿಕೆಯನ್ನು ಮಾತ್ರವೇ ಅವರೆದುರು ಮಾಡಿ.
ಸಂವಹನ ಮುಖ್ಯ
ಎಷ್ಟೋ ಮನೆಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಮಾತುಕತೆಯೇ ನಡೆಯುವುದಿಲ್ಲ. ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವುದೇ ಇಲ್ಲ. ಆದರೆ ನೀವು ಹಾಗೆ ಮಾಡಬೇಡಿ. ಮಕ್ಕಳೊಂದಿಗೆ ಅವರ ಜೀವನದ ಬಗ್ಗೆ ಮಾತನಾಡಿ. ಅವರಿಗೆ ಸೂಕ್ತ ಮಾರ್ಗದರ್ಶನ ಕೊಡಿ. ಹಾಗೆಯೇ ನಿಮ್ಮ ಬದುಕಿನ ಕೆಲವು ಅನುಭವಗಳನ್ನೂ ಅವರೊಂದಿಗೆ ಹಂಚಿಕೊಳ್ಳಿ.
ಅತಿಯಾದ ನಿರೀಕ್ಷೆ ಬೇಡ
ತಂದೆ, ತಾಯಿ ಎಂದ ಮೇಲೆ ಮಕ್ಕಳ ಮೇಲೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅವಾಸ್ತವಿಕವಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಅವರನ್ನು ಪ್ರೇರೇಪಿಸುವುದು ತಪ್ಪಲ್ಲ. ಆದರೆ ಒತ್ತಾಯಿಸುವುದು ತಪ್ಪಾಗುತ್ತದೆ. ಶಿಕ್ಷಣದಲ್ಲಿ ಅವರು ಮುಂದಿಲ್ಲದಿದ್ದರೆ ಬೇರೆ ಕ್ಷೇತ್ರದಲ್ಲಿ ಒಂದು ಕೈ ಮೇಲಿರಬಹುದು. ಹಾಗಾಗಿ ಅವರಿಗೆ ಒತ್ತಡ ಹೇರದೆ, ಅವರ ಇಷ್ಟ ಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
ಕಾಳಜಿ ಹೆಚ್ಚಾಗಲೂ ಬಾರದು, ಇರದೆಯೂ ಇರಬಾರದು
ಕೆಲವು ಪೋಷಕರು ಮಕ್ಕಳ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಅವರಿಗೆ ಏನಾದರೂ ಆಗಬಹುದು ಎನ್ನುವ ಭಯದಿಂದ ಮಕ್ಕಳನ್ನು ಸಾಮಾಜಿಕವಾಗಿ ವ್ಯವಹರಿಸುವುದಕ್ಕೇ ಬಿಡುವುದಿಲ್ಲ. ಇನ್ನು ಕೆಲವರು ಮಕ್ಕಳು ಏನು ಮಾಡಿದರೂ ಅದರ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಈ ಎರಡೂ ವರ್ತನೆ ತಪ್ಪಾಗುತ್ತದೆ. ಮಕ್ಕಳ ಬಗ್ಗೆ ಕಾಳಜಿ ಇರಲಿ ಅದರ ಜತೆಯಲ್ಲಿ ಅವರಿಗೆ ಅಗತ್ಯವಾದ ಸ್ವಾತಂತ್ರ್ಯವನ್ನೂ ಕೊಡಿ.
ಅವರಿಗೂ ಇರಲಿ ಸ್ಥಾನಮಾನ
ನಿಮ್ಮ ಮಕ್ಕಳಿಗೆ ನಿಮ್ಮ ಅವಶ್ಯಕತೆ ಇರುವಂತೆಯೇ ನಿಮಗೂ ಕೂಡ ಅವರ ಅವಶ್ಯಕತೆ ಇರುತ್ತದೆ. ಅವರು ನಿಮ್ಮ ಕುಟುಂಬ ಹಾಗೂ ಬೆಂಬಲ. ನೀವು ಮಕ್ಕಳಿಗೂ ಕೂಡ ಸೂಕ್ತವಾದ ಸ್ಥಾನಮಾನವನ್ನು ಕೊಡಬೇಕಾಗುತ್ತದೆ. ನಿಮಗೆ ಅವರ ಅಗತ್ಯ ಇದೆ ಎನ್ನುವುದು ಅವರ ಅರಿವಿಗೆ ಬಂದರೆ ಅವರು ಇನ್ನಷ್ಟು ವಯಸ್ಕತೆಯನ್ನು ಪಡೆದುಕೊಳ್ಳುತ್ತಾರೆ.
ಬಂಧ ಬಲವಾಗಲಿ
ಹುಟ್ಟುತ್ತ ಮಕ್ಕಳಾದವರು ಬೆಳೆಯುತ್ತ ಸ್ನೇಹಿತರಾಗಬೇಕು. ಮಕ್ಕಳು ಒಂದು ಹಂತಕ್ಕೆ ಬೆಳೆದ ನಂತರ ಅವರನ್ನು ಸ್ನೇಹಿತರಂತೆಯೇ ಕಾಣಬೇಕು. ಹಾಗೆಂದ ಮಾತ್ರಕ್ಕೆ ಅತಿಯಾದ ಸ್ನೇಹ ಮಾಡಿಕೊಂಡು ಬಿಡಬೇಡಿ. ಯಾವಾಗ ಎಲ್ಲಿ ಗೆರೆ ಎಳೆಯಬೇಕು ಎನ್ನುವುದು ನಿಮಗೆ ಗೊತ್ತಿರಬೇಕು. ಮಕ್ಕಳೊಂದಿಗೆ ಬಾಂಧವ್ಯವನ್ನು ಬಲವಾಗಿಸಿಕೊಳ್ಳಿ. ಯಾವ ಸಮಯದಲ್ಲೂ ಅವರು ನಿಮ್ಮನ್ನು ಬಿಟ್ಟುಕೊಡದಂತಹ ಬಂಧವನ್ನು ಬೆಳೆಸಿಕೊಳ್ಳಿ.
ಇದನ್ನೂ ಓದಿ: Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್!