Site icon Vistara News

ಮಕ್ಕಳ ಕಥೆ | ಪಾಯಸ ತಿಂದ ಅಜೇಯ

ಮಕ್ಕಳ ಕಥೆ
https://vistaranews.com/wp-content/uploads/2022/12/KheerStory.mp3

ಬಾಲ್ಯದ ಗೆಳೆಯನ ಮನೆಗೆ ಹೊರಟಿದ್ದ ಅಜೇಯ. ಸುಮಾರು ದೂರದ ಹಳ್ಳಿಯ ದಾರಿ, ನಾಲ್ಕಾರು ತಾಸುಗಳ ಪ್ರಯಾಣ. ಬಿಸಿಲಿರುವಾಗಲೇ ಆತ ಹೊರಟಿದ್ದರೂ, ಹೋಗಿ ತಲುಪುವಷ್ಟರಲ್ಲಿ ಕತ್ತಲಾಗಿತ್ತು. ಪ್ರಯಾಣದಿಂದ ಅಜೇಯನಿಗೆ ದಣಿವು, ಹಸಿವು- ಎರಡೂ ಆಗಿದ್ದವು. ಹಲವು ಕಾಲದ ನಂತರ ಭೇಟಿ ಮಾಡುತ್ತಿದ್ದ ಈ ಗೆಳೆಯನೊಂದಿಗೆ ಅದೂ-ಇದೂ ಮಾತಾಡುವಷ್ಟರಲ್ಲಿ ಒಳಗಿನಿಂದ ಊಟಕ್ಕೆ ಕರೆ ಬಂದಿತ್ತು. ಅಜೇಯನಿಗಂತೂ ಬಕಾಸುರನಂತೆ ತಿನ್ನುವಷ್ಟು ಹಸಿವಾಗಿತ್ತು. ಆದರೆ ಗೆಳೆಯನ ಮನೆಯಲ್ಲಿ ಹಾಗೆಲ್ಲ ಮಾಡಿದ್ರೆ ಹೇಗೆ ಅಂಥ ದಾಕ್ಷಿಣ್ಯದಿಂದಲೇ ಊಟಕ್ಕೆ ಕುಳಿತ.

ಮಾತಿನ ನಡುವೆಯೇ ಊಟ ಸಾಗುತ್ತಿತ್ತು. ಮಾಡಿದ್ದ ಅಡುಗೆಯನ್ನೆಲ್ಲಾ ಉಂಡು-ತೇಗುವಷ್ಟು ಹಸಿವೆ ಅಜೇಯನಿಗೆ ಆಗಿದ್ದರೂ, ತುತ್ತಿಗೆ ಮುತ್ತಿಡುವಂತೆ ಸ್ವಲ್ಪಸ್ವಲ್ಪವೇ ಊಟ ಮಾಡ್ತಾ ಇದ್ದ ಆತ. ಇವನಿಗೆ ಇಷ್ಟೊಂದು ದಾಕ್ಷಿಣ್ಯವಿದೆ ಎಂಬುದು ಗೆಳೆಯನಿಗೆ ಗೊತ್ತಾಗಲೇ ಇಲ್ಲ. ಗೆಳೆಯನ ಪತ್ನಿ ವಿಶೇಷವಾದ ಪಾಯಸವೊಂದನ್ನು ಮಾಡಿದ್ದಳು. ಅದನ್ನು ಬಡಿಸುವುದಕ್ಕೆಂದು ತಂದಾಗ, ಅದೇನೆಂದು ನೋಡದ ಅಜೇಯ, ʻಬೇಡ ಬೇಡʼ ಎಂದು ಕೈ ಅಡ್ಡ ಮಾಡಿದ. ʻಸ್ವಲ್ಪ ಹಾಕಿಸಿಕೊಳ್ಳೊ, ಚನ್ನಾಗಿರತ್ತೆʼ ಎಂದು ಗೆಳೆಯ ಒತ್ತಾಯ ಮಾಡಿದ್ದಕ್ಕೆ ಚೂರೇಚೂರು- ಒಂದು ಚಮಚದಷ್ಟು ಹಾಕಿಸಿಕೊಂಡ. ಅದನ್ನು ನೆಕ್ಕಿ ನೋಡಿದಾಗ, ಅದೊಂದು ಬಗೆಯ ಲೋಕೋತ್ತರ ರುಚಿಯ ಪಾಯಸ ಎಂಬುದು ಆತನ ಅರಿವಿಗೆ ಬಂತು. ʻಛೇ! ಎಂಥಾ ಅಚಾತುರ್ಯವಾಗೋಯ್ತು! ಇಂಥಾ ರುಚಿಯಾದ ಪಾಯಸವನ್ನು ಅನ್ಯಾಯವಾಗಿ ಬೇಡ ಅಂದುಬಿಟ್ಟನಲ್ಲʼ ಎಂದು ಪೇಚಾಡಿಕೊಂಡ ಅಜೇಯ. ಈಗೇನು ಮಾಡುವುದು? ಬೇಡ ಅಂದಿದ್ದಾಗಿದೆ. ಹೋಗಲಿ ಅಂದರೆ ಊಟವನ್ನೂ ಹೊಟ್ಟೆ ತುಂಬುವಷ್ಟು ಮಾಡಲಿಲ್ಲ. ಅಂತೂ ಊಟದ ಶಾಸ್ತ್ರ ಮುಗಿಸಿದ್ದಾಯ್ತು.

ರಾತ್ರಿ ಮಲಗಿದರೂ ಅಜೇಯನಿಗೆ ನಿದ್ದೆಯಿಲ್ಲ. ತಿನ್ನದೇ ಬಿಟ್ಟ ಪಾಯಸ ನೆನೆ-ನೆನೆದು ಬಾಯಲ್ಲಿ ನೀರು ಬರುತ್ತಿತ್ತು. ಇದರಿಂದ ಹಸಿವೆಯೂ ಹೆಚ್ಚಿತು. ಹಾಸಿಗೆಯಲ್ಲಿ ಹೇಗೇ ಹೊರಳಾಡಿದರೂ ಅವನಿಗೆ ಸಮಾಧಾನವಿಲ್ಲ. ಏನಾದರಾಗಲಿ ಅಂತ, ಮೆಲ್ಲಗೆ ಹೋಗಿ ತನ್ನ ಗೆಳೆಯನನ್ನು ಎಬ್ಬಿಸಿದ. ʻನೋಡೊ, ಈಗ ಹಸಿವಾಗ್ತಿದೆ. ಪಾಯಸ ತಿನ್ನಬೇಕು. ಏನೋ ಮಾಡ್ಲಿ?ʼ ಅಂತ ಕೇಳಿದ ಗೆಳೆಯನನ್ನು. ನಗುತ್ತಾ ಅವನೊಂದಿಗೆ ಕತ್ತಲೆಯಲ್ಲೇ ಅಡುಗೆ ಮನೆಗೆ ತೆರಳಿದ ಗೆಳೆಯ. ನಿಜ ಹೇಳುವುದಾದರೆ, ಪಾಯಸವನ್ನು ಎಲ್ಲಿ ಇಟ್ಟಿದ್ದಾರೆ ಅನ್ನೋದು ಗೆಳೆಯನಿಗೂ ಗೊತ್ತಿರಲಿಲ್ಲ. ಕತ್ತಲೆಯಲ್ಲೇ ಅದನ್ನು ಹುಡುಕುವ ಕಾರ್ಯಕ್ಕೆ ಕೈ ಹಾಕಿದರು. ಪಾಯಸದ ಪಾತ್ರೆಯೂ ಸಿಕ್ಕಿತು. ಇಬ್ಬರೂ ಹೊಟ್ಟೆ ತುಂಬಾ ತಿಂದರು. ಖುಷಿಯಿಂದ ಅಡುಗೆ ಮನೆಯಿಂದ ಹೊರಗೆ ಬರುವ ಭರದಲ್ಲಿ, ನೀರು ತುಂಬಿಟ್ಟಿದ್ದ ದೊಡ್ಡ ತಾಮ್ರದ ಹಂಡೆಯನ್ನು ಒದ್ದು ಕೆಳಗುರುಳಿಸಿದರು. ಕತ್ತಲೆಯಲ್ಲಿ ಇಬ್ಬರಿಗೂ ಕಾಣಲಿಲ್ಲ. ನಿಶ್ಶಬ್ದದ ರಾತ್ರಿಯಲ್ಲಿ ಉಂಟಾದ ಈ ಗಲಾಟೆಗೆ ಮನೆಮಂದಿಗೆಲ್ಲಾ ಎಚ್ಚರವಾಯಿತು.

ಅಷ್ಟೆ! ಮನೆಯ ಪಡಸಾಲೆ, ಹಜಾರ, ಮಾಳಿಗೆ- ಹೀಗೆ ಮೂಲೆ ಮೂಲೆಯಲ್ಲಿ ಮಲಗಿದ್ದವರೆಲ್ಲಾ ಎದ್ದುಬಂದರು. ಕೆಲವರು ಕೈಯಲ್ಲಿ ದೊಣ್ಣೆಯನ್ನೂ ತಂದರು. ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳುವುದೆಂದು ತಿಳಿಯದೆ ಅಜೇಯನನ್ನು ದನಗಳ ಹಟ್ಟಿಯಲ್ಲಿ ಬಚ್ಚಿಟ್ಟ ಆತನ ಗೆಳೆಯ. ಆ ಹಟ್ಟಿಯಲ್ಲಿ ಒಂದೆರಡು ಪುಟ್ಟ ಕರುಗಳೂ ಇದ್ದವು. ಆ ಕರುಗಳನ್ನು ಕದಿಯಲೆಂದು ಇಬ್ಬರು ಕಳ್ಳರು ಹೊಂಚು ಹಾಕುತ್ತಿದ್ದರು. ಎಲ್ಲದಕ್ಕಿಂತ ಪುಟಾಣಿ ಕರುವೊಂದನ್ನು ಅವರು ದೊಡ್ಡದೊಂದು ಚೀಲಕ್ಕೆ ತುಂಬಿಸಿಟ್ಟಿದ್ದರು. ಅಷ್ಟರಲ್ಲಿ ಮನೆಯೊಳಗೆ ತಾಮ್ರದ ಹಂಡೆ ಬಿದ್ದ ಗಲಾಟೆ ಪ್ರಾರಂಭವಾಗಿತ್ತು. ಅಜೇಯನನ್ನು ದನದ ಹಟ್ಟಿಗೆ ಕರೆತಂದ ಗೆಳೆಯ ಅವನನ್ನು ದೊಡ್ಡದೊಂದು ಚೀಲದೊಳಗೆ ಬಚ್ಚಿಟ್ಟಿದ್ದ. ಮನೆಯೊಳಗೆಲ್ಲಾ ಹುಡುಕಿದರೂ, ಹಂಡೆ ಬಿದ್ದಿದ್ದೇಕೆ ಎಂಬುದು ಮನೆಮಂದಿಗೆ ತಿಳಿಯಲಿಲ್ಲ. ತಿಳಿದಿದ್ದ ಗೆಳೆಯ ಬಾಯಿ ಬಿಡಲಿಲ್ಲ. ಮತ್ತೆ ಎಲ್ಲರೂ ದೀಪವಾರಿಸಿ ಮಲಗಿದರು. ಅಲ್ಲಿಯವರೆಗೆ ಸುಮ್ಮನೆ ಕಾಯುತ್ತಿದ್ದ ಕಳ್ಳರು, ಮನೆಯೆಲ್ಲಾ ನಿಶ್ಶಬ್ದವಾದ ಮೇಲೆ ಚೀಲವೊಂದನ್ನು ಹೊತ್ತುಕೊಂಡು ಹೋದರು. ವಿಷಯ ಏನು ಅಂದರೆ, ಕರುವಿದ್ದ ಚೀಲ ಹಟ್ಟಿಯಲ್ಲೇ ಉಳಿಯಿತು. ಅಜೇಯನನ್ನು ತುಂಬಿದ್ದ ಚೀಲ ಕಳ್ಳರ ಜೊತೆಗೆ ಹೋಯಿತು!

ಯಾರದ್ದೋ ಮನೆಯಿಂದ ಒಂದಿಷ್ಟು ಕದ್ದು ಪರಾರಿಯಾಗುತ್ತಿದ್ದ ಕಳ್ಳರಿಗೆ, ದಾರಿಯಲ್ಲಿ ಸಿಕ್ಕಿದ್ದು ಅಜೇಯನ ಗೆಳೆಯನ ಮನೆಯಾಗಿತ್ತು. ಮನೆಯೊಳಗೆ ತುಂಬಾ ಜನರಿದ್ದಿದ್ದರಿಂದ, ಹಟ್ಟಿಯ ಕರುವನ್ನೇ ಕದಿಯಲು ಕಳ್ಳರು ತೀರ್ಮಾನಿಸಿದ್ದರು. ಆದರೀಗ ಅದೂ ಸಹ ಎಡವಟ್ಟಾಗಿತ್ತು. ಅಲ್ಲಿಯವರೆಗೂ ಹೇಗೂ ಉಸಿರು ಬಿಗಿ ಹಿಡಿದುಕೊಂಡಿದ್ದ ಅಜೇಯನಿಗೆ ತನ್ನನ್ನು ಹೊತ್ತುಕೊಂಡು ಹೋಗಲು ಪ್ರಾರಂಭಿಸಿದ ಕೂಡಲೇ ಜೀವವೇ ಬಾಯಿಗೆ ಬಂದ ಹಾಗಾಯಿತು. ಹೆದರಿಕೆಯಿಂದ ನಾನಾರೀತಿಯ ವಿಕಾರ ಧ್ವನಿಯಲ್ಲಿ ಆತ ಅರಚಲು ಪ್ರಾರಂಭಿಸಿದ. ತಾವು ಹೊತ್ತುಕೊಂಡು ಹೋಗುತ್ತಿದ್ದ ಮೂಟೆಯಲ್ಲಿ ಕರುವೊಂದು ಇದೆ ಎಂದೇ ಭಾವಿಸಿದ್ದ ಕಳ್ಳರಿಗೆ, ಒಳಗಿನಿಂದ ಬಂದ ‍ಧ್ವನಿ ಕೇಳಿ ದಿಗಿಲಾಯಿತು. ಮುಟ್ಟಿ ನೋಡಿದರೆ, ಕರುವಿನಂತೆ ಕಾಲು-ಬಾಲ ಯಾವುದೂ ಸಿಗಲಿಲ್ಲ ಮೂಟೆಯಲ್ಲಿ. ಮೆಲ್ಲಗೆ ಮೂಟೆಯ ಬಾಯಿ ಬಿಚ್ಚಿದರೆ… ಒಳಗೊಂದು ಮನುಷ್ಯಾಕೃತಿಯನ್ನು ಕಂಡು ಇದಾವುದೋ ಭೂತವೇ ಇರಬೇಕು ಎಂದು ಬೆದರಿದ ಅವರು, ಮೂಟೆಯನ್ನು ಮತ್ತು ಕದ್ದ ಮಾಲನ್ನೂ ಅಲ್ಲೇ ಬಿಟ್ಟು ಓಡಿಹೋದರು. ಪಾಯಸ ತಿನ್ನುವ ಆಸೆ ಎಂಬುದು ಅಜೇಯನಿಗೆ ಸಾಕಷ್ಟು ಹಣ-ಒಡವೆಗಳನ್ನು ಸಂಪಾದಿಸಿಕೊಟ್ಟಿತ್ತು. ಅವೆಲ್ಲವನ್ನೂ ಹೊತ್ತು ಗೆಳೆಯನ ಮನೆಗೆ ಹೋದ ಅಜೇಯನ ಕಥೆ ಕೇಳಿದ ಗೆಳೆಯನ ಮನೆಯವರು ಹುಟ್ಟೆ ಹುಣ್ಣಾಗುವಂತೆ ನಕ್ಕರು. ಮಾತ್ರವಲ್ಲ, ಅಂದು ಅವನಿಗಾಗಿ ದೊಡ್ಡ ಔತಣವನ್ನೇ ಏರ್ಪಡಿಸಿದರು.

ಇದನ್ನೂ ಓದಿ |ಮಕ್ಕಳ ಕಥೆ | ರಾಮಣ್ಣನ ಸಂದೂಕ

Exit mobile version