ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಿಗಿಂತ ಹೆಚ್ಚು ಬಳಕೆಯಾಗುತ್ತಿರುವ ಭಾಷೆ ಇಂಗ್ಲಿಷ್.
ಸಾಫ್ಟ್ ವೇರ್, ಮಲ್ಟಿ ನ್ಯಾಷನಲ್ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ ಶಾಪ್‌ಗಳಲ್ಲಿ ಕೆಲಸ ಮಾಡಬೇಕೆಂದು ಕೊಂಡರೂ ನಿಮಗೆ ಇಂಗ್ಲಿಷ್ ಭಾಷೆ ಬರುತ್ತಾ ಎಂದು ಕೇಳುತ್ತಾರೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇತ್ತೀಚಿನ ದಿನಗಳಲ್ಲಿ ಕೆಲಸ ಹುಡುಕೋದು ಒಂದು ದೊಡ್ಡ ತಲೆನೋವಾಗಿ ಬಿಟ್ಟಿದೆ. ಹಾಗಾಗಿ ಹೆಚ್ಚಿನ ತಂದೆತಾಯಿಗಳು ತಮ್ಮ ಮಕ್ಕಳನ್ನು ಸಾಲಸೂಲ ಮಾಡಿಯಾದರೂ ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗೆ ಸೇರಿಸುತ್ತಿದ್ದಾರೆ. ಭಾಷೆ ಗೊತ್ತಿಲ್ಲದಾಗ ಕಾಡುವ ಕೀಳರಿಮೆ ತುಂಬಾ ದೊಡ್ಡದು. ಇಂತಹ ಕೀಳರಿಮೆಯನ್ನು ಗೆದ್ದು ತಾವು ಇಂಗ್ಲಿಷ್ ಭಾಷೆಯನ್ನು ಹೇಗೆ ಕಲಿತೆ ಎಂಬ ಟಿಪ್ಸ್ ಅನ್ನು ಎಸಿಪಿ ಚಂದನ್ ಅವರು ಹೇಳಿದ್ದಾರೆ. ಅಂದ ಹಾಗೆ ಈ ಎಸಿಪಿ ಚಂದನ್ ಯಾರು ಗೊತ್ತೆ? ಕೊಲೆ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಟ ದರ್ಶನ್ ಮತ್ತು ಆತನ ಗ್ಯಾಂಗನ್ನು ಸೆರೆ ಹಿಡಿದು ಪೊಲೀಸ್ ಠಾಣೆಯಲ್ಲಿ ಕೂರಿಸಿದವರು!
ಸಾಮಾನ್ಯವಾಗಿ ಕೆಲವು ಜನರಿಗೆ ಇಂಗ್ಲಿಷ್ ಗೊತ್ತಿರುತ್ತದೆ. ಆದರೆ ಅದನ್ನು ಮಾತನಾಡಲು ಮುಜುಗರ. ಮಾತನಾಡುವಾಗ ಎಲ್ಲಿ ತಪ್ಪಾಗಿ ನಗೆಪಾಟಲಿಗೀಡಾಗುತ್ತೇವೆ ಎಂಬ ನಾಚಿಕೆಯಿಂದಲೇ ಸುಮ್ಮನಾಗುತ್ತಾರೆ. ನಮ್ಮಲ್ಲಿ ಹೆಚ್ಚಿನ ಜನರದ್ದು ಇದೇ ಮನಸ್ಥಿತಿಯಾಗಿದೆ. ಆದರೆ ಇದನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಎಸಿಪಿ ಚಂದನ್ ಸಾಕ್ಷಿಯಾಗಿದ್ದಾರೆ. ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ ಎಸಿಪಿ ಚಂದನ್ ಅವರಿಗೆ ಮೊದಲು ಇಂಗ್ಲಿಷ್ ಭಾಷೆ ಮಾತನಾಡಲು ಬರುತ್ತಿರಲಿಲ್ಲವಂತೆ.
ಇಂಗ್ಲಿಷ್ ಗೊತ್ತಿಲ್ಲದೇ ಪರಿತಪಿಸಿದ ದಿನಗಳು!
ಹೌದು ಈ ಬಗ್ಗೆ ಅವರು ಕಾಲೇಜಿನ ಸಮಾರಂಭವೊಂದರಲ್ಲಿ ಮಾತನಾಡುವಾಗ ಅನುಭವ ಹಂಚಿಕೊಂಡಿದ್ದಾರೆ. ಅವರು ಈ ಸಮಾರಂಭದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಆದರೆ ಇದಕ್ಕೂ ಮೊದಲು ಅವರಿಗೆ ಇಂಗ್ಲಿಷ್ ಭಾಷೆ ಮಾತನಾಡಲು ಸರಿಯಾಗಿ ಬರುತ್ತಿರಲಿಲ್ಲವಂತೆ. ಅವರು ಡಿಪ್ಲೋಮಾದಿಂದ 3ನೇ ಸೆಮಿಸ್ಟರ್‌ಗೆ ಇಂಜಿನಿಯರಿಂಗ್ ಓದಲು ಹೋಗಿದ್ದಾಗ ಅಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಮಾತ್ರ ಮಾತನಾಡಿಸುತ್ತಿದ್ದರಂತೆ. ಕ್ಲಾಸ್ ವೇಳೆ ಇಂಗ್ಲಿಷ್ ಬರುವುದಿಲ್ಲವೆಂದು ಲೆಕ್ಚರ್ ಮುಂದೆ ಕುಳಿತುಕೊಳ್ಳಲು ಹೇಳುತ್ತಿದ್ದರಂತೆ. ಅಲ್ಲಿ ಅಪ್ಪಿತಪ್ಪಿ ಒಂದು ಶಬ್ದ ಕನ್ನಡ ಮಾತನಾಡಿದರೆ ಎಲ್ಲರೂ ನಗುತಿದ್ದರಂತೆ.
ಸಬ್ ಟೈಟಲ್ ಸಿನಿಮಾ
ಹಾಗಾಗಿ ಅವರು ಇಂಗ್ಲಿಷ್ ಕಲಿತುಕೊಳ್ಳಲೇಬೇಕೆಂದು ಪಣತೊಟ್ಟರಂತೆ. ಆಗ ಅವರ ಸ್ನೇಹಿತರು ಇಂಗ್ಲಿಷ್ ಪುಸ್ತಕ, ಕಾದಂಬರಿಗಳನ್ನು ಓದಲು ಹೇಳಿದ್ರಂತೆ. ಆದರೆ ಅದರಲ್ಲಿರುವ ಶಬ್ದ ಅವರಿಗೆ ಅರ್ಥವಾಗದೇ ಇದ್ದಾಗ ಡಿಕ್ಷನರಿಯಲ್ಲಿ ಹುಡುಕುತ್ತಿದ್ದರಂತೆ. ಇದು ಅವರಿಗೆ ತುಂಬಾ ಕಿರಿಕಿರಿಯಾಗುತ್ತಿತ್ತು ಮತ್ತು ಓದಿದ್ದು ಅರ್ಥವೂ ಆಗುತ್ತಿರಲಿಲ್ಲವಂತೆ.
ನಂತರ ಅವರಿಗೆ ಒಬ್ಬ ಸೀನಿಯರ್ ಫ್ರೆಂಡ್ ಸಿಕ್ಕಿ ಆತ ಇಂಗ್ಲಿಷ್ ಭಾಷೆ ಕಲಿಯುವುದಕ್ಕೆ ಸುಲಭವಾದ ಸಲಹೆ ನೀಡಿದನಂತೆ. ಚಂದನ್ ಅವರಿಗೆ ಆತ ಹಾರ್ಡ್ ಡಿಸ್ಕ್ ತೆಗೆದುಕೊಂಡು ಬರಲು ಹೇಳಿ ಅದರಲ್ಲಿ ಸಬ್ ಟೈಟಲ್ ಇರುವ 100 ಇಂಗ್ಲಿಷ್ ಸಿನಿಮಾಗಳನ್ನು ನೀಡಿದನಂತೆ. ಅದರಲ್ಲಿ ಎಲ್ಲಾ ಮೂವಿ ಇಂಟರೆಸ್ಟಿಂಗ್ ಆಗಿತ್ತಂತೆ. ಅದನ್ನು ನೋಡುತ್ತಾ ಮೂವಿ ಕೆಳಗಡೆ ಬರುವಂತಹ ಸಬ್ ಟೈಟಲ್ ಓದಲು ಶುರು ಮಾಡಿದರು. ಇದರಿಂದ ಮೂವಿ ಮುಗಿಯುವುದರೊಳಗೆ ಅವರಿಗೆ 10-20 ಇಂಗ್ಲಿಷ್ ಪದ ಅರ್ಥವಾಗುತ್ತಿತ್ತಂತೆ ಮತ್ತು ಮಾತನಾಡಲು ಇಂಗ್ಲಿಷ್ ಪದ ಬಳಸುವುದು ಹೇಗೆ ಎಂಬುದು ತಿಳಿಯುತ್ತಿತ್ತಂತೆ. ಆ ಮೂಲಕ ಅವರು ಇಂಗ್ಲಿಷ್ ಮಾತನಾಡಲು ಕಲಿತು ಬಿಟ್ಟರು!
ಆದರೆ ಅವರಿಗೆ ಇಂಗ್ಲಿಷ್ ಗ್ರಾಮರ್ ಬಳಸಿ ಪದ ಬರೆಯಲು ಈಗಲೂ ಕಷ್ಟವಾಗುತ್ತದೆಯಂತೆ. ಆದರೂ ಮಾತನಾಡಲು ಬೇಕಾಗುವಷ್ಟು ಇಂಗ್ಲಿಷ್ ಕಲಿತೆ ಎಂದು ಹೇಳಿದ್ದಾರೆ. ಆದರೆ ನಮಗೆ ಯಾವತ್ತೂ ಇಂಗ್ಲಿಷ್ ಬರುವುದಿಲ್ಲವೆಂದು ಯಾರು ಬೇಸರ ಮಾಡಿಕೊಳ್ಳಬೇಡಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಯಾಕೆಂದರೆ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದರೆ ಅದರಲ್ಲಿ ಇಂಗ್ಲಿಷ್ ಚೆನ್ನಾಗಿಲ್ಲ ಎಂದರೂ ಇಂಗ್ಲಿಷ್ ನೋಡಿ ಮಾರ್ಕ್ ಕೊಡುವುದಿಲ್ಲ, ಬದಲಾಗಿ ನೀವು ಬರೆದ ವಾಕ್ಯದ ಅರ್ಥ ನೋಡಿ ಮಾರ್ಕ್ಸ್ ಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!
ನಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಯಾವುದೇ ವಿದೇಶಿಗರು ನಮ್ಮನ್ನು ತಮಾಷೆ ಮಾಡುವುದಿಲ್ಲ. ಆದರೆ ಇಂಗ್ಲಿಷ್‌ನಲ್ಲಿ ಮಾತನಾಡುವ ನಮ್ಮ ಭಾರತೀಯರೇ ನಮ್ಮನ್ನು ನೋಡಿ ಗೇಲಿ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಮಗೆ ಇಂಗ್ಲಿಷ್ ಬರುವುದಿಲ್ಲವೆಂದು ತಲೆಕೆಡಿಸಿಕೊಂಡು ಕುಳಿತುಕೊಂಡಿರುವವರು ಒಮ್ಮೆ ಎಸಿಪಿ ಚಂದನ್ ಅವರ ಸ್ಫೂರ್ತಿದಾಯಕ ಮಾತನ್ನು ಕೇಳಬೇಕು. ಚಂದನ್ ಯುವ ಜನತೆಗೆ ನಿಜಕ್ಕೂ ಸ್ಫೂರ್ತಿ.