Site icon Vistara News

Amarnath Tragedy: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

Amarnath Tragedy

ಶ್ರೀನಗರ : ಪ್ರತಿವರ್ಷ ಅಮರನಾಥ ಯಾತ್ರೆಗೆ (Amarnath Tragedy) ಹಲವಾರು ಮಂದಿ ಯಾತ್ರಾರ್ಥಿಗಳು ಪ್ರಯಾಣ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅಮರನಾಥ ಯಾತ್ರೆಗೆ ತೆರಳಿದವರಿಗೆ ದುರಂತವೊಂದು ಎದುರಾಗಿದೆ. ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದ ಕೆಲವು ಯಾತ್ರಾರ್ಥಿಗಳು ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಚಲಿಸುತ್ತಿರುವ ಬಸ್ಸಿನಿಂದ ಜಿಗಿದು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೊ ನೋಡಿ ಶಾಕ್ ಆಗಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಪಂಜಾಬ್‌ನ ಹೋಶಿಯಾರ್ಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಹದಿನೇಳು ಮಂದಿ ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಟ್ಟು 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ರಸ್ತೆ ಮಧ್ಯದಲ್ಲಿ ಬಸ್‌ನ ಬ್ರೇಕ್ ಫೇಲ್ ಆಗಿದೆ. ಇದರ ಪರಿಣಾಮ ಬನಿಹಾಲ್ ಬಳಿಯ ನಾಚ್ಲಾನಾ ಬಳಿ ಚಾಲಕನಿಗೆ ಬಸ್ ಅನ್ನು ನಿಯಂತ್ರಿಸಲು ಆಗಲಿಲ್ಲ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಗೊಂಡು ತಮ್ಮ ಜೀವ ಉಳಿಸಿಕೊಳ್ಳಲು ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಹಲವಾರು ಪ್ರಯಾಣಿಕರು ಬಸ್ಸಿನಿಂದ ಜಿಗಿದ ಗಾಯಗೊಂಡಿದ್ದಾರೆ.

ವಿಡಿಯೊದಲ್ಲೊ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಪ್ರಯಾಣಿಕರು ಒಬ್ಬರಾಗಿಯೇ ಜಿಗಿದು ಕೆಳಗೆ ಬೀಳುತ್ತಿದ್ದಾರೆ. ಹಾಗೇ ಬಿದ್ದ ಪ್ರಯಾಣಿಕರಲ್ಲಿ ಕೆಲವರು ತಮ್ಮವರನ್ನು ಕಾಪಾಡಲು ಬಸ್ಸಿನ ಹಿಂದೆ ಓಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸೇನೆಯ ಜೊತೆಗೆ ಬಸ್ ಇದ್ದ ಕಡೆ ಬಂದು ತ್ವರಿತ ಕ್ರಮ ತೆಗೆದುಕೊಂಡಿದ್ದಾರೆ. ಸೈನಿಕರು ಬಸ್ ಅನ್ನು ನಿಲ್ಲಿಸಲು ಮತ್ತು ಹತ್ತಿರದ ಹೊಳೆಗೆ ಹೋಗದಂತೆ ತಡೆಯಲು ಕಲ್ಲುಗಳನ್ನು ಬಸ್‌ ನ ಚಕ್ರದ ಕೆಳಗೆ ಇಟ್ಟಿದ್ದಾರೆ. ಇದರಿಂದ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸೇನೆಯ ತಂಡಗಳು, ಆಂಬ್ಯುಲೆನ್ಸ್ ನೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ವೈದ್ಯಕೀಯ ನೆರವು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.

Amarnath Tragedy

ಇದನ್ನೂ ಓದಿ: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

ಈ ಹಿಂದೆ ಈ ವರ್ಷದ ಜೂನ್ ತಿಂಗಳಿನಲ್ಲಿ ಭಯೋತ್ಪಾದಕರು ಶಿವಖೋರಿ ದೇವಸ್ಥಾನದಿಂದ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹಿಂದಿರುಗುತ್ತಿದ್ದ ಪ್ರಯಾಣಿಕರಿದ್ದ ಬಸ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭಯೋತ್ಪಾದಕರ ಗುಂಡಿನ ದಾಳಿಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತಕ್ಕೀಡಾಗಿ ಕಂದಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದರು.

Exit mobile version