ಅಯೋಧ್ಯೆ ರಾಮಮಂದಿರ (Ayodhya Temple) ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಹಾಗಾಗಿ ರಾಮಮಂದಿರ ಉದ್ಘಾಟನೆಯಾದ ಬೆನ್ನಿಗೇ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ರಾಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಂದಿರ ಉದ್ಘಾಟನೆಯಾಗಿ ಈಗಾಗಲೇ ಆರು ತಿಂಗಳು ಕಳೆದಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಿದೆ.
ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿದೆ. ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬರುವ ವಿಶೇಷ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ. ಇದು ಪ್ರಯಾಣಿಕರು ಅಯೋಧ್ಯೆಗೆ ಬರುವ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಸೂಚಿಸುತ್ತದೆ.
ಈಗಾಗಲೇ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಕಡಿಮೆ ಬೇಡಿಕೆಯಿಂದಾಗಿ ಹೈದರಾಬಾದ್, ಬೆಂಗಳೂರು ಮತ್ತು ಪಾಟ್ನಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ನಿಲ್ಲಿಸಿದೆ. ಸೇವೆ ಪ್ರಾರಂಭವಾದ ಕೇವಲ ಎರಡು ತಿಂಗಳ ನಂತರ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 2024ರಲ್ಲಿ ಸ್ಪೈಸ್ ಜೆಟ್ ಹೈದರಾಬಾದ್‌ನಿಂದ ಅಯೋಧ್ಯೆಗೆ ವಿಮಾನವನ್ನು ಪ್ರಾರಂಭಿಸಿದ್ದು, ವಾರಕ್ಕೆ ಮೂರು ಬಾರಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ ವಿಮಾನಯಾನವನ್ನು ನಿಲ್ಲಿಸಲಾಗಿದೆ. ಆದರೆ ಮಳೆಗಾಲ ಮುಗಿದ ನಂತರ ಮತ್ತೆ ಪ್ರಯಾಣಿಕರು ಹೆಚ್ಚಾಗುವ ನಿರೀಕ್ಷೆ ಇದೆ ಎಂಬ ನಿರೀಕ್ಷೆ ಇದೆ. ಅಯೋಧ್ಯೆಗೆ ದಕ್ಷಿಣ ಭಾರತದವರು ಹೆಚ್ಚಾಗಿ ಬರುತ್ತಿದ್ದರು. ಅವರೀಗ ಕೃಷಿ ಕಾರ್ಯಗಳಲ್ಲಿ ಮುಳುಗಿದ್ದಾರೆ. ಹಾಗಾಗಿ ಕೃಷಿ ಚಟುವಟಿಕೆ ಮುಗಿದ ಬಳಿಕ ಭಕ್ತರ ಸಂಖ್ಯೆ ಮತ್ತೆ ಏರುವ ನಿರೀಕ್ಷೆ ಇದೆ.
ಭಾರತೀಯ ರೈಲ್ವೆ ಕೂಡ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಡಿಮೆ ಮಾಡಿದೆ. ಇದರ ಹೊರತಾಗಿ ಪ್ರತಿದಿನ 32ರಿಂದ 35 ರೈಲುಗಳು ಅಯೋಧ್ಯಾ ಧಾಮ್ ಮತ್ತು ಅಯೋಧ್ಯಾ ಕ್ಯಾಂಟ್ ನಿಲ್ದಾಣಗಳಿಗೆ ಆಗಮಿಸುತ್ತಲೇ ಇರುತ್ತವೆ. ರೈಲುಗಳು ನಿತ್ಯ ಸುಮಾರು 28,000 ಪ್ರಯಾಣಿಕರನ್ನು ಹೊತ್ತು ಬರುತ್ತವೆ ಎನ್ನಲಾಗಿದೆ. ಮೇ 15ರವರೆಗೆ ಅಯೋಧ್ಯೆಗೆ ಹೋಗಲು ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ನಂತರ ಕಡಿಮೆಯಾಗಿದೆ. ಆದರೂ ಅಯೋಧ್ಯೆಗೆ ತೆರಳುವ ಎಲ್ಲಾ ರೈಲುಗಳು ತುಂಬಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದೇರೀತಿ ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಸ್‌ಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಪ್ರಸ್ತುತ 396 ರಸ್ತೆ ಮಾರ್ಗದಲ್ಲಿ ಬಸ್‌ಗಳು ಅಯೋಧ್ಯೆಗೆ ಆಗಮಿಸುತ್ತಿವೆ. ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಒಂದು ಬಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಮತ್ತೊಂದು ರೀಲ್ ಕ್ರೇಜ್; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್ ಡ್ಯಾನ್ಸ್!
ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು. ಸಾಕಷ್ಟು ಭಕ್ತರು ಜನದಟ್ಟಣೆ ಕಡಿಮೆ ಆಗಲಿ ಎನ್ನುವುದನ್ನೇ ಕಾಯುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಅಯೋಧ್ಯೆಗೆ ಭಕ್ತರ ಸಂಖ್ಯೆ ಏರಲಿದೆ ಎಂಬ ನಿರೀಕ್ಷೆಯನ್ನು ಸ್ಥಳೀಯ ವ್ಯಾಪಾರಸ್ಥರು ಹೊಂದಿದ್ದಾರೆ.