ಕೇರಳ : ಸಾವು ಯಾರಿಗೆ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆಟವಾಡುತ್ತಿದ್ದ ಮಗು (Baby Death) ವೊಂದು ಟಿವಿ ಸ್ಟ್ಯಾಂಡ್ ಮುಟ್ಟಲು ಹೋಗಿ ಜೀವ ಕಳೆದುಕೊಂಡ ಘಟನೆ ಕೇರಳದ ಕೊಚ್ಚಿ ಬಳಿಯ ಮುವಾಟ್ಟುಪುಜಾದಲ್ಲಿ ನಡೆದಿದೆ.
ಅಬ್ದುಲ್ ಸಮದ್ ಎಂಬ ಒಂದೂವರೆ ವರ್ಷದ ಕಂದಮ್ಮ ಇಂತಹ ಘೋರ ಸಾವಿಗೆ ತುತ್ತಾಗಿದ್ದಾನೆ. ಈತ ಪೈಪ್ರಾ ನಿವಾಸಿ ಅನಾಸ್ ಅವರ ಮಗ ಎಂಬುದಾಗಿ ತಿಳಿದುಬಂದಿದೆ. ಸೋಮವಾರ ರಾತ್ರಿ 9.30 ರ ಸುಮಾರಿಗೆ ಮಗು ನಡೆದುಕೊಂಡು ಹೋಗಿ ಟಿವಿ ಸೆಟ್ ಇರಿಸಲಾಗಿದ್ದ ಸ್ಟ್ಯಾಂಡ್ ಅನ್ನು ಮುಟ್ಟಿದೆ. ಆ ವೇಳೆ ಸ್ಟ್ಯಾಂಡ್ ಬ್ಯಾಲೆನ್ಸ್ ತಪ್ಪಿ ಟಿವಿ ಸಹಿತವಾಗಿ ಮಗುವಿನ ಮೈಮೇಲೆ ಬಿದ್ದಿದೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ. ತಕ್ಷಣ ಮಗುವನ್ನು ಇಲ್ಲಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಪ್ರಥಮ ಚಿಕಿತ್ಸೆ ನಡೆಸಿ ನಂತರ ಕೊಲಂಚೇರಿಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಕೊನೆಯಲ್ಲಿ ಮಗುವನ್ನು ಆಸ್ಟರ್ ಮೆಡ್ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಂಗಳವಾರ ಮುಂಜಾನೆ ಗಂಭೀರ ಗಾಯಗಳಿಂದ ಮಗು ಮೃತಪಟ್ಟಿದ್ದಾನೆ.
ಮರಣೋತ್ತರ ಪರೀಕ್ಷೆಯ ನಂತರ, ಮಗುವಿನ ದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಸಂಜೆ ಪೈಪ್ರಾ ಕೇಂದ್ರ ಜುಮಾ ಮಸೀದಿಯಲ್ಲಿ ಸಮಾಧಿ ಮಾಡಲಾಯಿತು.
ಪೊಲೀಸ್ ವರದಿಯ ಪ್ರಕಾರ, ಮಗುವಿನ ನಿವಾಸದಲ್ಲಿ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ಟಿವಿ ಸ್ಟ್ಯಾಂಡ್ ಅನ್ನು ಮಗುವು ಅಜಾಗರೂಕತೆಯಿಂದ ಮುಟ್ಟಿರಬಹುದು ಎಂದು ಊಹಿಸಲಾಗಿದೆ.
ಇದನ್ನೂ ಓದಿ: ಒಂದು ದಿನದ ಮಟ್ಟಿಗೆ ಈ ಬಾಲಕ ಐಪಿಎಸ್ ಅಧಿಕಾರಿ; ಇವನ ಕಥೆ ಕಣ್ಣೀರು ತರಿಸುವಂಥದ್ದು
ದುರಂತವೆಂದರೆ, ಸ್ಟ್ಯಾಂಡ್ ಮತ್ತು ಟೆಲಿವಿಷನ್ ಎರಡೂ ಚಿಕ್ಕ ಮಗುವಿನ ಮೇಲೆ ಬಿದ್ದು, ಮಾರಣಾಂತಿಕ ಗಾಯಗಳನ್ನು ಉಂಟುಮಾಡಿದವು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಮಗು ಮಂಗಳವಾರ ಮುಂಜಾನೆ ಗಂಭೀರ ಗಾಯಗಳಿಂದ ಜೀವ ಕಳೆದುಕೊಂಡಿತು. ಮೃತ ಶಿಶುವು ಈ ಪ್ರದೇಶದ ಪೈಪ್ರಾ ನಿವಾಸಿ ಅನಾಸ್ ಅವರ ಮಗ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.