ನವದೆಹಲಿ: ಯುವ ಜನತೆಗೆ ಬೈಕ್ ಕ್ರೇಜ್ ಸಹಜ. ಮಾರುಕಟ್ಟೆಯಲ್ಲಿ ಯಾವುದೇ ಹೊಸ ಬೈಕ್ ಬಂದರೂ ಅವರ ಕಣ್ಣು ಅದರ ಮೇಲಿರುತ್ತದೆ. ಇನ್ನು ಸಾಲ ಮಾಡಿಯಾದರೂ ಸರಿ ಒಂದು ಬೈಕ್ ತೆಗೆದುಕೊಳ್ಳಬೇಕು ಎಂಬ ಕ್ರೇಜ್ ಹುಡುಗರಿಗಿರುತ್ತದೆ. ಇಂತಹ ಬೈಕ್ ಪ್ರಿಯರಿಗೆ ಇದೀಗ ಬಜಾಜ್ (Bajaj CNG Bike) ಸಿಹಿ ಸುದ್ದಿಯೊಂದನ್ನು ನೀಡಿದೆ.
ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ಗಳ ಆವಿಷ್ಕಾರಕ್ಕೆ ಮುಂದಾಗಿದ್ದು, ಇದೀಗ ತನ್ನ ಸಿಎನ್‌ಜಿ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮುಂದಿನ ತಿಂಗಳು ಜುಲೈ 5ರಂದು ಬಜಾಜ್ ತನ್ನ ಸಿಎನ್‌ಜಿ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ.
ಈ ಬೈಕ್ ಅನ್ನು ಸದ್ಯಕ್ಕೆ ‘ಬಜಾಜ್ ಬ್ರೂಜರ್’ ಎಂದು ಕರೆಯಲಾಗುತ್ತದೆ. ಆದರೆ ಬಿಡುಗಡೆಯ ವೇಳೆ ಇದರ ಹೆಸರನ್ನು ಬದಲಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಬಜಾಜ್ ಬ್ರೂಜರ್ ವಿಶ್ವದ ಮೊದಲ ಸಿಎನ್‌ಜಿ ಮೋಟಾರ್ ಸೈಕಲ್ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ.
ಈ ಬೈಕ್ ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ ಎಂಬುದನ್ನು ಅದರ ಬ್ಲೂಪ್ರಿಂಟ್ ತೋರಿಸುತ್ತದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಈ ಬಜಾಜ್ ಬ್ರೂಜರ್ 5 – ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.
ಇದನ್ನೂ ಓದಿ: Passport Forgery Case: ಗಡ್ಡಕ್ಕೆ ಬಣ್ಣಹಚ್ಚಿ ಮುದುಕನ ವೇಷ ಧರಿಸಿ ಪ್ರಯಾಣಿಸುತ್ತಿದ್ದ 24ರ ಯುವಕ ಅರೆಸ್ಟ್!
ಬೈಕ್ ದರ ಎಷ್ಟು?:
ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಇದನ್ನು ಮುಂದಿನ ತಿಂಗಳು ಜುಲೈ 5ಕ್ಕೆ ಬಿಡುಗಡೆ ಮಾಡಲಿದ್ದಾರೆ. ಬಜಾಜ್ ಬ್ರೂಸರ್ ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯಲಿದೆ ಎನ್ನಲಾಗಿದೆ.