ಚೆನ್ನೈ: ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯವಾದುದು. ಯಾಕೆಂದರೆ ಯುವಕ-ಯುವತಿ ಮದುವೆಯ ನಂತರ ದಂಪತಿಯಾಗಿ ಹೊಸ ಜೀವನಕ್ಕೆ ಕಾಲಿಡುವ ಕ್ಷಣ. ಇನ್ನುಮುಂದೆ ಅವರು ತಮ್ಮ ಇಡೀ ಜೀವನದುದ್ದಕ್ಕೂ ಪರಸ್ಪರರು ಜೊತೆಯಾಗಿ ಸಾಗಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಮದುವೆಯನ್ನು ಆಟವಾಗಿಸಿಕೊಂಡಿದ್ದಾಳೆ. ಅವಳು ತನ್ನ ಗಂಡಂದಿರನ್ನು ಬದಲಾಯಿಸುವ ಮೂಲಕ ಅನೇಕರ ಜೀವನದ ಜೊತೆಗೆ ಆಟವಾಡಿದ್ದಾಳೆ. ಹಣ ಮಾಡುವಂತಹ ತನ್ನ ಕೆಟ್ಟ ಕಾರ್ಯಕ್ಕೆ ಮದುವೆಯನ್ನು ಸಾಧನವಾಗಿಸಿಕೊಂಡು ಅನೇಕ ಯುವಕರನ್ನು ವಂಚಿಸಿ (Cheating Case)ದ್ದಾಳೆ.
ಹೌದು. ತಮಿಳುನಾಡಿನಲ್ಲಿ ಸಂಧ್ಯಾ ಎನ್ನುವ ಯುವತಿಯೊಬ್ಬಳು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 50 ಜನರನ್ನು ಮದುವೆಯಾಗಿ ವಂಚಿಸಿ ಅವರಿಂದ ಹಣ, ಚಿನ್ನ ದೋಚುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತಿಳಿದು ಪೊಲೀಸರು ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಮಿಳುನಾಡಿನಾದ್ಯಂತ ಸಂಚಲನ ಸೃಷ್ಟಿಸಿದೆ.
ತಮಿಳುನಾಡಿನ ತಿರುವರೂರಿನ 35 ವರ್ಷದ ವ್ಯಕ್ತಿಯೊಬ್ಬರು ಮದುವೆಯಾಗದ ಕಾರಣ ವಧುವನ್ನು ಹುಡುಕುತ್ತಿದ್ದರು. ‘ದಿ ತಮಿಳು ವೇ’ ಎಂಬ ವೆಬ್ಸೈಟ್ ಮೂಲಕ ಇವರಿಗೆ ಸಂಧ್ಯಾ ಪರಿಚಯವಾದಳು. ಇಬ್ಬರಿಗೂ ಇಷ್ಟವಾಯಿತು. ಆ ವ್ಯಕ್ತಿ ಅವರ ಹೆತ್ತವರನ್ನು ಮನವೊಲಿಸಿ ಅವಳನ್ನು ಮದುವೆಯಾದನು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ತೋರುತ್ತಿದ್ದಾಗ, ಆಕೆಯ ಪತಿ ಮತ್ತು ಅವರ ಕುಟುಂಬ ಸದಸ್ಯರು ಮೊದಲ ರಾತ್ರಿಯ ನಂತರ ಆಕೆಯ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿ ಮಹಿಳೆಯ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದರು. ಗಂಡನ ಹೆಸರೇ ಬೇರೆ ಇತ್ತು. ಈ ಬಗ್ಗೆ ಆಕೆಯನ್ನು ಕೇಳಿದಾಗ ಅವಳು ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದಳು. ಆಗ ಆ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದ ಕಾರಣ ಪೊಲೀಸರು ಸಂಧ್ಯಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ಆಕೆ ಈಗಾಗಲೇ ಡಿಎಸ್‍ಪಿ, ಇನ್ಸ್‌ಪೆಕ್ಟರ್, ಮಧುರೈನ ಮತ್ತೊಬ್ಬ ಪೊಲೀಸ್ ಅಧಿಕಾರಿ ಮತ್ತು ಹಣಕಾಸು ಅಧಿಕಾರಿ ಸೇರಿದಂತೆ 50 ಜನರು ಆಕೆಯ ಮೋಸದ ಮದುವೆಯಾಟಕ್ಕೆ ಬಲಿಯಾಗಿರುವುದಾಗಿ ತಿಳಿಸಿದ್ದಾಳೆ. ಬೇರೆ ಬೇರೆ ಹೆಸರಿನಿಂದ ಯುವಕರನ್ನು ಮದುವೆಯಾಗುತ್ತಿದ್ದ ಈಕೆ ಮೊದಲ ರಾತ್ರಿಯ ನಂತರ, ಪತಿಯ ಜೊತೆ ಜಗಳವಾಡುತ್ತಿದ್ದಳು. ನಂತರ ಮನೆಯಲ್ಲಿನ ಹಣ ಮತ್ತು ಆಭರಣಗಳೊಂದಿಗೆ ಮನೆಬಿಟ್ಟು ಓಡಿಹೋಗುತ್ತಿದ್ದಳು.
ಇದನ್ನೂ ಓದಿ: ಸಿನಿಮೀಯ ಲವ್ ಸ್ಟೋರಿ; ಜೀವ ಉಳಿಸಿಕೊಳ್ಳಲು ಎಸ್‍ಪಿ ಕಚೇರಿಗೆ ಓಡಿದ ಪ್ರೇಮಿಗಳು! ವಿಡಿಯೊ ನೋಡಿ
ಒಂದು ವೇಳೆ ಪತಿ ಈ ಬಗ್ಗೆ ಪ್ರಶ್ನಿಸಿದರೆ ಮದುವೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಳು. ಹಾಗಾಗಿ ಇದರಿಂದ ತಮ್ಮ ಘನತೆಯನ್ನು ಧಕ್ಕೆ ಬರುತ್ತದೆ ಎಂದು ಸಂತ್ರಸ್ತರು ಮೌನವಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇದೀಗ ಸಂಧ್ಯಾ ಪೊಲೀಸರ ವಶದಲ್ಲಿದ್ದು, ಆಕೆಯ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ