Site icon Vistara News

Crorepati Sweeper: ಕಸ ಗುಡಿಸುವ ಕಾರ್ಮಿಕನ ಬಳಿ ಇತ್ತು ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ! ಆತ ಸಂಪಾದಿಸಿದ್ದು ಹೇಗೆ?

Crorepati Sweeper


ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನೈರ್ಮಲ್ಯ ಕಾರ್ಮಿಕ ಸಂತೋಷ್ ಜೈಸ್ವಾಲ್ ಎಂಬಾತನನ್ನು ನೋಡಿದರೆ ತುಂಬಾ ವಿನಮ್ರ ಸ್ವಭಾವದ ಪಾಪದ ವ್ಯಕ್ತಿ ಎಂಬ ಭಾವನೆ ಮೂಡುತ್ತದೆ. ಆದರೆ, ಇವನೊಬ್ಬ ಗೋಮುಖ ವ್ಯಾಘ್ರನಂತೆ. ಇವನ ಬಗ್ಗೆ ತನಿಖೆ ಮಾಡಿದ ಪೊಲೀಸರು ಆತನ ಅಸಲಿ ಮುಖ ನೋಡಿ ದಂಗಾಗಿದ್ದಾರೆ. ಯಾಕೆಂದರೆ ಜೈಸಲ್ ಅಕ್ರಮವಾಗಿ ಐಷಾರಾಮಿ ಕಾರುಗಳು, ಕೋಟಿ (Crorepati Sweeper) ಮೌಲ್ಯದ ಆಸ್ತಿಯನ್ನು ಹೊಂದಿದ್ದಾನೆ. ಆತ ಅಧಿಕೃತ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಅಕ್ರಮ ಆಸ್ತಿಗಳನ್ನು ಸಂಪಾದಿಸಿದ್ದಾನೆ ಮತ್ತು ಆತನ ಬಳಿ ಅನೇಕ ಐಷಾರಾಮಿ ಕಾರುಗಳು ಇರುವುದು ತಿಳಿದುಬಂದಿದೆ.

ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ನೇಮಕಗೊಂಡಿರುವ ಜೈಸ್ವಾಲ್ ಮೊದಲು ನಜೀರ್ ಎಂಬ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದರಿಂದ ಈಗ ಆತನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಜೈಸ್ವಾಲ್ ತನ್ನ ಆಸ್ತಿಗೆ ಸಂಬಂಧಪಟ್ಟ ಫೈಲ್‍ಗಳನ್ನು ತಿರುಚಿದ್ದಾನೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆಗಿನ ಆಯುಕ್ತ ಯೋಗೇಶ್ವರ್ ರಾಮ್ ಮಿಶ್ರಾ ತನಿಖೆ ನಡೆಸಿದ್ದರು. ಅದರ ತನಿಖೆಯ ವರದಿ ಈಗ ಬಹಿರಂಗವಾದ ಕಾರಣ ಆತನನ್ನು ಅಮಾನತುಗೊಳಿಸಲಾಯಿತು ಮತ್ತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಆರೋಪಿ ನೈರ್ಮಲ್ಯ ಕಾರ್ಮಿಕ ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಸದರ್ ತಹಶೀಲ್ದಾರ್ ದೇವೇಂದ್ರ ಯಾದವ್ ಅವರಿಗೆ ಸೂಚನೆ ನೀಡಲಾಯಿತು. ಆಯುಕ್ತರಾಗಿದ್ದ ಯೋಗೇಶ್ವರ್ ರಾಮ್ ಮಿಶ್ರಾ ಅವರ ಆದೇಶದ ಮೇರೆಗೆ ಸದರ್ ತಹಶೀಲ್ದಾರ್ ಅವರು ಜೈಸ್ವಾಲ್ ಒಡೆತನದ ಐಷಾರಾಮಿ ವಾಹನಗಳ ಬಗ್ಗೆ ಮಾಹಿತಿ ಪಡೆಯಲು ಸಾರಿಗೆ ಅಧಿಕಾರಿಗೆ ಪತ್ರ ಬರೆದಿದ್ದರು. ಆಮೇಲೆ ದೇವಿಪಟನ್ ಮಂಡಲದ ಪ್ರಸ್ತುತ ಆಯುಕ್ತ ಶಶಿ ಭೂಷಣ್ ಲಾಲ್ ಸುಶೀಲ್ ಅವರು ಅಧಿಕಾರ ವಹಿಸಿಕೊಂಡ ನಂತರ ವಾಹನಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದ್ದರು. ವಾಹನಗಳನ್ನು ಪರಿಶೀಲಿಸಿದ ನಂತರ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ನೈರ್ಮಲ್ಯ ಕಾರ್ಮಿಕನು ಒಂದಲ್ಲ, ಒಂಬತ್ತು ಐಷಾರಾಮಿ ವಾಹನಗಳನ್ನು ಹೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮತ್ತು ಅವುಗಳು ಅವನ, ಅವನ ಸಹೋದರ ಮತ್ತು ಅವನ ಹೆಂಡತಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಆರೋಪಿ ಸಂತೋಷ್ ಜೈಸ್ವಾಲ್ ಸ್ವಿಫ್ಟ್ ಡಿಜೈರ್, ಎರ್ಟಿಗಾ ಮಾರುತಿ ಸುಜುಕಿ, ಮಹೀಂದ್ರಾ ಸ್ಕಾರ್ಪಿಯೋ, ಇನ್ನೋವಾ ಮತ್ತು ಮಹೀಂದ್ರಾ ಕ್ಸೈಲೋ ಹೊಂದಿದ್ದರೆ, ಅವರ ಸಹೋದರ ಉಮಾಶಂಕರ್ ಜೈಸ್ವಾಲ್ ಎರ್ಟಿಗಾ ಮಾರುತಿ ಸುಜುಕಿ ಮತ್ತು ಅವರ ಪತ್ನಿ ಬೇಬಿ ಜೈಸ್ವಾಲ್ ಟೊಯೋಟಾ ಇನ್ನೋವಾ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇವಿಷ್ಟು ಮಾಹಿತಿ ಬಹಿರಂಗವಾದ ನಂತರ, ತನಿಖಾಧಿಕಾರಿಗಳು ಈಗ ಅವನ ಆದಾಯದ ಮೂಲವನ್ನು ಪರಿಶೀಲಿಸಲು ಬ್ಯಾಂಕ್ ಖಾತೆಯ ವಿವರಗಳನ್ನು ಕಲೆಹಾಕುತ್ತಿದ್ದಾರೆ. ದಾಖಲೆಗಳನ್ನು ಪಡೆದ ನಂತರ, ಆರೋಪಿ ನೈರ್ಮಲ್ಯ ಕಾರ್ಮಿಕ ಸಂತೋಷ್ ಕುಮಾರ್ ಜೈಸ್ವಾಲ್ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

ಜೈಸ್ವಾಲ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುವಾಗ ಜೈಸ್ವಾಲ್ ಕಡಿಮೆ ವೇತನದೊಂದಿಗೆ ಅಕ್ರಮ ಆಸ್ತಿಯನ್ನು ಹೇಗೆ ಸಂಪಾದಿಸಿದರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

Exit mobile version