Site icon Vistara News

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

Dietary Guidelines

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Exit mobile version