Site icon Vistara News

Endoscopy: ಬಟನ್ ಬ್ಯಾಟರಿ ನುಂಗಿದ ಮಗು; ವೈದ್ಯರು ಮಾಡಿದ್ದೇನು? ಪೋಷಕರು ಓದಬೇಕಾದ ಸುದ್ದಿ

Endoscopy: manipal hospital

ಬೆಂಗಳೂರು: ಎಲೆಕ್ಟ್ರಾನಿಕ್ ಸ್ಕ್ರ್ಯಾಚ್ ಪ್ಯಾಡ್‌ನ (electronic scratch pad) ಬಟನ್ ಬ್ಯಾಟರಿ (Button Battery) ನುಂಗಿದ ಒಂದು ವರ್ಷದ ಬಾಲಕ ಶ್ರೀಜಿತ್‌ಗೆ (Shreejit) ಬೆಂಗಳೂರಿನ (bengaluru) ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ (old airport road) ಮಣಿಪಾಲ್ ಆಸ್ಪತ್ರೆಯಲ್ಲಿ (manipal hospital) ಸಕಾಲದಲ್ಲಿ ಎಂಡೋಸ್ಕೋಪಿ (Endoscopy) ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

ಸಹೋದರಿಯ ಎಲೆಕ್ಟ್ರಾನಿಕ್ ಸ್ಕ್ರ್ಯಾಚ್ ಪ್ಯಾಡ್‌ ನ ಬಟನ್ ಬ್ಯಾಟರಿಯನ್ನು ನುಂಗಿದ ಬಾಲಕ ಶ್ರೀಜಿತ್‌ನನ್ನು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಇತ್ತೀಚೆಗೆ ದಾಖಲಿಸಲಾಗಿತ್ತು. ಸರಿಯಾದ ಸಮಯದಲ್ಲಿ ಎಂಡೋಸ್ಕೋಪಿ ಮಾಡಿದ್ದರಿಂದ ಅವನು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಯಾವಾಗ ನಡೆದಿದ್ದು?

ಫೆಬ್ರವರಿ 29ರಂದು ಶ್ರೀಜಿತ್ ಬ್ಯಾಟರಿ ನುಂಗಿದ್ದು, ಉಸಿರಾಟದ ಸಮಸ್ಯೆ ಪ್ರಾರಂಭವಾಗಿ ಮಗು ಕೆಮ್ಮಲು ಪ್ರಾರಂಭಿಸಿತ್ತು. ಇದನ್ನು ಗಮನಿಸಿದ ಮಗುವಿನ ಪೋಷಕರಾದ ಸುಚೇತಾ ಎಸ್. ರೇವಣಕರ್ ಪ್ರಕಾಶ್ ಮತ್ತು ಭಗವಂತ್ ಶೇಟ್ ಕೂಡಲೇ ಮಗುವನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: High Court: ಹೈಕೋರ್ಟ್‌ನಲ್ಲಿ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ ಯತ್ನ

ಆಸ್ಪತ್ರೆ ವೈದ್ಯರು ಮಗುವನ್ನು ಪರಿಶೀಲಿಸಿ ಬ್ಯಾಟರಿ ಸ್ವಾಭಾವಿಕವಾಗಿ ಹೊರಹೋಗುವಂತೆ ಪ್ರಯತ್ನಿಸಿದರು. ಆದರೆ ಇದು ಸಾಧ್ಯವಾಗದೇ ಇದ್ದಾಗ ಮಗುವನ್ನು ಮಕ್ಕಳ ಆರೈಕೆಗಾಗಿ ಮಣಿಪಾಲ್ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.

ಎಕ್ಸ್ ರೇಯಲ್ಲಿ ದೃಢ

ಶ್ರೀಜಿತ್ ಎದೆಯಲ್ಲಿ ಬಟನ್ ಬ್ಯಾಟರಿ ಇರುವುದನ್ನು ಎಕ್ಸ್ ರೇ ದೃಢಪಡಿಸಿತ್ತು. ಆಸ್ಪತ್ರೆಯ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಸಲಹೆಗಾರರಾದ ಡಾ. ಶ್ರೀಕಾಂತ್ ಕೆ.ಪಿ. ಅವರು, ಬಟನ್ ಬ್ಯಾಟರಿಯ ಅಪಾಯದ ಬಗ್ಗೆ ಅರಿತು ಅದು ಅನ್ನನಾಳಕ್ಕೆ ಹೋದರೆ ಅನ್ನನಾಳದ ರಂಧ್ರ, ಪ್ರಮುಖ ಅಂಗಗಳಿಗೆ ಹಾನಿಯಾಗಬಹುದು ಮಾತ್ರವಲ್ಲದೇ ಮಗುವಿನ ಸಾವಿನ ಅಪಾಯವೂ ಇದೆ ಎಂದು ಎಚ್ಚರಿಸಿದರು.

ಎಂಡೋಸ್ಕೋಪಿ ಚಿಕಿತ್ಸೆ

ಶ್ರೀಜಿತ್ ದೇಹದಿಂದ ತ್ವರಿತವಾಗಿ ಬ್ಯಾಟರಿ ಹೊರತೆಗೆಯಲು ಮತ್ತು ಆ ಭಾಗವನ್ನು ಸ್ವಚ್ಛಗೊಳಿಸಲು ಎಂಡೋಸ್ಕೋಪಿಯನ್ನು ನಡೆಸಲಾಯಿತು. ಬ್ಯಾಟರಿಯಿಂದಾಗಿ ಮಗುವಿಗೆ ತೀವ್ರವಾದ ಆಂತರಿಕ ಸುಟ್ಟಗಾಯಗಳಾಗುವ ಲಕ್ಷಣವಿತ್ತು. ಆದರೆ ಸಮಯೋಚಿತ ವೈದ್ಯಕೀಯ ಆರೈಕೆಯಿಂದಾಗಿ ಶ್ರೀಜಿತ್ ದೇಹದಿಂದ ಬ್ಯಾಟರಿಯನ್ನು ಹೊರತೆಗೆದು ಯಾವುದೇ ತೊಂದರೆಗಳಿಲ್ಲದಂತೆ ಮಗುವನ್ನು ರಕ್ಷಿಸಲಾಗಿದೆ. ಇದೇ ಸಂದರ್ಭದಲ್ಲಿ ಮಗುವಿಗೆ ಕಾಂಟ್ರಾಸ್ಟ್ ಸ್ವಾಲೋ ಪರೀಕ್ಷೆ ನಡೆಸಿದ್ದು, ಮಗುವಿನ ಅನ್ನನಾಳಕ್ಕೆ ಯಾವುದೇ ಹೆಚ್ಚಿನ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

48 ಗಂಟೆಗಳ ವೀಕ್ಷಣೆಯ ಬಳಿಕ ಶ್ರೀಜಿತ್ ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪೋಷಕರು ಬಟನ್ ಬ್ಯಾಟರಿಗಳಿಂದ ಮಕ್ಕಳಿಗೆ ಉಂಟಾಗುವ ಅಪಾಯಗಳ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ವೈದರು ಹೇಳಿದ್ದಾರೆ.

ಮೊಬೈಲ್ ಚಾರ್ಜರ್ ಶಾಕ್ ನಿಂದ ಮಗು ಸತ್ತಿತ್ತು

ಮಕ್ಕಳ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಇತ್ತೀಚೆಗಷ್ಟೇ ಮಗುವೊಂದು ಆಟವಾಡುತ್ತ ಮೊಬೈಲ್ ಚಾರ್ಜರ್ ಅನ್ನು ಬಾಯಲ್ಲಿ ಹಾಕಿದ್ದು ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ ಘಟನೆ ನಡೆದಿತ್ತು.
ಕಾರವಾರದ ಸಿದ್ಧರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 8 ತಿಂಗಳ ಹೆಣ್ಣು ಮಗು ಸಾನಿಧ್ಯ ಮನೆಯಲ್ಲಿ ಮೃತಪಟ್ಟಿತ್ತು.
ಮಲಗಿದ್ದ ಮಗು ಸಾನಿಧ್ಯಳ ಪಕ್ಕದಲ್ಲೇ ನೇತಾಡುತ್ತಿದ್ದ ಮೊಬೈಲ್‌ನ್ನು ಚಾರ್ಜ್‌ ನ ತುದಿಯನ್ನು ಬಾಯಿಗೆ ಹಾಕಿಕೊಂಡಿದೆ. ಚಾರ್ಜರ್‌ನಲ್ಲಿ ಹರಿದು ಬರುವ ಸಣ್ಣ ಪ್ರಮಾಣದ ವಿದ್ಯುತ್‌ ಮಗುವಿಗೆ ಆಘಾತವನ್ನು ಉಂಟು ಮಾಡಿದೆ. ಆಘಾತಕ್ಕೆ ಒಳಗಾದ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿತ್ತು. ಈ ಕುರಿತು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

Exit mobile version