ಚೆನ್ನೈ : ಚಿನ್ನದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಕಳ್ಳತನದ ಜೊತೆಗೆ ಚಿನ್ನದ ಕಳ್ಳಸಾಗಣೆ ಪ್ರಕರಣ ಕೂಡ ಹೆಚ್ಚಾಗಿ ನಡೆಯುತ್ತಿದೆ. ಚಿನ್ನದ ಬೆಲೆ ಗಗನಕ್ಕೇರಿದ ಕಾರಣ ಚಿನ್ನದ ಕಳ್ಳಸಾಗಾಣಿಕೆ ಮಾಡಿ ಕೋಟಿ ಕೋಟಿ ಹಣ ಸಂಪಾದಿಸಲು ಹೊರಟಿದ್ದಾರೆ. ಅಂತಹದೊಂದು ಪ್ರಕರಣ ಇದೀಗ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿರುವ ಅಂಗಡಿಯಲ್ಲಿ ಚಿನ್ನದ ಕಳ್ಳಸಾಗಾಣಿಕೆ(Gold Smuggling) ನಡೆದಿದೆ.
ಮೊಹಮ್ಮದ್ ಸಬೀರ್ ಅಲಿ (29 ವರ್ಷ) ಕಳ್ಳಸಾಗಾಣಿಕೆಗೆ ಸಹಾಯ ಮಾಡಿದ ಆರೋಪಿ. ಸಬೀರ್ ಅಲಿಗೆ ಅಂಗಡಿಯೊಂದನ್ನು ನಡೆಸುವ ಯಾವುದೇ ಅನುಭವವಿಲ್ಲದಿದ್ದರೂ ಆತನ ಯೂಟ್ಯೂಬ್ ಚಾನೆಲ್ ಶಾಪಿಂಗ್ ಬಾಯ್ಸ್‌ನ ವಿಡಿಯೊಗಳನ್ನು ನೋಡಿದ ನಂತರ ಈ ಕಳ್ಳರ ಗುಂಪು (syndicate) ಅವನನ್ನು ನೇಮಕ ಮಾಡಿಕೊಂಡಿದೆ.
ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡುವಂತೆ ಮೊಹಮ್ಮದ್ ಸಬೀರ್ ಅಲಿಯನ್ನು ಕಳ್ಳ ದಂಧೆಕೋರರ ಗುಂಪೊಂದು ಕೇಳಿ ಕೊಂಡಿದೆ. ಇದಕ್ಕೆ ಒಪ್ಪಿದ ಸಬೀರ್‌ಗೆ ಚಿನ್ನ ಕಳ್ಳಸಾಗಣೆಗೆ ಮಾಡಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಂಗಡಿಯನ್ನು ತೆರೆಯುವ ಆಲೋಚನೆಯನ್ನು ಈ ಗುಂಪು ಸೂಚಿಸಿದೆ. ಅಬುದಾಬಿಯಲ್ಲಿ ವಾಸಿಸುವ ಶ್ರೀಲಂಕಾ ಮೂಲದ ಚಿನ್ನ ಕಳ್ಳಸಾಗಣೆದಾರರ ಗುಂಪಿನ ಸದಸ್ಯರೊಬ್ಬರು ಅಲಿಗೆ ಅಂಗಡಿಯ ಗುತ್ತಿಗೆ ಪಡೆಯಲು 70 ಲಕ್ಷ ರೂ.ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಅವರ ಯೋಜನೆಯಂತೆ ಅಲಿ ಚೆನ್ನೈ ವಿಮಾನ ನಿಲ್ದಾಣದ ಎಕ್ಸಿಟ್ ಲಾಂಜ್ ನಲ್ಲಿ ಏರ್ಹಬ್ ಎಂಬ ಶಾಪ್ ಶುರು ಮಾಡಿದ. ಅಲಿಗೆ ಸಹಾಯಕ್ಕಾಗಿ ಏಳು ಮಂದಿ ಉದ್ಯೋಗಿಗಳನ್ನು ನೇಮಿಸಿದ ಗುಂಪೊಂದು ಅವರಿಗೆ ತರಬೇತಿ ನೀಡಿತ್ತು. ಟ್ರಾನ್ಸಿಟ್ ಪ್ಯಾಸೆಂಜರ್‌ಗಳಿಂದ ಚಿನ್ನವನ್ನು ಪಡೆದು ಅದನ್ನು ತಮ್ಮ ದೇಹದಲ್ಲಿ ಬಚ್ಚಿಟ್ಟುಕೊಂಡು ನಂತರ ವಿಮಾನ ನಿಲ್ದಾಣದ ಹೊರಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು.
ಇದಕ್ಕಾಗಿ, ಅಲಿ ಮತ್ತು ಇತರರಿಗೆ ಎರಡು ತಿಂಗಳಿಗೆ 3 ಕೋಟಿ ರೂ.ಗಳ ಕಮಿಷನ್ ನೀಡುತ್ತಿದ್ದರು ಎನ್ನಲಾಗಿದೆ.
ಆದರೆ ಜೂನ್ 29ರಂದು ಕಸ್ಟಮ್ಸ್ ಅಧಿಕಾರಿಯೊಬ್ಬರಿಗೆ ಇವರ ಚಲನವಲನದಲ್ಲಿ ಅನುಮಾನ ಬಂದು ಅಂಗಡಿಯನ್ನು ಪರಿಶೀಲಿಸಿದಾಗ 1 ಕೆಜಿ ಚಿನ್ನದ ಪುಡಿ ಸಿಕ್ಕಿದೆ. ಹಾಗಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಉದ್ಯೋಗಿಗಳು ಮತ್ತು ಚಿನ್ನ ಸಾಗಣೆ ಮಾಡಿದ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್!
ಎರಡು ತಿಂಗಳ ಅವಧಿಯಲ್ಲಿ 167 ಕೋಟಿ ಮೌಲ್ಯದ 267 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಅಲಿ ಮತ್ತು ಅವರ ಏಳು ಉದ್ಯೋಗಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಗ್ರೂಪ್‌ನ ಎಲ್ಲಾ ಎಂಟು ಸದಸ್ಯರು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ನೀಡಿದ ಗುರುತಿನ ಚೀಟಿಗಳನ್ನು ಹೊಂದಿದ್ದರು ಹಾಗಾಗಿ ಅವರನ್ನು ಭದ್ರತಾ ತಪಾಸಣೆಗೆ ಒಳಪಡಿಸಿಲ್ಲ ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ.