Site icon Vistara News

Gyanvapi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ನೀಡಿದ್ದ ಜಡ್ಜ್‌ಗೆ ವಿದೇಶದಿಂದ ಜೀವ ಬೆದರಿಕೆ

Gyanvapi Mosque

ಬರೇಲಿ(ಉತ್ತರ ಪ್ರದೇಶ): ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Mosque complex) ಯ ವೀಡಿಯೋಗ್ರಾಫಿಕ್‌ ಸಮೀಕ್ಷೆ (Videographic survey) ಮಾಡುವಂತೆ ಆದೇಶ ನೀಡುವ ಮೂಲಕ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಗಮನ ಸೆಳೆದಿದ್ದ ಹೆಚ್ಚುವರಿ ಸೆಶನ್ಸ್‌ ಜಡ್ಜ್‌ ರವಿ ಕುಮಾರ್‌ ದಿವಾಕರ್‌ (Ravi kumar Diwakar) ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ವಿದೇಶಿ ಫೋನ್‌ ನಂಬರ್‌ಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು (International threat calls) ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶ ದಿವಾಕರ್‌ ಪೊಲೀರಿಗೆ ದೂರು ನೀಡಿದ್ದಾರೆ. ಏ. 15 ರಂದು ಅಂತಾರಾಷ್ಟ್ರೀಯ ನಂಬರ್‌ನಿಂದ ಕರೆ ಬಂದಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ಜೀವ ಬೆದರಿಕೆಯೊಡ್ಡಿದ್ದ. ಇದಾದ ಕೆಲವು ದಿನಗಳ ನಂತರ ಅಂತಹದ್ದೇ ಮತ್ತೊಂದು ಕರೆ ಬಂದಿದೆ ಎಂದು ದಿವಾಕರ್‌ ದೂರಿನಲ್ಲಿ ತಿಳಿಸಿದ್ದಾರೆ.

2022ರಲ್ಲಿ ಕಾಶಿ ವಿಶ್ವನಾಥ ದೇಗುಲ (Kashi Vishwanath temple) ಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿಕ್‌ ಸಮೀಕ್ಷೆಗೆ ದಿವಾಕರ್‌ ಆದೇಶಿದ್ದರು. ಅಲ್ಲದೇ ಶುದ್ಧೀಕರಣ ಪ್ರದೇಶವನ್ನು ಸೀಲ್‌ ಮಾಡುವಂತೆಯೂ ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದರು. ಮಸೀದಿಯ ಪಶ್ಚಿಮ ಗೋಡೆಯ ಮೇಲಿರುವ ಕೆಲವು ದೇವತೆಗಳ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿ ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಹಿಂದೆ ಸಮೀಕ್ಷೆಗೆ ಆದೇಶಿಸಲಾಗಿತ್ತು. ಇದಾದ ಬಳಿಕ ಅವರಿಗೆ ಆಗಾಗ ಬೆದರಿಕೆ ಕರೆಗಳು ಬರಲು ಶುರುವಾಗಿತ್ತು.

ಇತ್ತೀಚೆಗಷ್ಟೇ ಬರೇಲಿಗೆ ವರ್ಗಾವಣೆಗೊಂಡಿದ್ದ ದಿವಾಕರ್‌, ಈ ಹಿಂದೆಯೂ ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಜೀವ ಬೆದರಿಕೆ ಕರೆ ಬಂದಿರುವ ಬಗ್ಗೆ ದೂರು ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಅವರು ಬರೇಲಿಗೆ ವರ್ಗಾವಣೆಗೊಂಡಿದ್ದರು. ಬರೇಲಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 2018ರಲ್ಲಿ ನಡೆದಿದ್ದ ಬರೇಲಿ ಗಲಭೆ ಪ್ರಕರಣ ಕೈಗೆತ್ತಿಕೊಂಡಿದ್ದರು. ಗಲಭೆಯ ಮಾಸ್ಟರ್‌ಮೈಂಡ್‌ ಮೌಲಾನಾ ತೌಖೀರ್‌ ರಾಝಾ ವಿಚಾರಣೆಗೆ ಹಾಜರಾಗುವಂತೆ ಆದೇಶ ಹೊರಡಿಸಿದ್ದರು. ಈ ಗಲಭೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳು ನಾಶವಾಗಿದ್ದವು. ಅಲ್ಲದೇ ಬರೇಲಿಯಲ್ಲಿ ಬರೋಬ್ಬರಿ 27 ದಿನಗಳ ಕಾಲ ನಿಷೇದಾಜ್ಞೆ ಹೊರಡಿಸಲಾಗಿತ್ತು.

ಇದನ್ನೂ ಓದಿ: Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್‌ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!

ನ್ಯಾಯಾಧೀಶ ದಿವಾಕರ್‌ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಕರೆ ಬಂದಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಅಲಹಾಬಾದ್‌ ಹೈಕೋರ್ಟ್‌ ಅವರಿಗೆ ವೈ ಕೆಟಗರಿ ಭದ್ರತೆ ನೀಡುವಂತೆ ಆದೇಶ ಹೊರಿಡಿಸಿತ್ತು. ಬಳಿಕ ಅದನ್ನು ಎಕ್ಸ್‌ ಕೆಟಗೆರಿ ಭದ್ರತೆಗೆ ಇಳಿಸಲಾಯಿತು. ಪ್ರಸ್ತುತ ದಿವಾಕರ್‌ ಅವರ ಭದ್ರತೆಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ ಅವರ ಸಹೋದ್ಯೋಗಿಗಳ ಪ್ರಕಾರ ಭದ್ರತಾ ಸಿಬ್ಬಂದಿಗಳಿಗೆ ಯಾವುದೇ ಬಂದೂಕುಗಳನ್ನು ನೀಡಿಲ್ಲ. ಹೀಗಾಗಿ ಜೀವ ಬೆದರಿಕೆ ಕರೆಗಳು ಆಗಾಗ ಬರುತ್ತಿದ್ದರೂ ನ್ಯಾಯಾಧೀಶರಿಗೆ ಕನಿಷ್ಠ ಭದ್ರತೆ ಸಿಗದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Exit mobile version