ವಿಶ್ವದ ಹಲವು ಕಡೆಗಳಲ್ಲಿ ಬಗೆಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಒಂದೊಂದು ತಿಂಡಿ ಒಂದೊಂದು ರೀತಿಯ ರುಚಿಯನ್ನು ಹೊಂದಿರುತ್ತದೆ. ಆದರೆ ತಿಂಡಿ ಪ್ರಿಯರಿಗೆ ಯಾವ ತಿಂಡಿ ತುಂಬಾ ರುಚಿಕರವಾಗಿರುತ್ತದೆ ಮತ್ತು ಅದು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಹಾಗಾಗಿ ಅಂಥವರಿಗಾಗಿ ಪಾಕಶಾಲೆಯ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಇತ್ತೀಚೆಗೆ 2024ರ ವಿಶ್ವದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ ತಯಾರಿಸುವ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಗತ್ತಿನಾದ್ಯಂತ ವಿಶೇಷವಾದ ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ತಯಾರಿಸುವಂತಹ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳಲ್ಲಿ, 10 ಭಾರತೀಯ ತಿನಿಸುಗಳು (Indian Dessert 2024) ಸ್ಥಾನವನ್ನು ಗಳಿಸಿವೆ. ಆ 10 ಭಾರತೀಯ ತಿನಿಸುಗಳು ಮತ್ತು ಅವುಗಳು ಯಾವ ಸ್ಥಾನ ಪಡೆದುಕೊಂಡಿದ್ದಾವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
1. ಕಯಾನಿ ಬೇಕರಿ, ಪುಣೆ
ಈ ಪಟ್ಟಿಯಲ್ಲಿ ಜಾಗತಿಕವಾಗಿ 18ನೇ ಸ್ಥಾನ ಪಡೆದುಕೊಂಡ ಕಯಾನಿ ಬೇಕರಿ 1955ರಲ್ಲಿ ಪ್ರಾರಂಭವಾಗಿತ್ತು. ಪುಣೆಯ ಕಯಾನಿ ಬೇಕರಿ ಶ್ರೂಸ್ಬರಿ ಬಿಸ್ಕತ್ತುಗಳು ಮತ್ತು ಮಾವಾ ಕೇಕ್‍ಗಳಿಗೆ ಹೆಸರುವಾಸಿಯಾಗಿದೆ.
ಪುಣೆಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಆಗಾಗ್ಗೆ ಈ ಬೇಕರಿ ಬಳಿ ಈ ಸಿಹಿತಿಂಡಿಗಳನ್ನು ಖರೀದಿಸುತ್ತಾರೆ.
2. ಕೆ.ಸಿ.ದಾಸ್, ಕೋಲ್ಕತಾ
ಪಟ್ಟಿಯಲ್ಲಿ 25ನೇ ಸ್ಥಾನ ಪಡೆದುಕೊಂಡ ಕೆ.ಸಿ.ದಾಸ್ 1866ರಲ್ಲಿ ಪ್ರಾರಂಭವಾಗಿತ್ತು. ಕೆ.ಸಿ.ದಾಸ್ ರಸಗುಲ್ಲಾಗಳಿಗೆ ಸಮಾನಾರ್ಥಕ ಹೆಸರು ಎಂಬ ಖ್ಯಾತಿ ಹೊಂದಿದೆ.
ಕೋಲ್ಕತ್ತಾ ಮೂಲದ ಈ ಮಿಠಾಯಿ ತಯಾರಕರು ಪ್ರವಾಸಿಗರಿಗೆ ಪ್ರಿಯವಾದ ಬಂಗಾಳಿ ಪಾಕಪದ್ಧತಿಯ ಮೂಲಕ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ.
3. ಫ್ಲೂರಿಸ್, ಕೋಲ್ಕತಾ
ಪಟ್ಟಿಯಲ್ಲಿ 26ನೇ ಸ್ಥಾನ ಪಡೆದುಕೊಂಡ ಕೋಲ್ಕತ್ತಾದ ಜನಪ್ರಿಯ ಟೀ ರೂಮ್ ಮತ್ತು ಬೇಕರಿಯಾದ ಫ್ಲೂರಿಸ್ 1927ರಿಂದ ಸ್ವಿಸ್ ಚಾಕೊಲೇಟ್‍ಗಳು ಮತ್ತು ಪ್ಯಾಟಿಸ್ಸೆರಿಯನ್ನು ಒದಗಿಸುತ್ತಿದೆ. ಈ ಐತಿಹಾಸಿಕ ಸಂಸ್ಥೆಗೆ ಭೇಟಿ ನೀಡುವವರು ಒಮ್ಮೆ ಇಲ್ಲಿ ಸಿಗುವ ರಮ್ ಬಾಲ್ ಸವಿಯಲೇಬೇಕು.
4. ಕರಾಚಿ ಬೇಕರಿ, ಹೈದರಾಬಾದ್
ಪಟ್ಟಿಯಲ್ಲಿ 29ನೇ ಸ್ಥಾನ ಪಡೆದುಕೊಂಡಿರುವ ಹೈದರಾಬಾದ್‍ನ ಕರಾಚಿ ಬೇಕರಿ ಹಣ್ಣಿನ ಬಿಸ್ಕತ್ತುಗಳು ಮತ್ತು ಇತರ ಬೇಯಿಸಿದ ಆಹಾರಗಳಿಗೆ ಹೆಸರುವಾಸಿಯಾಗಿದೆ.
ಇದು 1953ರಿಂದ ಜನರ ಗಮನ ಸೆಳೆದಿದೆ. ಬೇಕರಿಯ ವೈವಿಧ್ಯಮಯ ತಿಂಡಿತಿನಿಸುಗಳು ಸಿಹಿತಿಂಡಿ ಪ್ರಿಯರನ್ನು ಸಂತೋಷಪಡಿಸುತ್ತಲೇ ಇವೆ.
5. ಬಿ&ಆರ್ ಮುಲ್ಲಿಕ್, ಕೋಲ್ಕತಾ
ಪಟ್ಟಿಯಲ್ಲಿ 37ನೇ ಸ್ಥಾನ ಪಡೆದುಕೊಂಡ ಕೋಲ್ಕತ್ತಾದ ಬಿ&ಆರ್ ಮಲ್ಲಿಕ್ 1978ರಿಂದ ಪ್ರಾರಂಭವಾಗಿದೆ. ಬಲರಾಮ್ ಮುಲ್ಲಿಕ್ ಮತ್ತು ರಾಧಾರಮಣ್ ಮುಲ್ಲಿಕ್ ಎಂಬುವವರು ತನ್ನ ಸಾಂಪ್ರದಾಯಿಕ ಬಂಗಾಳಿ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದ್ದಾರೆ, ಇದು ಕೋಲ್ಕತ್ತಾದಲ್ಲಿ ವಿಶೇಷ ಸಿಹಿ ತಿಂಡಿಗಳು ದೊರೆಯುವ ಪ್ರಮುಖ ಸ್ಥಳವಾಗಿದೆ.
6. ಕೆ ರುಸ್ತುಂ ಅಂಡ್ ಕೋ, ಮುಂಬೈ
ಪಟ್ಟಿಯಲ್ಲಿ 49ನೇ ಸ್ಥಾನದಲ್ಲಿರುವ ಮುಂಬೈನ ಕೆ ರುಸ್ತುಂ ಅಂಡ್ ಕೋ 1953ರಲ್ಲಿ ಪ್ರಾರಂಭವಾಗಿದೆ. ಇದು ಮುಂಬೈನ ಪ್ರಸಿದ್ಧ ಐಸ್‌ಕ್ರೀಮ್ ಪಾರ್ಲರ್ ಆಗಿದೆ. ಇಲ್ಲಿ ಸಿಗುವ ವಿಶಿಷ್ಟ ಐಸ್‌ಕ್ರೀಮ್ ಸ್ಯಾಂಡ್ ವಿಚ್‍ಗಳು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ಬಹಳ ಅಚ್ಚುಮೆಚ್ಚು.
7. ಕುರೆಮಾಲ್ ಕುಲ್ಫಿ, ನವದೆಹಲಿ
ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದ ನವದೆಹಲಿಯ ಕುರೆಮಾಲ್ ಕುಲ್ಫಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿದೆ. ಇದು ರುಚಿಕರವಾದ ವಿಶೇಷವಾದ ಕುಲ್ಫಿಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಸ್ಟಫ್ಡ್ ಮಾವಿನ ಕುಲ್ಫಿಯನ್ನು ಸಿಗುತ್ತದೆ.
8. ಪ್ರಕಾಶ್ ಕುಲ್ಫಿ, ಲಕ್ನೋ
ಪಟ್ಟಿಯಲ್ಲಿ 77ನೇ ಸ್ಥಾನ ಪಡೆದುಕೊಂಡ ಲಕ್ನೋದ ಪ್ರಕಾಶ್ ಕುಲ್ಫಿ 1956ರಿಂದ ಪ್ರಾರಂಭವಾಗಿದ್ದು, ಇಲ್ಲಿ ಕ್ರೀಂ ಕುಲ್ಫಿಗಳು ಸಿಗುತ್ತವೆ. ಇದು ಎಲ್ಲಾ ಕಡೆಗಳಲ್ಲಿ ಸಿಗುವಂತಹ ಕುಲ್ಫಿಗಿಂತ ಹೆಚ್ಚು ರುಚಿಕರವಾಗಿದೆ.. ಹಾಗಾಗಿ ಇದು ಕುಲ್ಫಿ ಪ್ರಿಯರ ನೆಚ್ಚಿನ ಸ್ಥಳವಾಗಿದೆ.
9. ಚಿಟಾಲೆ ಬಂಧು, ಪುಣೆ
ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿರುವ ಪುಣೆಯ ಚಿಟಾಲೆ ಬಂಧು ಸಿಹಿತಿಂಡಿಗಳು ಮತ್ತು ಬಕರ್ವಾಡಿಯಂತಹ ರುಚಿಕರವಾದ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಇದು 1950ರಿಂದ ಪುಣೆಯಲ್ಲಿ ಪ್ರಾರಂಭವಾಗಿದೆ.
10. ಜಿಲೇಬಿ ವಾಲಾ, ನವದೆಹಲಿ
ಪಟ್ಟಿಯಲ್ಲಿ 93ನೇ ಸ್ಥಾನ ಪಡೆದುಕೊಂಡ ನವದೆಹಲಿಯ ಹೃದಯಭಾಗದಲ್ಲಿರುವ ಜಿಲೇಬಿ ವಾಲಾ 1884ರಿಂದ ಹೊಸದಾದ ವಿಧಾನದಲ್ಲಿ ತಯಾರಿಸಿದ ಜಿಲೇಬಿಗಳನ್ನು ನೀಡುತ್ತಿದೆ. ಈ ಸ್ಥಳವು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ಅಚ್ಚುಮೆಚ್ಚಿನದಾಗಿದೆ.
ಇದನ್ನೂ ಓದಿ: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?
ಸಿಹಿತಿಂಡಿಗಳ ವಿಷಯಕ್ಕೆ ಬಂದಾಗ, ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಪಾಕಶಾಲೆಯ ಸಂಪ್ರದಾಯಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ ಎಂಬುದನ್ನು ಈ 10 ಭಾರತೀಯ ತಿನಿಸುಗಳು ಸಾಬೀತುಪಡಿಸಿವೆ. ಈ ಪ್ರತಿಯೊಂದು ಸ್ಥಳಗಳು ಭಾರತದ ಸಿಹಿ ಪಾಕವಿಧಾನದಲ್ಲಿ ವಿಶಿಷ್ಟ ರುಚಿಯನ್ನು ನೀಡುತ್ತವೆ.