Site icon Vistara News

International Yoga Day 2024: ಕುತ್ತಿಗೆ ನೋವಿನ ನಿವಾರಣೆಗೆ ಯಾವ ಆಸನಗಳು ಸೂಕ್ತ?

International Yoga Day 2024

ದೇಹ ಮತ್ತು ಮನಸ್ಸುಗಳ ಮೇಲಿನ ಮನಸ್ಸಿನ ಒತ್ತಡ ನಿವಾರಣೆಗೆ ಯೋಗ (International Yoga Day 2024) ಬಹು ಉಪಯುಕ್ತ. ಸರಿಯಾದ ಉಸಿರಾಟ ಕ್ರಮದೊಂದಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಮೈ-ಮನಗಳ ಸಮನ್ವಯವನ್ನು ಸಾಧಿಸಬಹುದು. ಜೊತೆಗೆ, ಹಲವಾರು ನೋವುಗಳಿಗೆ, ಶರೀರದ ತೊಂದರೆಗಳಿಗೆ ಉಪಶಮನವನ್ನೂ ಪಡೆಯಬಹುದು. ಈ ನಿಟ್ಟಿನಲ್ಲಿ, ಕುತ್ತಿಗೆ ನೋವಿನ ಶಮನಕ್ಕೆ ಉಪಯುಕ್ತವಾದ ಆಸನಗಳನ್ನು ಇಲ್ಲಿ ನೀಡಲಾಗಿದೆ. ಆದರೆ ಇವುಗಳನ್ನೆಲ್ಲ ಅಭ್ಯಾಸ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯ. ಜೊತೆಗೆ ಅನುಭವಿಯಾದ ಯೋಗ ತರಬೇತುದಾರರ ಮಾರ್ಗದರ್ಶನವೂ ಅಗತ್ಯ.

ಕುತ್ತಿಗೆ ನೋವು:

ಬೆನ್ನು ಹುರಿಯ ಸರ್ವೈಕಲ್‌ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಇತ್ತೀಚಿನ ವರ್ಷಗಳ ಬಹಳಷ್ಟು ಜನರು ಅನುಭವಿಸುವ ತೊಂದರೆ. ಜೀವನಶೈಲಿಯ ದೋಷಗಳು, ಸ್ಕ್ರೀನ್‌ ಸಮಯ ಅತಿಯಾಗುವುದು, ಜೀರ್ಣಾಂಗದ ತೊಂದರೆಗಳು, ಗಾಯ, ವಯಸ್ಸು ಮುಂತಾದ ಹಲವು ಕಾರಣಗಳು ಇದಕ್ಕಿರಬಹುದು. ತಲೆಯ ಹಿಂಭಾಗದಲ್ಲಿ ನೋವು, ಕುತ್ತಿಗೆ, ಭುಜ, ಮೊಣಕೈಗಳಲ್ಲಿ ನೋವು, ತಲೆಸುತ್ತು ಮುಂತಾದ ಹಲವು ಲಕ್ಷಣಗಳು. ಈ ನೋವು ಕಡಿಮೆ ಮಾಡುವುದಕ್ಕೆ ಉಪಯುಕ್ತ ಎನ್ನಬಹುದಾದ ಆಸನಗಳಿವು.

ಮಕರಾಸನ:

ಕುತ್ತಿಗೆಯಿಂದ ಹಿಡಿದು ಬೆನ್ನಿನ ಕೆಳಭಾಗದವರೆಗಿನ ನೋವು ಶಮನಕ್ಕೆ ಇದು ಪರಿಣಾಮಕಾರಿ. ಮೊದಲಿಗೆ, ಹೊಟ್ಟೆ ಅಡಿ ಮಾಡಿ, ಕಾಲುಚಾಚಿ ನೇರ ಮಲಗಿ. ಕೈಗಳೆರಡನ್ನೂ ಮುಖದ ಅಡಿಭಾಗಕ್ಕೆ ಬರುವಂತೆ ಮಡಿಸಿಟ್ಟುಕೊಳ್ಳಿ. ಕೈಗಳ ಮೇಲೆ ಗಲ್ಲ ಇರಿಸಿ, ಅದಾಗದಿದ್ದರೆ ಹಣೆಯನ್ನಾದರೂ ಇರಿಸಬಹುದು. ಹಲವು ನಿಮಿಷಗಳವರೆಗೆ ಹೀಗೆ ಮಲಗಿ, ದೇಹವನ್ನೆಲ್ಲ ಸಡಿಲ ಬಿಡಿ.

ಸೇತುಬಂಧಾಸನ:

ದೇಹಕ್ಕೆ ಬಲ ನೀಡುವುದು ಮಾತ್ರವಲ್ಲದೆ, ಶರೀರದ ಸಮನ್ವಯವನ್ನೂ ಈ ಆಸನ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಯಾವುದೇ ‌ʻಬ್ರಿಜ್ ಪೋಸ್ʼ ಎಂದು ಕರೆಸಿಕೊಳ್ಳುವಂಥ ಆಸನಗಳು ಕಾಲಿನಿಂದ ಹಿಡಿದು ಕುತ್ತಿಗೆಯವರೆಗಿನ ನಾನಾ ಭಾಗಗಳ ಬಲವನ್ನು ಹೆಚ್ಚಿಸುತ್ತವೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತುವ ಈ ಆಸನ ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ.

ಭುಜಂಗಾಸನ:

ಬೆನ್ನುಹುರಿಯ ಬಲವರ್ಧನೆಗೆ ಅಗತ್ಯವಾದ ಆಸನವಿದು. ಬೆನ್ನುಹುರಿಯ ಅಕ್ಕಪಕ್ಕದ ಸ್ನಾಯುಗಳು ಸಹ ಇದರಿಂದ ಬಲಗೊಳ್ಳುತ್ತವೆ. ಜೊತೆಗೆ, ಸೊಂಟ, ಕಿಬ್ಬೊಟ್ಟೆ, ಎದೆ, ಭುಜ ಮತ್ತು ತೋಳುಗಳ ಸ್ನಾಯುಗಳ ಮೇಲೂ ಇದು ಕೆಲಸ ಮಾಡುತ್ತದೆ. ಹೆಡೆ ಎತ್ತಿದ ಹಾವಿನಂತೆ ಕಾಣುವ ಭಂಗಿಯಿದು. ಮೊದಲಿಗೆ ಮುಖ ಅಡಿ ಮಾಡಿ ಮಲಗಿ. ಹಸ್ತಗಳನ್ನು ಎದೆಯ ಪಕ್ಕದಲ್ಲಿ ಊರಿ, ಕಟಿಯಿಂದ ಮೇಲೆ ಭಾಗವನ್ನು ನಿಧಾನಕ್ಕೆ ಮೇಲೆತ್ತಿ ನಿಲ್ಲಿಸಿ.

ಧನುರಾಸನ:

ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ಬೆನ್ನು ಮತ್ತು ಸೊಂಟದ ಬಲವರ್ಧನೆಗೆ ಇದು ಸಹಾಯಕ. ಇದಲ್ಲದೆ, ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ಶಮನ ಮಾಡುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಉಪಶಮನಕ್ಕೂ ಇದು ಉಪಯುಕ್ತವಾಗಿದೆ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು. ನೋಡುವುದಕ್ಕೆ ಬಿಲ್ಲಿನಂತೆ ಬಾಗಿರುವಂತೆ ಕಾಣುತ್ತದೆ ದೇಹ.

ಇದನ್ನೂ ಓದಿ:Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

ಗೋಮುಖಾಸನ:

ಎದೆ, ತೋಳು, ಭುಜ, ಕುತ್ತಿಗೆ, ಕಾಲುಗಳನ್ನು ಬಲಗೊಳಿಸುವ ಆಸನವಿದು. ಹೆಚ್ಚಿನ ವ್ಯಾಯಾಮವಿಲ್ಲದೆ ಜಡ ಬದುಕನ್ನು ನಡೆಸುತ್ತಿರುವವರಿಗೆ ಇದು ಹೆಚ್ಚು ಉಪಯುಕ್ತ. ಈ ಆಸನದಲ್ಲಿ ಬೆನ್ನು ಹುರಿ ಸರಿಯಾಗಿ ಹಿಗ್ಗಿ, ಅದರ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಬೆನ್ನು ನೇರವಾಗಿರಿಸಿಕೊಂಡು, ಕಾಲುಗಳೆರನ್ನು ಮುಂದೆ ಚಾಚಿ ಕುಳಿತುಕೊಳ್ಳಿ. ಮೊದಲಿಗೆ, ಬಲಗಾಲನ್ನು ಮಡಿಸಿ, ಬಲಪಾದ ಎಡಪೃಷ್ಠದ ಪಕ್ಕ ಬರುವಂತೆ ಇರಿಸಿ, ನಂತರ ಎಡಮಂಡಿಯನ್ನು ಬಲಮಂಡಿಯ ಮೇಲೆ ಬರುವಂತೆ ಮಡಿಸಿಡಿ. ಬಲಗೈ ಮೇಲೆತ್ತಿ, ಬೆನ್ನಿನ ಹಿಂದೆ ಮಡಿಸಿ, ಎಡಗೈಯನ್ನು ಕೆಳಗಿನಿಂದಲೇ ಮಡಿಸಿ, ಬಲಗೈ ಬೆರಳುಗಳನ್ನು ಹಿಡಿದುಕೊಳ್ಳಿ.

Exit mobile version