ಆಗ್ರಾ: ಹಣ, ಆಸ್ತಿ, ಅಧಿಕಾರದ ಆಸೆಗೆ ಮನುಷ್ಯರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಸಾಕ್ಷಿಯಾಗಿದೆ. ಇಂದಿಗೂ ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಕಳೆದುಕೊಂಡು ಬಹಳ ಕ್ರೂರವಾಗುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ (Land Dispute )ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಸಂತ್ರಸ್ತ ರೂಪ್ ಕಿಶೋರ್ (24) ಎಂಬುದಾಗಿ ತಿಳಿದುಬಂದಿದೆ. ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಜುಲೈ 18 ರಂದು ರೂಪ್ ಕಿಶೋರ್ ಮೇಲೆ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು ಹಲ್ಲೆ ನಡೆಸಿದ್ದರು. ಅವರು ಅವನನ್ನು ಕತ್ತು ಹಿಸುಕಿ ನಂತರ ಅವನು ಸತ್ತಿದ್ದಾನೆಂದು ಭಾವಿಸಿ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ. ಆದರೆ ಅದೃಷ್ಟವಶಾತ್ ಕಿಶೋರ್ ಅವರನ್ನು ಸಮಾಧಿ ಮಾಡಿದ ಪ್ರದೇಶವನ್ನು ಬೀದಿ ನಾಯಿಗಳು ಅಗೆದು ಅವರ ದೇಹವನ್ನು ಕಚ್ಚಿ ತಿನ್ನಲು ಮುಂದಾದಾಗ ಕಿಶೋರ್ ಗೆ ಪ್ರಜ್ಞೆ ಬಂದಿದೆ. ಆಗ ಅವರು ಅಲ್ಲೇ ಹತ್ತಿರದ ಪ್ರದೇಶಕ್ಕೆ ನಡೆದುಕೊಂಡು ಹೋಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಗಳು ತನ್ನ ಮಗನನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು, ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ, ನಂತರ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ ಎಂದು ಕಿಶೋರ್ ತಾಯಿ ಹೇಳಿದ್ದಾರೆ. ಈ ಬಗ್ಗೆ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್ ಮೀಡಿಯಾದಲ್ಲೀಗ ಇದೇ ಚರ್ಚೆ!
ಆಸ್ತಿಯ ವಿಚಾರಕ್ಕೆ ಜನರು ತಮ್ಮವರ ಮೇಲೆ ಹಲ್ಲೆ ಮಾಡುವ ಪ್ರಕರಣ ಇದೇ ಮೊದಲಲ್ಲಾ. ಈ ಹಿಂದೆ ಜುಲೈ ತಿಳಗಳಿನಲ್ಲಿ ಅನಂತಪುರ ಜಿಲ್ಲೆಯ ಗರ್ಲದಿನ್ನೆ ಮಂಡಲದ ಪೆನಕಚೆರ್ಲಾ ಗ್ರಾಮದಲ್ಲಿ ಆಸ್ತಿ, ಮನೆ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಆಕೆಯನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಜಿಲಾನಿ ಎಂಬ ವ್ಯಕ್ತಿ ತನ್ನ ಸಹೋದರಿ ಮೆಹಬೂಬಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.