ಬೆಂಗಳೂರು: ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರಕ್ಕೆ ಸಂಚರಿಸುತ್ತಿದ್ದ ನಂ.16576 ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಸಾರ್ವಜನಿಕರು ಬಹುದಿನಗಳಿಂದ ಮನವಿ ಮಾಡುತ್ತಿದ್ದರು. ಇದೀಗ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ನಂ.16576 ಎಕ್ಸ್ ಪ್ರೆಸ್ ರೈಲಿನ (Mangaluru Train Timings) ವೇಳಾಪಟ್ಟಿಯನ್ನು ಬದಲಾಯಿಸಿದೆ. ನವೆಂಬರ್ 1ರಿಂದ ಅದು ಜಾರಿಗೆ ಬರಲಿದೆ. ಈ ಮೂಲಕ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ರೈಲ್ವೆ ಸಹಾಯಕ ಸಚಿವ ವಿ ಸೋಮಣ್ಣ ಅವರು ಎಕ್ಸ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಈಗಿನ ರೈಲ್ವೆ ವೇಳಾಪಟ್ಟಿಯ ಪ್ರಕಾರ, ಈ ರೈಲು ಬೆಳಗ್ಗೆ 11:30ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8:45ರ ಸುಮಾರಿಗೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪುತಿತ್ತು. ಇನ್ನು ಮುಂದಿನ ದಿನಗಳಲ್ಲಿ ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಈ ವರ್ಷದ ನವೆಂಬರ್ 1ರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಹಾಗಾಗಿ ಇದುವರೆಗೆ ಬೆಳಗ್ಗೆ ತಡವಾಗಿ ಹೊರಟು, ರಾತ್ರಿ ಬೆಂಗಳೂರಿಗೆ ತಲುಪುತ್ತಿದ್ದ ಈ ರೈಲು, ಇನ್ನುಮುಂದೆ ಬೆಳಗ್ಗೆ ಬೇಗ ಹೊರಟು ಸಂಜೆಯ ವೇಳೆಗೆ ಬೆಂಗಳೂರು ತಲುಪಲಿದೆ. ಇದರಿಂದ ಪ್ರಯಾಣಿಕರು ರಾತ್ರಿಯೊಳಗೆ ತಮ್ಮ ಮನೆಗೆ ಸೇರಬಹುದು.
ಬಹುದಿನದ ಕನಸೀಗ ನನಸು
— V. Somanna (@VSOMANNA_BJP) August 1, 2024
ಮಂಗಳೂರು ಜಂಕ್ಷನ್ – ಯಶವಂತಪುರಕ್ಕೆ (ರೈಲು ಸಂಖ್ಯೆ 16576) ವಾರಕ್ಕೆ 3 ಬಾರಿ ಕಾರ್ಯಾಚರಿಸುವ ರೈಲಿನ ಸಮಯ ಬದಲಾಯಿಸುವಂತೆ ಬಹುದಿನಗಳಿಂದಲೂ ಸಾರ್ವಜನಿಕರಿಂದ ಮನವಿಯಿತ್ತು. ಇದೀಗ, ಸಾರ್ವಜನಿಕರ ಕೋರಿಕೆಯನ್ನು ಈಡೇರಿಸಲಾಗಿದೆ. ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ… pic.twitter.com/uF9ZohiBRZ
ಈ ಬಗ್ಗೆ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ.ಸೋಮಣ್ಣ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. “ಮಂಗಳೂರು ಜಂಕ್ಷನ್ – ಯಶವಂತಪುರಕ್ಕೆ (ರೈಲು ಸಂಖ್ಯೆ 16576) ವಾರಕ್ಕೆ 3 ಬಾರಿ ಕಾರ್ಯಾಚರಿಸುವ ರೈಲಿನ ಸಮಯ ಬದಲಾಯಿಸುವಂತೆ ಬಹುದಿನಗಳಿಂದಲೂ ಸಾರ್ವಜನಿಕರಿಂದ ಮನವಿಯಿತ್ತು. ಇದೀಗ, ಸಾರ್ವಜನಿಕರ ಕೋರಿಕೆಯನ್ನು ಈಡೇರಿಸಲಾಗಿದೆ. ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆʼʼ ಎಂದಿದ್ದಾರೆ.
ಇದನ್ನೂ ಓದಿ: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!
ಸಾರ್ವಜನಿಕರು ಈ ರೈಲಿನ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ವಿ. ಸೋಮಣ್ಣ ತಮ್ಮ ಸೋಶಿಯಲ್ ಮೀಡಿಯಾದ ಪೇಜ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ “ಸಮಯ ಬದಲಾವಣೆ ಮಾಡಲು ರೈಲ್ವೇ ಸಚಿವರನ್ನು ಒತ್ತಾಯಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ ಈಗ ಆದೇಶ ಹೊರಡಿಸಿರುವುದು ಕಂಡು ಖುಷಿಯಾಗಿದೆʼʼ ಎಂದು ತಿಳಿಸಿದ್ದಾರೆ.