ನೈರೋಬಿ: 42 ಮಹಿಳೆಯರನ್ನು ಕೊಂದು ತುಂಡು ತುಂಡಾಗಿ (Murder Case) ಕತ್ತರಿಸಿದ ವ್ಯಕ್ತಿಯೊಬ್ಬ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಂತರ ಆತ ನೈರೋಬಿ ಪೊಲೀಸ್ ಸೆಲ್‌ನಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೈದಿಗಳಿಗೆ ಉಪಾಹಾರವನ್ನು ನೀಡಲು ಅಧಿಕಾರಿಗಳು ಬೆಳಿಗ್ಗೆ 5 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯ ಸೆಲ್ ಗಳಿಗೆ ವಾಡಿಕೆಯಂತೆ ಭೇಟಿ ನೀಡಿದಾಗ ಆತ ನಾಪತ್ತೆಯಾಗಿರುವ ವಿಚಾರ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೀನ್ಯಾದ ರಾಜಧಾನಿಯ ಕೊಳೆಗೇರಿಯ ಕಸದ ರಾಶಿಯಲ್ಲಿ ವಿರೂಪಗೊಂಡ ದೇಹಗಳು ಭಯಾನಕವಾಗಿ ಪತ್ತೆಯಾದ ನಂತರ ಪೊಲೀಸರು ಈ ಕೃತ್ಯ ಎಸಗಿದವನು ರಕ್ತ ಪಿಶಾಚಿ ಹಾಗೂ ಮನೋರೋಗಿ ಎಂದು ತಿಳಿದು 33 ವರ್ಷದ ಕಾಲಿನ್ಸ್ ಜುಮೈಸಿಯನ್ನು ಕಳೆದ ತಿಂಗಳು ಬಂಧಿಸಿದ್ದರು. ಆದರೆ ಇದೀಗ ಆತ ಜೈಲ್‍ನಿಂದ ತಪ್ಪಿಸಿಕೊಂಡಿದ್ದಾನೆ. ಸೆಲ್ ಬಾಗಿಲು ತೆರೆದಾಗ, 13 ಕೈದಿಗಳು ಬಾಸ್ಕಿಂಗ್ ಬೇಯಲ್ಲಿ ತಂತಿ ಜಾಲರಿಯನ್ನು ಕತ್ತರಿಸುವ ಮೂಲಕ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಪರಾರಿಯಾದವರು ಜುಮೈಸಿ ಮತ್ತು ಇತರ 12 ಜನರು ಎರಿಟ್ರಿಯನ್ ಮೂಲದವರು. ಅವರು ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಂಬ ಕಾರಣಕ್ಕಾಗಿ ಬಂಧನದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೈದಿಗಳು ಪರಾರಿಯಾದ ಈ ಪೊಲೀಸ್ ಠಾಣೆಯು ಗಿಗಿರಿಯ ನೈರೋಬಿ ಜಿಲ್ಲೆಯಲ್ಲಿದೆ, ಇದು ವಿಶ್ವಸಂಸ್ಥೆಯ ಪ್ರಾದೇಶಿಕ ಪ್ರಧಾನ ಕಚೇರಿ ಮತ್ತು ಹಲವಾರು ರಾಯಭಾರ ಕಚೇರಿಗಳಿಗೆ ನೆಲೆಯಾಗಿದೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು 13 ಶಂಕಿತರನ್ನು ಬಂಧಿಸಲು ಪ್ರಮುಖ ಭದ್ರತಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೀನ್ಯಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಮುಕುರುವಿನ ನೈರೋಬಿ ಕೊಳೆಗೇರಿಯ ಪಾಳುಬಿದ್ದ ಕ್ವಾರಿಯಲ್ಲಿನ ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿದ ಹತ್ತು ಮಹಿಳೆಯರ ಶವಗಳು ಪತ್ತೆಯಾಗಿವೆ. ನಂತರ ಹಿಂದೂ ಮಹಾಸಾಗರದ ಕರಾವಳಿಯ ಬಳಿ ಮತ್ತಷ್ಟು ಶವಗಳು ಪತ್ತೆಯಾದ ನಂತರ ಶಕಹೋಲಾ ಫಾರೆಸ್ಟ್ ಹತ್ಯಾಕಾಂಡದಿಂದ ಈಗಾಗಲೇ ತತ್ತರಿಸುತ್ತಿರುವ ಕೀನ್ಯಾದವರಿಗೆ ಈ ಭಯಾನಕ ಶವಗಳ ಪತ್ತೆ ಆಘಾತವನ್ನುಂಟು ಮಾಡಿದೆ.
ಇದನ್ನೂ ಓದಿ:ಸೂಪರ್ ಮಾರ್ಕೆಟ್‍ನೊಳಗೇ ಒಳ ಉಡುಪು ಕಳಚಿ ಬ್ರೆಡ್ ಟ್ರೇನಲ್ಲಿಟ್ಟ ಯುವತಿ!
ಇದರ ತನಿಖೆ ಮಾಡಿದ ಪೊಲೀಸರು ಜುಲೈ 15 ರಂದು ಮುಂಜಾನೆ ನೈರೋಬಿ ಬಾರ್ ಬಳಿ ಯೂರೋ 2024 ಫುಟ್ಬಾಲ್ ಫೈನಲ್ ವೀಕ್ಷಿಸುತ್ತಿದ್ದ ಜುಮೈಸಿಯನ್ನು ಬಂಧಿಸಿದ್ದಾರೆ. 2022 ರಿಂದ ಎರಡು ವರ್ಷಗಳ ಅವಧಿಯಲ್ಲಿ 42 ಮಹಿಳೆಯರನ್ನು ಕೊಲೆ ಮಾಡಿರುವುದಾಗಿ ಜುಮೈಸಿ ಒಪ್ಪಿಕೊಂಡಿದ್ದಾನೆ ಮತ್ತು ತನ್ನ ಪತ್ನಿ ತನ್ನ ಮೊದಲ ಬಲಿಪಶುವಾಗಿದ್ದಾಳೆ ಎಂದು ತಿಳಿಸಿದ್ದಾನೆ.