Site icon Vistara News

Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Pig kidney

ಬೋಸ್ಟನ್: ಹಂದಿಯ ಮೂತ್ರಪಿಂಡವನ್ನು (Pig kidney) ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕದ (america) ಬೋಸ್ಟನ್ ನ (boston) ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ (Massachusetts General Hospital) ವೈದ್ಯರು ಯಶಸ್ವಿಯಾಗಿದ್ದಾರೆ. ಹಂದಿಯ ಕಿಡ್ನಿ ಅಳವಡಿಕೆ ಬಳಿಕ ರೋಗಿ ಆರೋಗ್ಯದಿಂದ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾನೆ.

ವೇಮೌತ್‌ ನ (Weymouth) ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಗೆ (Rick Slayman) ಹಂದಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಈ ಮೂಲಕ ಅವರು ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬುಧವಾರ ಮನೆಗೆ ತೆರಳಿದ್ದಾರೆ. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅಪರೂಪದ ಚಿಕಿತ್ಸೆ

ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ ಮಾನವನಿಗೆ ತಳಿಯ ಹಂದಿ ಮೂತ್ರಪಿಂಡದ ಕಸಿ ಮಾಡಿ ಅಮೆರಿಕದ ವೈದ್ಯರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Medicine Price: ಜನರಿಗೆ ಬಿಗ್‌ ರಿಲೀಫ್‌; 800 ಔಷಧಗಳ ಬೆಲೆ ಏರಿಕೆ ಇಲ್ಲ ಎಂದ ಕೇಂದ್ರ

ಮಾನವನಿಗೆ ಹಂದಿ ಮೂತ್ರಪಿಂಡದ ಕಸಿ ಮತ್ತು ಅದರ ಸಕಾರಾತ್ಮಕ ಫಲಿತಾಂಶವು ವೈದ್ಯಕೀಯ ಜಗತ್ತಿನ ಒಂದು ಪ್ರಮುಖ ಸಾಧನೆಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಮಾನವನ ಮೇಲೆ ಪ್ರಾಣಿಗಳ ಅಂಗಾಂಗ ಕಸಿಯ ಮೂಲಕ ಹೊಸ ಯುಗವೊಂದು ಪ್ರಾರಂಭವಾಗುವ ಸಾಧ್ಯತೆಯಿದೆ.

ಈ ಹಿಂದೆಯೂ ವೈದ್ಯರು ಮಾನವನಿಗೆ ಪ್ರಾಣಿಗಳ ಎರಡು ಅಂಗಾಂಗ ಕಸಿಗಳನ್ನು ನಡೆಸಿದ್ದರು. ಇದರಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಗಳ ಅಂಗಗಳನ್ನು ಮನುಷ್ಯರಿಗೆ ನೀಡಲಾಗಿದೆ. ಆದರೂ ಎರಡೂ ಪ್ರಕರಣಗಳು ವಿಫಲವಾದವು. ಈ ಎರಡು ಪ್ರಕರಣಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಗಳ ಹೃದಯವನ್ನು ಮನುಷ್ಯರಿಗೆ ಅಳವಡಿಸಲಾಗಿತ್ತು.

ಹಂದಿಯ ಹೃದಯ ಕಸಿ ವಿಫಲ

ಈ ಹಿಂದೆ ಇಬ್ಬರು ರೋಗಿಗಳಿಗೆ ಹಂದಿಯ ಹೃದಯವನ್ನು ಕಸಿ ಮಾಡಿದ ಕೆಲವೇ ವಾರಗಳಲ್ಲಿ ಸಾವನ್ನಪ್ಪಿದ್ದರು. ಇದಕ್ಕೆ ಒಬ್ಬ ರೋಗಿಯಲ್ಲಿ ರೋಗನಿರೋಧಕ ವ್ಯವಸ್ಥೆಯು ಈ ಕಸಿ ಮಾಡಲಾದ ಅಂಗವನ್ನು ತಿರಸ್ಕರಿಸಿರುವುದು ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತಮ ಚೇತರಿಕೆ

ಇದೀಗ ರಿಚರ್ಡ್ ಸ್ಲೇಮನ್‌ಗೆ ಕಸಿ ಮಾಡಲಾದ ಹಂದಿಯ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದುಹಾಕುತ್ತಿದ್ದು, ಮೂತ್ರವನ್ನು ಉತ್ಪಾದಿಸುತ್ತದೆ. ದೇಹದ ದ್ರವಗಳನ್ನು ಸಮತೋಲನಗೊಳಿಸುತ್ತದೆ ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಟೈಪ್- 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಸ್ಲೇಮನ್ ಮೂತ್ರಪಿಂಡ ಸಂಪೂರ್ಣ ವಿಫಲವಾಗಿತ್ತು. ಮಾರ್ಚ್ 21 ರಂದು ಹಂದಿಯ ಮೂತ್ರ ಪಿಂಡ ಕಸಿ ಮಾಡುವ ಸಂದರ್ಭದಲ್ಲಿ ಸ್ಲೇಮನ್ 2018 ರಲ್ಲಿ ಮಾನವ ಮೂತ್ರಪಿಂಡ ಕಸಿ ಪಡೆದಿದ್ದರು. ಆದರೆ ಅದು ಐದು ವರ್ಷಗಳ ಬಳಿಕ ವಿಫಲಗೊಳ್ಳಲು ಪ್ರಾರಂಭವಾಗಿತ್ತು.

ಇದೇ ಮೊದಲ ಪ್ರಯೋಗ

ಹಂದಿಯ ಮೂತ್ರಪಿಂಡವನ್ನು ಮಾನವನಿಗೆ ಕಸಿ ಮಾಡಿರುವುದು ಇದೇ ಮೊದಲು ಎಂದು ಮಾಸ್ ಜನರಲ್ ಹೇಳಿದ್ದಾರೆ. ಕೇಂಬ್ರಿಡ್ಜ್‌ನಲ್ಲಿರುವ ಇಜೆನೆಸಿಸ್‌ನಿಂದ ಮೂತ್ರಪಿಂಡವನ್ನು ದಾನ ಪಡೆಯಲಾಗಿದೆ. ಇದರಲ್ಲಿದ್ದ ಹಾನಿಕಾರಕ ಹಂದಿ ಜೀನ್‌ಗಳನ್ನು ತೆಗೆದುಹಾಕಲು ತಳೀಯವಾಗಿ ಸಂಪಾದಿಸಲಾಗಿದೆ. ಅದರ ಹೊಂದಾಣಿಕೆಯನ್ನು ಸುಧಾರಿಸಲು ಕೆಲವು ಮಾನವ ಜೀನ್‌ಗಳನ್ನು ಸೇರಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹಂದಿಯ ಮೂತ್ರಪಿಂಡ ಕಸಿಯ ಬಳಿಕ ಪ್ರತಿಕ್ರಿಯಿಸಿರುವ ಸ್ಲೇಮನ್, ತುಂಬಾ ಸಂತೋಷ ಸಮಯ. ವೈದ್ಯಕೀಯ ಲೋಕದ ಹೊಸ ಸಂಶೋಧನೆಯಲ್ಲಿ ಭಾಗಿಯಾಗಿರುವುದು ಹೆಚ್ಚು ಖುಷಿ ಕೊಟ್ಟಿದೆ. ಇಂದು ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಬಂದಿದ್ದೇನೆ. ಹಲವು ವರ್ಷಗಳ ಕಾಲ ನಾನು ಬದುಕಬಹುದು ಎನ್ನುವ ನಿರೀಕ್ಷೆ ಇದೆ. ಇದಕ್ಕಾಗಿ ದಾದಿಯರು, ವೈದ್ಯರು ಮತ್ತು ಇತರ ಎಲ್ಲ ಹಿತೈಷಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

Exit mobile version