Site icon Vistara News

Money Guide: ಪೋಸ್ಟ್ ಆಫೀಸ್‌ ಉಳಿತಾಯ ಯೋಜನೆಗಳ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

ಬೆಂಗಳೂರು: ದೇಶದ ಹಣಕಾಸು ಸಂಸ್ಥೆಗಳ ಮೂಲಕ ಸರ್ಕಾರದಿಂದ ವಿವಿಧ ಬೆಂಬಲಿತ ಉಳಿತಾಯ ಯೋಜನೆಗಳು (post office savings schemes) ಲಭ್ಯ ಇವೆ. ಈ ಯೋಜನೆಗಳು ಅವಧಿ, ಅರ್ಹತಾ ಮಾನದಂಡ ( tenure, eligibility criteria), ಠೇವಣಿ ಮಿತಿ (deposit limits) ಮತ್ತು ಬಡ್ಡಿ ದರಗಳಲ್ಲಿ ( interest rates) ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು ಸಮಾಜದ ವಿವಿಧ ವರ್ಗಗಳಿಗೆ ವಿಶಿಷ್ಟ ಸೇವೆಯನ್ನು ನೀಡುತ್ತದೆ.

ಅದರಲ್ಲೂ ವಿಶೇಷವಾಗಿ ಪೋಸ್ಟ್ ಆಫೀಸ್ ಮೂಲಕ ಹಿರಿಯ ನಾಗರಿಕರಿಗಾಗಿ, ಮಹಿಳಾ ಕಲ್ಯಾಣಕ್ಕಾಗಿ, ರೈತರು, ಉದ್ಯೋಗಿಗಳಿಗೆ.. ಹೀಗೆ ವ್ಯಕ್ತಿಗಳಿಗೆ ಅನುಗುಣವಾಗಿ ವಿಶೇಷ ಯೋಜನೆಗಳಿವೆ.

ಸಾಮಾನ್ಯವಾಗಿ ಸರ್ಕಾರ ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ. ಆದರೆ ಪೋಸ್ಟ್ ಆಫೀಸ್ ಉಳಿತಾಯ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (SCSS) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಗಳ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿಲ್ಲ. ಈ ಯೋಜನೆಗಳಿಗೆ ಹಿಂದಿನ ತ್ರೈಮಾಸಿಕದಲ್ಲಿ ನಿಗದಿಪಡಿಸಿದ ಬಡ್ಡಿ ದರಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಅಂಚೆ ಕಚೇರಿಗಳಿಂದ ನೀಡಲಾಗುವ 10 ಯೋಜನೆಗಳ ಏಪ್ರಿಲ್- ಜೂನ್ 2024ರ ಬಡ್ಡಿ ದರಗಳು ಇಂತಿವೆ.

1. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)

ಕನಿಷ್ಠ ಠೇವಣಿ ಮೊತ್ತ 1000 ರೂ. ನಿಂದ ಪ್ರಾರಂಭವಾಗಿ 30 ಲಕ್ಷಗಳ ಗರಿಷ್ಠ ಠೇವಣಿಯನ್ನು ಉಳಗೊಂಡಿರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ ಶೇ. 8.20.
50 ವರ್ಷ ಮೇಲ್ಪಟ್ಟವರು ಈ ಖಾತೆ ತೆರೆಯಬಹುದು. ಖಾತೆಯನ್ನು ತೆರೆದ ದಿನಾಂಕದಿಂದ 5 ವರ್ಷಗಳ ಅವಧಿ ಮುಗಿದ ಅನಂತರ ಖಾತೆಯನ್ನು ಮುಚ್ಚಬಹುದು. ಠೇವಣಿದಾರರು ಖಾತೆಯನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಆದಾಯ ತೆರಿಗೆ ಕಾಯಿದೆ ವಿನಾಯಿತಿಯೂ ಇದರಲ್ಲಿದೆ.

2. ರಾಷ್ಟ್ರೀಯ ಉಳಿತಾಯ ಯೋಜನೆ

ಕನಿಷ್ಠ 1000 ರೂ. ನಿಂದ ಗರಿಷ್ಠ 9 ಲಕ್ಷ ರೂ. ಗಳ ವರೆಗೆ ಮತ್ತು ಜಂಟಿ ಖಾತೆಯಲ್ಲಿಗರಿಷ್ಠ 15 ಲಕ್ಷ ರೂ. ವರೆಗೆ 5 ವರ್ಷಗಳ ಅವಧಿಯ ಖಾತೆ ಇದಾಗಿದೆ. ಖಾತೆಯನ್ನು ಒಂದು ವರ್ಷದ ಅನಂತರ ಅಕಾಲಿಕವಾಗಿ ಮುಚ್ಚಬಹುದು. ರಾಷ್ಟ್ರೀಯ ಉಳಿತಾಯ ಖಾತೆ ಬಡ್ಡಿ ದರಶೇ. 7.4ರಷ್ಟಿದೆ.

3. ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ

1, 2, 3 ಮತ್ತು 5 ವರ್ಷಗಳ ಕನಿಷ್ಠ ಠೇವಣಿ 1000 ರೂ. ನಿಂದ ಪ್ರಾರಂಭವಾಗುವ ಈ ಯೋಜನೆಯಲ್ಲಿ ಗರಿಷ್ಠ ಠೇವಣಿಗೆ ಯಾವುದೇ ಮಿತಿ ಇಲ್ಲ. ಆರು ತಿಂಗಳ ಅನಂತರ ಖಾತೆಯನ್ನು ಮುಚ್ಚಬಹುದು. ಇದರಲ್ಲಿ ಒಂದು ವರ್ಷಕ್ಕೆ ಶೇ. 6.90, 2 ವರ್ಷಕ್ಕೆ ಶೇ. 7, 3 ವರ್ಷಕ್ಕೆ ಶೇ. 7.10 ಮತ್ತು ಐದು ವರ್ಷಗಳಿಗೆ ಶೇ. 7.5 ಬಡ್ಡಿ ದರವಿದೆ.

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

ಕನಿಷ್ಠ ಠೇವಣಿ 1000 ರೂ. ನಿಂದ ಪ್ರಾರಂಭವಾಗುವ ಈ ಯೋಜನೆಯಲ್ಲಿ ವಯಸ್ಕರು ತನಗಾಗಿ ಅಥವಾ ಅಪ್ರಾಪ್ತರ ಪರವಾಗಿ ಖಾತೆ ತೆರೆಯಬಹುದು. ಇದರಲ್ಲಿ ಬಡ್ಡಿ ದರ ಶೇ. 7.7ರಷ್ಟಿದೆ.

5. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (PPF)

ಕನಿಷ್ಠ ಠೇವಣಿ 500 ರೂ. ನಿಂದ ಗರಿಷ್ಠ ಠೇವಣಿ 1,50,000 ರೂ. ಮಿತಿಯೊಂದಿಗೆ ತೆರೆಯಲಾಗುವ ಈ ಯೋಜನೆಗೆ ಸಾಲ ಸೌಲಭ್ಯ ಲಭ್ಯವಿದೆ. 7ನೇ ಹಣಕಾಸು ವರ್ಷದಿಂದ ಪ್ರತಿ ವರ್ಷ ಹಿಂಪಡೆಯಲು ಅವಕಾಶವಿದೆ. ಇದರ ಬಡ್ಡಿ ದರ ಶೇ. 7.1ರಷ್ಟಿದೆ.

6. ಸುಕನ್ಯಾ ಸಮೃದ್ಧಿ ಖಾತೆ (SSY)

  1. ಕನಿಷ್ಠ ಠೇವಣಿ 250 ರೂ. ನಿಂದ ಗರಿಷ್ಠ ಠೇವಣಿ 1.5 ಲಕ್ಷ ರೂ. ವರೆಗಿನ ಈ ಯೋಜನೆ 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯಬಹುದು. ಅಂಚೆ ಕಚೇರಿಗಳು ಮತ್ತು ಅಧಿಕೃತ ಬ್ಯಾಂಕ್‌ಗಳಲ್ಲಿ ಈ ಖಾತೆಗಳನ್ನು ತೆರೆಯಬಹುದು. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಆಕೆಗೆ ಮದುವೆಯಾದರೆ ಖಾತೆಯನ್ನು ಅವಧಿಗೂ ಮುನ್ನವೇ ಮುಚ್ಚಬಹುದು. ಇದರ ಬಡ್ಡಿ ದರ ಶೇ. 8.20ರಷ್ಟಿದೆ.

7. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ

ಇದೊಂದು ಭಾರತ ಸರ್ಕಾರದ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, 2023 ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ ಶೇ. 7.5 ರ ಸ್ಥಿರ ಬಡ್ಡಿದರದಲ್ಲಿ 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ. ವರೆಗೆ ಠೇವಣಿ ಸೌಲಭ್ಯವನ್ನು ನೀಡುತ್ತದೆ.

ಇದನ್ನೂ ಓದಿ: Tax Regime: ತೆರಿಗೆಯಲ್ಲಿ ಬದಲಾವಣೆ ಇಲ್ಲ: ಈ ಬಗ್ಗೆ ತಿಳಿಯಬೇಕಾದ 6 ಸಂಗತಿಗಳು

8. ಕಿಸಾನ್ ವಿಕಾಸ್ ಪತ್ರ

ಕನಿಷ್ಠ 1000 ರೂ. ನಿಂದ ಪ್ರಾರಂಭವಾಗುವ ಈ ಯೋಜನೆಯಲ್ಲಿ ಗರಿಷ್ಠ ಠೇವಣಿ ಮಿತಿ ಇಲ್ಲ. 10 ವರ್ಷ ತಲುಪಿದ ಅಪ್ರಾಪ್ತ ವಯಸ್ಕನು ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ಬಡ್ಡಿ ದರ ಶೇ. 7.5ರಷ್ಟಿದೆ.

9. ಮರುಕಳಿಸುವ ಠೇವಣಿ ಖಾತೆ ಯೋಜನೆ

ಈ ಯೋಜನೆಯಲ್ಲಿ, ಗರಿಷ್ಠ ಮಿತಿಯನ್ನು ನಿಗದಿಪಡಿಸದೆ ತಿಂಗಳಿಗೆ ಕನಿಷ್ಠ 100 ರೂ. ಗಳನ್ನು ಠೇವಣಿ ಮಾಡಬಹುದು. ಖಾತೆ ತೆರೆದ ಒಂದು ವರ್ಷದ ಅನಂತರ ಖಾತೆಯಲ್ಲಿರುವ ಮೊತ್ತದ ಶೇ. 50 ರಷ್ಟು ಹಿಂಪಡೆಯಲು ಅನುಮತಿ ಇದೆ.ಇದರಲ್ಲಿ ಶೇ. 6.7ರಷ್ಟು ಬಡ್ಡಿ ದರವಿದೆ.

10. ಪೋಸ್ಟ್ ಆಫೀಸ್ ಉಳಿತಾಯ ಖಾತೆ

ಕನಿಷ್ಠ 500 ರೂ ಠೇವಣಿ ಅಗತ್ಯವಿದೆ ಮತ್ತು ಗರಿಷ್ಠ ಠೇವಣಿ ಮಿತಿ ಇರುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಪ್ರತ್ಯೇಕವಾಗಿ ಅಥವಾ ವಯಸ್ಕ ವ್ಯಕ್ತಿಯೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತರ ಪರವಾಗಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಶೇ. 4 ಬಡ್ಡಿ ದರ ನೀಡಲಾಗುತ್ತದೆ.

Exit mobile version