ಮಹಿಳೆಯ ಜೊತೆ ಪುರುಷರು ಕ್ರೂರವಾಗಿ ವರ್ತಿಸುವಾಗ ಮತ್ತೊಬ್ಬ ಮಹಿಳೆ ಸಹಾಯಕ್ಕೆ ಬರುವುದನ್ನು ನಾವು ಹಲವು ಕಡೆ ನೋಡಿರುತ್ತೇವೆ. ಆದರೆ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ಈ ಘಟನೆಯಿಂದ ತಿಳಿಯುತ್ತದೆ. ಮಹಿಳೆಯೊಬ್ಬಳು ತನ್ನ ಮೂವರು ಪುರುಷ ಸಹಚರರೊಂದಿಗೆ ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದಲ್ಲದೇ ಆಕೆಯ ಬಟ್ಟೆಗಳನ್ನು ಬಿಚ್ಚಿ (Sexual Abuse) ಹಿಂಸಿಸಿದ್ದಾಳೆ. ಅಲ್ಲದೇ, ಆಕೆಯ ಖಾಸಗಿ ಭಾಗಕ್ಕೆ ಕೋಲನ್ನು ತೂರಿಸಿ ಗಾಯಗೊಳಿಸಿದ್ದಾಳೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದೆ.
ಮಾಹಿತಿ ಪ್ರಕಾರ, ಮುರಾರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾದ ಸಂತ್ರಸ್ತೆ ಬಾಲಕಿ ಕೆಲವು ದಿನಗಳ ಹಿಂದೆ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಭಗವತಿ ಕುಶ್ವಾಹ ಎಂಬ ಮಹಿಳೆಯ ಅಂಗಡಿಗೆ ಹೋಗಿದ್ದಳು. ಅಲ್ಲಿ ಕುಶ್ವಾಹ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ ಮತ್ತು ಅವಳ ಪುರುಷ ಸಹಚರರ ಮುಂದೆ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿದ್ದಾಳೆ. ಇದರಿಂದ ಸಂತ್ರಸ್ತೆ ಅಳುತ್ತಾ ತನ್ನ ಮನೆಗೆ ಬಂದು ತನ್ನ ಅಕ್ಕನಿಗೆ ದೂರು ನೀಡಿದ್ದಾಳೆ. ಆಗ ಅಕ್ಕ ಆರೋಪಿ ಕುಶ್ವಾಹಳ ಅಂಗಡಿಗೆ ಬಂದು ಈ ಬಗ್ಗೆ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ನಂತರ, ಮಂಗಳವಾರ, ಆರೋಪಿ ಭಗವತಿ ಕುಶ್ವಾಹ ಮತ್ತು ಅವಳ ಸಹಚರರಾದ ಜೀತು ಕುಶ್ವಾಹ, ಸಂತೋಷ್ ಮತ್ತು ರಾಹುಲ್ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಸಂತ್ರಸ್ತೆ ಬಾಲಕಿ ಮೇಲೆ ಹಲ್ಲೆ ನಡೆಸಿದರು. ಆಕೆಗೆ ಕೋಲಿನಿಂದ ಹೊಡೆದು ಥಳಿಸಿದ್ದಲ್ಲದೇ ಅವಳ ಖಾಸಗಿ ಭಾಗಕ್ಕೆ ಕೋಲನ್ನು ತುರುಕಿದರು. ಈ ಹಲ್ಲೆಯಿಂದ 15 ವರ್ಷದ ಸಂತ್ರಸ್ತೆಯ ಕಾಲು ಮುರಿತಕ್ಕೊಳಗಾಗಿದ್ದಲ್ಲದೇ ದೇಹದಲ್ಲಿ ಗಂಭೀರ ಗಾಯಗಳು ಕೂಡ ಕಂಡು ಬಂದಿವೆ.
ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತೆ ತನ್ನ ಕಾಲಿಗೆ ಪ್ಲಾಸ್ಟರ್ ಕಟ್ಟಿಕೊಂಡು ಜುಲೈ 16ರಂದು ಎಸ್ಪಿ ಕಚೇರಿಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ತನಗೆ ಹಿಂಸೆ ನೀಡಿದ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ವಿನಂತಿಸಿಕೊಂಡಿದ್ದಾಳೆ. ಹಾಗಾಗಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪಿ ಸಂಸದ ಭರತ್ ಸಿಂಗ್ ಕುಶ್ವಾಹ ಅವರ ಆಪ್ತನಾಗಿದ್ದು, ಪೊಲೀಸರು ಆತನ ವಿರುದ್ಧ ಇನ್ನೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಹಿರಿಯ ಸಹೋದರಿ ಆರೋಪಿಸಿದ್ದಾರೆ.
ಇದನ್ನೂ ಓದಿ: 8 ವರ್ಷದ ಮಗನ ತಲೆ ನೆಲಕ್ಕೆ ಅಪ್ಪಳಿಸಿ, ಮೈಕೈಯೆಲ್ಲ ಕಚ್ಚಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ
ಈ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ, “ಈ ಪ್ರಕರಣದಲ್ಲಿ, ಇಬ್ಬರ ನಡುವೆ ಜಗಳವಾಗಿತ್ತು ಮತ್ತು ಇಬ್ಬರು ವಿರುದ್ಧ ಪ್ರಕರಣ ದಾಖಲಿಸಿವೆ ಎಂದು ಹೇಳಿದರು. ವಿದ್ಯಾರ್ಥಿನಿಯನ್ನು ಸಾಕಷ್ಟು ಥಳಿಸಲಾಗಿದೆ ಮತ್ತು ಅವಳ ಕಾಲು ಮುರಿದಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಮತ್ತೆ ತೆಗೆದುಕೊಳ್ಳಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂಬುದಾಗಿ ತಿಳಿಸಿದ್ದಾರೆ.