Site icon Vistara News

Sexual Abuse: ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

Sexual Abuse


ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಲೇ ಇದೆ. ಇದೀಗ ಮುಸ್ಲಿಂ ಧರ್ಮಗುರು ಒಬ್ಬ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ಅಪಹರಿಸಿ ಬಾಂಗ್ಲಾದೇಶದ ಗಡಿಗೆ ಕರೆದೊಯ್ದು ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರ (Sexual Abuse) ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕುಶಿನಗರ ಪೊಲೀಸರು ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಮತ್ತು ಅಕ್ರಮ ಮತಾಂತರದ ಆರೋಪದ ಮೇಲೆ ಮುಸ್ಲಿಂ ಧರ್ಮಗುರುವನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ತಾಯಿ ಆಗಸ್ಟ್ 8, 2024ರಂದು ಮುಸ್ಲಿಂ ಧರ್ಮಗುರು ವಿರುದ್ಧ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಿವಾಸಿ ಮೌಲಾನಾ ಮುಹಮ್ಮದ್ ಓವೈಸ್ ತನ್ನ ಮಗಳನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಮತ್ತು ಅಕ್ರಮವಾಗಿ ಮತಾಂತರ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮೌಲಾನಾ ಮುಹಮ್ಮದ್ ಓವೈಸ್ ಕಳೆದ ಎರಡು ವರ್ಷಗಳಿಂದ ಉತ್ತರ ಪ್ರದೇಶದ ಕುಶಿನಗರದ ಮದರಸಾದಲ್ಲಿ ಧರ್ಮಗುರುವಾಗಿ ಬೋಧನೆ ಮಾಡುತ್ತಿದ್ದಾನೆ.

ಘಟನೆಯ ಬಗ್ಗೆ ಮಾತನಾಡಿದ ಕುಶಿನಗರ ಎಸ್ಪಿ ಸಂತೋಷ್ ಕುಮಾರ್ ಮಿಶ್ರಾ, ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಗ್ವಾಲ್ಪೋಖರ್ ಪೊಲೀಸ್ ಠಾಣೆ ಪ್ರದೇಶದ ಉತ್ತರ ಜಾರ್ಬಾರಿ ನಿವಾಸಿ ಮೌಲಾನಾ ಮುಹಮ್ಮದ್ ಒವೈಸ್ ಉತ್ತರ ಪ್ರದೇಶದ ಕುಶಿನಗರದಲ್ಲಿರುವ ಮದರಸಾದಲ್ಲಿ ಬೋಧನೆ ಮಾಡಲು ಬಂದಿದ್ದರು. ಅವನು ಬಾಲಕಿಯನ್ನು ಬಾಂಗ್ಲಾದೇಶದ ಗಡಿಯಲ್ಲಿರುವ ತನ್ನ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಅವಳನ್ನು ತನ್ನ ಧರ್ಮಕ್ಕೆ ಮತಾಂತರಿಸಿದ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರಿಂದ ಅವಳು ಈಗ ಗರ್ಭಿಣಿಯಾಗಿದ್ದಾಳೆ. ಆತ ಬಾಲಕಿಯ ಹೆಸರನ್ನು ರಾಣಿ ಖತುನ್ ಎಂದು ಬದಲಾಯಿಸಿದ್ದಾನೆ. ಆರೋಪಿ ಆಗಾಗ ಬಾಂಗ್ಲಾದೇಶದ ಗಡಿಗೆ ಭೇಟಿ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಎಸ್ಪಿ ಹೇಳಿದ್ದಾರೆ.

ಇದನ್ನೂ ಓದಿ: ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಕಂಡಕ್ಟರ್‌ ಮೇಲೆ ನಾಗರಹಾವನ್ನು ಎಸೆದ ಮಹಿಳೆ!

ಸೋಮವಾರ (ಆಗಸ್ಟ್ 11) ಮತ್ತು ಮಂಗಳವಾರ (ಆಗಸ್ಟ್ 12) ಮಧ್ಯರಾತ್ರಿ, ಮೌಲಾನಾ ಮುಹಮ್ಮದ್ ಒವೈಸಿ ಅಪ್ರಾಪ್ತ ಬಾಲಕಿಯೊಂದಿಗೆ ನಗರದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಕುಶಿನಗರ ಪೊಲೀಸರಿಗೆ ಸಿಕ್ಕಿತು. ಕುಶಿನಗರ ಪಿಎಸ್ ಎಸ್ಎಚ್ಒ ಓಂಪ್ರಕಾಶ್ ತಿವಾರಿ ಮತ್ತು ಮನ್ಸಛಪರ್ ಪಿಎಸ್ ಹೊರಠಾಣೆಯ ಉಸ್ತುವಾರಿ ಗೌರವ್ ಶುಕ್ಲಾ ತಂಡವನ್ನು ರಚಿಸಿ ಸ್ಥಳಕ್ಕೆ ತಲುಪಿದರು. ಆರೋಪಿಯು ಸಂತ್ರಸ್ತೆಯೊಂದಿಗೆ ಪದ್ರೌನಾಗೆ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ಪೊಲೀಸರು ಕಂಡು ಆತನನ್ನು ಬಂಧಿಸಿದರು. ಬಾಲಕಿಯನ್ನು ಅವಳ ಹೆತ್ತವರ ಬಳಿಗೆ ಕಳುಹಿಸಲಾಯಿತು ಎನ್ನಲಾಗಿದೆ. ಅಪಹರಣ, ಅತ್ಯಾಚಾರ ಮತ್ತು ಅಕ್ರಮ ಮತಾಂತರಕ್ಕಾಗಿ ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Exit mobile version