ಚೆನ್ನೈ: ತಾಯಿ ಎಂದರೆ ದೇವರಿಗೆ ಸಮಾನದವಳು ಎಂದು ಎಲ್ಲಾ ಮಕ್ಕಳು ಭಾವಿಸುತ್ತಾರೆ. ತಾಯಿ ತನಗೆ ಎಷ್ಟೇ ಕಷ್ಟ ಬಂದರೂ ಅದನ್ನು ಸಹಿಸಿಕೊಂಡ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಾಳೆ. ಅದರಲ್ಲೂ ಕಾಮುಕರು ತನ್ನ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿದರೆ ಅವರನ್ನು ಕೊಲೆ ಮಾಡಿಯಾದರೂ ತನ್ನ ಮಗಳ ಮಾನ ಕಾಪಾಡುತ್ತಾಳೆ. ಅಂತಹದರಲ್ಲಿ ಇಲ್ಲೊಬ್ಬ ತಾಯಿ ತನ್ನ ಸಾಲವನ್ನು ತೀರಿಸಲು ತಾನು ಹೆತ್ತ ಮಗಳನ್ನೇ ಕಾಮುಕರ ಬಾಯಿಗೆ ತಳ್ಳಲು ಮುಂದಾಗಿದ್ದಾಳೆ. ಆಕೆಗೆ ಲೈಂಗಿಕ ಕ್ರಿಯೆಯಲ್ಲಿ(Sexual Abuse) ತೊಡಗುವಂತೆ ಒತ್ತಾಯಿಸಿದ್ದಾಳೆ.
ನೆರೆಮನೆಯವರಿಂದ ಪಡೆದ 40,000 ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ತಾಯಿ ತನ್ನನ್ನು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬಲವಂತಪಡಿಸಿದ್ದಾಳೆ ಎಂದು ಆರೋಪಿಸಿ 16 ವರ್ಷದ ಬಾಲಕಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಾಯಿ ತಾನು ಮಾಡಿದ ಸಾಲವನ್ನು ತೀರಿಸಲು ತನ್ನ ಮಗಳನ್ನು ಶಾಲೆಗೂ ಕಳುಹಿಸಿದೆ ಸಾಲ ನೀಡಿದವರ ಮನೆಯಲ್ಲಿ ಮನೆಗೆಲಸ ಮಾಡಲು ನೇಮಿಸಿದ್ದಾಳೆ. ಆದರೆ ಸಾಲ ನೀಡಿದವರು ಅವಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿದ್ದಾರೆ. ಆಗ ಬಾಲಕಿ ತನ್ನ ತಾಯಿಗೆ ಪರಿಸ್ಥಿತಿಯನ್ನು ತಿಳಿಸಿದರೆ ಆಕೆ ಅವರ ಮನೆಗೆ ಮರಳಿ ಹೋಗಿ ಅವರು ಹೇಳಿದಂತೆ ಕೇಳು ಎಂದು ತಿಳಿಸಿದ್ದಾಳೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ವರದಿ ಪ್ರಕಾರ ಬಾಲಕಿಯ ತಾಯಿ ಹಲವು ವರ್ಷಗಳ ಹಿಂದೆ ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮುತ್ತುಲಕ್ಷ್ಮಿಯಿಂದ ಸಾಲ ಪಡೆದಿದ್ದರು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಮಗಳನ್ನು ಮುತ್ತುಲಕ್ಷ್ಮಿಯ ಮನೆಯಲ್ಲಿ ಮನೆಗೆಲಸ ಮಾಡಲು ಕಳುಹಿಸಿದರು. ಕಾಲಾನಂತರದಲ್ಲಿ, ಮುತ್ತುಲಕ್ಷ್ಮಿ ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ವೃತ್ತಿಯಲ್ಲಿ ತೊಡಗುವಂತೆ ಒತ್ತಾಯಿಸಿದಳು ಎಂದು ವರದಿಯಾಗಿದೆ. ಆದರೆ ಬಾಲಕಿ ಅದನ್ನು ವಿರೋಧಿಸಿದಳು ಮತ್ತು ಮುತ್ತುಲಕ್ಷ್ಮಿಯೊಂದಿಗೆ ಜಗಳವಾಡಿ ಅಲ್ಲಿಂದ ಓಡಿಹೋದಳು. ಕೊನೆಗೆ ಆಕೆ ತನ್ನ ತಾಯಿಯ ಬಳಿಗೆ ಬಂದಿದ್ದಾಳೆ. ಆದರೆ ಆಕೆಯ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಾಯಿಗೆ ಹೇಳಿದರೂ ಆಕೆಯ ತಾಯಿ ಮುತ್ತುಲಕ್ಷ್ಮಿಯ ಮನೆಗೆ ಹಿಂತಿರುಗುವಂತೆ ಒತ್ತಾಯಿಸಿದಳು. ಆಗ ಬಾಲಕಿ ಬೇರೆ ದಾರಿ ಕಾಣದೆ ಮತ್ತೆ ಮನೆ ಬಿಟ್ಟು ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ.
ಇದನ್ನೂ ಓದಿ: ತನ್ನ ಸ್ನೇಹಿತನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಡ; ಇವನೆಂಥ ಗಂಡ!
ಆದರೆ ಇಷ್ಟಕ್ಕೆ ಸುಮ್ಮನಾಗದ ಬಾಲಕಿಯ ತಾಯಿ ಫೋನ್ ಮಾಡಿ ಬಾಲಕಿಗೆ ಕಿರುಕುಳ ನೀಡಲು ಶುರುಮಾಡಿದ್ದಾಳೆ. ಇದರಿಂದ ಬೇಸತ್ತ ಬಾಲಕಿ ಎಂಕೆಬಿ ನಗರ ಆಲ್ ವುಮೆನ್ ಪೊಲೀಸ್ ಠಾಣೆಯಲ್ಲಿ (ಎಡಬ್ಲ್ಯೂಪಿಎಸ್) ದೂರು ದಾಖಲಿಸಿದ್ದಾಳೆ. ಆಕೆಯ ದೂರಿನ ನಂತರ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮುತ್ತುಲಕ್ಷ್ಮಿ, ಆಕೆಯ ಪತಿ ನಿಶಾಂತ್, ಅವರ ಸಂಬಂಧಿಕರಾದ ಅಜಿತ್ (22), ಸಂಜಯ್ (22) ಮತ್ತು ಮಗೇಶ್ವರನ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿದೆ. ಎಲ್ಲಾ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.