Site icon Vistara News

Sexual Harassment Case: ಜನಜಂಗುಳಿಯ ಮಧ್ಯೆ ಮಹಿಳೆಯ ಖಾಸಗಿ ಭಾಗಕ್ಕೆ ಕೈ ಹಾಕಿದ ಬಸ್‍ ಕಂಡಕ್ಟರ್‌!

Sexual Harassment Case


ಹೈದರಾಬಾದ್: ಕೆಟ್ಟ ಕಾಮುಕರೇ ತುಂಬಿರುವಂತಹ ಈ ಪ್ರಪಂಚದಲ್ಲಿ ಮಹಿಳೆಯರು ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕಿರುಕುಳ(Sexual Harassment Case )ವನ್ನು ಅನುಭವಿಸುತ್ತಿದ್ದಾರೆ. ಕೆಲವು ಮಹಿಳೆಯರು ಮರ್ಯಾದೆಗೆ ಅಂಜಿ ಅದನ್ನು ಮುಚ್ಚಿದ್ದರೆ ಕೆಲವರು ಅದನ್ನು ಎದುರಿಸಿ ನಿಲ್ಲುತ್ತಾರೆ. ಅಂತಹದೊಂದು ಘಟನೆ ಹೈದರಾಬಾದ್‍ನ ಟಿಎಸ್ಆರ್‌ಟಿಸಿ ಬಸ್‍ನಲ್ಲಿ ನಡೆದಿದ್ದು, ಇದಕ್ಕೆ ಮಹಿಳೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಹೈದರಾಬಾದ್‍ನ ಮಹಿಳೆಯೊಬ್ಬಳು ಹಿಮಾಯತ್ ನಗರಕ್ಕೆ ಹಿಂದಿರುಗುವಾಗ ಟಿಎಸ್ಆರ್‌ಟಿಸಿ ಬಸ್‍ನಲ್ಲಿ ತನಗಾದ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಸರ್ಕಾರಿ ಬಸ್ ಕಂಡಕ್ಟರ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದು ಆರೋಪ ಮಾಡಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌ನ 21 ವರ್ಷದ ಮಹಿಳೆಯೊಬ್ಬಳು ಮಣಿಕೊಂಡದಿಂದ ಹಿಮಾಯತ್ ನಗರಕ್ಕೆ ಹಿಂದಿರುಗಲು 65 ಮೀ / 123 ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಆ ವೇಳೆ ಬಸ್‍ನಲ್ಲಿ ಪ್ರಯಾಣಿಕರು ತುಂಬಿದ್ದರು. ಆಗ ಬಸ್ಸಿನ ಕಂಡಕ್ಟರ್ ಕಿಕ್ಕಿರಿದ ಬಸ್ಸಿನ ಅವಕಾಶವನ್ನು ತೆಗೆದುಕೊಂಡು ಆತ ಆಕೆಯ ಎದೆ ಭಾಗವನ್ನು ಸ್ಪರ್ಶಿಸಲು ಪ್ರಾರಂಭಿಸಿದ. ನಂತರ ಅವನು ಆಕೆಯ ಸೊಂಟದ ಕೆಳಗಿನ ಖಾಸಗಿ ಭಾಗವನ್ನು ಸ್ಪರ್ಶಿಸಿದನಂತೆ. ಹಾಗಾಗಿ ತಾನು ಜೋರಾಗಿ ಕೂಗಿ ಕೊಂಡಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಎಷ್ಟು ಜನ ಹದಿಹರೆಯದ ಹುಡುಗಿಯರು ಮೌನವಾಗಿ ಇದನ್ನು ಸಹಿಸಿಕೊಳ್ಳುತ್ತಾರೆ ಎಂಬುದು ತನಗೆ ತಿಳಿದಿಲ್ಲ. ಆದರೆ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಬೇಕೆಂದು ತಾನು ಬಯಸುವುದಾಗಿ ತಿಳಿಸಿದ್ದಾಳೆ. ಅದನ್ನು ಆಕೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಬಿಆರ್ ಎಸ್ ನಾಯಕ ಕೆ.ಟಿ.ರಾಮರಾವ್, ಹೈದರಾಬಾದ್ ಪೊಲೀಸರು ಮತ್ತು ಮಹಿಳಾ ಸಂಘಗಳಿಗೆ ಟ್ಯಾಗ್ ಮಾಡಿದ್ದಾಳೆ.

ಇದನ್ನೂ ಓದಿ: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

ಇದಕ್ಕೆ ಪ್ರತಿಕ್ರಿಯಿಸಿದ ಟಿಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷ ವಿ.ಸಿ.ಸಜ್ಜನರ್, ಬಸ್ಸಿನ ಕಂಡಕ್ಟರ್ ವಿರುದ್ಧ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಇಂತಹ ಘಟನೆಗಳನ್ನು ಮತ್ತೆ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಾಗೇ ಸಂತ್ರಸ್ತೆ ಸೈಬರಾಬಾದ್ ಕಮಿಷನರೇಟ್‍ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಟಿಎಸ್ಆರ್‌ಟಿಸಿ ಎಂಡಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮಹಿಳಾ ಸಂಘಗಳು ಈ ಘಟನೆಯನ್ನು ತಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದ ತಿಳಿಸಿ, ಸಂತ್ರಸ್ತೆಯ ಸಹಾಯಕ್ಕೆ ನಿಲ್ಲುವುದಾಗಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.

Exit mobile version