ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಆಗಾಗ ಕೇಳಿ ಬರುತ್ತಲೇ ಇದೆ. ಬಸ್,
ರೈಲುಗಳಲ್ಲಿ , ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳಂತಹ ಹೊರಗಿನ ಸ್ಥಳದಲ್ಲಿ ಮಾತ್ರವಲ್ಲ ಕೆಲವೊಮ್ಮೆ ಕೆಲವು ಮಹಿಳೆಯರು ತಮ್ಮ ಮನೆಯೊಳಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಒಟ್ಟಾರೆ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗುವುದಿಲ್ಲ. ಇದೀಗ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment )ನೀಡಿದ ಘಟನೆ ಬೆಳಕಿಗೆ ಬಂದಿದೆ.
ಇಟಾರ್ಸಿಯಿಂದ ಭೋಪಾಲ್‍ಗೆ ತೆರಳುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಸೆಕೆಂಡ್ ಕ್ಲಾಸ್ ಎಸಿ ಕೋಚ್ ಎ -1 ರಲ್ಲಿ 14 ವರ್ಷದ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಬಾಲಕಿ ತನ್ನ ಅಜ್ಜಿಯ ಜೊತೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆಗ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸಿದ್ದಲ್ಲದೇ ಅಸಭ್ಯ ಸನ್ನೆಗಳನ್ನು ಸಹ ಮಾಡಿದ್ದಾನೆ. ಕಿರುಕುಳವನ್ನು ಸಹಿಸಲಾಗದೆ ಭಯಭೀತಳಾದ ಬಾಲಕಿ ತನ್ನ ಅಜ್ಜಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ಈ ಘಟನೆಯ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿ ಆರ್ ಪಿ) ನಿಯಂತ್ರಣ ಕೊಠಡಿಗೆ ವರದಿ ಮಾಡಿದ್ದಾಳೆ. ರೈಲು ಬೀನಾ ತಲುಪಿದಾಗ, ಜಿಆರ್‌ಪಿ ಅಧಿಕಾರಿಗಳು ಬಂದು, ತಕ್ಷಣದ ಕ್ರಮ ತೆಗೆದುಕೊಳ್ಳುವ ಬದಲು, ಎಫ್ಐಆರ್ ದಾಖಲಿಸಲು ರೈಲಿನಿಂದ ಇಳಿಯುವಂತೆ ಅವರು ಹುಡುಗಿಗೆ ಸೂಚಿಸಿದರು. ಆದರೆ ಅವಳು ಅದಕ್ಕೆ ನಿರಾಕರಿಸಿದಳು.
ಕೊನೆಗೆ ಬಾಲಕಿ ಗ್ವಾಲಿಯರ್‌ಗೆ ಬಂದು ತನ್ನ ತಂದೆಯನ್ನು ಭೇಟಿಯಾಗಿ ಅವರ ಜೊತೆ ಗ್ವಾಲಿಯರ್‌ನ ಜಿಆರ್‌ಪಿ ಠಾಣೆಯಲ್ಲಿ ಸೆಕ್ಷನ್ 74 ಬಿಎನ್ಎಸ್ 11/12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ. ರಾಣಿ ಕಮಲಾಪತಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡ ಗ್ವಾಲಿಯರ್‌ನ ಜಿರ್‌ಪಿ ಠಾಣೆ ಮುಂದಿನ ಕ್ರಮಕ್ಕಾಗಿ ರಾಣಿ ಕಮಲಪತಿ ಠಾಣೆಯ ಜಿಆರ್‌ಪಿಗೆ ವರ್ಗಾಯಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ
ಲೈಂಗಿಕ ಕಿರುಕುಳ ಬಾಲಕಿಯರ ಮೇಲೆ ಮಾತ್ರ ನಡೆಯುತ್ತಿಲ್ಲ. ಈ ವರ್ಷದ ಮೇ ತಿಂಗಳಿನಲ್ಲಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ತಾನು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದೇನೆ ಎಂದು 16 ವರ್ಷದ ಬಾಲಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದು ಸಖತ್ ವೈರಲ್ ಆಗಿತ್ತು. ಸಮಯ್ ಪುರ್ ಬದ್ಲಿ ಕಡೆಗೆ ಹೋಗುತ್ತಿದ್ದ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ ನಂತರ ತನ್ನ ಸಹ ಪ್ರಯಾಣಿಕರು ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದಾತ ದೂರಿದ್ದ.