Site icon Vistara News

Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

Tirupathi Laddu

ತಿರುಪತಿ : ಸಾಮಾಜಿಕ ಮಾಧ್ಯಮಗಳು (social media) ಜನರಿಗೆ ಪ್ರಸ್ತುತ ವಿಚಾರಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ಹೆಚ್ಚಿನ ವಿಚಾರಗಳು ಜನರಿಗೆ ಸಾಮಾಜಿಕ ಮಾಧ್ಯಮದಿಂದಲೇ ತಿಳಿಯುತ್ತಿದೆ. ಅಂದಮಾತ್ರಕ್ಕೆ ಇದರಲ್ಲಿ ಬರುವ ಎಲ್ಲಾ ಮಾಹಿತಿಯೂ ಸತ್ಯವಾಗಿರುವುದಿಲ್ಲ. ಕೆಲವೊಂದು ಊಹಾಪೋಹಗಳು ಇರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮದ ಎಲ್ಲಾ ಮಾಹಿತಿಗಳನ್ನು ನಿಜವೆಂದು ನಂಬಬೇಡಿ. ಇದಕ್ಕೆ ತಿರುಪತಿ ಲಡ್ಡು (Tirupathi Laddu) ಹಾಗೂ ವಿಶೇಷ ದರ್ಶನಕ್ಕೆ ಸಂಬಂಧಪಟ್ಟ ಸುದ್ದಿಯೊಂದು ನಿದರ್ಶನವಾಗಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದ ಅಧಿಕೃತ ಉಸ್ತುವಾರಿಗಳಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಿರುಮಲ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟು ಮಾಡಿದ್ದವು.

ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಲಡ್ಡು ಬೆಲೆಯನ್ನು 50ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200 ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಸುದ್ದಿಯನ್ನು ನಿಜವೆಂದು ನಂಬಿದ ಭಕ್ತಾಧಿಗಳು ಸಂತೋಷದಿಂದ ಟಿಟಿಡಿಗೆ ಕೃತಜ್ಞತೆ ಸಲ್ಲಿದ್ದರು.

ಆದರೆ ಈ ಬಗ್ಗೆ ಟಿಟಿಡಿ ತನ್ನ ವೆಬ್ ಸೈಟ್ ಅಥವಾ ಅಧಿಕೃತ ಪುಟಗಳಲ್ಲಿ ಅಂತಹ ಯಾವುದೇ ಬೆಲೆ ಕಡಿತದ ಬಗ್ಗೆ ಘೋಷಣೆ ಮಾಡಿಲ್ಲ ಮತ್ತು ಸರ್ಕಾರ ಕೂಡ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಸಂಶಯಗೊಂಡ ಕೆಲವು ಭಕ್ತರು ಈ ಸುದ್ದಿಯನ್ನು ಪರಿಶೀಲಿಸಲು ಟಿಟಿಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆಗ ಈ ಸುದ್ದಿ ಸುಳ್ಳು ಎಂಬುದಾಗಿ ತಿಳಿದುಬಂದಿದೆ. ಈ ದಾರಿತಪ್ಪಿಸುವಂತಹ ಪೋಸ್ಟ್ ಗಳನ್ನು ನಂಬಬೇಡಿ. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟಿಟಿಡಿ ಅಧಿಕೃತವಾಗಿ ಹೇಳಿಕೆ ನೀಡಿದೆ. ಆ ಮೂಲಕ ಸಾಮಾಜಿಕ ಮಾಧ್ಯಮದ ಈ ಸುದ್ದಿ ಸುಳ್ಳು ಎಂಬುದು ಭಕ್ತರಿಗೆ ಮನದಟ್ಟಾಗಿದೆ.

ಈ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಪಡೆದ ನಂತರ ಈ ಲಡ್ಡನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದು ತುಂಬಾ ಸಿಹಿ, ರುಚಿ ಮತ್ತು ಪರಿಮಳಯುಕ್ತವಾಗಿದೆ. ಹಾಗಾಗಿ ಈ ಲಡ್ಡುಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಅದರ ಬೆಲೆ ಇಳಿಕೆಯ ಸುದ್ದಿ ವೈರಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ 1933ರಲ್ಲಿ ಸ್ಥಾಪನೆಯಾದ ತಿರುಮಲ ವೆಂಕಟೇಶ್ವರ ದೇವಸ್ಥಾನವು ಮೊದಲ ಬಾರಿಗೆ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಪ್ರಕಾರ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಸುಮಾರು 16,000 ಕೋಟಿ ರೂ. ಬ್ಯಾಂಕ್ ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳನ್ನು ಒಳಗೊಂಡಂತೆ ಒಟ್ಟು 2.5 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಒಎನ್ ಜಿಸಿ ಮತ್ತು ಐಒಸಿಗಳ ಮಾರುಕಟ್ಟೆ ಬಂಡವಾಳ ಕೂಡ ಇಷ್ಟು ಪ್ರಮಾಣದಲ್ಲಿಲ್ಲ!

Exit mobile version