Site icon Vistara News

Train Tragedy: ರೈಲಿನ ಮೇಲಿನ ಬರ್ತ್‌ನಲ್ಲಿದ್ದ ವ್ಯಕ್ತಿ ಉರುಳಿ ಬಿದ್ದು ಕೆಳ ಬರ್ತ್‌ನ ಪ್ರಯಾಣಿಕ ಸಾವು

Train Tragedy

ನವದೆಹಲಿ: ಸಾವು ಯಾವಾಗ ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಈಗ ಇದ್ದ ಮನುಷ್ಯ ಇನ್ನೊಂದು ಕ್ಷಣ ಇರುವುದಿಲ್ಲ. ಜೀವನ ನೀರ ಮೇಲಿನ ಗುಳ್ಳೆಯಂತೆ! ಆಯಸ್ಸು ಮುಗಿತು ಎಂದರೆ ಸಾವು ಯಾವ ದಿಕ್ಕಿನಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಇದೆ ಈ ದುರ್ಘಟನೆ. ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ (Train Tragedy) ಆಕಸ್ಮಿಕವಾಗಿ ಅವಘಡವೊಂದು ಸಂಭವಿಸಿದ್ದು, ಇದರಿಂದ 62 ವರ್ಷದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.

ಎಂ ಅಲಿಖಾನ್ (62) ಸಾವನಪ್ಪಿದ ವ್ಯಕ್ತಿ. ಇವರು ಜೂನ್ 18ರಂದು ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಕೆಳ ಬರ್ತ್ ನಲ್ಲಿ ಮಲಗಿದ್ದರು. ರೈಲು ತೆಲಂಗಾಣದ ವಾರಂಗಲ್ ಗೆ ತಲುಪಿದಾಗ ಅವರ ಮೇಲಿನ ಬರ್ತ್ ನಲ್ಲಿ ಪ್ರಯಾಣಿಕರೊಬ್ಬರು ಮಲಗಿದ್ದು, ಸಡನ್ ಆಗಿ ಮೇಲಿನ ಬರ್ತ್ ಕುಸಿದು ಇವರ ಮೈಮೇಲೆ ಬಿದ್ದಿದೆ. ಇದರಿಂದ ಅಲಿಖಾನ್ ಅವರ ಕುತ್ತಿಗೆಯ ಮೂರು ಮೂಳೆಗಳು ಮುರಿದಿವೆ. ತಕ್ಷಣ ರೈಲ್ವೆ ಅಧಿಕಾರಿಗಳು ಅವರನ್ನು ವಾರಂಗಲ್ ನ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಅಲಿಖಾನ್ ಅವರು ಗಂಭೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನ ಕಿಂಗ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರಗೆ ಸ್ಥಳಾಂತರಿಸಲಾಗಿತ್ತು. ಆದರೆ ಜೂನ್ 21ರಂದು ಮೂರು ಶಸ್ತ್ರಚಿಕಿತ್ಸೆಗಳ ಬಳಿಕ ಅವರು ಸಾವನಪ್ಪಿದ್ದಾರೆ. ಜೂನ್ 19ರಂದು ಅವರ ಪಾರ್ಥಿವ ಶರೀರವನ್ನು ಕೇರಳದ ಮರಂಚೇರಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ. ಮಧ್ಯಾಹ್ನ ವಡನುಕ್ಕುದಲ್ಲಿರುವ ಕುನ್ನತ್ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಇನ್ನು ರೈಲ್ವೆ ಅಧಿಕಾರಿಗಳು ಹೇಳುವುದೇನೆಂದರೆ, ಸ್ಲಿಪರ್‌ ಕೋಚ್‌ನ ಬರ್ತ್‌ನಲ್ಲಿ ಯಾವುದೇ ತೊಂದರೆ ಇಲ್ಲ. ಮೇಲಿನ ಬರ್ತ್‌ನಲ್ಲಿರುವವರು ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಮೇಲಿನ ಸೀಟು ಕೆಳಗೆ ಬಿದ್ದಿದೆ. ಇದರಿಂದ ಈ ಅವಘಡ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

ರೈಲಿನಲ್ಲಿ ಈ ರೀತಿಯ ಆಕಸ್ಮಿಕ ಘಟನೆಗಳು ನಡೆಯುತ್ತಿದ್ದು, ಜನರು ಅಚಾನಕ್ ಆಗಿ ಸಾವನಪ್ಪುತ್ತಿರುವುದು ನೋಡಿದರೂ ಕೂಡ ನಮ್ಮ ಯುವಜನತೆ ಮಾತ್ರ ಚಲಿಸುತ್ತಿರುವ ರೈಲಿನಲ್ಲಿ ರೀಲ್ಸ್, ಮೋಜು ಮಸ್ತಿ ಮಾಡಿ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಯುವತಿಯೊಬ್ಬಳು ಚಲಿಸುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತು ರೀಲ್ ಗಾಗಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾಳೆ. ಜನರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ ವಿಚಾರ ಈಗಾಗಲೇ ತಿಳಿದಿದೆ.

Exit mobile version