ಇಂಡೋನೇಷ್ಯಾ: ಹಾವುಗಳು ಸಾಮಾನ್ಯವಾಗಿ ಮನೆಯ ಸುತ್ತಮುತ್ತ, ಹೊಲ ಗದ್ದೆಗಳಲ್ಲಿ, ಕರೆಗಳ ಸಮೀಪದಲ್ಲಿ ಕಂಡುಬರುತ್ತದೆ. ಹಾವಿನ ಕಡಿತದಿಂದ ಸಾಕಷ್ಟು ಜನರು ಜೀವ ಕೂಡ ಕಳೆದುಕೊಂಡಿದ್ದಾರೆ. ವಿಷಜಂತುಗಳಾದ ಹಾವು ಒಂದು ರೀತಿಯಾದರೆ ಹೆಬ್ಬಾವು ಇನ್ನೊಂದು ರೀತಿಯದ್ದು. ಇದರ ಬಾಯಿಗೆ ಸಿಕ್ಕರೆ ಮರಳಿ ಬರುವುದು ಅಸಾಧ್ಯ. ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳನ್ನು 30 ಅಡಿ ಉದ್ದ ಹೆಬ್ಬಾವು ತಿಂದು (Viral News) ಹಾಕಿದೆಯಂತೆ.
ಸಿರಿಯಾತಿ (30) ಹಾವಿನ ಬಾಯಿಗೆ ಆಹಾರವಾದ ಮಹಿಳೆ. ಈಕೆ ದಕ್ಷಿಣ ಸುಲಾವೆಸಿಯ ಲುವು ರೀಜೆನ್ಸಿಯಲ್ಲಿ ತನ್ನ ಪತಿ ಹಾಗೂ ಐದು ಮಕ್ಕಳೊಂದಿಗೆ ವಾಸವಾಗಿದ್ದಳು. ತನ್ನ ಮಗುವೊಂದಕ್ಕೆ ಅನಾರೋಗ್ಯವಿರುವ ಕಾರಣ ಔಷಧಿ ಖರೀದಿಸಲು ಕಾಡಿನಲ್ಲಿ ಮರಗಳ ನಡುವೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹೆಬ್ಬಾವು ಅವಳ ಮೇಲೆ ದಾಳಿ ಮಾಡಿ ಆಕೆಯನ್ನು ನುಂಗಿ ಹಾಕಿದೆ. ಆಕೆಯ ಪತಿ ಅಡಿಯಾನ್ಸಿಯಾ ಮನೆಯಲ್ಲಿ ಪತ್ನಿ ನಾಪತ್ತೆಯಾಗಿರುವುದು ಕಂಡು ಹುಡುಕಿಕೊಂಡು ಬಂದಾಗ ಸಿರಿಯತಿಯ ಕಾಲುಗಳು 30 ಅಡಿ ಉದ್ದದ ಹೆಬ್ಬಾವಿನ ಬಾಯಿಯಿಂದ ಕಾಣಿಸುತ್ತಿದ್ದವು. ಆಗ ಆತ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಾವನ್ನು ಕೊಂದುಹಾಕಿದ್ದಾನೆ. ಆದರೆ ಅಷ್ಟೊತ್ತಿಗಾಗಲೇ ಸಿರಿಯತಿ ಮೃತಪಟ್ಟಿದ್ದಳು.
“ಆಕೆ ತನ್ನ ಮಗುವಿನ ಔಷಧಿಯನ್ನು ಖರೀದಿಸಲು ಹಾಗೂ ತನ್ನ ಸಹೋದರನನ್ನು ಭೇಟಿ ಮಾಡುವ ಉದ್ದೇಶದಿಂದ ಹೊರಗೆಹೋಗಿದ್ದಾಳೆ. ಆಕೆ ಕಾಡಿನ ದಾರಿಯ ಮೂಲಕ ಹೋಗಬೇಕಾಗಿತ್ತು. ಆಕೆಯ ಸಹೋದರ ಬಹಳ ಸಮಯದವರೆಗೆ ಅವಳಿಗಾಗಿ ಕಾಯುತ್ತಿದ್ದನು, ಆಕೆ ಬಾರದಿದ್ದು ನೋಡಿ ಆಕೆಯ ಪತಿಗೆ ಕರೆ ಮಾಡಿದ್ದಾನೆ. ಆದ್ದರಿಂದ ಪತಿ ತನ್ನ ಹೆಂಡತಿಯನ್ನು ಹುಡುಕಲು ಹೋಗಿದ್ದನು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜುಲೈ 2 ರಂದು ಬೆಳಿಗ್ಗೆ 7.30 ಕ್ಕೆ ಈ ಘಟನೆ ನಡೆದಿದ್ದು, ಮಹಿಳೆಯ ಶವ ಪತ್ತೆಯಾಗಿದೆ. ಆದರೆ ದೇಹದ ಭಾಗಗಳು ಹಾಗೇ ಇದ್ದರೂ ಮೂಳೆಗಳು ಮುರಿದಿರಬಹುದು ಎಂದು ಊಹಿಸಲಾಗಿದೆ. ಪಾರ್ಥಿವ ಶರೀರವನ್ನು ಈಗಾಗಲೇ ಅಂತ್ಯಕ್ರಿಯೆಗಾಗಿ ಮನೆಗೆ ತಲುಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಒಂದು ತಿಂಗಳೊಳಗೆ ದಕ್ಷಿಣ ಸುಲಾವೆಸಿಯಲ್ಲಿ ನಡೆದ ಇಂತಹ ಎರಡನೇ ಘಟನೆಯಲ್ಲಿ ಇದು ಒಂದಾಗಿದೆ. ಜೂನ್ ಆರಂಭದಲ್ಲಿ, 45 ವರ್ಷದ ಮಹಿಳೆಯ ದೇಹವು ಹೆಬ್ಬಾವಿನ ಬಾಯಿಯೊಳಗೆ ಪತ್ತೆಯಾಗಿತ್ತು. ಇಂಡೋನೇಷ್ಯಾವು ಬರ್ಮೀಸ್ ಹೆಬ್ಬಾವು ಮತ್ತು ರೆಟಿಕ್ಯುಲೇಟೆಡ್ ಹೆಬ್ಬಾವು ಸೇರಿದಂತೆ ಹಲವಾರು ಜಾತಿಯ ಹೆಬ್ಬಾವುಗಳಿಗೆ ನೆಲೆಯಾಗಿದೆ.