Site icon Vistara News

Viral News: ಆನ್‌ಲೈನ್‌ನಲ್ಲಿ ಬಂದ ಐಸ್ ಕ್ರೀಂನಲ್ಲಿ ಸಿಕ್ಕಿದ ಬೆರಳು ಕಾರ್ಮಿಕನದು!

Viral News

ಮುಂಬೈ : ಇತ್ತೀಚೆಗೆ ಮುಂಬೈ ಮೂಲದ ಮಹಿಳೆಯೊಬ್ಬರು ತಮ್ಮ ಸಹೋದರನಿಗಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಮಾನವನ ಕೈಬೆರಳು ಇರುವುದು ಪತ್ತೆಯಾಗಿತ್ತು. ಈ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿತ್ತು. ಇದೀಗ ಆ ಕೈಬೆರಳು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನದ್ದಾಗಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹಾಗಾಗಿ ಪೊಲೀಸರು ಪ್ರಾಥಮಿಕ ತನಿಖೆಯ ಸಂಶೋಧನೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಅದಕ್ಕಾಗಿ ಪೊಲೀಸರು ಪುಣೆ ಐಸ್‌ ಕ್ರೀಂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಡಿಎನ್‌ಎ ಮಾದರಿಯನ್ನು ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಅಲ್ಲದೇ ಈ ಘಟನೆ ನಡೆದ ಹಿನ್ನಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈ ಹಿಂದೆ ಪುಣೆ ಮೂಲದ ಐಸ್ ಕ್ರೀಂ ತಯಾರಕರ ಪರವಾನಗಿಯನ್ನು ತನಿಖೆಗಾಗಿ ಅಮಾನತುಗೊಳಿಸಿತ್ತು ಎಂಬುದಾಗಿ ತಿಳಿದುಬಂದಿದೆ.

ಮುಂಬೈನ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಯುಮ್ಮೋ ಐಸ್ ಕ್ರೀಂ ಕಂಪನಿಯ ಮೂರು ಬಟರ್ ಸ್ಕಾಚ್ ಕೋನ್‌ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಮನೆಗೆ ಬಂದ ಐಸ್ ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗಾಗಿದೆ. ಆಗ ಆತ ಅದನ್ನು ಹೊರತೆಗೆದಾಗ ಅದು ಮಾನವನ ಕೈಬೆರಳಾಗಿದ್ದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು ಎಂಬುದಾಗಿ ತಿಳಿದುಬಂದಿದೆ. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಮಾನವ ಬೆರಳನ್ನು ಕೂಡಲೇ ಪತ್ತೆ ಹಚ್ಚಿದ್ದಾನೆ.

ಈ ಬಗ್ಗೆ ಮಹಿಳೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುಮ್ಮೋ ಐಸ್ ಕ್ರೀಂ ಕಂಪನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 272, 271 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಐಸ್ ಕ್ರೀಂನಲ್ಲಿ ಪತ್ತೆಯಾದ ಮಾನವನ ಕೈಬೆರಳನ್ನು ಫೊರೆನ್ಸಿಕ್ ಗೆ ಕಳುಹಿಸಿದ್ದರು. ಇದೀಗ ಆ ಕೈಬೆರಳು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನದ್ದಾಗಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

Exit mobile version