ಪುಣೆ: ಸೋಷಿಯಲ್ ಮೀಡಿಯಾದ ಕ್ರೇಜ್ ಈಗಿನ ಯುವಜನರಿಗೆ ಜಾಸ್ತಿ. ಅದರಲ್ಲೂ ಈ ರೀಲ್ಸ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಈ ರೀಲ್ಸ್‌ಗಾಗಿ ಯಾವುದ್ಯಾವುದೋ ಸರ್ಕಸ್ ಮಾಡಿ ಜೀವಕ್ಕೆ ಕುತ್ತು ತಂದಕೊಳ್ಳುವವರೂ ಇದ್ದಾರೆ. ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ನೇತಾಡುತ್ತಾ ಯುವತಿ ರೀಲ್ಸ್ (Reels) ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿತ್ತು. ಇದೀಗ ಆ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೀನಾಕ್ಷಿ ಸಾಲುಂಕೆ (23) ಹಾಗೂ ಆಕೆಯ ಸ್ನೇಹಿತ ಮಿಹಿರ್ ಗಾಂಧಿ (27) ರೀಲ್ಸ್ ಮಾಡಿ ಪೊಲೀಸರ ಬಳಿ ಬಂಧಿಯಾದವರು. ಮೂರನೇ ವ್ಯಕ್ತಿ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಇವರು ಪುಣೆಯ ಜಂಬುಲ್ವಾಡಿ ಸ್ವಾಮಿನಾರಾಯಣ ಮಂದಿರದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಯುವತಿ ಸ್ನೇಹಿತನ ಕೈಯನ್ನು ಹಿಡಿದುಕೊಂಡು ಕಟ್ಟದಿಂದ ಇಳಿದು ನೇತಾಡುತ್ತಿದ್ದಾಗ ಆಕೆಯ ಸ್ನೇಹಿತರು ವಿವಿಧ ಆ್ಯಂಗಲ್ ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
#Pune: For Creating Reels and checking the strength, Youngsters risk their lives by doing stunt on an abandoned building near Swaminarayan Mandir, Jambhulwadi Pune@TikamShekhawat pic.twitter.com/a5xsLjfGYi
— Punekar News (@punekarnews) June 20, 2024
ಹಾಗಾಗಿ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಮಾಹಿತಿ ತಿಳಿದು ತನಿಖೆ ಪ್ರಾರಂಭಿಸಿದ್ದಾರೆ. ಜೂನ್ 21ರಂದು ತಡರಾತ್ರಿ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು ಇತರ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಹಾಗೇ ತಲೆಮರೆಸಿಕೊಂಡಿರುವ ಮೂರನೇ ವ್ಯಕ್ತಿಯನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Blackmail: ನಗ್ನ ಫೋಟೊ ತೋರಿಸಿ ಬ್ಯಾಂಕ್ ಅಧಿಕಾರಿಯಿಂದ 4 ಕೋಟಿ ರೂ. ಸುಲಿಗೆ ಮಾಡಿದ ಮಹಿಳೆ!
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯುವಕ ಯುವತಿಯರು ತಮ್ಮ ಜೀವದ ಹಂಗಲು ತೊರೆದು ಅಪಾಯಕಾರಿ ರೀಲ್ಸ್ ಗಳನ್ನು ಮಾಡುತ್ತಿದ್ದಾರೆ. ಇಂತಹ ಘಟನೆಯಿಂದ ಈಗಾಗಲೇ ಹಲವರು ಪ್ರಾಣಕಳೆದುಕೊಂಡಿದ್ದರೆ, ಕೆಲವರು ಗಾಯಗೊಂಡಿದ್ದರು. ಇಷ್ಟಾದರೂ ಜನರಿಗೆ ರೀಲ್ಸ್ ಹುಚ್ಚು ಬಿಟ್ಟಿಲ್ಲ. ಹಾಗಾಗಿ ಪುಣೆಯ ಈ ಪ್ರಕರಣದಿಂದ ಇನ್ನಾದರೂ ಯುವಕ ಯುವತಿಯರಿಗೆ ಈ ಬಗ್ಗೆ ಭಯ ಹುಟ್ಟಲಿದೆ. ಇದರಿಂದ ಇನ್ನು ಮುಂದೆ ಇಂತಹ ಘಟನೆ ನಡೆಯುವುದನ್ನು ತಪ್ಪಿಸಬಹುದು.