Site icon Vistara News

Viral Video: ಶಾಪಿಂಗ್‌ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು

Viral Video

ಚಂಡೀಗಢ: ಸಾಮಾನ್ಯವಾಗಿ ಪೋಷಕರು ಮಕ್ಕಳ ಮನೋರಂಜನೆಗಾಗಿ ಮಾಲ್‌ಗಳಿಗೆ ಹೋಗಿ ಅಲ್ಲಿ ಆಟಿಕೆಗಳ ಜೊತೆ ಮಕ್ಕಳನ್ನು ಆಟವಾಡಿಸುತ್ತಾರೆ. ಆದರೆ ಈ ಆಟಿಕೆಗಳು ಕೆಲವೊಮ್ಮೆ ಮಕ್ಕಳ ಜೀವಕ್ಕೆ ಆಪತ್ತು ತರಬಹುದು. ಅಂತಹದೊಂದು ಘಟನೆ ಇದೀಗ ಚಂಡೀಗಢ್ ನ ಮಾಲ್‌ನಲ್ಲಿ ನಡೆದಿದೆ. ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು 10 ವರ್ಷದ ಬಾಲಕ ಸಾವನಪ್ಪಿದ ಘಟನೆ ಚಂಡೀಗಢದ ಮಾಲ್ ವೊಂದರಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video )ಆಗಿದೆ.

ಶಹಬಾಜ್ (10 ವರ್ಷ) ಸಾವನಪ್ಪಿದ ಬಾಲಕ. ಈತ ಶನಿವಾರ ಜೂನ್ 22ರಂದು ರಾತ್ರಿ ತನ್ನ ಕುಟುಂಬದವರ ಜೊತೆ ಎಲಾಂಟೆ ಮಾಲ್ ಗೆ ಬಂದಿದ್ದಾನೆ. ಅಲ್ಲಿ ಆತ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲಿನ ಬೋಗಿ ಪಲ್ಟಿಯಾಗಿ ಬಾಲಕ ಸಾವನಪ್ಪಿದ್ದಾನೆ. ಆತನ ಜೊತೆ ಕುಳಿತಿದ್ದ ಆತನ ಸೋದರ ಸಂಬಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕ ಕೊನೆಯ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತಿದ್ದು, ಆತ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲು ತಿರುವು ಪಡೆಯುತ್ತಿದ್ದಾಗ ಪಲ್ಟಿಯಾಗಿ ಬಿದ್ದು ಬಾಲಕನ ತಲೆಗೆ ತೀವ್ರವಾದ ಪೆಟ್ಟಾಗಿದೆ. ಇದರಿಂದ ಆತ ಸಾವನಪ್ಪಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿ ರೈಲಿನ ಚಾಲಕನನ್ನು ಬಂಧಿಸಿದ್ದಾರೆ ಹಾಗೂ ಆಟಿಕೆ ರೈಲನ್ನು ವಶಕ್ಕೆ ಪಡೆದಿದ್ದಾರೆ. ಹಾಗೇ ಮಾಲ್ ನ ಆಡಳಿತ ಮಂಡಳಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version