ಹುಬ್ಬಳ್ಳಿ: ವಾಹನಗಳನ್ನು ವೇಗವಾಗಿ ಚಲಾಯಿಸುವುದರಿಂದ ಎಷ್ಟೊಂದು ಅಪಘಾತದ ಘಟನೆಗಳು ನಡೆದು ಅನೇಕ ಸಾವು ನೋವುಗಳಾದರೂ ಕೂಡ ಚಾಲಕರಿಗೆ ಇನ್ನೂ ಈ ಬಗ್ಗೆ ಅರಿವು ಮೂಡಿಲ್ಲ. ಇದೀಗ ಹುಬ್ಬಳ್ಳಿಯಲ್ಲಿ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದೆ. ಅಲ್ಲದೇ ಎತ್ತಿನ ಗಾಡಿಯಯಲ್ಲಿದ್ದ ರೈತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವಿಡಿಯೊದಲ್ಲಿ, ಸಹಾಯಕ ರೀಲ್ ತಯಾರಿಸುವಾಗ ಬಸ್ ಚಾಲಕ ತನ್ನ ಸೀಟ್‌ನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವುದನ್ನು ಕಾಣಬಹುದು. ಕೆಲವು ಕ್ಷಣಗಳ ನಂತರ, ಬಸ್ ಮುಂದೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಹಿಂದಿನಿಂದ ಡಿಕ್ಕಿ ಹೊಡೆಯುವುದನ್ನು ವಿಡಿಯೊ ತೋರಿಸುತ್ತದೆ. ವರದಿ ಪ್ರಕಾರ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಬಾಗಲಕೋಟೆ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಎತ್ತುಗಳು ಕೆಳಗೆ ಬಿದ್ದು ರಕ್ತ ಸೋರಿ, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿವೆ. ಎತ್ತಿನ ಗಾಡಿಯಲ್ಲಿದ್ದ ರೈತ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
Farmers injured, two oxen killed after a speeding bus hits a bullock cart in Karnataka's Hubballi.
— Vani Mehrotra (@vani_mehrotra) July 17, 2024
The bus driver was making reels at the time of the accident.#Karnataka pic.twitter.com/oX3vBIuO75
ಗಾಯಗೊಂಡ ರೈತ ಮಂಜುನಾಥ್ ಆರ್. ವಗ್ಗೇನವರ್ (40) ಎಂಬುದಾಗಿ ತಿಳಿದು ಬಂದಿದೆ. ಮಂಗಳವಾರ ರಾತ್ರಿ ಮಂಜುನಾಥ್ ಕೆರೆಸೂರು ಗ್ರಾಮದ ತನ್ನ ಕೃಷಿ ಭೂಮಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಾಗ ಬಸ್ ಚಾಲಕ ರೀಲ್ ತಯಾರಿಸುತ್ತಿದ್ದ. ತಂಬಾಕು ತಿನ್ನುತ್ತಿದ್ದ. ಹಾಗಾಗಿ ಚಾಲಕನಿಗೆ ತನ್ನ ಮುಂದೆ ಇದ್ದ ಗಾಡಿಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಅಲ್ಲದೇ ಮಂಜುನಾಥ್ ಒಬ್ಬ ಬಡ ರೈತನಾಗಿದ್ದು, ಎರಡು ಎಕರೆ ಭೂಮಿಯಲ್ಲಿ ಯಾವುದೇ ಲಾಭಾಂಶ ಸಿಗುತ್ತಿರಲಿಲ್ಲ ಎಂದು ಸಂತ್ರಸ್ತ ರೈತನ ಸ್ನೇಹಿತರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ, ಮಂಜುನಾಥ್ ಸಾಲ ಪಡೆದು ಎರಡು ಎತ್ತುಗಳನ್ನು ಖರೀದಿಸಿ ಅದನ್ನು ಇತರ ಹೊಲಗಳಲ್ಲಿ ಉಳುಮೆ ಮಾಡಲು ಬಳಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಪುಟ್ಟ ಮಗುವನ್ನು ಮುಂದೆ ಕೂರಿಸಿಕೊಂಡು ಬೈಕ್ ಸ್ಟಂಟ್! ಒದ್ದು ಒಳಗೆ ಹಾಕಿ ಅಂತಿದ್ದಾರೆ ನೆಟ್ಟಿಗರು